ಪುಟ್ಟಗೌರಿ ಮದುವೆ ಅವ್ಯಾಹತ: ಬೆಳಗಾವಿ ಜಿಲ್ಲೆಯಲ್ಲಿ ಒಂದೇ ತಿಂಗಳಲ್ಲಿ 44 ಪ್ರಕರಣಕ್ಕೆ ತಡೆ

ಬೆಳಗಾವಿ:ಜೂ-28: ನೆರೆಯ ಮಹಾರಾಷ್ಟ್ರ ಮತ್ತು ಗೋವಾ ಗಡಿಗೆ ಹೊಂದಿಕೊಂಡಿರುವ ಬೆಳಗಾವಿ ಜಿಲ್ಲೆಯಲ್ಲಿ ಬಾಲ್ಯವಿವಾಹ ಅವ್ಯಾಹತವಾಗಿ ನಡೆಯುತ್ತಿದ್ದು, ಏಪ್ರಿಲ್ ತಿಂಗಳೊಂದರಲ್ಲೇ 44 ಬಾಲ್ಯವಿವಾಹಗಳಿಗೆ ಅಧಿಕಾರಿಗಳು ಬ್ರೇಕ್ ಹಾಕಿದ್ದಾರೆ.ಗಡಿಜಿಲ್ಲೆಯಲ್ಲಿ ಬಾಲ್ಯವಿವಾಹ ತಡೆ ಕಾರ್ಯಾಚರಣೆ ಚುರುಕುಗೊಂಡಿರುವುದರಿಂದ ಎಚ್ಚೆತ್ತಿರುವ ವಧು-ವರರ ಕುಟುಂಬಸ್ಥರು, ಬಾಲ್ಯವಿವಾಹಕ್ಕಾಗಿ ಮಹಾರಾಷ್ಟ್ರದ ಪಟ್ಟಣಗಳನ್ನು ಆರಿಸಿಕೊಳ್ಳುತ್ತಿದ್ದಾರೆ. ಸಮಗ್ರ ಮಾಹಿತಿ ಸಿಕ್ಕರೂ ರಾಜ್ಯದ ಗಡಿ ಬದಲಾದ್ದರಿಂದ ಆ ವಿವಾಹ ತಡೆಯುವುದು ಇಲ್ಲಿನ ಅಧಿಕಾರಿಗಳಿಗೆ ಸವಾಲಾಗಿ ಪರಿಣಮಿಸಿದೆ.

‘ಮಕ್ಕಳನ್ನು ಮದುವೆ ಮಾಡಿದರೆ ಸಾಕು ಎಂಬ ಮನಃಸ್ಥಿತಿಯಲ್ಲಿರುವ ಕೆಲವು ಪಾಲಕರು ತೆರೆಮರೆಯಲ್ಲಿ ಬಾಲ್ಯವಿವಾಹಗಳನ್ನು ನಡೆಸುತ್ತಿದ್ದಾರೆ. ಆದರೆ ಕೆಲವೊಮ್ಮೆ ಈ ಬಗ್ಗೆ ಅರಿವುಳ್ಳ ನಾಗರಿಕರು ಮಕ್ಕಳ ಸಹಾಯವಾಣಿ 1098ಕ್ಕೆ ಕರೆ ಮಾಡಿ, ಮಾಹಿತಿ ತಿಳಿಸುತ್ತಾರೆ. ಹೀಗೆ ಬಂದ ಕರೆ ಆಧರಿಸಿ ಏಪ್ರಿಲ್​ನಲ್ಲಿ 44 ಬಾಲ್ಯವಿವಾಹ ತಡೆದಿದ್ದೇವೆ. ಸ್ವತಂತ್ರವಾಗಿ ನಡೆಯುವ ವಿವಾಹಗಳಲ್ಲಿ ಬಾಲ್ಯವಿವಾಹ ಬೆಳಕಿಗೆ ಬರುತ್ತಿರುವುದರಿಂದ ಸಾಮೂಹಿಕ ವಿವಾಹಗಳತ್ತ ಪಾಲಕರು ಒಲವು ತೋರುತ್ತಿದ್ದಾರೆ. ಹಾಗಾಗಿ, ಗ್ರಾಪಂ ಮತ್ತು ಇತರ ಸರ್ಕಾರಿ ಇಲಾಖೆ ಸಿಬ್ಬಂದಿ ನೆರವಿನೊಂದಿಗೆ ಸಾಮೂಹಿಕ ವಿವಾಹ ಆಯೋಜಿಸುವ ಸಂಘಟಕರನ್ನು ಸಂರ್ಪಸುತ್ತಿದ್ದೇವೆ. ಹಸೆಮಣೆ ಏರುವವರ ವಯೋಮಾನ ದಾಖಲಾತಿ ಪರಿಶೀಲಿಸಿಯೇ ವಿವಾಹಕ್ಕೆ ಅನುಮತಿ ನೀಡಬೇಕು ಎಂದು ಸೂಚಿಸಲಾಗಿದೆ’ ಎಂದು ಮಕ್ಕಳ ರಕ್ಷಣಾಧಿಕಾರಿ ಜೆ.ಟಿ.ಲೋಕೇಶ್ ವಿಜಯವಾಣಿಗೆ ತಿಳಿಸಿದ್ದಾರೆ.

ಎಲ್ಲೆಲ್ಲಿ ವಿವಾಹ?

ಸವದತ್ತಿ ತಾಲೂಕಿನ ಉಗರಗೋಳ, ಸತ್ತಿಗೇರಿ, ಬೈಲಹೊಂಗಲ ತಾಲೂಕಿನ ತಿಗಡಿ, ದೊಡವಾಡ, ನಂದಿಹಳ್ಳಿ, ಖಾನಾಪುರ ತಾಲೂಕಿನ ಬೀಡಿ, ಹುಕ್ಕೇರಿ ತಾಲೂಕಿನ ಸಂಕೇಶ್ವರ, ಯಮಕನಮರಡಿ, ರಾಮದುರ್ಗ ತಾಲೂಕಿನ ಸಾಲಹಳ್ಳಿ, ಬೆಳಗಾವಿ ತಾಲೂಕಿನ ಪಂತಬಾಳೇಕುಂದ್ರಿ, ಹೊನ್ನಿಹಾಳ, ಹೊಸವಂಟಮುರಿ ಮತ್ತಿತರ ಕಡೆ ಆಯೋಜಿಸಲಾಗಿದ್ದ ವಿವಾಹಕ್ಕೆ ಬ್ರೇಕ್ ಹಾಕಲಾಗಿದೆ. ಆರ್ಥಿಕ ಸಮಸ್ಯೆಯೇ ಬಾಲ್ಯವಿವಾಹಕ್ಕೆ ಕಾರಣ ಎಂದು ಜೆ.ಟಿ. ಲೋಕೇಶ ಮಾಹಿತಿ ನೀಡಿದರು.

ಸ್ಪಷ್ಟ ಅರಿವಿಲ್ಲ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಪ್ರತಿವರ್ಷ ಬಾಲ್ಯವಿವಾಹ ತಡೆಯುತ್ತಿದ್ದಾರೆಯೇ ಹೊರತು, ಪ್ರತಿ ಹಳ್ಳಿಗಳಲ್ಲಿ ಜನತೆಗೆ ಬಾಲ್ಯವಿವಾಹ ನಿಷೇಧ ಕಾಯ್ದೆ ಬಗ್ಗೆ ಸ್ಪಷ್ಟ ತಿಳಿವಳಿಕೆ ಮೂಡಿಸುತ್ತಿಲ್ಲ. ಇದೇ ಕಾರಣಗಳಿಂದ ಬಡ ಕುಟುಂಬಗಳಲ್ಲಿ ಬಾಲ್ಯವಿವಾಹ ನಡೆಯುತ್ತಿವೆ ಎಂಬ ಆರೋಪ ಕೇಳಿಬರುತ್ತಿದೆ.

ಬಾಲ್ಯವಿವಾಹ ಪ್ರಕರಣಗಳಲ್ಲಿ ಶೇ.90 ಯುವಕರು 21 ವರ್ಷ ದಾಟಿದವರೇ ಇರುತ್ತಾರೆ. ಅಪ್ರಾಪ್ತರಾಗಿರುವುದು ಬಾಲಕಿಯರೇ. ಹಾಗಾಗಿ, ಶಾಲಾ ಹಂತದಲ್ಲಿ ಬಾಲಕಿಯರಿಗೆ ಹೆಚ್ಚಾಗಿ ಜಾಗೃತಿ ಮೂಡಿಸಲಾಗುವುದು. ಒಂದು ವೇಳೆ ಬಾಲ್ಯವಿವಾಹ ನಡೆದರೆ ಸಂಬಂಧಿಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು.

| ಭಾರತಿ ಶೆಟ್ಟರ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ, ಬೆಳಗಾವಿ

ಮಹಾರಾಷ್ಟ್ರದಲ್ಲೂ ಮಕ್ಕಳ ಸಹಾಯವಾಣಿ ಕೇಂದ್ರವಿದೆ. ಬೆಳಗಾವಿಗರ ವಿವಾಹಗಳು ಅಲ್ಲಿ ನಡೆದರೂ ಮಾಹಿತಿ ನೀಡಿ ತಡೆಯುವ ಪ್ರಯತ್ನ ಮಾಡುತ್ತಿದ್ದೇವೆ.

| ಎಂ.ಕೆ. ಕುಂದರಗಿ, ಸಂಯೋಜನಾಧಿಕಾರಿ, 1098 ಮಕ್ಕಳ ಸಹಾಯವಾಣಿ

ಠಾಣಗುಂದಿಯಲ್ಲಿ ಬಾಲ್ಯ ವಿವಾಹಕ್ಕೆ ತಡೆ

ಯಾದಗಿರಿ: ಇಲ್ಲಿನ ಠಾಣಗುಂದಿ ಗ್ರಾಮದಲ್ಲಿ ಗುರುವಾರ ಬಾಲ್ಯ ವಿವಾಹ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳು ದಾಳಿ ನಡೆಸಿ ಬಾಲ್ಯ ವಿವಾಹ ತಡೆದಿದ್ದಾರೆ. ಮಕ್ಕಳಾಗಲಿಲ್ಲ ಎಂಬ ಕಾರಣಕ್ಕೆ ಈತ ಇನ್ನೊಂದು ವಿವಾಹಕ್ಕೆ ಮುಂದಾಗಿದ್ದ.

ಗ್ರಾಮದ ಭೀಮರಾಯ(45) ಎಂಬಾತ ವಿವಾಹಕ್ಕೆ ಮುಂದಾಗಿದ್ದ. ಈತನಿಗೆ ಈ ಹಿಂದೆ ಮದುವೆಯಾಗಿತ್ತು. ಆದರೆ, ಮಕ್ಕಳಾಗಿರಲಿಲ್ಲ. ಹೀಗಾಗಿ 17 ವರ್ಷದ ತನ್ನ ಹೆಂಡತಿ ಅಣ್ಣನ ಮಗಳನ್ನೇ ಮದುವೆಯಾಗಲು ಮುಂದಾಗಿದ್ದ. ಅಚ್ಚರಿ ಎಂದರೆ ಈ ಎರಡನೇ ಮದುವೆಯನ್ನು ಮೊದಲನೇ ಪತ್ನಿಯೇ ಮುಂದೆ ನಿಂತು ಮಾಡಿಸಲು ಮುಂದಾಗಿದ್ದಳು. ಸುದ್ದಿ ತಿಳಿದ ಯಾದಗಿರಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮತ್ತು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧಿಕಾರಿಗಳು ಗ್ರಾಮಕ್ಕೆ ತೆರಳಿ ಬಾಲ್ಯ ವಿವಾಹ ತಡೆದಿದ್ದಾರೆ. ಅಲ್ಲದೆ ಬಾಲಕಿಯನ್ನು ರಕ್ಷಿಸಿ ಯಾದಗಿರಿಯ ಮಕ್ಕಳ ರಕ್ಷಣಾ ಘಟಕಕ್ಕೆ ಒಪ್ಪಿಸಿದ್ದಾರೆ.

ಪ್ರಕರಣಗಳ ವಿರುದ್ಧ ಕ್ರಮ

ಬೆಳಗಾವಿ ಪ್ರಕರಣಗಳ ಹಿನ್ನೆಲೆಯಲ್ಲಿ ರಾಜ್ಯದ ವಿವಿಧೆಡೆ ವಿಜಯವಾಣಿ ರಿಯಾಲಿಟಿ ಚೆಕ್ ನಡೆಸಿದಾಗ ಇತರ ಜಿಲ್ಲೆಗಳಲ್ಲೂ ಬಾಲ್ಯವಿವಾಹ ನಡೆದಿದ್ದು ಕಂಡುಬಂದಿದೆ.

ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದೆರಡು ವರ್ಷಗಳಲ್ಲಿ ಬಾಲ್ಯವಿವಾಹ ನೂರರ ಗಡಿ ಸಮೀಪಿಸಿದ್ದು, 25ಕ್ಕೂ ಅಧಿಕ ಪ್ರಕರಣಗಳಲ್ಲಿ ಎಫ್​ಐಆರ್ ದಾಖಲಾಗಿದೆ. 2017-18ರಲ್ಲಿ 40, 2018-19ರಲ್ಲಿ 46 ಬಾಲ್ಯ ವಿವಾಹ ಪ್ರಕರಣಗಳು ಪತ್ತೆಯಾಗಿವೆ. 2019ರ ಮಾರ್ಚ್ ಅಂತ್ಯಕ್ಕೆ ಅರ್ಧಶತಕದ ಗಡಿ ದಾಟಿದ್ದು, ಕಳೆದೊಂದು ತಿಂಗಳಲ್ಲೇ 19 ಪ್ರಕರಣಗಳು ಬೆಳಕಿಗೆ ಬಂದಿವೆ. ಪೊಲೀಸ್ ಸಿಬ್ಬಂದಿ ಜತೆ ದಾಳಿ ನಡೆಸುವ ಅಧಿಕಾರಿಗಳು ನೂರಾರು ಬಾಲ್ಯ ವಿವಾಹ ತಡೆದಿದ್ದಾರೆ. ಪೋಷಕರಿಂದ ಮುಚ್ಚಳಿಕೆ ಬರೆಸಿಕೊಂಡು ಎಚ್ಚರಿಕೆ ನೀಡಿ ವಾಪಸ್ ಬಂದಿದ್ದಾರೆ. ಆದರೆ ಪೂರ್ವನಿಶ್ಚಿತ ವರನೊಂದಿಗೇ ಮದುವೆ ಮಾಡಿಸಿ, ಸ್ವಲ್ಪವೂ ಅನುಮಾನ ಬರದಂತೆ ನೋಡಿಕೊಳ್ಳುತ್ತಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಳೆದ ಒಂದೇ ತಿಂಗಳಲ್ಲಿ 3 ದೂರುಗಳು ದಾಖಲಾಗಿವೆ. ಮಕ್ಕಳ ರಕ್ಷಣ ಸಮಿತಿ ಹಾಗೂ ಮಕ್ಕಳ ಸಹಾಯವಾಣಿ ಕಣ್ಗಾವಲು ನಡುವೆಯೂ 18 ವರ್ಷದೊಳಗಿನ ಬಾಲಕಿಯರನ್ನು ನಾನಾ ಕಾರಣಗಳಿಗೆ ಪೋಷಕರು ಕದ್ದು ಮುಚ್ಚಿ ವಿವಾಹ ಮಾಡುತ್ತಿದ್ದಾರೆ. ಏಪ್ರಿಲ್​ನಲ್ಲಿ ಸಖರಾಯಪಟ್ಟಣ, ಬಾಳೆಹೊನ್ನೂರು ಹಾಗೂ ಲಿಂಗದಹಳ್ಳಿ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಕಾಯ್ದೆ ಸಹಿತ ಬಾಲ್ಯ ವಿವಾಹಿತ ಆರೋಪಿಗಳು, ಪೋಷಕರ ಮೇಲೆ ದೂರು ದಾಖಲಾಗಿದೆ. ಕೆಲ ಪ್ರಕರಣಗಳಲ್ಲಿ ರಾಜಿ ಪಂಚಾಯಿತಿ ನಡೆದು ಪ್ರಕರಣಕ್ಕೆ ಅಧಿಕಾರಿಗಳು ಮತ್ತು ಪೊಲೀಸರು ಇತಿಶ್ರೀ ಹಾಡಿದ್ದಾರೆ. ಇನ್ನು ಕೆಲವರು ನ್ಯಾಯಾಲಯದ ಓಡಾಟದಿಂದ ತಪ್ಪಿಸಿಕೊಳ್ಳಲು ಮದುವೆ ಮುಂದೂಡಿ ತಾತ್ಕಾಲಿಕ ಪರಿಹಾರ ಪಡೆಯುತ್ತಿದ್ದಾರೆ. ಎಸ್​ಪಿ ಕಚೇರಿ ಆವರಣದಲ್ಲೇ ಮಕ್ಕಳ ರಕ್ಷಣಾ ಸಮಿತಿ ಕಚೇರಿ ಕಾರ್ಯ ನಿರ್ವಹಿಸುತ್ತಿದೆ. ಈ ಕಚೇರಿ ಸ್ಥಾಪನೆ ಬಳಿಕ (ಉಚಿತ ದೂರವಾಣಿ 1098) ಸಾಕಷ್ಟು ಪ್ರಕರಣಗಳು ಹೊರ ಬರುತ್ತಿವೆ.

ಕಲಬುರಗಿ ಜಿಲ್ಲಾ ವ್ಯಾಪ್ತಿಯಲ್ಲಿ ಕಳೆದ ವರ್ಷ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಬಾಲ್ಯವಿವಾಹ ತಡೆದಿದ್ದರು. ನಂತರ ಯಾವುದೇ ಪ್ರಕರಣ ದಾಖಲಾಗಿಲ್ಲ.

ಬೀದರ್ ಜಿಲ್ಲೆಯಲ್ಲಿ ಒಂದು ವರ್ಷದ ಹಿಂದೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಚೈಲ್ಡ್ ಲೈನ್ ಹಾಗೂ ವಿವಿಧ ಸಂಘ-ಸಂಸ್ಥೆಗಳಿಂದ 9 ಬಾಲ್ಯ ವಿವಾಹಗಳನ್ನು ತಡೆಯಲಾಗಿದೆ.

ದಾವಣಗೆರೆ ಜಿಲ್ಲೆಯಲ್ಲಿ 2018ರ ಮಾರ್ಚ್​ನಿಂದ 2019ರ ಮಾರ್ಚ್ ವರೆಗೆ 76 ಬಾಲ್ಯ ವಿವಾಹ ತಡೆದು, 2 ಪ್ರಕರಣ ದಾಖಲಿಸಲಾಗಿದೆ. ನಾಲ್ಕು ದಿನಗಳ ಹಿಂದೆ ದಾವಣಗೆರೆ ಗ್ರಾಮವೊಂದರ ದೇವಸ್ಥಾನದ ಸಮುದಾಯ ಭವನದಲ್ಲಿ ಜಾತ್ರೆ ಪ್ರಯುಕ್ತ 2 ಮದುವೆಗಳು ನಡೆದಿದ್ದು, ಆ ಪೈಕಿ 1 ಬಾಲ್ಯವಿವಾಹ ಎಂದು ಮೂಲಗಳು ತಿಳಿಸಿವೆ.

ಬಾಗಲಕೋಟೆ ಜಿಲ್ಲೆಯಲ್ಲಿ ಬಾಲ್ಯವಿವಾಹ ತಡೆಗೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡರೂ ಅದು ಸಂಪೂರ್ಣ ಸ್ಥಗಿತಗೊಂಡಿಲ್ಲ. ಜಿಲ್ಲೆಯ ವಿವಿಧೆಡೆ ಪ್ರತಿವರ್ಷ ಬಾಲ್ಯವಿವಾಹ ನಡೆಯುತ್ತಲಿವೆ. 2017-18ರಲ್ಲಿ 33, 2018-19 ಮಾರ್ಚ್​ವರೆಗೆ 35 ಬಾಲ್ಯ ವಿವಾಹ ತಡೆಯಲಾಗಿದೆ. ಪ್ರತಿ ವರ್ಷ ಜಿಲ್ಲೆಯಲ್ಲಿ ಸರಾಸರಿ 30 ರಿಂದ 40 ಬಾಲ್ಯ ವಿವಾಹ ತಡೆಗಟ್ಟ ಲಾಗುತ್ತಿದೆ. ಸುಮೋಟೋ ಪ್ರಕರಣ ದಾಖಲಿಸಲು ಅವಕಾಶವಿದ್ದರೂ ಪೊಲೀಸ್ ಇಲಾಖೆ ಈವರೆಗೆ ಒಂದೂ ಪ್ರಕರಣ ದಾಖಲಿಸಿಲ್ಲ.
ಕೃಪೆ:ವಿಜಯವಾಣಿ

ಪುಟ್ಟಗೌರಿ ಮದುವೆ ಅವ್ಯಾಹತ: ಬೆಳಗಾವಿ ಜಿಲ್ಲೆಯಲ್ಲಿ ಒಂದೇ ತಿಂಗಳಲ್ಲಿ 44 ಪ್ರಕರಣಕ್ಕೆ ತಡೆ
44-child-marriages-prevented-from-last-one-month-in-belagavi-district