ರಾಜ್ಯದ ಆಸ್ಪತ್ರೆಗಳಲ್ಲಿನ ಆಮ್ಲಜನಕ ಘಟಕಗಳಲ್ಲಿ ನಡೆಸಿದ ಅಣಕು ಅಭ್ಯಾಸಗಳಿಂದ ಬಯಲಾಯ್ತು ವಿವಿಧ ತಾಂತ್ರಿಕ ಲೋಪಗಳು

ಬೆಂಗಳೂರು, ಡಿಸೆಂಬರ್ 29, 2021(www.justkannada.in): ಕರ್ನಾಟಕದಲ್ಲಿ ಹೊಸದಾಗಿ ಸ್ಥಾಪಿಸಲಾದ 192 ಆಮ್ಲಜನಕ ಉತ್ಪಾದನಾ ಘಟಕಗಳಲ್ಲಿ ಇತ್ತೀಚೆಗೆ ನಡೆಸಿದ ಅಣಕು ಪ್ರದರ್ಶನಗಳಿಂದ ವಿವಿಧ ಜಿಲ್ಲೆಗಳ ಈ ಹೊಸ ಆಮ್ಲಜನಕ ಉತ್ಪದನಾ ಘಟಕಗಳಲ್ಲಿ ಅಸಮರ್ಪಕ ಆಮ್ಲಜನಕ ಶುದ್ಧತೆ, ಒತ್ತಡ ಹಾಗೂ ಸಾಂದ್ರತೆ ಸೇರಿದಂತೆ ಹಲವು ಲೋಪಗಳಿರುವುದು ಬಹಿರಂಗಗೊಂಡಿದೆ.

ಬೆಂಗಳೂರಿನ ಜಯನಗರ ಸಾರ್ವಜನಿಕ ಆಸ್ಪತ್ರೆಯಲ್ಲಿ ಬೆಳಿಗ್ಗೆ ೧೧.೦೦ ಗಂಟೆಗೆ ಆರಂಭಿಸಲಾದ ಈ ಅಣಕು ಅಭ್ಯಾಸದಲ್ಲಿ ಆಮ್ಲಜನಕದ ಸಾಂದ್ರತೆ (concentration of oxygen) ಸುಮಾರು ೪ ಗಂಟೆಯವರೆಗೂ ಅಗತ್ಯ ಮಟ್ಟವನ್ನು ತಲುಪಲಿಲ್ಲ. ಈ ಚಟುವಟಿಕೆಯನ್ನು ಸಂಜೆ ೬.೦೦ ಗಂಟೆಯವರೆಗೂ ನಡೆಸಲಾಯಿತು.

ಈ ಸಂಬಂಧ ಮಾಹಿತಿ ನೀಡಿದ ಜಯನಗರ ಸಾರ್ವಜನಿಕ ಆಸ್ಪತ್ರೆಯ ವೈದ್ಯಕೀಯ ಮೇಲ್ವಿಚಾರಣಾಧಿಕಾರಿ ಡಾ. ರಾಮಕೃಷ್ಣಪ್ಪ ಅವರು, “ಶೇಖರಣಾ ಟ್ಯಾಂಕ್‌ ನಲ್ಲಿರುವ ಹಳೆಯ ಅನಿಲವನ್ನು ಮೊದಲ ಖಾಲಿ ಮಾಡಬೇಕು, ನಂತರವಷ್ಟೇ ಆಮ್ಲಜನಕವನ್ನು ತುಂಬಬಹುದು. ಆದರೆ ನಮ್ಮ ಆಸ್ಪತ್ರೆಯ ಸಿಬ್ಬಂದಿಗೆ ಅದು ಸಾಧ್ಯವಾಗಲಿಲ್ಲ. ಆಮ್ಲಜನಕದ ಸಾಂದ್ರತೆ ೯೩% ರಿಂದ ೯೬%ರಷ್ಟಿರಬೇಕು. ಆದರೆ ಈಗ ಅದು ಕೇವಲ ೯೦%ರಷ್ಟು ಬಂದಿದೆ. ಹೊರಾಂಗಣದ ವಾಯುವಿನಲ್ಲಿ ಆಮ್ಲಜನಕದ ಪ್ರಮಾಣ ಕೇವಲ ೨೧%ರಷ್ಟಿರುತ್ತದೆ. ಉಳಿದದ್ದು ನೈಟ್ರೊಜೆನ್ ಹಾಗೂ ಇನ್ನಿತರೆ ಅನಿಲಗಳಾಗಿರುತ್ತವೆ. ನೈಟ್ರೊಜೆನ್ ಅನ್ನು ಜಿಯೊಲೈಟ್ ಫಿಲ್ಟರ್ ಮೂಲಕ ಹೊರಗೆ ಬಿಡಲಾಗುತ್ತದೆ, ಅದರಿಂದ ಆಮ್ಲಜನಕದ ಸಂದ್ರತೆ ಮಾಡಲಾಗುತ್ತದೆ. ನಂತರ ಇದನ್ನು ಶೇಖರಣಾ ಟ್ಯಾಂಕ್‌ ಗೆ ಸೇರಿಸಲಾಗುತ್ತದೆ. ಆದರೆ ಈಗ ಈ ಪ್ರಕ್ರಿಯೆ ಚುರುಕುಗೊಳ್ಳುತ್ತಿದೆ,” ಎಂದು ವಿವರಿಸಿದರು.

“ಅಲ್ಲಿರುವ ಆಮ್ಲಜನಕದ ಉತ್ಪಾದನೆಯ ಸಾಮರ್ಥ್ಯ ಒಂದು ನಿಮಿಷಕ್ಕೆ ೧,೦೦೦ ಲೀಟರ್‌ ಗಳಷ್ಟಿದೆ. ಈ ಆಸ್ಪತ್ರೆಗೆ ಈ ಹೊಸ ಉಪಕರಣ ಎರಡು ತಿಂಗಳ ಹಿಂದೆ ಬಂತು, ಆದರೆ ಅದನ್ನು ಅಳವಡಿಸಿರಲಿಲ್ಲ. ಈಗ ಅಳವಡಿಸುವ ಕೆಲಸ ನಡೆಯುತ್ತಿದೆ. ನಮ್ಮ ಆಸ್ಪತ್ರೆಯಲ್ಲಿ ಆಮ್ಲಜನಕದ ಸಿಲಿಂಡರ್‌ ಗಳ ಜೊತೆಗೆ ದ್ರವ ರೂಪದ ವೈದ್ಯಕೀಯ ಆಮ್ಲಜನಕದ ಶೇಖರಣೆ ಇರುವುದರಿಂದಾಗಿ ರೋಗಿಗಳಿಗೆ ತೊಂದರೆಯಾಗಿಲ್ಲ,” ಎಂದು ವಿವರಿಸಿದರು.

ರೋಗಿಗಳ ಸ್ಥಳಾಂತರ

ಬುಧವಾರದಂದು ಹೊಸ ವ್ಯವಸ್ಥೆಗಳ ಅಳವಡಿಕೆ ಕಾರ್ಯ ಜರುಗುವ ಕಾರಣದಿಂದಾಗಿ ಜಯನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿದ್ದಂತಹ, ಆಮ್ಲಜನಕ ಅಗತ್ಯವಿರುವಂತಹ ಇಬ್ಬರು ಒಳರೋಗಿಗಳನ್ನು ಮುಂಚಿತವಾಗಿಯೇ ಕೆ.ಸಿ. ಜನರಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಗುವುದು.

ಬೆಂಗಳೂರು ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಶ್ರೀನಿವಾಸ್ ಜಿ.ಎ. ಅವರು, “ಯಲಹಂಕ ಸಾರ್ವಜನಿಕ ಆಸ್ಪತ್ರೆಯಲ್ಲಿರುವ ಆಮ್ಲಜನಕ ಉತ್ಪಾದನಾ ಘಟಕ ಆರಂಭದಲ್ಲಿ ಸರಿಯಾಗಿ ಕಾರ್ಯನಿರ್ವಹಿಸಲಿಲ್ಲ, ಹಾಗೂ ಆಮ್ಲಜನಕ ಸಾಂದ್ರತೆ ಭಿನ್ನ ರೀಡಿಂಗ್‌ ಗಳನ್ನು ತೋರಿಸುತಿತ್ತು. ಒಮ್ಮೆ ರೀಡಿಂಗ್ ೯೩ ತೋರಿಸಿದರೆ, ಕೆಲವೊಮ್ಮೆ ೫೮ ಹಾಗೂ ೬೬ ತೋರಿಸುತಿತ್ತು. ಆದರೆ ಸರಿಯಾದ ರೀಡಿಂಗ್ ೯೩%. ಈ ಘಟಕ ಪ್ರತಿ ನಿಮಿಷಕ್ಕೆ ೫೦೦ ಲೀಟರ್ ಆಮ್ಲಜನಕ ಸಾಮರ್ಥ್ಯವನ್ನು ಹೊಂದಿದೆ. ಈ ಲೋಪವನ್ನು ಸರಿಪಡಿಸಲು ಅಂತಿಮವಾಗಿ ಹೈದ್ರಾಬಾದ್‌ ನಲ್ಲಿರುವ ಬಯೊಮೆಡಿಕಲ್ ಇಂಜಿನಿಯರ್ ಅನ್ನು ಆನ್‌ಲೈನ್ ಮೂಲಕ ಸಂಪರ್ಕಿಸಲಾಯಿತು,” ಎಂದು ವಿವರಿಸಿದರು. ಈ ಆಸ್ಪತ್ರೆಯಲ್ಲಿ ಎರಡು ಕಿಲೋಲೀಟರ್‌ಗಳ ಎರಡು ದ್ರವ ಆಮ್ಲಜನಕ ಶೇಖರಣಾ ಟ್ಯಾಂಕ್‌ ಗಳಿದ್ದು ರೋಗಿಗಳ ಆಮ್ಲಜನಕದ ಅಗತ್ಯವನ್ನು ಪೂರೈಸುತ್ತದೆ,” ಎಂದರು.

ಇತರೆ ಸ್ಥಳಗಳಲ್ಲಿ ಪರಿಸ್ಥಿತಿ

ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿರುವ ಒಟ್ಟು ಏಳು ಆಮ್ಲಜನಕ ಘಟಕಗಳ ಪೈಕಿ ಕೇವಲ ನಾಲ್ಕು ಮಾತ್ರ ಉಪಯೋಗಿಸಲು ಸಿದ್ಧವಾಗಿವೆ. ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಹೆಚ್.ಎಲ್. ಜನಾರ್ಧನ್ ಅವರು, “ಜಿಲ್ಲಾಸ್ಪತ್ರೆಯಲ್ಲಿ ಆಮ್ಲಜನಕದ ಶುದ್ಧತೆಗೆ ಸಂಬಂಧಪಟ್ಟಂತೆ ಕೆಲವು ಸಮಸ್ಯೆಗಳಿದ್ದವು. ಅದರ ಪ್ರಮಾಣ ಶೇ.೯೭ ಅನ್ನು ತಲುಪುತ್ತಿರಲಿಲ್ಲ. ಹೊಸಪೇಟೆ ತಾಲ್ಲೂಕಿನಲ್ಲಿ ಆಮ್ಲಜನಕದ ಒತ್ತಡದ ಸಮಸ್ಯೆ ಇತ್ತು. ಆದರೆ ನಂತರದಲ್ಲಿ ಸರಿಹೋಯಿತು. ವಿಜಯನಗರ ಜಿಲ್ಲೆಯ ಹೂವಿನಹಡಗಲಿಯಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಅಸಮರ್ಪಕ ಒತ್ತಡದ ಸಮಸ್ಯೆ ಇತ್ತು. ಜೊತೆಗೆ ಶುದ್ಧತೆ ಹಾಗೂ ಸ್ಯಾಚುರೇಷನ್ ಸಮಸ್ಯೆಗಳೂ ಇದ್ದವು,” ಎಂದು ವಿವರಿಸಿದರು.

ಈ ಆಸ್ಪತ್ರೆಗಳು ಶೇಖರಣಾ ಟ್ಯಾಂಕ್‌ ಗಳು ಅಥವಾ ಸಿಲಿಂಡರ್‌ಗಳಲ್ಲಿ ಪ್ರಸ್ತುತ ದ್ರವ ವೈದ್ಯಕೀಯ ಆಮ್ಲಜನಕವನ್ನು ಬಳಸುತ್ತಿವೆ. ಮಂಗಳವಾರ ನಡೆಸಿದ ಅಣಕು ಅಭ್ಯಾಸದ ನಂತರ ಕಂಡು ಬಂದಿರುವ ದೋಷಗಳನ್ನು ಸರಿಪಡಿಸಲು ಬಯೊಮೆಡಿಕಲ್ ಇಂಜಿನಿಯರ್‌ಗಳನ್ನು ಕರೆಸಿ ಎಲ್ಲವನ್ನೂ ಸರಿಪಡಿಸಿದ ನಂತರ, ಹೊಸದಾಗಿ ಅಳವಡಿಸಿರುವ ಆಮ್ಲಜನಕ ಘಟಕಗಳಿಗೆ ಸಂಪರ್ಕವನ್ನು ಕಲ್ಪಿಸಲಾಗುವುದು.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

Key words: Various -technical –problem- stemmed – mock practices – anaerobic units