ರಾಮನಗರ ಜಿಲ್ಲೆಯ ಮನೆಮನೆಗೂ ನದಿಮೂಲದ ನೀರು-ಸಚಿವ ಅಶ್ವತ್ ನಾರಾಯಣ್

ರಾಮನಗರ,ನವೆಂಬರ್,11,2021(www.justkannada.in):  ರಾಮನಗರ ಜಿಲ್ಲೆಯಲ್ಲಿರುವ ಎಲ್ಲ 2 ಲಕ್ಷ ಮನೆಗಳಿಗೂ ಸದ್ಯದಲ್ಲೇ ಉತ್ತಮ ಗುಣಮಟ್ಟದ ನದಿಮೂಲದ ನೀರನ್ನು ಒದಗಿಸಲಾಗುವುದು ಎಂದು ಉನ್ನತ ಶಿಕ್ಷಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದ್ದಾರೆ.

ತಾಲ್ಲೂಕಿನ ಕೆಂಪಸಾಗರ ಗ್ರಾಮದಲ್ಲಿ ಗುರುವಾರ ನಡೆದ ಶ್ರೀ ವಿಶ್ವೇಶ್ವರಸ್ವಾಮಿ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸಚಿವ ಅಶ್ವಥ್ ನಾರಾಯಣ್, `ಸದ್ಯಕ್ಕೆ ರಾಜ್ಯದಲ್ಲಿ ಗದಗ ಜಿಲ್ಲೆಯಲ್ಲಿ ಮಾತ್ರ ಎಲ್ಲ ಮನೆಗಳಿಗೂ ನದಿನೀರನ್ನು ಪೂರೈಸಲಾಗುತ್ತಿದೆ. ಈಗ ರಾಮನಗರ ಜಿಲ್ಲೆಯಲ್ಲೂ ಇದೇ ಮಾದರಿಯ ಯೋಜನೆಯನ್ನು ಕಾರ್ಯಗತಗೊಳಿಸಲಾಗುವುದು,’ ಎಂದರು. ಈ ದೇವಸ್ಥಾನವು ಮಾಗಡಿ ಕೆಂಪೇಗೌಡರು ಕಟ್ಟಿಸಿದಂತಹ ಚಾರಿತ್ರಿಕ ದೇವಸ್ಥಾನವಾಗಿರುವುದನ್ನು ಇಲ್ಲಿ ಸ್ಮರಿಸಬಹುದು.

ಜಿಲ್ಲೆಯಲ್ಲಿ 2,500 ಕೆರೆಗಳಿದ್ದು, ಅವುಗಳ ಒತ್ತುವರಿಯನ್ನು ತೆರವುಗೊಳಿಸಿ ನೀರು ತುಂಬಿಸಲಾಗುವುದು. ಜೊತೆಗೆ ಜಿಲ್ಲೆಯ ಜನರಿಗೆ ಲಾಭ ತರುವಂತಹ ಸತ್ತೇಗಾಲ, ಎತ್ತಿನಹೊಳೆ ಮತ್ತು ಶ್ರೀರಂಗ ನೀರಾವರಿ ಯೋಜನೆಗಳನ್ನು ಕೂಡ ತ್ವರಿತವಾಗಿ ಮುಗಿಸಲಾಗುವುದು ಎಂದು  ಸಚಿವ ಅಶ್ವಥ್ ನಾರಾಯಣ್ ಭರವಸೆ ನೀಡಿದರು.

ಜಿಲ್ಲೆಯಲ್ಲಿ ಕೃಷಿಯ ಜೊತೆಗೆ ಕೈಗಾರಿಕೆಗಳ ಬೆಳವಣಿಗೆಗೂ ಗಮನ ಹರಿಸಲಾಗಿದೆ. ಇದಕ್ಕಾಗಿ ಮರೂರು ಗ್ರಾಮದಲ್ಲಿ 2-3 ಸಾವಿರ ಎಕರೆ ಭೂಮಿಯನ್ನು ಗುರುತಿಸಲಾಗಿದ್ದು, ಇಲ್ಲಿ ಕೈಗಾರಿಕಾ ಪ್ರದೇಶವನ್ನು ಸ್ಥಾಪಿಸಲಾಗುವುದು. ಇದರಿಂದ ಸ್ಥಳೀಯರಿಗೆ ಸಾಕಷ್ಟು ಉದ್ಯೋಗಗಳು ದೊರೆಯಲಿವೆ ಎಂದು ಸಚಿವ ಅಶ್ವಥ್ ನಾರಾಯಣ್ ನುಡಿದರು.

ಕೆಂಪೇಗೌಡರ ಪ್ರತಿಮೆ ಸ್ಥಾಪನೆ

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 2022ರ ಮಾರ್ಚ್ ಹೊತ್ತಿಗೆ ಮಾಗಡಿ ಕೆಂಪೇಗೌಡರ 108 ಅಡಿ ಎತ್ತರದ ಪ್ರತಿಮೆ ಸ್ಥಾಪಿಸಲಾಗುವುದು. ಇದಕ್ಕಾಗಿ 23 ಎಕರೆ ಪ್ರದೇಶವನ್ನು ಗುರುತಿಸಿದ್ದು ಇಲ್ಲಿ ಉದ್ಯಾನ, ಕೆರೆ ಮತ್ತಿತರ ಆಕರ್ಷಣೆಗಳನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ಅಶ್ವತ್ಥನಾರಾಯಣ ಹೇಳಿದರು.

ತಾಲ್ಲೂಕಿನ ಕೆಂಪಾಪುರದಲ್ಲಿರುವ ಕೆಂಪೇಗೌಡರ ಸಮಾಧಿಯನ್ನು ವೀರಭೂಮಿಯನ್ನಾಗಿ ಮಾಡಲಾಗುವುದು. ಇದಕ್ಕಾಗಿ ರೈತರಿಗೆ ಸಮರ್ಪಕ ಪರಿಹಾರ ಕೊಟ್ಟು, ಭೂಸ್ವಾಧೀನ ಮಾಡಿಕೊಳ್ಳಲಾಗುವುದು ಎಂದು ಅವರು ನುಡಿದರು.

ಕಾರ್ಯಕ್ರಮದಲ್ಲಿ ಸಿದ್ಧಗಂಗೆ ಮತ್ತು ಅಂಕನಹಳ್ಳಿ ಮಠದ ಶ್ರೀಗಳು, ಶಾಸಕ ಮಂಜುನಾಥ್, ವಿಧಾನ ಪರಿಷತ್ ಸದಸ್ಯ ಅ.ದೇವೇಗೌಡ ಮತ್ತು ಜಿಲ್ಲಾ ಬಿಜೆಪಿ ಅಧ್ಯಕ್ಷ ದೇವರಾಜು ಮತ್ತಿತರರು ಉಪಸ್ಥಿತರಿದ್ದರು.

Key words: Ramanagar- district –river-water-minister -Ashwath Narayan.