ಸಿದ್ದರಾಮನಹುಂಡಿಯಲ್ಲಿ ಕಾಂಗ್ರೆಸ್ ಸದಸ್ಯತ್ವ ಅಭಿಯಾನ: ಕಹಳೆ ಊದಿದ ಅಪ್ಪ, ಮಗ..!

ಮೈಸೂರು,ಡಿಸೆಂಬರ್,11,2021(www.justkannada.in): ರಾಷ್ಟ್ರೀಯ ಮಟ್ಟದಲ್ಲಿ ಕಾಂಗ್ರೆಸ್ ಸದಸ್ಯತ್ವ ನೋಂದಣಿ ಅಭಿಯಾನ ಆರಂಭವಾಗಿದ್ದು ಈ ಮಧ್ಯೆ ಇಂದು ಮಾಜಿ ಸಿಎಂ ಸಿದ್ಧರಾಮಯ್ಯ ಮತ್ತು ಅವರ ಪುತ್ರ ಯತೀಂದ್ರ ಸಿದ್ಧರಾಮಯ್ಯ, ತಮ್ಮ ತವರೂರು ಸಿದ್ದರಾಮನಹುಂಡಿಯಲ್ಲಿ ಕಾಂಗ್ರೆಸ್ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದರು.

ವರುಣಾ ಕ್ಷೇತ್ರ ವ್ಯಾಪ್ತಿಯ ಸಿದ್ದರಾಮನಹುಂಡಿಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ, ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಕಹಳೆ ಊದುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ, 1947 ರವರೆಗೆ ಕಾಂಗ್ರೆಸ್‌ ನಿಂದ ಹಲವಾರು ಹೋರಾಟಗಳು ನಡೆದವು. ಹಲವಾರು ಜನ ಪ್ರಾಣ ತ್ಯಾಗ ಮಾಡಿದರು. ಬಳಿಕ ಸ್ವಾತಂತ್ರ್ಯ ಸಿಕ್ಕಿ ದೇಶ ವಿಭಜನೆ ಆಯ್ತು. ಮಹಾತ್ಮ ಗಾಂಧೀಜಿ ನೇತೃತ್ವದಲ್ಲಿ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದ್ದು ಕಾಂಗ್ರೆಸ್. ಇಲ್ಲಿ ಬಿಜೆಪಿಯವರ ಕೊಡುಗೆ ಏನೇನು ಇಲ್ಲ‌. 1920 ರಲ್ಲಿ ಆರ್‌ಎಸ್‌ಎಸ್‌ ಸ್ಥಾಪನೆಯಾಯಿತು. ಆರ್‌ಎಸ್‌ಎಸ್‌ ಮೇಲ್ವರ್ಗದವರ ಜಾತಿ ಸಂಘಟನೆಯಾಗಿದ್ದು, ಸಾವರ್ಕರ್‌ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿಲ್ಲ ಎಂದು ಟೀಕಿಸಿದರು.

ದೇಶಕ್ಕಾಗಿ ಆಸ್ತಿಪಾಸ್ತಿ ಕಳೆದುಕೊಂಡಿದ್ದು ಕಾಂಗ್ರೆಸ್‌ ನವರು. ಇಂತಹ ಕಾಂಗ್ರೆಸ್ ಸದಸ್ಯತ್ವ ಪಡೆಯೋದು ಹೆಮ್ಮೆಯ ವಿಚಾರ. ಬಿಜೆಪಿ ಇತ್ತೀಚೆಗೆ ಬಂದ ಪಕ್ಷ‌, ಜನತಾ ಪಾರ್ಟಿ ಒಡೆದ ಮೇಲೆ ಜನಸಂಘ ಬಂತು‌. ಆ ಬಳಿಕ ಬಿಜೆಪಿ ಉದಯವಾಯಿತು. ಮೋದಿ  ವಾಜಪೇಯಿ ಅಡ್ವಾಣಿ ಯಾರು ಸ್ವಾತಂತ್ರಕ್ಕಾಗಿ ಹೋರಾಡಲಿಲ್ಲ‌. ಇವರು ಸ್ವಾತಂತ್ರ್ಯದ ಬಳಿಕ ಬಂದ ಫಲಾನುಭವಿಗಳು. ನಾನು ಸ್ವಾತಂತ್ರ್ಯ ಬರುವ ಮುಂಚೆ ಹುಟ್ಟಿದವನು. 03-08-1947 ನಾನು ಹುಟ್ಟಿದ್ದು. ಸ್ವಾತಂತ್ರ್ಯ ಬರುವ 12 ದಿನ ಮುನ್ನ ನಾನು ಜನಿಸಿದ್ದೇನೆ. ಇದನ್ನ ನಾನು ಬರೆದುಕೊಂಡಿದ್ದಲ್ಲ. ಶಾಲಾ ದಾಖಲಾತಿಯಲ್ಲಿ ದಾಖಲಾಗಿದೆ ಎಂದು ಸಿದ್ಧರಾಮಯ್ಯ ತಿಳಿಸಿದರು.

ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಮಾಲೀಕರು. ಕೆಲವರು ಎಂಎಲ್‌ಎ , ಎಂಪಿ ಆದ ಕೂಡಲೇ ನಾವೇ ರಾಜರು ಅಂದುಕೊಳ್ತಾರೆ. ಆದರೆ ನಾವು ಜನ ಸೇವಕರು ಎಂಬುದನ್ನ ಮರೆಯಬಾರದು. ಡಾ.ತಿಮ್ಮಯ್ಯನವರನ್ನ ನಾವು ಸ್ಥಳೀಯ ಜನಪ್ರತಿನಿಧಿಗಳ ಪ್ರತಿನಿಧಿ ಮಾಡಲು ಕಣಕ್ಕಿಳಿಸಿದ್ದೇವೆ. ನೂರಕ್ಕೆ ನೂರು ಡಾ.ತಿಮ್ಮಯ್ಯ ಗೆಲ್ತಾರೆ  ಎಂದು ಸಿದ್ಧರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.

ಮೋದಿ ಪ್ರಧಾನಿಯಾಗಿರೋದು ಅಂಬೇಡ್ಕರ್ ಕೊಟ್ಟ‌ ಸಂವಿಧಾನದಿಂದ. ನೀವ್ಯಾರು ಬಿಜೆಪಿಗೆ ಹೋಗಬಾರದು. ಬಿಜೆಪಿ ತಳ ಸಮುದಾಯದವರ ಪರವಾಗಿಲ್ಲ‌. ನಾನು ಯಾವಾಗಲು ಆರ್ ಎಸ್ ಎಸ್‌ಗೆ ವಿರೋಧಿಗಳು. ಏಕೇಂದರೇ ಆರ್‌ಎಸ್‌ ನವರು ಜಾತಿವಾದಿಗಳು. ಅವರು ಧರ್ಮದ ಮೇಲೆ ರಾಜಕೀಯ ಮಾಡೋರು. ನಾವು ಜಾತ್ಯಾತೀತ, ಧರ್ಮಾತೀತವಾಗಿ ರಾಜಕಾರಣ ಮಾಡೋರು. ಆರ್‌ ಎಸ್‌ಎಸ್‌ ತಳ ಸಮುದಾಯಗಳ ಪರ‌ ಇಲ್ಲ. ಆರ್‌ಎಸ್‌ಎಸ್‌‌ ನವರು ಎಂದಿಗೂ ಅಸ್ಪೃಶ್ಯತೆ ವಿರುದ್ದ ಹೋರಾಟ ಮಾಡಿಲ್ಲ ಎಂದು ಸಿದ್ಧರಾಮಯ್ಯ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಮಾತ್ರ ಬಡವರ ಪರ ಇರೋದು. ಬಿಜೆಪಿ ಬಡವರ ಪರವಾಗಿ‌ ನಿಂತಿಲ್ಲ. ನಾನು ಕೆರೆಯ ನೀರನ್ನ ಕೆರೆಗೆ ಚೆಲ್ಲು ಎಂಬಂತೆ ಜನ ಕಾರ್ಯಕ್ರಮ ಕೊಟ್ಟೆ. ಉಚಿತ ಅಕ್ಕಿ, ಹಾಲು, ಅನ್ನ, ಶೂ ಭಾಗ್ಯ ಸೇರಿದಂತೆ ಹಲವಾರು ಕಾರ್ಯಕ್ರಮ ಕೊಟ್ಟೆ. ಈಗ ಬಿಜೆಪಿಯವರು ಎಲ್ಲಾ ಸ್ಟಾಪ್ ಮಾಡಿದ್ದಾರೆ. ಅಧಿಕಾರದಿಂದ ತೊಲಗಿ ಅಂದ್ರೆ ಗೂಟ ಒಡ್ಕೊಂಡು ಕೂತೇವ್ರೆ. ಅಸೆಂಬ್ಲಿಯಲ್ಲಿ ಇವೆಲ್ಲವನ್ನ ಚರ್ಚೆ ಮಾಡುತ್ತೇನೆ ಎಂದು ಸಿದ್ಧರಾಮಯ್ಯ ಹೇಳಿದರು.

Key words: Congress -Membership –Registration- Campaign-former CM-siddaramaiah