‘90ರ ದಶಕದ ಜೀವನ ಶೈಲಿ ನೆನಪಿಸುವ  ಚಿತ್ರ ಈ ‘ಸಿನ್ಸ್ 1992’

ಬೆಂಗಳೂರು,ಅ,30,2019(www.justkannada.in)ಕನ್ನಡ ಚಿತ್ರರಂಗದಲ್ಲಿ ಒಂದರ ಹಿಂದೆ ಒಂದರಂತೆ ಭಿನ್ನ ಕಥೆಯ ಹೊಸ ಚಿತ್ರಗಳು ಸೆಟ್ಟೇರುತ್ತಿವೆ. ಸಿನ್ಸ್ 1992 ಎಂಬ ಚಿತ್ರ ಆ ಸಾಲಿಗೆ ಹೊಸ ಸೇರ್ಪಡೆ. ಹೊಸಬರ ನುರಿತ ತಂತ್ರಜ್ಞರ ತಂಡವೇ ಇದರಲ್ಲಿ ಕೆಲಸ ಮಾಡಿದೆ. ಚಿತ್ರತಂಡವು ದೀಪಾವಳಿ ಹಬ್ಬದ ಶುಭಾಶಯ ಕೋರಿ ತನ್ನ ಚಿತ್ರದ ಪೋಸ್ಟರ್ ನ್ನು ಬಿಡುಗಡೆ ಮಾಡಿತ್ತು.  ನಿರ್ದೇಶಕ ಕಿರಣ್ ಕುಮಾರ್ ಪಾಟೀಲ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಇವರು ಈ ಮುನ್ನ ರಿಕಿ ಮತ್ತು ರಕ್ಷಿತ್ ಶೆಟ್ಟಿಯ ಕಿರಿಕ್ ಪಾರ್ಟಿ ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿ ನಿರ್ದೇಶನದ ಗರಡಿಯಲ್ಲಿ ಪಳಗಿದ್ದಾರೆ. ಇವರ ಜೊತೆ ಪ್ರಸಿದ್ಧ ನಿರ್ದೇಶಕ ಮತ್ತು ನಟ ರಿಷಬ್ ಶೆಟ್ಟಿ ಕೈಜೋಡಿಸಿರುವುದು ಚಿತ್ರದ ಧನಾತ್ಮಕ ಅಂಶಗಳಲ್ಲಿ ಒಂದು.

90 ದಶಕ ನೆನಪಿಸುವ ಚಿತ್ರ

ಚಿತ್ರವು 90 ದಶಕದ ಜೀವನವನ್ನು ಪ್ರಮುಖ ಕಥಾವಸ್ತುವನ್ನಾಗಿಸಿಕೊಂಡಿದೆ. ಆಗಿನ ಶಾಲಾ-ಕಾಲೇಜು ಜೀವನ, ಜನರ ದೈನಂದಿನ ಬದುಕು, ಆಗಿನ ಮಾರುಕಟ್ಟೆ ಬೆಲೆಗಳು, ಪ್ರಸಿದ್ಧ ಧಾರಾವಾಹಿಗಳ ವ್ಯಾಮೋಹ, ಜನರು ಅವುಗಳನ್ನು ತಮ್ಮ ದೈನಂದಿನ ಬದುಕಿನಲ್ಲಿ ಅಳವಡಿಸಿಕೊಂಡಿದ್ದ ರೀತಿ, ಆಗಿನ ಪ್ರೇಮ, ಕಲಹಗಳು ಮೊದಲಾದ ಅಂದಿನ ದಶಕದ ಜನರು ತಮ್ಮ ಬಾಲ್ಯಕ್ಕೆ ಮರಳಬಹುದಾದ ಕಥೆಯನ್ನು ಚಿತ್ರವು ಒಳಗೊಂಡಿದೆ ಎಂದು ಚಿತ್ರತಂಡವು ಹೇಳಿಕೊಂಡಿದೆ.

ಚಿತ್ರಕ್ಕೆ ಸಮೃದ್ಧ್ ಎಸ್ ಮತ್ತು ಶರತ್ ಗೌಡ ಆರ್ ಬಂಡವಾಳ ಹೂಡಿದ್ದಾರೆ. ಚಿತ್ರಕ್ಕೆ ಲವಿತ್ ಅವರ ಛಾಯಾಗ್ರಹಣವಿದೆ. ಇವರು ರಾಮ ರಾಮ ರೇ, ಒಂದಲ್ಲ ಎರಡಲ್ಲ ಚಿತ್ರಗಳಲ್ಲಿ ತಮ್ಮ ಕ್ಯಾಮರಾ ಕುಸರಿ ಕೆಲಸ ಮಾಡಿದ್ದಾರೆ.

ಫಿಲ್ಮಿ ಸ್ಕೂಪ್ ನ ಸುಚನ್ ಶೆಟ್ಟಿ ನಿರ್ಮಾಣ ವಿನ್ಯಾಸಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರಚಾರ ವಿನ್ಯಾಸಗಾರರಾಗಿ ಅಶ್ವಿನ್ ಕುಮಾರ್ ಇದ್ದಾರೆ. ಚಿತ್ರಕ್ಕೆ ಸುಕೃತ ವೆಂಕಟ, ಬಾಲಸುಬ್ರಹ್ಮಣ್ಯ, ದೇವರಕೊಂಡ ಚಿತ್ರಕಥೆ ಮತ್ತು ಸಂಭಾಷಣೆಯ ಹೊಣೆ ಹೊತ್ತಿದ್ದಾರೆ.

ನಿರ್ದೇಶನ ತಂಡದಲ್ಲಿ ಕಿರಣ್ ಕುಮಾರ್ ಪಾಟೀಲ್ ರನ್ನು ಹೊರತುಪಡಿಸಿ ವೆಂಕಟ್ ಗೌಡ, ಶಿವಪಾಚ್ಚಿ, ರಾಚಿ ಸುನಿಲ್ ಮತ್ತು ಇತರರು ಇದ್ದಾರೆ.

ಹೀಗೆ ಹೊಸ ತಂಡದ ಮೂಲಕ ಭರವಸೆ ಮೂಡಿಸಿರುವ ಸಿನ್ಸ್ 1992 ಚಿತ್ರದ ಚಿತ್ರೀಕರಣವು ಡಿಸೆಂಬರ್ ಎರಡನೇ ವಾರದಲ್ಲಿ ನಡೆಯಲಿದೆ.

Key words: 2nd week – December  – shooting- reminiscent -“Sins 1992 –movie