ಸರ್ಕಾರಿ ಶಾಲೆಗಳಲ್ಲಿ 47,000 ಕ್ಕೂ ಅಧಿಕ ಹುದ್ದೆಗಳು ಖಾಲಿ

kannada t-shirts

ಬೆಂಗಳೂರು:ಆ-16:(www.justkannada.in) ಎಲ್ಲಾ ಸರ್ಕಾರಿ ಇಲಾಖೆಗಳಲ್ಲಿ ಒಟ್ಟು 2,51,423 ಹುದ್ದೆಗಳು ಖಾಲಿಯಿದ್ದು, ಅದರಿಲ್ಲಿ ಪ್ರಮುಖವಾಗಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯಲ್ಲಿಯೇ ಅತಿ ಹೆಚ್ಚು ಖಾಲಿ ಹುದ್ದೆಗಳನ್ನು ಹೊಂದಿದೆ.

ಚುನಾವಣೆಗಳು ಬಂತೆಂದೆರೆ ರಾಜಕೀಯ ಪಕ್ಷಗಳು ಭರವಸೆಗಳನ್ನು ನೀಡುತ್ತಲೆ ಇರುತ್ತವೆ. ಆದರೆ ಚುನಾವಣೆಯಲ್ಲಿ ಆಯ್ಕೆಯಾದ ಬಳಿಕ, ಅಧಿಕಾರಕ್ಕೆ ಬಂದ ಕೂಡಲೇ ಕೊಟ್ಟ ಭರವಸೆಗಳನ್ನು ಈಡೇರಿಸುವ ಬಗ್ಗೆ ಮರೆತೇಬಿಡುತ್ತವೆ. ಅಂತಹ ಆಶ್ವಾಸನೆಗಳಲ್ಲಿ ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸುವುದು ಮತ್ತು ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದು ಕೂಡ ಒಂದಾಗಿದೆ. ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಬದಲು ಹಲವಾರು ಸರ್ಕಾರಿ ಇಲಾಖೆಗಳಲ್ಲಿಯೇ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾದಿದರೂ ಸಾಕು ಅದೆಷ್ಟೋ ನಿರುದ್ಯೋಗಿಗಳು ಉದ್ಯೋಗಿಗಳಾಗುತ್ತಾರೆ.

ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಈ ಹಿಂದೆ ವಿಧಾನಸಭಾ ಕಲಾಪದ ವೇಳೆ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಒಟ್ಟು 2,51,423 ಹುದ್ದೆಗಳು ಖಾಲಿಯಿವೆ ಎಂದು ಹೇಳಿದ್ದರು. ಅವುಗಳಲ್ಲಿ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯಲ್ಲಿಯೇ ಬರೋಬ್ಬರಿ 47,779 ಹುದ್ದೆಗಳು ಖಾಲಿಯಿವೆ. ಇನ್ನು ಆಂತರಿಕ ಭದ್ರತಾ ವಿಭಾಗದಲ್ಲಿ 32,866 ಹುದ್ದೆಗಳು ಖಾಲಿಯಿವೆ. ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ 32,840 ಹುದ್ದೆಗಳು ಖಾಲಿಯಿದ್ದರೆ, ಕೌಶಲ್ಯ ಅಭಿವೃದ್ಧಿ ಇಲಾಖೆಯಲ್ಲಿ 4,032 ಹುದ್ದೆಗಳು ಖಾಲಿ ಇವೆ.

ಇದು ಸರ್ಕಾರದ ವಿಷಯವಾದರೆ ಇನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕೂಡ ಖಾಲಿ ಹುದ್ದೆ ಭರ್ತಿ ಮಾಡುವಲ್ಲಿ ರಾಜ್ಯ ಸರ್ಕಾರಕ್ಕಿಂತ ಹಿಂದುಳಿದಿಲ್ಲ. ಬಿಬಿಎಂಪಿ ತನ್ನ 156 ಶಿಕ್ಷಣ ಸಂಸ್ಥೆಗಳಲ್ಲಿ 386 ಹುದ್ದೆಗಳನ್ನು ಭರ್ತಿ ಮಾಡುವಲ್ಲಿ ವಿಫಲವಾಗಿದೆ.

ಆಕಾಂಕ್ಷಿಗಳಲ್ಲಿ ಒಬ್ಬರಾದ ಸಂತೋಷ್ ಎಸ್ ಎನ್ನುವವರು, “ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ವಿಳಂಬವು ಆಕಾಂಕ್ಷಿಗಳನ್ನು ಅವರ ಜೀವನೋಪಾಯದಿಂದ ವಂಚಿತಗೊಳಿಸುತ್ತದೆ. ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ಮೊದಲು ಆದ್ಯತೆ ನೀಡಬೇಕೆಂದು ಒತ್ತಾಯಿಸಿದ್ದಾರೆ. ”

ಬೆಳ್ಳಂದೂರಿನ ಸರ್ಕಾರಿ ಉನ್ನತ ಪ್ರಾಥಮಿಕ ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿಯ ಗೌರವ ಅಧ್ಯಕ್ಷ ಮುನಿಯಪ್ಪ ಹೇಳುವ ಪ್ರಕಾರ, ಈ ಶಾಲೆಯಲ್ಲಿ 250 ವಿದ್ಯಾರ್ಥಿಗಳಿದ್ದಾರೆ, ಆದರೆ ಶಿಕ್ಷಕರ ಕೊರತೆಯಿದೆ. ಕ್ರೀಡೆಗಳನ್ನು ಹೇಳಿಕೊಡಲು, ವಿದ್ಯಾರ್ಥಿಗಳಿಗೆ ಆಟದ ಮೈದಾನವಾಗಲಿ ಅಥವಾ ದೈಹಿಕ ಶಿಕ್ಷಕರಾಗಲಿ ಇಲ್ಲ ಎಂದು ತಿಳಿಸಿದ್ದಾರೆ.

ಇದೇ ಅಭಿಪ್ರಾಯವನ್ನು ವರ್ತೂರ್ ರಸ್ತೆಯ ರಾಮಗೊಂಡನಹಳ್ಳಿಯ ಸರ್ಕಾರಿ ಉನ್ನತ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಕೃಷ್ಣಪ್ಪ ಕೂಡ ವ್ಯಕ್ತಪಡಿಸುತ್ತಾರೆ. ನಮ್ಮಲ್ಲಿ ಶಾಲೆಯಲ್ಲಿ 300 ವಿದ್ಯಾರ್ಥಿಗಳಿದ್ದು, ಇನ್ನೂ ಐದರಿಂದ ಆರು ಶಿಕ್ಷಕರ ಅಗತ್ಯವಿದೆ. ಸಧ್ಯ ನಾವು ಸ್ವಯಂಸೇವಕರು ಮತ್ತು ಎನ್‌ಜಿಒ ಪ್ರಾಯೋಜಿತ ಶಿಕ್ಷಕರ ಮೇಲೆ ಅವಲಂಬಿತರಾಗಿದ್ದೇವೆ ಎಂದು ಹೇಳಿದ್ದಾರೆ.

ಶಾಲೆಗಳಲ್ಲಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವಲ್ಲಿ ವಿಫಲವಾಗಿರುವುದು ಶಿಕ್ಷಣದ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಶಿಕ್ಷಣ ತಜ್ಞ ನಿರಂಜನಾರಾಧ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. “ಆರ್‌ಟಿಇ ಕಾಯ್ದೆಯ ಪ್ರಕಾರ ಸರ್ಕಾರವು 2015 ರ ವೇಳೆಗೆ ಸಮರ್ಥ ಶಿಕ್ಷಕರನ್ನು ನೇಮಿಸಬೇಕಾಗಿತ್ತು. ಆದರೆ ಇಲ್ಲಿಯವರೆಗೆ ಯಾವುದೇ ಶಿಕ್ಷಕರನ್ನು ನೇಮಕ ಮಾಡಿಲ್ಲ ಎಂದು ಹೇಳಿದ್ದಾರೆ.

ಶಾಲೆಗಳು ಮತ್ತು ಕಾಲೇಜುಗಳಲ್ಲಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ವಿಳಂಬವಾಗುವುದರಿಂದ ಶಿಕ್ಷಣದ ಗುಣಮಟ್ಟದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದು ಸಿವಿಕ್‌ನ ಕಾರ್ಯನಿರ್ವಾಹಕ ಟ್ರಸ್ಟಿ ಕಾತ್ಯಾಯಾನಿ ಚಾಮರಾಜ್ ತಿಳಿಸಿದ್ದಾರೆ. “ಶಾಲೆಗಳು, ಅಂಗನವಾಡಿಗಳು ಮತ್ತು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿನ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಸಾಧ್ಯವಾಗಿಲ್ಲವೆಂದರೆ ಅಧಿಕಾರಿಗಳು ಯಾವ ರೀತಿಯ ಮಾನವ ಸಂಪನ್ಮೂಲ ಅಭಿವೃದ್ಧಿಯನ್ನು ಹೊಂದುತ್ತಾರೆ? ಉದ್ಯೋಗಿಗಳಿಗೆ ಉದ್ಯೋಗ ಭದ್ರತೆ ಒದಗಿಸಲು ಮತ್ತು ಸೇವೆಯ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು ಅಧಿಕಾರಿಗಳು ಖಾಲಿ ಹುದ್ದೆಗಳನ್ನು ಶೀಘ್ರವಾಗಿ ಭರ್ತಿ ಮಾಡಬೇಕು. ಒಪ್ಪಂದೀಕರಣವು ನೌಕರರ ಶೋಷಣೆಗೆ ಕಾರಣವಾಗುತ್ತದೆ ಎಂಬದು ನನ್ನ ಅಭಿಪ್ರಾಯ ಎಂದು ಕಾತ್ಯಾಯಿನಿ ಹೇಳುತ್ತಾರೆ.

ಸರ್ಕಾರಿ ಶಾಲೆಗಳಲ್ಲಿ 47,000 ಕ್ಕೂ ಅಧಿಕ ಹುದ್ದೆಗಳು ಖಾಲಿ

47,000+ vacancies in govt schools

website developers in mysore