ಸಂಜೆ 4ರಿಂದ 6ರವರೆಗೆ ಠಾಣೆಯಲ್ಲಿರಿ: ಠಾಣಾಧಿಕಾರಿಗಳಿಗೆ ಸೂಚನೆ, ಸಾರ್ವಜನಿಕರ ದೂರು ಆಲಿಸುವುದು ಕಡ್ಡಾಯ

ಬೆಂಗಳೂರು:ಜುಲೈ-23: ಕಿಡಿಗೇಡಿಗಳು ಅಮಾಯಕ ಜನರನ್ನು ಗುರಿಯಾಗಿಸಿಕೊಂಡು ಬೆದರಿಕೆ, ಹಫ್ತಾ ವಸೂಲಿ, ಮೀಟರ್ ಬಡ್ಡಿ ದಂಧೆ, ಹಲ್ಲೆ ಸೇರಿ ಮುಂತಾದ ಅಪರಾಧ ಚಟುವಟಿಕೆಗಳನ್ನು ಎಸಗುತ್ತಲೇ ಇದ್ದಾರೆ. ಅವರ ಸಮಸ್ಯೆಗಳನ್ನು ಆಲಿಸಿ ಕಡಿವಾಣ ಹಾಕುವ ನಿಟ್ಟಿನಲ್ಲಿ ಸಾರ್ವಜನಿಕರಿಗಾಗಿಯೇ ಸಮಯ ನಿಗದಿಪಡಿಸಿ ಎಂದು ಪೊಲೀಸ್ ಇನ್​ಸ್ಪೆಕ್ಟರ್​ಗಳಿಗೆ ನಗರ ಪೊಲೀಸ್ ಆಯುಕ್ತ ಸೂಚನೆ ನೀಡಿದ್ದಾರೆ.

ಕರ್ತವ್ಯದ ನೆಪದಲ್ಲಿ ಇನ್​ಸ್ಪೆಕ್ಟರ್​ಗಳು ಠಾಣೆಗಳಲ್ಲಿ ಇರುವುದಿಲ್ಲ. ಜನರು ತಮ್ಮ ಸಂಕಷ್ಟಗಳ ಪರಿಹಾರಕ್ಕಾಗಿ ಠಾಣೆಗಳಿಗೆ ಎಡತಾಕುತ್ತಿರುತ್ತಾರೆ. ಇದನ್ನು ತಪ್ಪಿಸುವ ಉದ್ದೇಶದಿಂದ ಜನರಿಗಾಗಿ ನಿರ್ದಿಷ್ಟ

ಸಮಯ ಮೀಸಲಿರಿಸಿದ್ದಾರೆ. ಕಾನೂನು ಸುವ್ಯವಸ್ಥೆಯ ಇನ್​ಸ್ಪೆಕ್ಟರ್ ಸಂಜೆ 4.30ರಿಂದ 6 ಗಂಟೆವರೆಗೆ ಹಾಗೂ ಸಂಚಾರ ಪೊಲೀಸ್ ಇನ್​ಸ್ಪೆಕ್ಟರ್ ಸಂಜೆ 4ರಿಂದ 5ರವರೆಗೆ ಕಡ್ಡಾಯವಾಗಿ ಠಾಣೆಗಳಲ್ಲಿ ಹಾಜರಿರಬೇಕು. ತುರ್ತು ಕೆಲಸಗಳನ್ನು ಹೊರತುಪಡಿಸಿ, ನಿಗದಿಪಡಿಸಿರುವ ಸಮಯದಲ್ಲಿ ಅನ್ಯ ಕೆಲಸಗಳನ್ನು ಮಾಡುವಂತಿಲ್ಲ ಎಂದು ತಾಕೀತು ಮಾಡಿದ್ದಾರೆ.

ಸಹಾಯವಾಣಿ ಸದ್ಬಳಕೆಗೆ ಚಿಂತನೆ: ಪ್ರತಿ ತಿಂಗಳು ಜನರಿಂದ ಪೊಲೀಸ್ ಸಹಾಯವಾಣಿ ‘100’ಗೆ ಕನಿಷ್ಠ 50 ಸಾವಿರದಿಂದ 70 ಸಾವಿರ ಫೋನ್ ಕರೆಗಳು ಬರುತ್ತವೆ. ತುರ್ತು ಸಂದರ್ಭಗಳಲ್ಲಿ ಪೊಲೀಸರಿಗೆ ದೂರುಗಳನ್ನು ನೀಡುತ್ತಾರೆ. ದೂರುಗಳನ್ನು ಪ್ರತ್ಯೇಕಗೊಳಿಸಿ ಸಂಬಂಧಪಟ್ಟ ವಿಭಾಗಗಳಿಗೆ ರವಾನಿಸಲಾಗುತ್ತದೆ. ಇದನ್ನು ಸದ್ಬಳಕೆ ಮಾಡಿಕೊಳ್ಳಲು ಸಹಾಯವಾಣಿ ಮೂಲಕ ಜನರಿಗೆ ಮತ್ತಷ್ಟು ಸೇವೆ ನೀಡಲು ಪೊಲೀಸರು ಮುಂದಾಗಿದ್ದಾರೆ.

ಪೊಲೀಸ್ ಠಾಣೆಗಳಲ್ಲಿ ಅಧಿಕಾರಿಗಳು ಇಲ್ಲದ ವೇಳೆ ಹೋಗುವ ಜನರು ಗಂಟೆಗಟ್ಟಲೆ ಕಾಯುತ್ತಾರೆ. ಇದನ್ನು ತಪ್ಪಿಸಲು ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳನ್ನು ಸಂರ್ಪಸಲು ಸಹಾಯವಾಣಿ ಮೂಲಕ ಸಮಯ ಕೊಡುವ ಸೇವೆಗೆ ಚಾಲನೆ ನೀಡಲಿದ್ದಾರೆ.

ಜನರು ಸಂಬಂಧಪಟ್ಟ ಅಧಿಕಾರಿಗಳನ್ನು ಭೇಟಿ ಮಾಡಲು ಪೊಲೀಸ್ ಮೂಲಕವೇ ಸಮಯ ನಿಗದಿ ಮಾಡಿಕೊಳ್ಳಬಹುದಾಗಿದೆ. ಸಹಾಯವಾಣಿ ಸಿಬ್ಬಂದಿ ಜನರನ್ನು ‘ಕಾನ್ಪರೆನ್ಸ್ ಫೋನ್ ಕಾಲ್’ ಮುಖಾಂತರ ಪೊಲೀಸ್ ಅಧಿಕಾರಿಗಳ ಜತೆ ಮಾತನಾಡಿಸಿ, ಅಲ್ಲಿಯೇ ಸಮಯ ನಿಗದಿ ಮಾಡಿಕೊಡಲಿದ್ದಾರೆ.

ಪೊಲೀಸ್ ಅಧಿಕಾರಿಗಳು ದಿನನಿತ್ಯ ಸಂಜೆ ಒಂದು ತಾಸು ಠಾಣೆಯಲ್ಲಿ ಜನರ ಸಮಸ್ಯೆಗಳನ್ನು ಆಲಿಸಬೇಕು. ಜನಸ್ನೇಹಿ ಪೊಲೀಸ್ ಸೇವೆ ನೀಡಲು ಇದೊಂದು ಪ್ರಯತ್ನವಾಗಿದೆ.

| ಅಲೋಕ್​ಕುಮಾರ್ ನಗರ ಪೊಲೀಸ್ ಆಯುಕ್ತ
ಕೃಪೆ:ವಿಜಯವಾಣಿ
be-at-the-police-station-from-4-to-6-pm-says-by-police-commissioner-alok-kumar