ಸಾರ್ವಜನಿಕರಿಂದ ನಿರ್ಲಕ್ಷ್ಯ ಆರೋಪದ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗಳ ಸಂಘದಿಂದ ಪುನೀತ್ ರಾಜ್‌ಕುಮಾರ್ ಅವರ ವೈದ್ಯರಿಗೆ ಭದ್ರತೆ ನೀಡಲು ಮನವಿ

ಬೆಂಗಳೂರು, ನವೆಂಬರ್ ೯, ೨೦೨೧ (www.justkannada.in): ಪುನೀತ್ ರಾಜ್‌ಕುಮಾರ್ ಅವರ ಕುಟುಂಬದ ವೈದ್ಯರ ವಿರುದ್ಧ ಸಾರ್ವಜನಿಕಿರಿಂದ ನಿರ್ಲಕ್ಷö್ಯದ ಆರೋಪಗಳು ಬರುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕದ ಖಾಸಗಿ ಆಸ್ಪತ್ರೆಗಳು ಹಾಗೂ ನರ್ಸಿಂಗ್ ಹೋಂಗಳ ಸಂಘ ಶನಿವಾರದಂದು ಕನ್ನಡ ಚಲನಚಿತ್ರರಂಗದ ಸೂಪರ್‌ಸ್ಟಾರ್ ದಿವಂಗತ ಪುನೀತ್ ರಾಜ್‌ಕುಮಾರ್ ಅವರ ಕುಟುಂಬದ ವೈದ್ಯರಾದ ಡಾ. ರಮಣ ರಾವ್ ಅವರಿಗೆ ಭದ್ರತೆ ಒದಗಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದೆ.

ಪುನೀತ್ ಅವರು ಅಕ್ಟೋಬರ್ ೨೯ರಂದು ಹೃದಯಾಘಾತದಿಂದಾಗಿ ಮೃತಪಟ್ಟರು. ಒಂದು ದಿನದ ಹಿಂದೆ ಅವರು ತಮ್ಮ ಕುಟುಂಬದ ವೈದ್ಯರಾದ ರಮಣ ರಾವ್ ಅವರ ಚಿಕಿತ್ಸಾಲಯಕ್ಕೆ ತೆರಳಿ ಅವರನ್ನು ತಮ್ಮ ಆರೋಗ್ಯದ ಕುರಿತು ಸಂಪರ್ಕಿಸಿದ್ದರು.

ಪುನೀತ್ ರಾಜ್‌ಕುಮಾರ್ ಅವರ ನಿಧನದ ನಂತರದಲ್ಲಿ ಮಾಧ್ಯಮಗಳು ಹಾಗೂ ಸಾರ್ವಜನಿಕ ವಲಯದದಲ್ಲಿ ಆರೋಘ್ಯ ಸೇವಾ ಕ್ಷೇತ್ರದ ವಿರುದ್ಧ ವ್ಯಕ್ತವಾಗುತ್ತಿರುವ ತಪ್ಪು ತಿಳುವಳಿಕೆಯ ವಿರುದ್ಧ ಖಾಸಗಿ ಆಸ್ಪತ್ರೆಗಳ ಸಂಘ ತೀವ್ರ ಕಾಳಜಿಯನ್ನು ವ್ಯಕ್ತಪಡಿಸಿದೆ. “ಅತ್ಯಂತ ಜನಪ್ರಿಯಾಗಿದ್ದಂತಹ ಹಾಗೂ ಇನ್ನೂ ಚಿಕ್ಕ ವಯಸ್ಸಿನ ನಟರಾಗಿದ್ದಂತಹ ಪುನೀತ್ ಅವರ ಸಾವು ನಮಗೂ ಸಹ ತೀವ್ರ ಆಘಾತವನ್ನು ಉಂಟು ಮಾಡಿದೆ. ಆದರೆ ಅವರ ಸಾವಿನ ನಂತರ ವ್ಯಕ್ತವಾಗುತ್ತಿರುವ ಆರೋಪಗಳು, ಘಟನೆಗಳು ಬಹಳ ನೋವನ್ನುಂಟು ಮಾಡುತ್ತಿದ್ದು, ಶೀಘ್ರ ಈ ಕಡೆ ಗಮನ ನೀಡಬೇಕಿದೆ,” ಎಂದು ಸಂಘದ ಅಧ್ಯಕ್ಷರಾದ ಪ್ರಸನ್ನ ಹೆಚ್.ಎಂ. ಅವರು ಕರ್ನಾಟಕದ ಮುಖ್ಯಮಂತ್ರಿ ಶ್ರೀ ಬಸವರಾಜ್ ಬೊಮ್ಮಾಯಿ ಅವರಲ್ಲಿ ಮನವಿ ಮಾಡಿದ್ದಾರೆ.

“ವೈದ್ಯರ ವಿರುದ್ಧ ಬೆರಳು ಮಾಡುತ್ತಿರುವ ಸಾರ್ವಜನಿಕರ ಪ್ರಯತ್ನಗಳನ್ನು ನಾವು ಬಲವಾಗಿ ಖಂಡಿಸುತ್ತೇವೆ, ಅದರಲ್ಲಿಯೂ ವಿಶೇಷವಾಗಿ ಡಾ. ರಮಣ ರಾವ್ ಅವರು ಪುನೀತ್ ಅವರನ್ನು ಉಳಿಸಿಕೊಳ್ಳುವಲ್ಲಿ ತಮ್ಮ ಶಕ್ತಿ ಮೀರಿ ಪ್ರಯತ್ನಿಸಿದ್ದಾರೆ. ವೈದ್ಯಕೀಯ ವೃತ್ತಿಯಲ್ಲೂ ಹಲವಾರು ಮಿತಿಗಳಿವೆ. ಯಾವಾಗಲೂ ಜೀವಗಳನ್ನು ಉಳಿಸುವುದು ಸಾಧ್ಯವಿಲ್ಲ. ಇಲ್ಲದಿದ್ದರೆ ಯಾರೂ ಸಾಯುತ್ತಲೇ ಇರಲಿಲ್ಲ,” ಎಂದಿದ್ದಾರೆ.

ಸರ್ಕಾರದ ವತಿಯಿಂದ ಒಂದು ಸಾರ್ವಜನಿಕ ಹೇಳಿಕೆಯನ್ನು ನೀಡುವ ಮೂಲಕ ವೈದ್ಯರ ಮನೋಬಲವನ್ನು ಹೆಚ್ಚಿಸುವಂತೆ ಅವರು ಮುಖ್ಯಮಂತ್ರಿ ಬೊಮ್ಮಾಯಿ ಅವರಲ್ಲಿ ಕೋರಿದ್ದಾರೆ. “ಡಾ. ರಮಣ ರಾವ್‌ಅವರಿಗೆ ಪುನೀತ್ ರಾಜ್‌ಕುಮಾರ್ ಅವರಿಗೆ ಚಿಕಿತ್ಸೆ ನೀಡಿದಂತಹ ಎಲ್ಲಾ ವೈದ್ಯಕೀಯ ವೃತ್ತಿಪರರಿಗೆ ಸೂಕ್ತ ಪೋಲಿಸ್ ರಕ್ಷಣೆ ನೀಡಬೇಕು,” ಎಂದು ಮನವಿ ಮಾಡಿದ್ದಾರೆ.

ಮುಂದುವರೆದು, ಸಾಮಾಜಿಕ ಜಾಲತಾಣಗಳು ಹಾಗೂ ದೃಶ್ಯ ಮಾಧ್ಯಮಗಳಲ್ಲಿ ಪುನೀತ್ ಅವರ ಅಕಾಲಿಕ ಮರಣಕ್ಕೆ ಸೂಕ್ತ ವೈದ್ಯಕೀಯ ವೃತ್ತಿಪರರ ಲಭ್ಯತೆಯ ಕೊರತೆಯೇ ಕಾರಣ ಎಂಬAತೆ ಬಿಂಬಿಸುತ್ತಿರುವುದಕ್ಕೆ ತೀವ್ರ ವಿಷಾದವನ್ನು ವ್ಯಕ್ತಪಡಿಸಿದ್ದಾರೆ.

“ಈ ರೀತಿಯ ಕಟುವಾದ ಟೀಕೆಗಳು ಸಮಾಜದಲ್ಲಿ ಅವಿಶ್ವಾಸವನ್ನು ಮೂಡಿಸುವುದಷ್ಟೇ ಅಲ್ಲದೆ, ಮೃತರನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದಂತಹ ವೈದ್ಯಕೀಯ ವೃತ್ತಿಯಲ್ಲಿರುವವರ ಜೀವಕ್ಕೆ ಅಪಾಯವನ್ನು ಒಡ್ಡುತ್ತದೆ,” ಎಂದು ತಮ್ಮ ಮನವಿಯಲ್ಲಿ ತಿಳಿಸಿದ್ದಾರೆ.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

Key words: Punith Rajkumar – doctors- appeals – security – private hospitals association