ಪುಲ್ವಾಮಾ ದಾಳಿಗೆ ಒಂದು ವರ್ಷ: ಹುತಾತ್ಮ ಯೋಧ ಗುರು ಸಮಾಧಿಗೆ ಕುಟುಂಬಸ್ಥರಿಂದ ಪೂಜೆ ಸಲ್ಲಿಕೆ…

ಮಂಡ್ಯ,ಫೆ,14,2020(www.justkannada.in):  ಪುಲ್ವಾಮಾ ದಾಳಿಯಲ್ಲಿ 40 ಮಂದಿ ಸಿಆರ್ ಪಿಎಫ್ ಯೋಧರು ಹುತಾತ್ಮರಾಗಿ ಇಂದಿಗೆ ಒಂದು ವರ್ಷ. ದೇಶದೆಲ್ಲೆಡೆ ಹುತಾತ್ಮ ಯೋಧರನ್ನ ನೆನೆಯಲಾಗುತ್ತಿದ್ದು, ದಾಳಿಯಲ್ಲಿ ಹುತಾತ್ಮರಾಗಿದ್ದ ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಕೆ.ಎಂ ದೊಡ್ಡಿ ಮೂಲದ ಗುರು ಅವರ ಸಮಾಧಿಗೆ ಅವರ ಕುಟುಂಬಸ್ಥರು ಇಂದು ಪೂಜೆ ಸಲ್ಲಿಸಿದರು.

2019ರ ಫೆ.14ರಂದು ಪುಲ್ವಾಮಾ ಜಿಲ್ಲಾಯ ಜಮ್ಮು-ಕಾಶ್ಮೀರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಆರ್‍ ಪಿಎಫ್ ಸಿಬ್ಬಂದಿಯನ್ನು ಸಾಗಿಸುತ್ತಿದ್ದ ವಾಹನವನ್ನು ಗುರಿಯಾಗಿರಿಸಿ ಆತ್ಮಾಹುತಿ ಬಾಂಬರ್ ಇದ್ದ ಕಾರನ್ನು ಡಿಕ್ಕಿ ಹೊಡೆಸಿ ಸ್ಫೋಟ ನಡೆಸಲಾಗಿತ್ತು. ಈ ವೇಳೆ 40 ಮಂದಿ ಸಿಆರ್ ಪಿಎಫ್ ಯೋಧರು ಹುತಾತ್ಮರಾಗಿದ್ದರು. ಈ ವೇಳೆ ಮಂಡ್ಯ ಜಿಲ್ಲೆ ಕೆ.ಎಂ ದೊಡ್ಡಿ ಮೂಲದ ಗುರು ಸಹ ಮೃತಪಟ್ಟಿದ್ದರು.

ಹುತಾತ್ಮ ಯೋಧ ಗುರು ಅವರ ಸಮಾಧಿಗೆ ಒಂದು ವರ್ಷದ ಪೂಜಾ ಕಾರ್ಯವನ್ನ ಗುರು ಅವರ ತಾಯಿ ಚಿಕ್ಕತಾಯಮ್ಮ ನೆರವೇರಿಸಿದ್ದಾರೆ. ಈ ವೇಳೆ ಮಾಧ್ಯಮದ ಜತೆ ಮಾತನಾಡಿದ ಚಿಕ್ಕತಾಯಮ್ಮ, ಇಂದು ಮಗನ ಒಂದು ವರ್ಷದ ಕಾರ್ಯ ಮಾಡಲಾಗುತ್ತಿದೆ. ನಾನು ನನ್ನಿಬ್ಬರ ಮಕ್ಕಳಲ್ಲಿ ಗುರುವನ್ನ ಕಾಣುತ್ತಿದ್ದೇನೆ ಎಂದರು.

ಹಾಗೂ ಗುರು ಅವರ ಪತ್ನಿ ಕಲಾವತಿ ಅವರ ಬಗ್ಗೆ ಪ್ರತಿಕ್ರಿಯಿಸಿದ ಚಿಕ್ಕತಾಯಮ್ಮ, ಕಲಾವತಿ ನಮ್ಮ ಸಂಪರ್ಕದಲ್ಲಿಲ್ಲ.  ಅವರು ಬೆಂಗಳೂರಿನಲ್ಲಿದ್ದಾರೆ. ಗುರು ಹೆಸರಿನಲ್ಲಿ ಅವರು ಪರಿಹಾರ ತೆಗೆದುಕೊಂಡು ಹೋಗಿದ್ದಾರೆ. ಇಂದು ಸಹ ಗಂಡನ ಸಮಾಧಿಗೆ ಪೂಜೆ ಸಲ್ಲಿಸಲು ಕಲಾವತಿ ಬಂದಿಲ್ಲ ಎಂದು ಹೇಳಿದರು.

Key words: 1year – Pulwama- attack-Family -worship –soldier-guru