ನಟ ಮಂಡ್ಯ ರಮೇಶ್ ಗೆ ‘ರಂಗಭೂಮಿ’ ಪುರಸ್ಕಾರ…

ಬೆಂಗಳೂರು,ಡಿ,26,2019(www.justkannada.in): ನಟ, ಹಿರಿಯ ರಂಗಕರ್ಮಿ ಮಂಡ್ಯ ರಮೇಶ್ ಅವರು ರಂಗಕಣ್ಮಣಿ ಬಿರುದಿನೊಂದಿಗೆ  ರಂಗಭೂಮಿ ಪುರಸ್ಕಾರಕ್ಕೆ  ಪಾತ್ರರಾಗಿದ್ದಾರೆ.

ಉಡುಪಿ ರಂಗಭೂಮಿ ಟ್ರಸ್ಟ್ ಈ ಪ್ರಶಸ್ತಿ ನೀಡುತ್ತಿದೆ. ಜನವರಿ 4 ಮತ್ತು 5 ರಂದು ಉಡುಪಿಯ ಎಂಜಿಎಂ ಕಾಲೇಜು , ಮುದ್ದಣ ಮಂಟಪದಲ್ಲಿ ನಡೆಯುವ 40ನೇ ರಾಜ್ಯಮಟ್ಟದ ನಾಟಕೋತ್ಸವ ಸ್ಪರ್ಧೆಯ ಬಹುಮಾನ ವಿತರಣೆ ಮತ್ತು ಕಲಾಂಜಲಿ ಸ್ಮರಣ ಸಂಚಿಕೆ ಬಿಡುಗಡೆ  ಕಾರ್ಯಕ್ರಮದಲ್ಲಿ ನಟ ಮಂಡ್ಯ ರಮೇಶ್ ಅವರಿಗೆ ರಂಗಭೂಮಿ ಪುರಸ್ಕಾರ ಪ್ರಧಾನ ಮಾಡಲಾಗುತ್ತದೆ.

ಕಾರ್ಯಕ್ರಮದಲ್ಲಿ ಪದ್ಮಶ್ರೀ ಪುರಸ್ಕೃತ ವಿದ್ಯಾವಾಚಸ್ಪತಿ ಡಾ. ಬನ್ನಂಜೆ ಗೋವಿಂದಚಾರ್ಯ, ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಉಡುಪಿಯ ಎಂಜಿಎಂ ಕಾಲೇಜು ಪ್ರಾಂಶುಪಾಲರಾದ ಎಂ.ಜಿ ವಿಜಯ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ಮಂಡ್ಯ ರಮೇಶ್ ಅವರು  ನಟ, ನಿರ್ದೇಶಕ ,ಸಂಘಟಕ,  ಮೈಸೂರು ನಟನ ಸಂಸ್ಥೆ ಹಾಗೂ ರಂಗಶಾಲೆಯ ಸ್ಥಾಪಕ  ಹಾಗೂ ಹಿರಿಯ ರಂಗಕರ್ಮಿಯಾಗಿದ್ದಾರೆ.  ಇವರ ಹುಟ್ಟೂರು ಮಂಡ್ಯ, ತಂದೆ ಎನ್. ಸುಬ್ರಮಣ್ಯಂ, ತಾಯಿ ಎಸ್. ನಾಗಲಕ್ಷ್ಮಿ.

ಮಂಡ್ಯ ರಮೇಶ್ ಅವರು ಮೈಸೂರಿನ ರಂಗಾಯಣದಲ್ಲಿ ಬಿ.ವಿ ಕಾರಂತರ ಗರಡಿಯಲ್ಲಿ ರಂಗಕಾಯಕ.  ಪ್ರಸನ್ನ, ಜಂಬೆ, ಕೆ.ವಿ ಸುಬ್ಬಣ್ಣ ಮುಂತಾದ ಗಣ್ಯ ನಿರ್ದೇಶಕರೊಂದಿಗೆ ದುಡಿದ ಅನುಭವವಿದೆ.  ಇವರು ಕೇಂದ್ರ ಸಂಸ್ಕೃತಿ ಇಲಾಖೆಯ ರಂಗತಜ್ಞರ ಸಮಿತಿ ಸದಸ್ಯರಾಗಿ, ಕರ್ನಾಟಕ ನಾಟಕ ಅಕಾಡಮಿಯ ಸದಸ್ಯರಾಗಿ, ರಂಗಾಯಣದ ರಂಗಸಮಾಜದ ಸದಸ್ಯರಾಗಿ ಕಾರ್ಯನಿರ್ವಹಣೆ ಮಾಡಿದ್ದಾರೆ. ಪ್ರಸ್ತುತ ಮೈಸೂರು ಮಾನಸ ಗಂಗೋತ್ರಿ ವಿಶ್ವ ವಿದ್ಯಾಲಯದ ಗುಬ್ಬಿ ವೀರಣ್ಣ ರಂಗಪೀಠಕ್ಕೆ ಸಂದರ್ಶನ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Key words: actor –mandya ramesh-award-rangaboomi-ranga kanmani-udupi rangaboomi trust