ಸ್ಪೀಕರ್ ಅವರಿಗೆ ಗೊತ್ತಿಲ್ಲದೆ ಮಾಧ್ಯಮಗಳಿಗೆ ನಿರ್ಬಂಧ ಹೇರಿದ್ದು ಯಾರು? ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಾಗ್ದಾಳಿ.

ಬೆಳಗಾವಿ,ಡಿಸೆಂಬರ್,22,2021(www.justkannada.in):  ಸುವರ್ಣಸೌಧಕ್ಕೆ ಮಾಧ್ಯಮಗಳಿಗೆ ನಿರ್ಬಂಧ ಹೇರಿಲಾಗಿತ್ತು. ಇದನ್ನ ಪ್ರಶ್ನಿಸಿ ಮಾಧ್ಯಮ ಪ್ರತಿನಿಧಿಗಳು ಪ್ರತಿಭಟಿಸಿದ ಹಿನ್ನೆಲೆ ನಿರ್ಬಂಧವನ್ನ ವಾಪಸ್ ಪಡೆಯಲಾಗಿದ್ದು ಈ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಸುವರ್ಣಸೌಧಕ್ಕೆ ಮಾಧ್ಯಮಗಳನ್ನು ನಿರ್ಬಂಧ ಮಾಡಿರುವ ಕ್ರಮ ಅನೇಕ ಅನುಮಾನಗಳನ್ನು ಹುಟ್ಟುಹಾಕಿದೆ. ಈಗಾಗಲೇ ಜನರ ಆಕ್ರೋಶಕ್ಕೆ ತುತ್ತಾಗಿರುವ ಬಿಜೆಪಿ ಸರಕಾರ ನಾಡಿನ ಸಮಸ್ಯೆಗಳನ್ನು ʼವಿಷಯಾಂತರʼ ಮಾಡಲು ʼಮತಾಂತರʼ ಗುಮ್ಮವನ್ನು ತಂದು ನಿಲ್ಲಿಸಿದೆ ಎಂದು ಟೀಕಿಸಿದ್ದಾರೆ.

ನಾಡಿನ ಜನರು ಮತ್ತು ಪ್ರತಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ರಾಜಕೀಯದ ಲಾಭದ ದುರಾಸೆಗೆ ರಾಜ್ಯದ ಸಾಮರಸ್ಯಕ್ಕೆ ಬೆಂಕಿ ಇಡುವ ಮತಾಂತರ ನಿಷೇಧ ಮಸೂದೆಯ ನಿಜಬಣ್ಣ ಎಲ್ಲಿ ಬಯಲಾಗುತ್ತದೋ ಎಂದು ಅಂಜಿ ಮಾಧ್ಯಮಗಳಿಗೆ ನಿರ್ಬಂಧ ಹೇರಲಾಗಿದೆ ಎಂಬ ಸಂಶಯ ಇದೆ.

ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದಂತೆ ಮಾಧ್ಯಮ ರಂಗವು ಸಂವಿಧಾನದ ಒಂದು ಅಂಗ. ಈಗ ಮಾಧ್ಯಮ ಪ್ರವೇಶಕ್ಕೆ ನಿರ್ಬಂಧ ಹೇರುವ ಮೂಲಕ ʼಸಂವಿಧಾನದ ಒಂದು ಕಾಲು ಮುರಿಯುವ ಪ್ರಯತ್ನʼ ಮಾಡಲಾಗುತ್ತಿದೆ.ಇದು ಸಂವಿಧಾನವನ್ನೇ ಬದಲಾವಣೆ ಮಾಡುತ್ತೇವೆ ಎನ್ನುವವರ ದರ್ಪದ ಹೆಜ್ಜೆಯಷ್ಟೇ. ಅವರ ದುರುದ್ದೇಶ ಸ್ಪಷ್ಟ ಎಂದು ಸರ್ಕಾರಕ್ಕೆ  ಹೆಚ್.ಡಿಕೆ ಕ್ಲಾಸ್ ತೆಗೆದುಕೊಂಡಿದ್ದಾರೆ.

ಈ ಮಧ್ಯೆ ಮಾನ್ಯ ಸ್ಪೀಕರ್ ಅವರು ಮಾಧ್ಯಮ ನಿರ್ಬಂಧದ ಬಗ್ಗೆ ಗೊತ್ತಿಲ್ಲ ಎಂದಿದ್ದಾರೆ. ಹಾಗಾದರೆ, ನಿರ್ಬಂಧ ಹೇರಿದವರು ಯಾರು? ಸ್ಪೀಕರ್ ಅವರಿಗೆ ಗೊತ್ತಿಲ್ಲದೆ  ನಿರ್ಬಂಧದ ಸಂದೇಶ ಮಾಧ್ಯಮಗಳಿಗೆ ಕೊಟ್ಟವರು ಯಾರು? ಈ ಬಗ್ಗೆ ಜನರಿಗೆ ಸತ್ಯಾಂಶ ಗೊತ್ತಾಗಬೇಕಿದೆ ಎಂದು ಹೆಚ್.ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.

Key words: media –restriction-suvarnasoudha-Former CM-HD Kumaraswamy