ಕುಲಪತಿ ಹುದ್ದೆಗೆ ಪ್ರೊ.ಅಶೋಕ್ ಕುಮಾರ್ ರಿಂದ 2 ಕೋಟಿ- ಡಿ.ಕೆ ಶಿವಕುಮಾರ್ ಗಂಭೀರ ಆರೋಪ…

ಬೆಂಗಳೂರು,ನವೆಂಬರ್,9,2020(www.justkannada.in): ಕುಲಪತಿ ನೇಮಕ ವಿಚಾರದಲ್ಲಿ ಸಚಿವರು, ಅಧಿಕಾರಿಗಳು ಪ್ರೊ ಅಶೋಕ್ ಕುಮಾರ್ ಅವರಿಂದ ಎರಡು ಕೋಟಿ ಪಡೆದಿದ್ದಾರೆ ಎಂಬ ಮಾತುಗಳಿವೆ. ಪ್ರೊ.ಅಶೋಕ್ ಕುಮಾರ್ ಆತ್ಮಹತ್ಯೆ ಪ್ರಕರಣ ನ್ಯಾಯಾಂಗ ತನಿಖೆಯಾಗಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಗಂಭೀರ ಆರೋಪ ಮಾಡಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ಮಾಧ್ಯಮಗೋಷ್ಠಿ ನಡೆಸಿ ಈ ವಿಚಾರವಾಗಿ ಮಾತನಾಡಿದ ಡಿ.ಕೆ ಶಿವಕುಮಾರ್ ಹೇಳಿದ್ದಿಷ್ಟು….

ರಾಜ್ಯದಲ್ಲಿ ಉಪಕುಲಪತಿ ಹುದ್ದೆಯನ್ನು ಮಾರಾಟಕ್ಕೆ ಇಡಲಾಗಿದೆ. ಇಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದು, ಈ ಭ್ರಷ್ಟಾಚಾರವೇ ಪ್ರೊ.ಅಶೋಕ್ ಕುಮಾರ್ ಅವರ ಆತ್ಮಹತ್ಯೆಗೆ ಕಾರಣ ಎಂದು ವ್ಯಾಪಕ ಚರ್ಚೆಯಾಗುತ್ತಿದೆ. ಹೀಗಾಗಿ ಈ ವಿಚಾರದಲ್ಲಿ ನ್ಯಾಯಾಂಗ ತನಿಖೆ ನಡೆಯಬೇಕು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.kannada-journalist-media-fourth-estate-under-loss

ರಾಜ್ಯಕ್ಕೆ ಬೇಕಾದ, ಸಾವಿರಾರು ಪತ್ರಕರ್ತರನ್ನು ತಯಾರು ಮಾಡಿದ ಪ್ರೊ. ಅಶೋಕ್ ಕುಮಾರ್ ಅವರ ಆತ್ಮಹತ್ಯೆ ವಿಚಾರ ಆಘಾತ ನೀಡಿದೆ. ಈ ಆತ್ಮಹತ್ಯೆಗೆ ಕಾರಣ ಏನು ಎಂಬುದರ ಬಗ್ಗೆ ಎಲ್ಲೆಡೆ ಚರ್ಚೆಯಾಗುತ್ತಿದೆ. ನಮಗೆ ತಿಳಿದಿರುವ ಪ್ರಕಾರ ನಾಲ್ಕು ಮಂದಿಯ ಹೆಸರು ಉಪಕುಲಪತಿ ಹುದ್ದೆಗೆ ಕೇಳಿಬಂದಿದ್ದು, ನೇಮಕ ವಿಚಾರದಲ್ಲಿ ಸಾಕಷ್ಟು ಪೈಪೋಟಿ, ವ್ಯಾಪಾರ ನಡೆದಿದೆ.

ಪಾಪ ಆ ಪ್ರೊಫೆಸರ್ ಬಡ್ಡಿಗೆ ಹಣ ತಂದು ಕೊಟ್ಟರೂ ಅವರನ್ನು ನೇಮಕ ಮಾಡಲಿಲ್ಲ. ತಮಗೆ ಹುದ್ದೆಯೂ ಸಿಗಲಿಲ್ಲ, ಕೊಟ್ಟ ಹಣವೂ ವಾಪಸ್ ಬರದ ಕಾರಣ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.

ಇದು ಬಹಳ ನೋವಿನ ಸಂಗತಿ. ಇದರಲ್ಲಿ ದೊಡ್ಡ ವ್ಯಕ್ತಿಗಳ ಕೈವಾಡವಿದೆ. ಈ ಹಣವನ್ನು ಯಾವ ಅಧಿಕಾರಿ, ಮಂತ್ರಿ, ಮಧ್ಯವರ್ತಿ ತೆಗೆದುಕೊಂಡರೋ, ಈ ಎಲ್ಲದರ ಬಗ್ಗೆ ದೊಡ್ಡ ಮಟ್ಟದ ತನಿಖೆ ಅಗತ್ಯ ಕಾಣಿಸುತ್ತಿದೆ.

ಆತ್ಮಹತ್ಯೆ ಪತ್ರದಲ್ಲಿ ಸಾವಿಗೆ ತಾವೇ ಕಾರಣ ಎಂದು ಬರೆದಿದ್ದರೂ, ಸರ್ಕಾರದಲ್ಲಿ ಇರುವವರು ಇದರಲ್ಲಿ ಭಾಗಿಯಾಗಿದ್ದಾರೆ ಎಂಬ ಮಾಹಿತಿ ಇದೆ. ಈ ಪ್ರಕರಣದಲ್ಲಿ ಭ್ರಷ್ಟಾಚಾರ ದೊಡ್ಡ ಮಟ್ಟದಲ್ಲಿ ನಡೆದಿರುವುದು ಎದ್ದು ಕಾಣುತ್ತಿದೆ ಎಂದು ಸಾರ್ವಜನಿಕ ವಲಯದಲ್ಲಿ ಹಾಗೂ ವಿಧಾನಸೌಧದಲ್ಲಿ ಈ ಕುರಿತ ಚರ್ಚೆಗಳು ಕೇಳಿಬರುತ್ತಿದೆ.

ವಿಶ್ವವಿದ್ಯಾಲಯಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಯಿಂದ ವಿದ್ಯಾರ್ಥಿವರೆಗೂ ಉಪಕುಲಪತಿ ಹುದ್ದೆ ವ್ಯಾಪಾರಕ್ಕೆ ಇದೆ ಎಂದು ಚರ್ಚೆಯಾಗುತ್ತಿದೆ. ಹೀಗಾಗಿ ಈ ಪ್ರಕರಣದಲ್ಲಿ ಗೌರವಾನ್ವಿತ ಮುಖ್ಯಮಂತ್ರಿಗಳ ಹೆಸರಿಗೆ ಮಸಿ ಬಳೆಯುವ ಕೆಲಸವಾಗುತ್ತಿದೆ. ಹೀಗಾಗಿ ಈ ಪ್ರಕರಣವನ್ನು ಹಾಲಿ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಮುಖ್ಯಮಂತ್ರಿಗಳಿಗೆ ಹಾಗೂ ಸರ್ಕಾರಕ್ಕೆ ಒತ್ತಾಯ ಮಾಡುತ್ತೇನೆ.

ಅಶೋಕ್ ಕುಮಾರ್ ಅವರು ಎಂತಹ ಗಟ್ಟಿಯಾದ ವ್ಯಕ್ತಿ ಅಂತಾ ಅವರ ಪಾಠ ಕೇಳಿದ ಮಾಧ್ಯಮದವರಿಗೆ ಗೊತ್ತಿದೆ. ನಮಗೆ ಬಂದಿರುವ ಖಚಿತ ಮಾಹಿತಿ ಆಧಾರದ ಮೇಲೆ ನಾವು ಈ ವಿಚಾರ ಪ್ರಸ್ತಾಪಿಸುತ್ತಿದ್ದೇನೆ. ಈ ವಿಚಾರದಲ್ಲಿ ತನಿಖೆ ಆದರೆ ಸತ್ಯಾಂಶ ಹೊರಬೀಳಲಿದೆ. ಈ ವಿಚಾರದಲ್ಲಿ ಮಾಧ್ಯಮಗಳು ಕಾರ್ಯಪ್ರವೃತ್ತವಾಗಬೇಕು ಎಂದು ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.

Key words: 2 crore – Prof. Ashok Kumar – post –Chancellor-kpcc president-D. K Sivakumar -accused.