ಬದುಕಿನಿಂದಲೇ ನಿರ್ಗಮಿಸಿರುವ ಅಪ್ಪು ಜತೆ ದರ್ಶನ್ ಗೆ ಸ್ಪರ್ಧೆಯ ಮಾತೆಲ್ಲಿಯದು..?

ಬೆಂಗಳೂರು,ಡಿಸೆಂಬರ್,21,2022(www.justkannada.in):  ಅಭಿಮಾನಿಗಳೇ ನನ್ನ ದೇವರು ಎನ್ನುತ್ತಿದ್ದರು ಕನ್ನಡದ ವರನಟ ಡಾ. ರಾಜಕುಮಾರ್. ದೇವರು ಎಂದರೆ ಯಾರಿಗೂ ಕೇಡು ಬಯಸದ, ಎಲ್ಲರಿಗೂ ಒಳಿತನ್ನೇ ಬಯಸುವವ ಎಂದರ್ಥ. ತನ್ನ ಭಕುತರಿಗೆ ಡಾ. ರಾಜ್ ನೀಡಿದ ಸ್ಥಾನ ಅಂಥ ಮಹೋನ್ನತವಾದುದು. ರಾಜ್ ಯಾಕೆ ಹೀಗೆ ಹೇಳಿದರು ? ರಾಜ್ ಉದ್ದೇಶಿಸಿದ ಅಭಿಮಾನಿಗಳು, ಭಕುತರು ನಮ್ಮಂತೆ ಸಾದಾ ಸೀದಾ ಮನುಷ್ಯರೇ ಆಗಿರುತ್ತಾರೆ ಮತ್ತು ಅವರೆಲ್ಲರಿಗೂ ಸಹಜ ಮನುಷ್ಯನಿಗೆ ಇರಬಹುದಾದ  ಕೋಪ ತಾಪ, ದ್ವೇಷ ಅಸೂಯೆ, ಪ್ರೀತಿ -ಪ್ರೇಮ ಎಲ್ಲವೂ ಇರುತ್ತದೆ. ಹೀಗಿದ್ದರೂ ಅವರನ್ನು ಎತ್ತರದ ಸ್ಥಾನದಲ್ಲಿ ರಾಜ್ ಕೂರಿಸಿದ್ದೇಕೆ ?

ಸುಮ್ಮನ ಯೋಚಿಸಿ. ಅದೊಂದು ಒಳಿತಿನೆಡೆಗಿನ ಪಯಣ. ಸಾರ್ವಜನಿಕ ಬದುಕಿನಲ್ಲಿ ನಾಯಕನಾದವನೊಬ್ಬ ತನ್ನ ಅನುಯಾಯಿಗಳನ್ನು, ಭಕುತರ ಪಡೆ, ಅಭಿಮಾನಿ ವರ್ಗವನ್ನು  ಕೇಡಿಲ್ಲದ ಕಡೆ ಕೊಂಡೊಯ್ಯುವ ಜಾಣ್ಮೆಯ ವಿವೇಕ. ಇದರ ಹೊರತಾಗಿಯೂ ರಾಜ್  ಅಭಿಮಾನಿಗಳು ಒಮ್ಮೊಮ್ಮೆ ಅತಿರೇಕದಿಂದ ವರ್ತಿಸುತ್ತಿದ್ದರು ಎಂಬುದು ಬೇರೆ ಮಾತು. ಆದರೆ. ನಾಯಕನಾದವ ಹೇಗಿರಬೇಕು ಎಂಬುದಕ್ಕೆ ಇದೊಂದು ಉದಾಹರಣೆಯಷ್ಟೆ.

ಸದ್ಯ ಕರ್ನಾಟಕದಲ್ಲಿ ನಟರ ಅಭಿಮಾನಿಗಳ ಸುತ್ತ ನಡೆದಿರುವ ಸಂಘರ್ಷದ ಹಿನ್ನೆಲೆಯಲ್ಲಿ ಇದೆಲ್ಲವನ್ನೂ ಹೇಳಬೇಕಾಯಿತು. ಚಾಲೆಂಜಿಂಗ್ ಸ್ಟಾರ್ ದರ್ಶನ್  ಅವರು ತಮ್ಮ ಹೊಸ ಸಿನಿಮಾ ಕ್ರಾಂತಿಯ ಪ್ರಮೋಷನ್ ಗೆ ಹೊಸಪೇಟೆಗೆ ಹೋಗಿದ್ದಾಗ, ಅವರ ಮೇಲೆ ಚಪ್ಪಲಿ ತೂರಾಟ ನಡೆದಿದೆ. ನಡೆಯಬಾರದಿತ್ತು ನಡೆದಿದೆ. ದರ್ಶನ್ ಇದನ್ನು ಸಮಚಿತ್ತದಿಂದಲೇ ಸ್ವೀಕರಿಸಿದ್ದಾರೆ. ಆ ಕ್ಷಣಕ್ಕೆ ಅವರ ವರ್ತನೆ ದೊಡ್ಡ ಮನುಷ್ಯನ ರೀತಿಯೇ ಇದೆ. ಯಾಕೆ ಹೀಗಾಯಿತು ?

ಕೆಲದಿನಗಳಿಂದ ಹೊಸಪೇಟೆಯಲ್ಲಿ  ಸ್ಥಳೀಯವಾಗಿ ಅಪ್ಪು ಅಭಿಮಾನಿಗಳು ಮತ್ತು ದರ್ಶನ್ ಅಭಿಮಾನಿಗಳ ನಡುವೆ ವಾಗ್ಯುದ್ದ ನಡೆಯುತ್ತಲೇ ಇತ್ತು. “ನನಗೂ ಅಭಿಮಾನಿಗಳಿದ್ದಾರೆ. ಬದುಕಿದ್ದಾಗಲೇ ಅವರನ್ನು ನೋಡುವ ಅದೃಷ್ಟ ನನ್ನದು,” ಎಂದರ್ಥದಲ್ಲಿ ದರ್ಶನ ಮಾತನಾಡಿದ್ದಾರೆ ಎಂಬ ಸಂಗತಿಯೇ ಅಪ್ಪು ಅಭಿಮಾನಿಗಳು ಸಿಡಿದೇಳಲು ಕಾರಣವಾಗಿತ್ತು. ದರ್ಶನ್ ನಿಜವಾಗಿಯೂ ಅಪ್ಪುವನ್ನು ಗಮನದಲ್ಲಿಟ್ಟುಕೊಂಡು ಹೇಳಿದರೋ, ಸಹಜ ಭಾವೋದ್ವೇಗದಲ್ಲಿ ಹೇಳಿದರೋ ? ಅಭಿಮಾನಿಗಳಿಗೆ ಏನು ಗೊತ್ತು. ನಮ್ಮ ಅಪ್ಪುವನ್ನು ಕುರಿತೇ ಇಂಥ ಮಾತು ಹೇಳಿದ್ದಾರೆ ಎಂದು ದರ್ಶನ್  ಅವರನ್ನು ಟ್ರೋಲ್ ಮಾಡಿದ್ದರು. ದರ್ಶನ್ ಅಭಿಮಾನಿಗಳು ಕೂಡ  ಸಿಟ್ಟಿಗೆದ್ದರು. ಅಪ್ಪು ಅಭಿಮಾನಿಗಳ ಬಗ್ಗೆ ಕೇವಲವಾಗಿ ಮಾತಿಗಿಳಿದರು !

“ಹೊಸಪೇಟೆಗೆ ದರ್ಶನ್ ಅವರನ್ನೂ ಕರೆಸುತ್ತೇವೆ. ನೋಡೋಣ ಬನ್ರಲೇ,”- ಎಂದರಂತೆ ! ಇದೆಲ್ಲದರ ಪರಿಣಾಮ ಕಲ್ಲು ತೂರಾಟ, ಸಂಘರ್ಷ.

ಇದೆಲ್ಲವೂ ತಮಾಷೆ ಆಗಿದೆ. ಅಪಾರ ಜನಮನ್ನಣೆ ಗಳಿಸಿ, ಅಕಾಲದಲ್ಲಿ ಬದುಕಿನಿಂದಲೇ ನಿರ್ಗಮಿಸಿರುವ ಪುನೀತ್ ಬಗ್ಗೆ ದರ್ಶನ್ ಅಂಥ ಮಾತು ಆಡಿರಲಿಕ್ಕಿಲ್ಲ. ಇಂಥದ್ದೊಂದು ತಪ್ಪು ಗ್ರಹಿಕೆ ಎದ್ದಿದೆ ಎಂದ ತಕ್ಷಣ ದರ್ಶನ್ ಅದನ್ನು ಕ್ಲಾರಿಫೈ ಮಾಡಬೇಕಿತ್ತು. ಬದುಕಿನಿಂದಲೇ ನಿರ್ಗಮಿಸಿರುವ ಅಪ್ಪು ಜತೆ ದರ್ಶನ್ ಗೆ ಸ್ಪರ್ಧೆಯ ಮಾತೆಲ್ಲಿಯದು ?

ಕನ್ನಡದ ಪ್ರಸಿದ್ಧ ನಟ ದರ್ಶನ್ ಅವರಿಗೆ ಅವರದ್ದೇ ಆದ ಬಹುದೊಡ್ಡ ಅಭಿಮಾನಿ ಪಡೆ ಇದೆ. ಅಭಿಮಾನಿಗಳನ್ನು ಹೊಂದುವ ಎಲ್ಲ ರೀತಿಯ ಸ್ಟಾರ್ ವ್ಯಾಲ್ಯೂ, ಹೆಚ್ಚುಗಾರಿಕೆ, ಪ್ರತಿಭೆಯೂ ದರ್ಶನ್ ಅವರಿಗೆ ಇದೆ. ದರ್ಶನ್ ಅವರೇ ಹೇಳುವಂತೆ, ಕಷ್ಟಪಟ್ಟು ಮೇಲೆ ಬಂದಿರುವುದು ಸುಳ್ಳಲ್ಲ. ಬೆವರು ಸುರಿಸಿದ್ದಾರೆ. ಆದರೆ, ಈ ಸಂಕಷ್ಟ,ಬೆವರು, ಪ್ರತಿಭೆ- ಎಲ್ಲವೂ ಮನುಷ್ಯನನ್ನು ಮಾಗಿಸಬೇಕೆ ಹೊರತು, ಅವು ಗರ್ವ ಹಾಗೂ ಪ್ರತಿಷ್ಠೆಯ ಸಂಗತಿಗಳಾಗಬಾರದು. ಅದರಲ್ಲೂ ಇಂಥ ವ್ಯಕ್ತಿ ಸಾರ್ವಜನಿಕ ಜೀವನದಲ್ಲಿ ಇದ್ದರಂತೂ, ಆತ ಇನ್ನಷ್ಟು ಮಾಗಿರಲೇಬೇಕು.

“ನಾನು ಕಷ್ಟಪಟ್ಟು ಮೇಲೆ ಬಂದಿದ್ದೇನೆ, ಚಿನ್ನದ ಸ್ಪೂನ್ ಬಾಯಲ್ಲಿ ಇಟ್ಟುಕೊಂಡು ಹುಟ್ಟಿರಲಲಿಲ್ಲ, ಏನೀಗ ?” ಎಂಬ ಆಟಿಟ್ಯೂಡ್ ಯಾವತ್ತೂ ಒಳ್ಳೆಯದಲ್ಲ.  “ನನಗೆ ಯಾವುದೇ ಖಾನ್ದಾನ್ ಇಲ್ಲ, ಆದರೂ ಇಷ್ಟು ಅಭಿಮಾನಿಗಳನ್ನು ಬದುಕಿರುವಾಗಲೇ ಪಡೆದಿರುವೆ,” ಎಂಬರ್ಥದ ಮಾತುಗಳು ಸರಿಯಲ್ಲ. ನಾಯಕನೇ ಇಷ್ಟು ರೋಷಾವೇಷದಲ್ಲಿ ಮಾತನಾಡಿದರೆ, ಅವರ ಅಭಿಮಾನಿಗಳು ಇದರ ಹತ್ತುಪಟ್ಟು ರೋಷವೇಷಕ್ಕೆ ಇಳಿಯುತ್ತಾರೆ !

ಪುನೀತ್ ಅವರನ್ನು ಇಂದು ಇಡೀ ನಾಡು ನೆನಪಿಸಿಕೊಳ್ಳುತ್ತಿರುವುದು, ಅವರ ವಿನಯವಂತಿಕೆ ಪ್ರಮುಖ ಕಾರಣವೇ ಹೊರತು, ಪ್ರತಿಭೆ ಮತ್ತು ಮನೆತನದ ಪರಂಪರೆಯಲ್ಲ. ಅವೂ ಕಾರಣ ಇರಬಹುದು. ಆದರೆ, ಶ್ರೀ ಸಾಮಾನ್ಯರು ಇಷ್ಟಪಟ್ಟಿದ್ದು ಅಷ್ಟು ದೊಡ್ಡವನಾದರೂ, ಎಷ್ಟೊಂದು ವಿನಯವಂತ ಎಂಬ ಕಾರಣಕ್ಕೆ. ಏರಿದವನು ದೊಡ್ಡವನಿರಲೇಬೇಕು ಎಂದು ಕವಿಯೊಬ್ಬ ಸೂರ್ಯನ ಕುರಿತು ಬರೆಯುತ್ತಾನೆ. ಅದು ಒಳ್ಳೆಯ ಆಶಯ. ಪುನೀತ್ ಆಗಿದ್ದರು. ಹಾಗಾಗಿಯೇ ಅವರ ಅಭಿಮಾನಿ ವರ್ಗದಲ್ಲಿ ಎಲ್ಲರೂ ಇದ್ದರು !

ಅಭಿಮಾನದ ನಡು ವಯಸ್ಸಿನ ಯುವಕರೇ ಹೆಚ್ಚಿರುವ ದರ್ಶನ್  ಅಭಿಮಾನಿಗಳು ಇದನ್ನು ಅರ್ಥ ಮಾಡಿಕೊಳ್ಳಬೇಕು.

ಮತ್ತೆ ರಾಜ್ ಅವರನ್ನು ನೆನೆಯೋಣ. ರಾಜ್ ಅಭಿನಯದ ಸಿನಿಮಾವೊಂದರಲ್ಲಿ ಅವರು ನೇಪಥ್ಯದಲ್ಲಿ ನಿಂತು ಸಿಗರೇಟು ಸೇದುವ ದೃಶ್ಯವಿದೆ.  ಅದನ್ನು ನೋಡಿದ ಕನ್ನಡದ ಪ್ರಸಿದ್ಧ ಕಾದಂಬರಿಕಾರ ಅನಕೃ ಅವರು, ರಾಜಕುಮಾರ್ ಅವರನ್ನು ಭೇಟಿಯಾಗಿ, ಮತ್ತೆಂದು ಸಿನಿಮಾದಲ್ಲಿ ಸಿಗರೇಟು ಸೇದಬೇಡ ಎಂದು ಕೋರುತ್ತಾರೆ. ಅನಕೃ ಯಾಕೆ ಹೀಗೆ ಹೇಳಿದರೂ ಎಂದು ಗೊತ್ತಿದ್ದರೂ,ರಾಜ್ ಮುಗ್ಧವಾಗಿ ಯಾಕೆ ಎಂದು ಕೇಳುತ್ತಾರೆ. ಆಗ ಅನಕೃ ಹೇಳುತ್ತಾರೆ, ಅಭಿಮಾನಿಗಳು ನಿನ್ನನ್ನು ಹಿಂಬಾಲಿಸುತ್ತಾರೆ..! ಬಳಿಕ ರಾಜ್ ಅದೇ ರೀತಿ ಸಿನಿಮಾದಲ್ಲೂ, ನಿಜ ಬದುಕಿನಲ್ಲೂ ನಡೆದುಕೊಂಡರು ಎಂಬುದು ನಮಗೆಲ್ಲಾ ತಿಳಿದೇ ವಿಷಯ.

ನಟನೊಬ್ಬ ಸಿನಿಮಾದಲ್ಲಿ ಸಿಗರೇಟು ಸೇದಿದರೆ, ಅಸಭ್ಯ ಭಾಷೆಯಲ್ಲಿ ಮಾತನಾಡಿದರೆ,  ಅದು ಸಮಾಜದ ಮೇಲೆ ಬೀರುವ ಪರಿಣಾಮ ಬೇರೆ ಇರುತ್ತದೆ. ಅಂಥದ್ದರಲ್ಲಿ, ಜನಪ್ರಿಯ ನಟನೊಬ್ಬ ನಿಜ ಜೀವನದಲ್ಲೂ ಆ ರೀತಿ ವರ್ತಿಸಿದರೆ ಹೇಗಾಗಬೇಡ…?

ಎಲ್ಲರೂ ಪಾಠ ಕಲಿಯೋಣ !

 

– R.ಜೀವ