ಮೈಸೂರು ಮೃಗಾಯಲಕ್ಕೆ 1.19 ಕೋಟಿ ರೂ. ದೇಣಿಗೆ ನೀಡಿದ ಸಚಿವ ಎಸ್.ಟಿ.ಸೋಮಶೇಖರ್

* 2ನೇ ಬಾರಿಗೆ 45.30 ಲಕ್ಷ ದೇಣಿಗೆ ವಿತರಣೆ
* ಪ್ರಥಮ ಬಾರಿಗೆ 73.60 ಲಕ್ಷ ರೂ. ನೀಡಲಾಗಿತ್ತು
* ಮಾತು ಕೊಟ್ಟಂತೆ 1 ಕೋಟಿ ರೂಪಾಯಿಗೂ ಹೆಚ್ಚು ಹಣ ಸಂಗ್ರಹಿಸಿ ಕೊಡುಗೆ

ಮೈಸೂರು, ಮೇ 02, 2020 (www.justkannada.in): ಮೈಸೂರು ಮೃಗಾಲಯದ ನಿರ್ವಹಣೆಗೆ ಸಾರ್ವಜನಿಕರ ಸಹಕಾರ ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ನಾನು ಎಲ್ಲ ಸಚಿವರು, ವಿಧಾನಪರಿಷತ್ ಸದಸ್ಯರು ಹಾಗೂ ಶಾಸಕರು ಸೇರಿದಂತೆ ಸಮಾಜದ ಗಣ್ಯರು ಮತ್ತು ನಾಗರಿಕರಿಗೆ ಮನವಿ ಮಾಡಿ ಆರ್ಥಿಕ ಸಹಾಯ ಮಾಡುವಂತೆ ಈಗಾಗಲೇ ಕೋರಿದ್ದೇನೆ. ಅಲ್ಲದೆ, ನಾನು ಕ್ಷೇತ್ರದಿಂದ ಈಗ 2ನೇ ಬಾರಿ 45.30 ಲಕ್ಷ ರೂಪಾಯಿಯನ್ನು ಸಂಗ್ರಹಿಸಿ ಮೃಗಾಲಯಕ್ಕೆ ನೀಡುತ್ತಿದ್ದೇನೆ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ತಿಳಿಸಿದರು.

ಮೈಸೂರು ಜಯಚಾಮರಾಜೇಂದ್ರ ಮೃಗಾಲಯಕ್ಕೆ ಭೇಟಿ ನೀಡಿದ ಸಚಿವರು, ತಮ್ಮ ಕ್ಷೇತ್ರದಿಂದ ಸಂಗ್ರಹಿಸಿದ 45.30 ಲಕ್ಷ ರೂಪಾಯಿ ಚೆಕ್ ಅನ್ನು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಕುಲಕರ್ಣಿ ಅವರಿಗೆ ಸಚಿವರು ಹಸ್ತಾಂತರಿಸಿದರು. ಈ ಮೂಲಕ 2ನೇ ಬಾರಿ ಸಚಿವರು ಚೆಕ್ ಹಸ್ತಾಂತರ ಮಾಡಿದ್ದು, ಒಟ್ಟು 1 ಕೋಟಿ 18 ಲಕ್ಷ 90 ಸಾವಿರ ರೂಪಾಯಿಯನ್ನು ಮೃಗಾಲಯಕ್ಕೆ ಹಸ್ತಾಂತರ ಮಾಡಿದಂತಾಗಿದೆ.

ಮಾನ್ಯ ಆಹಾರ ಸಚಿವರಾದ ಗೋಪಾಲಯ್ಯ ಅವರಿಗೆ ಮೈಸೂರು ಮೃಗಾಲಯದ ಸ್ಥಿತಿಗತಿ ಬಗ್ಗೆ ವಿವರಣೆ ನೀಡಿ ಸಹಾಯ ಮಾಡುವಂತೆ ಕೋರಿದೆ. ಅವರು ತಕ್ಷಣ ಸ್ಪಂದಿಸಿ 8 ಲಕ್ಷ ರೂಪಾಯಿ ದೇಣಿಗೆ ಹಾಗೂ ಮೃಗಾಲಯದ 300 ಮಂದಿ ಸಿಬ್ಬಂದಿಗೆ ತಲಾ 25 ಕೆ.ಜಿ. ಅಕ್ಕಿಯನ್ನು ವೈಯುಕ್ತಿಕವಾಗಿ ನೀಡಿದ್ದಾರೆ. ಹೀಗಾಗಿ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವನಾಗಿ ಹಾಗೂ ಸರ್ಕಾರದ ವತಿಯಿಂದ ಹೃತ್ಪೂರ್ವಕ ಅಭಿನಂದನೆ ಸಲ್ಲಿಸುತ್ತೇನೆ ಎಂದು ಸಚಿವ ಸೋಮಶೇಖರ್ ತಿಳಿಸಿದರು.