ಕರ್ನಾಟಕ ಎಪಿಎಂಸಿ ಅಭಿವೃದ್ಧಿಗೆ 3 ಸಾವಿರ ಕೋಟಿ ರೂ. ಸಿಗುವ ನಿರೀಕ್ಷೆ- ಸಚಿವ ಎಸ್ ಟಿ ಸೋಮಶೇಖರ್.

ಯಾದಗಿರಿ, ಸೆಪ್ಟಂಬರ್,4,2021(www.justkannada.in):  ರೈತರ ಹಾಗೂ ಸಮಸ್ತ ನಾಗರಿಕರ ಅಭ್ಯುದಯಕ್ಕೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ನಮ್ಮ ರಾಜ್ಯ ಸರ್ಕಾರ ಬದ್ಧವಾಗಿದೆ. ಈ ನಿಟ್ಟಿನಲ್ಲಿ ಸಹಕಾರ ಸಚಿವಾಲಯವನ್ನು ಕೇಂದ್ರ ಸರ್ಕಾರ ಸ್ಥಾಪಿಸಿದ್ದು, ಒಂದು ಮೈಲಿಗಲ್ಲು ಎಂದೇ ಹೇಳಬಹುದು. ಇನ್ನು ರೈತರ ಕಲ್ಯಾಣಕ್ಕೋಸ್ಕರ ಎಪಿಎಂಸಿಗಳ ಉದ್ದಾರಕ್ಕೆ 1 ಲಕ್ಷ ಕೋಟಿ ರೂ, ಮೀಸಲಿಟ್ಟಿದ್ದು, ಕರ್ನಾಟಕಕ್ಕೂ ಇದರ ಪಾಲು ಸಿಗಲಿದೆ ಎಂದು ಸಹಕಾರ ಸಚಿವ  ಎಸ್.ಟಿ.ಸೋಮಶೇಖರ್ ತಿಳಿಸಿದರು.

ಯಾದಗಿರಿ ಜಿಲ್ಲೆಯ ಶಹಾಪುರ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ 25 ಕೋಟಿ ರೂಪಾಯಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಸಚಿವ ಎಸ್.ಟಿ ಸೋಮಶೇಖರ್, ಪ್ರಧಾನಿ ಮೋದಿ ಹಾಗೂ ಗೃಹ ಸಚಿವರಾದ ಅಮಿತ್ ಶಾ ಅವರು ಎಪಿಎಂಸಿಗಳ ಅಭಿವೃದ್ಧಿಗಾಗಿ ಸಾಕಷ್ಟು ಶ್ರಮ ವಹಿಸುತ್ತಿದ್ದು, ಇದಕ್ಕೆ 1 ಲಕ್ಷ ಕೋಟಿ ರೂ. ಮೀಸಲಿಟ್ಟಿರುವುದಾಗಿ ಈಗಾಗಲೆ ಘೋಷಿಸಿದ್ದಾರೆ. ಕರ್ನಾಟಕಕ್ಕೂ ಇದರ ಪಾಲು ಲಭ್ಯವಾಗಲಿದ್ದು, ಸುಮಾರು 2.5ರಿಂದ 3 ಸಾವಿರ ಕೋಟಿ ಲಭ್ಯವಾಗುವ ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗಿದೆ. ಈ ಮೂಲಕ ರಾಜ್ಯದಲ್ಲಿನ ಎಪಿಎಂಸಿಗಳ ಉನ್ನತೀಕರಣಕ್ಕೆ ಮತ್ತಷ್ಟು ಬಲ ಬಂದಂತಾಗುತ್ತದೆ ಎಂದು ಸಚಿವರು ಅಭಿಪ್ರಾಯಪಟ್ಟರು.

ರೈತನಿಗೇ ಪರಮಾಧಿಕಾರ ಕೊಟ್ಟಿದ್ದೇವೆ

ಇಷ್ಟು ವರ್ಷಗಳ ಕಾಲ ರೈತ ಕಷ್ಟಪಟ್ಟಿದ್ದು, ಆತಂಕದಲ್ಲಿಯೇ ಜೀವನ ಸಾಗಿಸಿದ್ದು ಸಾಕು. ಇನ್ನು ಮುಂದಾದರೂ ಕೃಷಿ ಲಾಭದಾಯಕ ಕ್ಷೇತ್ರ ಎಂಬುದನ್ನು ತೋರಿಸಿಕೊಡಬೇಕು ಎಂಬ ನಿಟ್ಟಿನಲ್ಲಿ ನಮ್ಮ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅನೇಕ ಯೋಜನೆಗಳನ್ನು ಹಾಗೂ ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ. ಇದರ ಭಾಗವಾಗಿ ರೈತರು ಎಲ್ಲಿ ಬೇಕಿದ್ದರೂ ತಮ್ಮ ಬೆಳೆಯನ್ನು ತಮಗೆ ಬೇಕಾದ ದರದಲ್ಲಿ ಮಾರಾಟ ಮಾಡುವ ಅಧಿಕಾರವನ್ನು ನೀಡಲಾಗಿದೆ. ಇದರಿಂದ ರೈತ ಮತ್ತಷ್ಟು ಸ್ವಾವಲಂಬಿಯಾಗಲು ಸಾಧ್ಯವಾಗುತ್ತದೆ ಎಂದು ಸಚಿವ ಸೋಮಶೇಖರ್ ತಿಳಿಸಿದರು.

ವಿಜುಲೆನ್ಸ್ ಕಮಿಟಿ ರದ್ದು, ರೈತ ನಿರಾಳ

ರೈತರು ಎಪಿಎಂಸಿಯಲ್ಲೇ ಮಾರಬೇಕೆಂಬ ಹಳೇ ಕಾನೂನಿನಿಂದ ರೈತರಿಗೆ ಸಾಕಷ್ಟು ತೊಂದರೆಯಾಗಿತ್ತು. ಎಪಿಎಂಸಿಗಳಿಂದ ಹೊರಗೆ ಮಾರಾಟ ಮಾಡಿದಲ್ಲಿ ದಂಡ ವಿಧಿಸಲು ಇದ್ದ ವಿಜುಲೆನ್ಸ್ ಕಮಿಟಿಯನ್ನು ನೂತನ ಕಾಯ್ದೆಯನ್ನು ಜಾರಿಗೆ ತಂದ ಕೂಡಲೇ ನಾವು ರದ್ದು ಮಾಡಿದ್ದೇವೆ, ಇದರಿಂದ ರೈತರಿಗೆ ದಂಡ ಹಾಕುತ್ತಿದ್ದ ಪ್ರಕ್ರಿಯೆಗೆ ತಡೆ ಬಿದ್ದಂತಾಗಿದೆ. ಕಳೆದ ಕೆಲ ವರ್ಷಗಳಿಂದ ದಂಡ ಹಾಕಿದ ಮೊತ್ತವೇ 25 ಕೋಟಿ ರೂಪಾಯಿ ದಾಟಿತ್ತು ಎಂದರೆ, ರೈತರಿಗೆ ಎಷ್ಟು ಅನನುಕೂಲವಾಗುತ್ತಿತ್ತು ಎಂಬುದನ್ನು ಜನರೇ ಊಹಿಸಲಿ. ಹೀಗಾಗಿ ಇಡೀ ವ್ಯವಸ್ಥೆ ಈಗ ಪಾರದರ್ಶಕವಾಗಿ ನಡೆಯುತ್ತಿದೆ, ರೈತರು ಸಹ ನಿರಾಳರಾಗಿದ್ದಾರೆ ಎಂದು ಸಚಿವ  ಸೋಮಶೇಖರ್ ತಿಳಿಸಿದರು.

ಎಪಿಎಂಸಿ ಮೇಲೆ ದೂರು ಬಂದರೆ ತಕ್ಷಣ ಪರಿಹಾರ.

ಎಪಿಎಂಸಿಗಳು ಬಹಳ ಅಚ್ಚುಕಟ್ಟಾಗಿ ಕಾರ್ಯನಿರ್ವಹಣೆ ಮಾಡುತ್ತಿವೆ. ಆದರೆ, ಯಾವುದಾದರೂ ಕೃಷಿ ಉತ್ಪನ್ನ ಮಾರಾಟ ಮಂಡಳಿ ಮೇಲೆ ದೂರುಗಳು ಬಂದರೆ ಅದನ್ನು ಪರಾಮಿರ್ಶಿಸಲಾಗುವುದು. ಒಂದು ವೇಳೆ ಮೇಲ್ನೋಟಕ್ಕೆ ಅಕ್ರಮಗಳು, ಸಮಸ್ಯೆಗಳು ಕಂಡುಬಂದರೆ ಅವುಗಳ ತನಿಖೆಯನ್ನು ಸಹ ಮಾಡಿ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದು ಸಚಿವ  ಸೋಮಶೇಖರ್ ತಿಳಿಸಿದರು.

7864.49 ಕೋಟಿ ರೂ.ಗಳ ಸಾಲ ನೀಡಿಕೆ

2021-22ನೇ ಸಾಲಿನಲ್ಲಿ 30 ಲಕ್ಷ ರೈತರಿಗೆ 20810 ಕೋಟಿ ಸಾಲ ನೀಡಿಕೆ ಗುರಿ ಹೊಂದಲಾಗಿದ್ದು, ಈಗಾಗಲೇ ಏಪ್ರಿಲ್ 1 ರಿಂದ ಇಲ್ಲಿಯವರೆಗೆ 10.68 ಲಕ್ಷ ರೈತರಿಗೆ 7864.49 ಕೋಟಿ ರೂ.ಗಳ ಸಾಲ ನೀಡಲಾಗಿರುತ್ತದೆ. ಇಂದು ಒಟ್ಟು 11375 ರೈತರಿಗೆ 85.15 ಕೋಟಿ ರೂಪಾಯಿ ಸಾಲವನ್ನು ನೀಡಲಾಗಿದೆ ಎಂದು ಸಚಿವ ಎಸ್.ಟಿ ಸೋಮಶೇಖರ್ ತಿಳಿಸಿದರು.

ರೈತರಿಗೆ ಯಾವುದೇ ಕಾರಣಕ್ಕೂ ಸಾಲ ದೊರೆಯದೇ ಇರಬಾರದು. ಅವರ ಅಗತ್ಯಕ್ಕೆ ತಕ್ಕಂತೆ ಸಾಲ ಸಿಗಬೇಕು ಎಂಬುದೇ ನಮ್ಮ ಗುರಿಯಾಗಿದೆ. ಈ ನಿಟ್ಟಿನಲ್ಲಿ ನಮ್ಮೆಲ್ಲ ಪ್ರಯತ್ನಗಳು ಸಾಗಿದೆ. ನಾನೂ ಸಹ ಕಾಲ ಕಾಲಕ್ಕೆ ಡಿಸಿಸಿ ಬ್ಯಾಂಕ್ ಗಳ ಪ್ರಗತಿ ಪರಿಶೀಲನೆ ನಡೆಸಿ ರೈತರಿಗೆ ಸಂಪೂರ್ಣ ಲಾಭ ದೊರೆಯುವಂತೆ ನೋಡಿಕೊಳ್ಳಲಾಗುವುದು ಎಂದು ಸಚಿವ ಸೋಮಶೇಖರ್ ತಿಳಿಸಿದರು.

ಕಳೆದ ವರ್ಷ ಶೇ.114 ಸಾಧನೆ; ಎಸ್ ಟಿ ಎಸ್ ಸಂತಸ

ಕಳೆದ ವರ್ಷ 24.50 ಲಕ್ಷ ರೈತರಿಗೆ 15,300 ಕೋಟಿ ರೂಪಾಯಿ ಅಲ್ಪಾವಧಿ, ಮಧ್ಯಮಾವಧಿ ಬೆಳೆಸಾಲವನ್ನು ವಿತರಣೆ ಮಾಡುವ ಗುರಿಯನ್ನು ಹಾಕಿಕೊಳ್ಳಲಾಗಿತ್ತು. ಆದರೆ, ಈ ನಿಟ್ಟಿನಲ್ಲಿ 21 ಡಿಸಿಸಿ ಬ್ಯಾಂಕ್ ಗಳು ಉತ್ತಮ ಸಾಧನೆ ಮಾಡಿದ್ದು, 17,108 ಕೋಟಿ ರೂಪಾಯಿ ಸಾಲವನ್ನು ವಿತರಣೆ ಮಾಡುವ ಮೂಲಕ ಶೇ. 114 ಸಾಧನೆ ಮಾಡಿದೆ ಎಂದು ಸಚಿವ ಎಸ್.ಟಿ ಸೋಮಶೇಖರ್ ತಿಳಿಸಿದರು.

Key words: 3000 crore -development -APMC – Karnataka- Expected – get – Minister- ST Somashekhar.