ಏ.14 ರಂದು ಕರ್ನಾಟಕ ಭಾರತ್‌ ಗೌರವ್‌ ಕಾಶಿ ರೈಲು ಯಾತ್ರೆಯ 4ನೇ ಟ್ರಿಪ್‌: ಸಚಿವೆ ಶಶಿಕಲಾ ಜೊಲ್ಲೆ

ಬೆಂಗಳೂರು ಮಾರ್ಚ್‌ 25,2023(www.justkannada.in): ಕರ್ನಾಟಕ ಸರ್ಕಾರ ಮುಜರಾಯಿ ಇಲಾಖೆಯ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಕರ್ನಾಟಕ ಭಾರತ್‌ ಗೌರವ್‌ ಕಾಶಿ ರೈಲು ಯಾತ್ರೆಯ ನಾಲ್ಕನೇ ಟ್ರಿಪ್‌ನ್ನ ಏಪ್ರಿಲ್‌ 14 ರಂದು ಹಾಗೂ 5 ನೇ ಟ್ರಿಪ್‌ ನ್ನು ಏಪ್ರಿಲ್‌ 24 ರಂದು ನಡೆಸುವಂತೆ ಮುಜರಾಯಿ ಹಜ್‌ ಮತ್ತು ವಕ್ಫ್‌ ಸಚಿವೆ ಶಶಿಕಲಾ ಜೊಲ್ಲೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇಂದು ವಿಧಾನಸೌಧದಲ್ಲಿ ರೈಲ್ವೇ ಇಲಾಖೆ, ಐಆರ್‌ ಸಿಟಿಸಿ ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸೂಚನೆ ನೀಡಿದರು. ಕಾಶಿ ಯಾತ್ರೆ ಹಾಗೂ ಸಹಾಯಧನ ಯೋಜನೆ ನಮ್ಮ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿದೆ. ಈ ಯೋಜನೆಯನ್ನ ಸಮರ್ಪಕವಾಗಿ ಮುಂದುವರೆಸುವುದು ಬಹಳ ಮುಖ್ಯ. ಈ ನಿಟ್ಟಿನಲ್ಲಿ ಅಧಿಕಾರಿಗಳು ಎಲ್ಲಾ ರೀತಿಯ ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳಬೇಕು. ಏಪ್ರಿಲ್‌ 14 ಮತ್ತು ಏಪ್ರಿಲ್‌ 24 ರಂದು ನಾಲ್ಕು ಮತ್ತು ಐದನೇ ಟ್ರಿಪ್‌ನ್ನು ನಡೆಸಬಹುದಾಗಿದೆ. ಈ ಬಗ್ಗೆ ವ್ಯಾಪಕ ಪ್ರಚಾರ ನೀಡುವ ಮೂಲಕ ಹೆಚ್ಚಿನ ಜನರಿಗೆ ತಲುಪುವಂತೆ ಅಧಿಕಾರಿಗಳಿಗೆ ಸಚಿವೆ ಶಶಿಕಲಾ ಜೊಲ್ಲೆ ಸೂಚನೆ ನೀಡಿದರು.

ಎಲ್‌ ಹೆಚ್‌ ಬಿ ರೇಕ್‌ ನ ಮೊದಲ ಟ್ರಿಪ್‌:

ಅತ್ಯಾಧುನಿಕ ಎಲ್‍ ಹೆಚ್‍ ಬಿ  ರೇಕನ್ನು ಸಿದ್ದಪಡಿಸಲಾಗಿದ್ದು, ಇದರ ಮೂಲಕ ಕೈಗೊಳ್ಳಲಾಗುವ ಮೊದಲನೇ ಟ್ರಿಪ್‍ ಇದಾಗಿರಲಿದೆ.  ಹಳೆಯ ರೈಲು ಕೋಚ್‍ ಗಿಂತಲೂ 1.7 ಮೀಟರ್‍ ಉದ್ದವಿದ್ದು ಹೆಚ್ಚಿನ ಆರಾಮದಾಯಕ ಯಾತ್ರೆಯನ್ನು ಕೈಗೊಳ್ಳಬಹುದಾಗಿದೆ. ಈ ಕೋಚ್‍ ಗಳ ಮೂಲಕ ಹೆಚ್ಚಿನ ವೇಗದಿಂದ ಸಾಗಬಹುದಾಗಿದೆ. ಅಲ್ಲದೇ, ಎರಡೂ ಪವರ್‍ ಕಾರ್‍ ಗಳಿದ್ದು ಎಸಿಯ ಗುಣಮಟ್ಟ ಹಾಗೂ ವಿದ್ಯುತ್‍ ಲಭ್ಯತೆಯೂ ಹೆಚ್ಚಾಗಲಿದೆ.

ರೈಲಿನಲ್ಲೇ ಬಿಸಿ ಬಿಸಿಯಾದ ಊಟ ತಯಾರಿಕೆ:

ಹಳೆಯ ರೈಲ್‍ ನಲ್ಲಿ ಊಟ ತಯಾರಿಸುವ ಸೌಲಭ್ಯವಿಲ್ಲದೆ ಇದ್ದ ಕಾರಣ ಹೊರಗಿನಿಂದ ಊಟವನ್ನು ತೆಗೆದುಕೊಂಡು ಪ್ರಯಾಣಿಕರಿಗೆ ನೀಡಬೇಕಾಗಿತ್ತು. ಆದರೆ, ಈ ನೂತನ ಕೋಚ್‍ ನಲ್ಲಿ ಫ್ಲೇಮ್ ಲೆಸ್‍ ಕಿಚನ್‍ ಅಳವಡಿಸಲಾಗಿದ್ದು ಎಲ್ಲಾ ಪ್ರಯಾಣಿಕರಿಗೂ, ಸರಿಯಾದ ಸಮಯದಲ್ಲಿ ಅಗತ್ಯ ರೈಲಿನಲ್ಲಿಯೇ ತಯಾರಿಸಿ ಊಟವನ್ನು ಸರಬರಾಜು ಮಾಡಬಹುದಾಗಿದೆ.

ವೈದ್ಯರ ಸೌಲಭ್ಯ:

ಕಾಶಿಯಾತ್ರೆಗೆ ತೆರಳುವವರು ಹೆಚ್ಚಿನ ಸಂಖ್ಯೆಯಲ್ಲಿ ಹಿರಿಯರಾಗಿರುವ ಕಾರಣ ವೈದ್ಯರನ್ನ ಅವರ ಜೊತೆಯಲ್ಲಿ ಕಳುಹಿಸುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಪ್ರತಿ ಯಾತ್ರೆಗೂ ಇಬ್ಬರು (ಒಬ್ಬ ಮಹಿಳೆ – ಒಬ್ಬ ಪುರುಷ) ವೈದ್ಯರನ್ನ ನಿಯೋಜಿಸುವಂತೆ ಆರೋಗ್ಯ ಇಲಾಖೆಗೆ ಮನವಿ ಮಾಡಲಾಗುವುದು. ಹಾಗೂ ಮುಂದಿನ ಯಾತ್ರೆಯಲ್ಲಿ ವೈದ್ಯರು ಹಾಗೂ ಮೂಲಭೂತ ವೈದ್ಯಕೀಯ ಚಿಕಿತ್ಸೆಯ ಲಭ್ಯತೆ ಇರುವಂತೆ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.

ಪ್ರೋತ್ಸಾಹಧನ ಪಡೆಯುವ ವಿಧಾನ ಸರಳೀಕರಣ:

ಕಾಶಿಯಾತ್ರೆಯ ಸಹಾಯಧನ 5 ಸಾವಿರ ರೂಪಾಯಿಗಳನ್ನು ಪಡೆಯುವ ವಿಧಾನ ಸ್ವಲ್ಪ ಕ್ಲಿಷ್ಟಕರವಾಗಿದೆ. ಅದನ್ನು ಸರಳೀಕರಣಗೊಳಿಸುವ ಅಗತ್ಯವಿದೆ. ವೈಯಕ್ತಿಕವಾಗಿ ಕಾಶಿ ಯಾತ್ರೆಗೆ ತೆರಳುವವರು ಕಾಶಿ ಕರ್ನಾಟಕ ಛತ್ರಕ್ಕೆ ಹೋಗಿ ನೊಂದಣಿ ಮಾಡಿಸಿಕೊಳ್ಳುವುದು ಬಹಳ ತ್ರಾಸದಾಯಕವಾಗುತ್ತಿದೆ. ಇದನ್ನ ಸರಳೀಕರಣಗೊಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಹಾಗೂ ಯಾತ್ರೆಯಲ್ಲಿನ ನ್ಯೂನ್ಯತೆಗಳು ಮರುಕಳಿಸಬಾರದು ಇದಕ್ಕೆ ಅಗತ್ಯವಿರುವ ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳುವಂತೆ ಸಚಿವೆ ಶಶಿಕಲಾ ಜೊಲ್ಲೆ ಸೂಚಿಸಿದರು.

ಸಭೆಯಲ್ಲಿ ಮುಜರಾಯಿ ಇಲಾಖೆಯ ಆಯುಕ್ತ ಬಸವರಾಜೇಂದ್ರ ಹಾಗೂ ರೈಲ್ವೇ ಇಲಾಖೆ ಸಿಸಿಎಂ ಅನೂಪ್‌ ದಯಾನಂದ್‌ ಹಾಗೂ ಐಆರ್‌ಸಿಟಿಸಿ ಅಧಿಕಾರಿಗಳು ಉಪಸ್ಥಿತರಿದ್ದರು.

Key words: 4th Trip -Karnataka Bharat- Gaurav- Kashi Train Yatra – Minister- Shashikala Jolle.