ಡ್ರಗ್ಸ್ ಮಾರುತ್ತಿದ್ದ ವೇಳೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಆರೋಪಿಗಳು: 6.5 ಲಕ್ಷ ಮೌಲ್ಯದ ಗಾಂಜಾ ಪೊಲೀಸರ ವಶಕ್ಕೆ.

ಬೆಂಗಳೂರು,ಜುಲೈ,31,2021(www.justkannada.in):  ಬಾಣಸವಾಡಿ ಪೊಲೀಸರು ಕಾರ್ಯಾಚರಣೆ ನಡೆಸಿ ಡ್ರಗ್ಸ್ ಮಾರುತ್ತಿದ್ದ ಇಬ್ಬರು ಆರೋಪಿಗಳನ್ನ ಬಂಧಿಸಿದ್ದಾರೆ.

ಅಂತರರಾಜ್ಯ ಹಾಗೂ ಸ್ಥಳೀಯ ಇಬ್ಬರು ಆರೋಪಿಗಳ ಬಂಧಿಸಲಾಗಿದ್ದು, ಓರ್ವ ಬಿಹಾರ ಮೂಲದವನಾಗಿದ್ದು ಮತ್ತೋರ್ವ ಸ್ಥಳೀಯ ಆರೋಪಿ  ಎನ್ನಲಾಗಿದೆ. ಬಂಧಿತರಿಂದ 6.5 ಲಕ್ಷ ಮೌಲ್ಯದ 21.5 ಕೆ.ಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ.

ಬೆಂಗಳೂರು ನಗರದಲ್ಲಿ ಡ್ರಗ್ಸ್ ಮಾರಾಟ ಮಾಡುವ ಪೆಡ್ಲರ್‌ ಗಳನ್ನು ಪತ್ತೆ ಮಾಡಲು ಹಿರಿಯ ಪೊಲೀಸ್ ಅಧಿಕಾರಿಗಳು ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಬಾಣಸವಾಡಿ ಪೊಲೀಸ್ ಠಾಣೆಯ ಪೊಲೀಸರು ತಂಡಗಳನ್ನು ರಚಿಸಿಕೊಂಡು ಕಾರ್ಯಾಚರಣೆಗಿಳಿದಿದ್ದರು. ಈ ವೇಳೆ ಬಾಣಸವಾಡಿ ಪೊಲೀಸ್ ಠಾಣೆಯ ಸರಹದ್ದಿನ ಹೆಚ್.ಆರ್.ಬಿ.ಆರ್ ಲೇಔಟ್, 1ನೇ ಬ್ಲಾಕ್, ಸರ್ವೀಸ್ ರಸ್ತೆ, ಬಾಬುಸಾಬ್ ಪಾಳ್ಯ, ಜಂಕ್ಷನ್ ಹತ್ತಿರದ ಬಿಡಿಯ ಪಾರ್ಕ್ ಪಕ್ಕದ ರಸ್ತೆಯಲ್ಲಿ ಇಬ್ಬರು ವ್ಯಕ್ತಿಗಳು ಗಾಂಜಾ ಮಾದಕವಸ್ತುವನ್ನು ಬ್ಯಾಗ್‌ ಗಳಲ್ಲಿ ಇಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದಾರೆಂದು ಮಾಹಿತಿ ಬಂದಿತ್ತು.

ನಿಖರವಾದ ಮಾಹಿತಿ ಮೇರೆಗೆ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡವು ದಾಳಿ ನಡೆಸಿದ್ದು ಈ ವೇಳೆ ಆರೋಪಿಗಳು ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ.  ಇಬ್ಬರು ಆರೋಪಿಗಳನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು ಈ ವೇಳೆ ಟ್ರಾವೆಲ್ ಬ್ಯಾಗ್‌ ಗಳಲ್ಲಿದ್ದ 6.5 ಲಕ್ಷ ಮೌಲ್ಯದ  21.5 ಕೆಜಿ ಗಾಂಜಾವನ್ನ ವಶಕ್ಕೆ ಪಡೆಯಲಾಗಿದೆ.

ಬೆಂಗಳೂರು ನಗರ ಪೂರ್ವ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಡಾ||ಶರಣಪ್ಪ ನಿರ್ದೇಶನದಲ್ಲಿ, ಬಾಣಸವಾಡಿ ಉಪ ವಿಭಾಗದ ಸಹಾಯಕ ನೇತೃತ್ವದಲ್ಲಿ ಸಹಾಯಕ ಪೊಲೀಸ್ ಆಯುಕ್ತ.ಎನ್.ಬಿ.ಸಕ್ರಿ ಅವರ ನೇತೃತ್ವದಲ್ಲಿ ಬಾಣಸವಾಡಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ ಪೆಕ್ಟರ್‌ ಶ್ರೀ.ಸತೀಶ.ಹೆಚ್.ಎಸ್ ಮತ್ತು ಪಿಎಸ್‌ಐ .ನಾಗರಾಜ ನೇದಲಗಿ, ಎ.ಎಸ್.ಐ.ಪ್ರಕಾಶ್ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Key words:  accused -arrest – selling –drugs-bangalore