ಯುಪಿಐ ಪಾವತಿ ವ್ಯವಸ್ಥೆಗೆ ಆರ್‌ಬಿಐನಿಂದ ಮತ್ತಷ್ಟು ಪುಷ್ಠಿ..

ನವದೆಹಲಿ, ಡಿಸೆಂಬರ್ 9, 2021 (www.justkannada.in): ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (ಯುಪಿಐ) ದೇಶದ ರೀಟೆಲ್ ಪಾವತಿ ವ್ಯವಸ್ಥೆಗಳ ಪೈಕಿ ಅತೀ ದೊಡ್ಡ ವ್ಯವಸ್ಥೆ ಎನಿಸಿದೆ. ನವೆಂಬರ್ ತಿಂಗಳಲ್ಲಿ ಈ ವಿಧಾನದ ಪಾವತಿಗಳ ವೇದಿಕೆಯ ಮೂಲಕ ದೇಶದಲ್ಲಿ ಒಟ್ಟಾರೆ ೪೧೮ ಕೋಟಿಗಳಷ್ಟು ವಹಿವಾಟುಗಳು ನಡೆದಿದ್ದು, ಇದರ ಒಟ್ಟು ಮೌಲ್ಯ ರೂ.೭.೭ ಲಕ್ಷ ಕೋಟಿಗಳಷ್ಟಾಗಿದೆ. ಈಗ ಭಾರತೀಯ ರಿಸರ್ವ್ ಬ್ಯಾಂಕ್ ಈ ಯುಪಿಐ ಪಾವತಿ ವ್ಯವಸ್ಥೆಗೆ ಮತ್ತಷ್ಟು ಪುಷ್ಠಿ ನೀಡಲು ಪ್ರಸ್ತಾಪಿಸಿದ್ದು, ಈ ವೇದಿಕೆ ಇನ್ನೂ ಅಧಿಕ ಸಂಖ್ಯೆಯ ಹೊಸ ಗ್ರಾಹಕರನ್ನು ಸೆಳೆಯಲು ಸಜ್ಜಾಗುತ್ತಿದೆ.

ಕಳೆದ ಕೆಲವು ವರ್ಷಗಳಲ್ಲಿ ಸ್ಮಾರ್ಟ್ ಫೋನ್‌ ಗಳ ಮಾರುಕಟ್ಟೆಯಲ್ಲಿ ಭಾರತ ಅತೀ ವೇಗವಾಗಿ ಬೆಳೆಯುತ್ತಿರುವ ರಾಷ್ಟ್ರವಾಗಿ ಹೊರಹೊಮ್ಮಿದೆ. ಆದರೆ ಈ ಸ್ಮಾರ್ಟ್ ಫೋನ್‌ ಗಳನ್ನು ಬಳಸುವವರ ಸಂಖ್ಯೆ ಇನ್ನೂ ಸಾಕಷ್ಟಿದೆ. ಪ್ರಸ್ತುತ ದೇಶದಲ್ಲಿ ಮೊಬೈಲ್ ಫೋನ್‌ ಗಳನ್ನು ಬಳಸುವವರ ಸಂಖ್ಯೆ ೧೧೯ ಕೋಟಿಗಳಿಷ್ಟಿದ್ದು, ಈ ಪೈಕಿ ಈಗಲೂ ಸ್ಮಾರ್ಟ್ಫೋನ್‌ಗಳನ್ನು ಬಳಸುವವರು ಸಂಖ್ಯೆ ೭೪ ಕೋಟಿಗಳಷ್ಟೇ. ಹಾಗಾಗಿ, ಸ್ಮಾರ್ಟ್ಫೋನ್‌ ಗಳ ಬಳಕೆದಾರರ ಮಾರುಕಟ್ಟೆ ವ್ಯಾಪ್ತಿ ಇನ್ನೂ ಸಾಕಷ್ಟಿದೆ.

ಈ ಹಿನ್ನೆಲೆಯಲ್ಲಿ ಮುಖ್ಯವಾಹಿನಿ ಡಿಜಿಟಲ್ ಪಾವತಿಗಳ ಕಡೆಗೆ ಇನ್ನೂ ಹೆಚ್ಚಿನ ಸಂಖ್ಯೆಯ ಜನರನ್ನು ಸೆಳೆಯಬೇಕಿದ್ದು, ಸ್ಮಾರ್ಟ್ಫೋನ್‌ಗಳ ಬಳಕೆದಾರರ ಸಂಖ್ಯೆಯನ್ನು ಹೆಚ್ಚಿಸುವುದು ಭಾರತೀಯ ರಿಸರ್ವ್ ಬ್ಯಾಂಕ್‌ ನ ಗುರಿಯಾಗಿದೆ. ಈವರೆಗೆ ಫೀಚರ್‌ಫೋನ್‌ಗಳ (ಕೀಪ್ಯಾಡ್ ಮೊಬೈಲ್ ಫೋನ್‌ ಗಳು) ಬಳಕೆದಾರರಿಗೆ ಪಾವತಿ ಉತ್ಪನ್ನಗಳ ದೊರೆಯುವಿಕೆ ಸೀಮಿತವಾಗಿತ್ತು. ನ್ಯಾಷನಲ್ ಯೂನಿಫೈಡ್ ಯುಎಸ್‌ಎಸ್‌ಡಿ ವೇದಿಕೆ, *೯೯# ಕೋಡ್ ಬಳಸಿ ಪ್ರಾಥಮಿಕ ಪಾವತಿ ಸೇವೆಗಳನ್ನು ಪಡೆದುಕೊಳ್ಳುವ ಫೀಚರ್‌ ಫೋನ್ ಬಳಕೆದಾರರ ಸಂಖ್ಯೆ ಇನ್ನೂ ಅಷ್ಟಾಗಿಲ್ಲ. ಆದ್ದರಿಂದ, ಆರ್‌ಬಿಐ ಫೀಚರ್‌ಫೋನ್‌ಗಳ ಬಳಕೆದಾರರಿಗಾಗಿಯೇ ಯುಪಿಐ-ಆಧಾರಿತ ಪಾವತಿ ಸೇವೆಗಳನ್ನು ಆರಂಭಿಸಲು ಪ್ರಸ್ತಾಪಿಸಿದೆ.

ಆರ್‌ಬಿಐ ನಿಯಂತ್ರಣಗಳ ಮೊದಲ ಸಮೂಹದಲ್ಲಿ ಕೆಲವು ಹೊಸಶೋಧಕ ಕಂಪನಿಗಳು, ರೀಟೆಲ್ ಪಾವತಿಗಳು ಎಂಬ ವಿಷಯದಡಿ ಫೀಚರ್‌ಫೋನ್‌ ಗಳ ಮೂಲಕ ಮಾಡುವ ಪಾವತಿಗಳಿಗೆ ಪರಿಹಾರಗಳನ್ನು ಪ್ರದರ್ಶಿಸಿದರು. ಪೂರಕ ಪರಿಹಾರಗಳನ್ನು ಜೊತೆಗೂಡಿದ ಈ ಸೇವೆಗಳು, ಡಿಜಿಟಲೀಕರಣ ವಿಸ್ತಾರಗೊಳ್ಳುವುದನ್ನು ಪ್ರೋತ್ಸಾಹಿಸಲು ಫೀಚರ್‌ಫೋನ್ ಗಳಲ್ಲಿ ಯುಪಿಐ-ಆಧಾರಿತ ಡಿಜಿಟಲ್ ಪಾವತಿ ಪರಿಹಾರಗಳನ್ನು ಒದಗಿಸುತ್ತದೆ, ಎಂದು ಆರ್‌ಬಿಐ ತಿಳಿಸಿದೆ.

ಆರ್‌ಬಿಐ ನಿರ್ಧಾರವನ್ನು ಸ್ವಾಗತಿಸಿರುವ ತಜ್ಞರು

ಬ್ಯಾಂಕಿಂಗ್ ತಂತ್ರಜ್ಞಾನ ಸೇವೆಗಳನ್ನು ಒದಗಿಸುವ ಸಂಸ್ಥೆ ಸರ್ವತ್ರ ಟೆಕ್ನಾಲಜೀಸ್‌ನ ಸ್ಥಾಪಕ ಹಾಗೂ ಉಪಾಧ್ಯಕ್ಷ ಮಂದಾರ್ ಅಗಾಶೆ ಅವರು ಆರ್‌ ಬಿಐನ ಈ ನಿರ್ಧಾರವನ್ನು ಸ್ವಾಗತಿಸಿದ್ದು, “ಫೀಚರ್‌ಫೋನ್‌ ಗಳಲ್ಲಿ ಯುಪಿಐ-ಆಧಾರಿತ ಡಿಜಿಟಲ್ ಪಾವತಿ ಪರಿಹಾರಗಳನ್ನು ಒದಗಿಸುವುದರಿಂದ ಡಿಜಿಟಲೀಕರಣಕ್ಕೆ ಪುಷ್ಠಿ ಸಿಕ್ಕಂತಾಗುತ್ತದೆ. ಇದರಿಂದ, ವಿಶೇಷವಾಗಿ ಎರಡು ಹಾಗೂ ಮೂರನೇ ಹಂತದ ನಗರಗಳಲ್ಲಿ ನಡೆಯುವ ಸಣ್ಣ ಮೊತ್ತದ ವಹಿವಾಟುಗಳ ಪ್ರಮಾಣ ಹೆಚ್ಚಾಗುತ್ತದೆ,” ಎಂದಿದ್ದಾರೆ.

ಜೊತೆಗೆ ಡಿಜಿಟಲ್ ಪಾವತಿಗಳನ್ನು ಒಪ್ಪಿಕೊಳ್ಳುವವರ ಸಂಖ್ಯೆ ಅಧಿಕಗೊಂಡು, ಹಣಕಾಸಿನ ಸೇರ್ಪಡೆಯ ಪ್ರಮಾಣವೂ ವೃದ್ಧಿಸುತ್ತದೆ, ಎನ್ನುವುದು ಎಂಸ್ವೆöಪ್ ಸಂಸ್ಥೆಯ ಉತ್ಪನ್ನಗಳ ಮುಖ್ಯಸ್ಥ ಅಂಕಿತ್ ಭಟ್ನಾಗರ್ ಅವರ ಅಭಿಪ್ರಾಯವಾಗಿದೆ.

“ಇದರಿಂದ ಬಳಕೆದಾರರಿಗೆ ಅನುಕೂಲ ಹಾಗೂ ನಮ್ಯತೆಗಳ ವಿಚಾರದಲ್ಲಿ ಲಾಭ ದೊರೆಯುವುದರ ಜೊತೆಗೆ, ಹೆಚ್ಚಿನ ಸಂಖ್ಯೆಯ ಸಣ್ಣ ವ್ಯಾಪಾರಸ್ಥರನ್ನು ಡಿಜಿಟಲ್ ಆರ್ಥಿಕತೆಯ ವ್ಯಾಪ್ತಿಯೊಳಗೆ ತರುತ್ತದೆ ಮತ್ತು ದೇಶದಲ್ಲಿ ಪಾವತಿಗಳ ಮೂಲಭೂತ ಸೌಕರ್ಯವನ್ನು ಹೆಚ್ಚು ಶಕ್ತಿಶಾಲಿಯಾಗಿಸುತ್ತದೆ,” ಎನ್ನುತ್ತಾರೆ.

ಫೀಚರ್‌ ಫೋನ್‌ಗಳ ಮೂಲಕ ಯುಪಿಐ ಪಾವತಿಗಳ ಅಂಗೀಕಾರದಿಂದಾಗಿ, ಸಾಮಾನ್ಯ ಜನರಿಗೆ “ಈಗ ಖರೀದಿಸಿ, ನಂತರ ಪಾವತಿಸಿ,” “ಡಿಜಿಟಲ್ ವಿಮೆ,” ಮತ್ತು ಸಣ್ಣ ಪ್ರಮಣದ ಸಾಲಗಳಂತಹ ಹಣಕಸಿನ ಸೇವೆಗಳನ್ನು ಪಡೆಯಲು ಬಾಗಿಲುಗಳು ತೆರೆಯುತ್ತವೆ, ಎನ್ನುತ್ತಾರೆ ಮೊಬಿಕ್ವಿಕ್‌ ನ ಸಹ-ಸ್ಥಾಪಕ ಹಾಗೂ ಸಿಇಒ ಬಿಪಿನ್ ಪ್ರೀತ್ ಸಿಂಗ್.

ಯುಪಿಐನಲ್ಲಿ ಸಣ್ಣ ಮೌಲ್ಯದ ವಹಿವಾಟುಗಳ ಸುಲಭ ಹಾಗೂ ಸರಾಗವಾದ ಹರಿವನ್ನು ಖಾತ್ರಿಪಡಿಸುವ ಸಲುವಾಗಿ ಆರ್‌ಬಿಐ ಈ ವ್ಯವಸ್ಥೆಯನ್ನು ಮತ್ತಷ್ಟು ಸರಳೀಕರಣಗೊಳಿಸಲು ಆಲೋಚಿಸಿದೆ.

ವಹಿವಾಟುಗಳ ದತ್ತಾಂಶ ವಿಶ್ಲೇಷಣೆಯ ಪ್ರಕಾರ ಯುಪಿಐ ಮೂಲಕ ನಡೆಯುತ್ತಿರುವಂತಹ ಒಟ್ಟು ವಹಿವಾಟುಗಳ ಪೈಕಿ ಶೇ.೫೦ರಷ್ಟು ವಹಿವಾಟುಗಳು ರೂ.೨೦೦ಕ್ಕಿಂತ ಕಡಿಮೆ ಇರುವ ವಹಿವಾಟುಗಳಾಗಿವೆ. ಈ ಕಡಿಮೆ ಮೌಲ್ಯದ ವಹಿವಾಟುಗಳು ಸಿಸ್ಟಂ ಸಾಮರ್ಥ್ಯ ಹಾಗೂ ಸಂಪನ್ಮೂಲಗಳ ದೊಡ್ಡ ಪ್ರಮಾಣದ ಸಾಮರ್ಥ್ಯವನ್ನು ಕಬಳಿಸುತ್ತಿದ್ದು, ಇದರಿಂದಾಗಿ ಕೆಲವೊಮ್ಮೆ ವಹಿವಾಟುಗಳು ವಿಫಲವಾಗಲು ಕಾರಣವಾಗಿದೆ, ಎನ್ನುವುದು ಆರ್‌ ಬಿಐನ ಅಭಿಪ್ರಾಯವಾಗಿದೆ.

ಹಾಗಾಗಿ, ಯುಪಿಐ ಆ್ಯಪ್‌ನಲ್ಲಿ ಸಣ್ಣ ಮೌಲ್ಯವ ವಹಿವಾಟುಗಳನ್ನು ಆನ್-ಡಿವೈಸ್ ವ್ಯಾಲೆಟ್ (on-device wallet) ಮೂಲಕ ಆಗುವಂತೆ ಮಾಡಿ, ಆ ಮೂಲಕ ಪ್ರಕ್ರಿಯೆಯನ್ನು ಸರಳಗೊಳಿಸಲು ಪ್ರಸ್ತಾಪಿಸಲಾಗಿದೆ. ಇದರಿಂದ ಬ್ಯಾಂಕುಗಳ ಸಿಸ್ಟಂ ಸಂಪನ್ಮೂಲಗಳ ಮೇಲಿನ ಒತ್ತಡ, ಬಳಕೆದಾರರಿಗೆ ವಹಿವಾಟಿನ ಅನುಭವದಲ್ಲಿ ಯಾವುದೇ ಬದಲಾವಣೆಯಾಗದೆ ಕಡಿಮೆಯಾಗುತ್ತದೆ.

ಮುಂದುವರಿದು, ಐಪಿಒ ಅಪ್ಲಿಕೇಷನ್‌ ಗಳು ಹಾಗೂ ರೀಟೆಲ್ ಡೈರೆಕ್ಟ್ ಸ್ಕೀಂಗಳಿಗಾಗಿ (ಹೂಡಿಕೆದಾರರು ನೇರವಾಗಿ ಸರ್ಕಾರಿ ಹೂಡಿಕೆಗಳಲ್ಲಿ ಹೂಡಿಕೆ ಮಾಡುವ ವ್ಯವಸ್ಥೆ) ಯುಪಿಐ ಪಾವತಿಗಳ ವಹಿವಾಟಿನ ಮಿತಿಯನ್ನು ರೂ.೨ ಲಕ್ಷದಿಂದ ರೂ.೫ ಲಕ್ಷಕ್ಕೆ ಹೆಚ್ಚಿಸುವ ಪ್ರಸ್ತಾಪವನ್ನೂ ಮಾಡಿದೆ.

“ಐಪಿಒಗಳ ಚಂದಾದಾರಿಕೆಯನ್ನು ಪಡೆಯಲು ಯುಪಿಐ ಒಂದು ಜನಪ್ರಿಯ ಪಾವತಿಯೂ ಆಗಿದೆ. ಈ ಹಿನ್ನೆಲೆಯಲ್ಲಿ ವಹಿವಾಟಿನ ಮಿತಿಯನ್ನು ಹೆಚ್ಚಿಸುವ ಆರ್‌ಬಿಐನ ಈ ಪ್ರಸ್ತಾವನೆ ಚಿಲ್ಲರೆ ಹೂಡಿಕೆದಾರರ ಯುಪಿಐ ಬಳಕೆಯನ್ನು ಹೆಚ್ಚಿಸುತ್ತದೆ ಮತ್ತು ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಹೆಚ್ಚು ಸೇರ್ಪಡೆಗೊಳ್ಳುವಂತೆ ಮಾಡುತ್ತದೆ,” ಎನ್ನುತ್ತಾರೆ ಫೀನ್‌ಟೆಕ್ ಪೇನೀಯರ್‌ಬೈನ ಸ್ಥಾಪಕರು ಹಾಗೂ ಸಿಇಒ ಆನಂದ್ ಕುಮಾರ್ ಬಜಾಜ್.

ಸುದ್ದಿ ಮೂಲ: ದಿ ವೀಕ್

Key words: UPI-payment -system – further -enhanced – RBI.