ಸಂಶೋಧನೆಗೆ ಉತ್ತೇಜನ ನೀಡಲು ರಾಜ್ಯ ಮಟ್ಟದ ಪ್ರತಿಷ್ಠಾನ- ಅಶ್ವಥ್ ನಾರಾಯಣ್.

ಬೆಂಗಳೂರು,ನವೆಂಬರ್,16,2022(www.justkannada.in):  ರಾಜ್ಯದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ವ್ಯವಸ್ಥಿತವಾಗಿ ಬೆಳೆಸಲು ‘ಕರ್ನಾಟಕ ರಾಜ್ಯ ಸಂಶೋಧನಾ ಪ್ರತಿಷ್ಠಾನ’ವನ್ನು ಆರಂಭಿಸಲಾಗುವುದು ಎಂದು ರಾಜ್ಯ ಸರಕಾರ ಹೇಳಿದೆ. ಬುಧವಾರ ಆರಂಭವಾದ 25ನೇ ವರ್ಷದ ಬೆಂಗಳೂರು ತಂತ್ರಜ್ಞಾನ ಸಮಾವೇಶದಲ್ಲಿ ಬಿಡುಗಡೆ ಮಾಡಿದ ಸಂಶೋಧನೆ, ಅಭಿವೃದ್ಧಿ ಮತ್ತು ನಾವೀನ್ಯತಾ ನೀತಿಯಲ್ಲಿ ಇದನ್ನು ಹೇಳಲಾಗಿದೆ. ಈ ಸಂದರ್ಭದಲ್ಲಿ ಐಟಿ-ಬಿಟಿ ಸಚಿವ ಡಾ.ಸಿ ಎನ್‌ ಅಶ್ವತ್ಥನಾರಾಯಣ ಇದ್ದರು.

ನೀತಿಯಲ್ಲಿರುವ ಗುರಿಗಳನ್ನು ತಲುಪಲು ಸರಕಾರದ ಪ್ರತಿಯೊಂದು ಇಲಾಖೆಯೂ ಸಂಶೋಧನೆ ಮತ್ತು ಅಭಿವೃದ್ಧಿಗೆ ವರ್ಷದಿಂದ ವರ್ಷಕ್ಕೆ ಶೇಕಡ 0.1ರಷ್ಟು ಹಣವನ್ನು ಏರಿಸಲಿವೆ. ಈ ಮೂಲಕ ಮುಂದಿನ ಐದು ವರ್ಷಗಳಲ್ಲಿ ರಾಷ್ಟ್ರೀಯ ಜಿಡಿಪಿಯ ಶೇಕಡ 0.7ರಷ್ಟು ಮತ್ತು ರಾಜ್ಯ ಜಿಡಿಪಿಯ ಶೇಕಡ 2ರಿಂದ 3ರಷ್ಟು ಹಣವನ್ನು ಈ ಉದ್ದೇಶಕ್ಕೆ ಮೀಸಲಿಡುವಂಥ ವ್ಯವಸ್ಥೆಯನ್ನು ರೂಪಿಸಲಾಗುವುದು ಎಂದು ನೀತಿಯಲ್ಲಿ ಹೇಳಲಾಗಿದೆ.

ಈ ನೀತಿಯಿಂದ ಪದವೀಧರರು, ಸ್ನಾತಕೋತ್ತರ ಪದವೀಧರರು ಮತ್ತು ಆರಂಭಿಕ ಹಂತದ ಸಂಶೋಧಕರಿಗೆ ಪ್ರೋತ್ಸಾಹ ದೊರೆಯಲಿದೆ. ಅಲ್ಲದೆ, ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಾರ್ವಜನಿಕ ನಿಧಿ ಇರುವ ‘ಮುಕ್ತ ವಿಜ್ಞಾನ ಮತ್ತು ಸಂಶೋಧನೆ’ ಉಪಕ್ರಮವನ್ನು ಆರಂಭಿಸಲಾಗುವುದು. ಇದಕ್ಕೆ ಪೂರಕವಾಗಿ ರಾಜ್ಯದ ಹಲವೆಡೆಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಪಾರ್ಕ್‌ಗಳು ಅಸ್ತಿತ್ವಕ್ಕೆ ಬರಲಿವೆ ಎಂದು ಇದರಲ್ಲಿ ವಿವರಿಸಲಾಗಿದೆ.

ಬೆಂಗಳೂರಿನಿಂದ ಆಚೆ ತಮ್ಮ ಆರ್‍‌ ಅಂಡ್‌ ಡಿ ಕೇಂದ್ರಗಳನ್ನು ಸ್ಥಾಪಿಸುವ ಕಂಪನಿಗಳಿಗೆ ವಿಶೇಷ ಪ್ರೋತ್ಸಾಹಕ ನೀತಿಯನ್ನು ರೂಪಿಸಲು ನೀತಿಯು ಶಿಫಾರಸು ಮಾಡಿದೆ. ಇದಕ್ಕಾಗಿ ‘ಕರ್ನಾಟಕ ತಂತ್ರಜ್ಞಾನ ನಾವೀನ್ಯತೆ ಮತ್ತು ಉದ್ಯಮಶೀಲತೆ’ ಎನ್ನುವ ವಿಶೇಷ ಪರಿಪೋಷಣಾ ಕಾರ್ಯಕ್ರಮವನ್ನು ರೂಪಿಸಲಾಗುವುದು ಎಂದು ಸರಕಾರವು ತನ್ನ ಇಂಗಿತವ ವ್ಯಕ್ತಪಡಿಸಿದೆ.

ಸಂಶೋಧನೆಯ ಫಲಗಳು ಸಮಾಜದ ಎಲ್ಲ ವರ್ಗಗಳ ಜನರನ್ನೂ ತಲುಪಬೇಕು. ಇದಕ್ಕಾಗಿ ಒಂದು ಇ-ಪ್ಲಾಟ್‌ಫಾರಂ ಅಭಿವೃದ್ಧಿ ಪಡಿಸಲಾಗುವುದು. ಇದಕ್ಕಾಗಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಸ್ವರೂಪದ ಕೈಗಾರಿಕೆಗಳಲ್ಲಿ ಸಂಶೋಧನೆಗೆ ಉತ್ತೇಜನ ನೀಡಲಾಗುವುದು. ಹಾಗೆಯೇ, ಆದ್ಯತಾ ವಲಯಗಳಲ್ಲೂ ಸಾಮಾಜಿಕ ಪರಿವರ್ತನೆ ಉಂಟುಮಾಡಬಲ್ಲ ಸಂಶೋಧನೆಗಳಿಗೆ ಪ್ರೋತ್ಸಾಹ ಕೊಡಲಾಗುವುದು ಎಂದು ಇದರಲ್ಲಿ ಹೇಳಲಾಗಿದೆ.

key words: State -level -foundation-promote research-ashwath narayan