ಮೈಸೂರಿನಲ್ಲಿ ‘ ಕಳ್ವಿದ್ಯೆ’ ಗೆ ಪ್ರೇರಣೆಯಾದ ‘ ಯೂಟ್ಯೂಬ್‌ ‘ ವಿಡಿಯೋ..!

 

ಮೈಸೂರು, ನ.28, 2019 : (www.justkannada.in news ) ನಗರದಲ್ಲಿ ಕಳವಾಗುತ್ತಿದ್ದ ದುಬಾರಿ ಬೆಲೆಯ ಬೈಕ್‌ಗಳ ಕಳವಿನ ರಹಸ್ಯವನ್ನು ಹೆಬ್ಬಾಳ ಠಾಣೆ ಪೊಲೀಸರು ಕಡೆಗೂ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ವಿಪರ್ಯಾಸವೆಂದರೆ ಪೊಲೀಸರು ಬಂಧಿಸಿರುವ ಕಳ್ಳನಿಗೆ ಈ ಕೃತ್ಯಗಳನ್ನು ಎಸಗಲು ‘ಯೂಟ್ಯೂಬ್‌ ವಿಡಿಯೊಗಳೇ ಪ್ರೇರಣೆಯಾಗಿರುವುದು.

ಹುಣಸೂರು ಪಟ್ಟಣದ ನಿವಾಸಿ ಕೆ.ಪಿ.ಪ್ರಜ್ವಲ್ (23) ಎಂಬಾತ, ಯೂಟ್ಯೂಬ್ ವಿಡಿಯೋ ನೋಡಿಕೊಂಡು ಸ್ಕೂಟರ್ ಗಳನ್ನು ಕದಿಯುವ ವಿಧಾನ ತಿಳಿದು ಕಳವು ಮಾಡುತ್ತಿದ್ದ. ಬಂಧಿತ ಸ್ಕೂಟರ್ ಕಳ್ಳನಿಂದ ಒಟ್ಟು 10 ಲಕ್ಷ ರೂ. ಮೌಲ್ಯದ ದುಬಾರಿ ಬೆಲೆ ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ತಮಿಳುನಾಡಿನ ಕೆಲವು ಯುವಕರು ‘ಯೂಟ್ಯೂಬ್‌’ನಲ್ಲಿ ‘ರಾಯಲ್ ಎನ್‌ಫೀಲ್ಡ್‌’ ಸೇರಿದಂತೆ ದುಬಾರಿ ಬೆಲೆಯ ಬೈಕ್‌ಗಳನ್ನು ಕಳವು ಮಾಡುವ ನಗ್ಗೆ ವಿಡಿಯೊ ‘ಅಪ್‌ಲೋಡ್‌’ ಮಾಡಿದ್ದರು. ಇದನ್ನು ನೋಡಿದ ಆರೋಪಿ ಅದೇ ತಂತ್ರಗಾರಿಕೆ ಬಳಸಿ ಕಳವು ಮಾಡಲು ಶುರುಮಾಡಿದ . ಈತ ಐಟಿಐ ಕೋರ್ಸ್‌ ಮಾಡಿದ್ದರಿಂದ ವಿಡಿಯೊ ನೋಡಿದ ಕೂಡಲೇ ಕೆಲ ಸೆಕೆಂಡ್‌ಗಳಲ್ಲಿ ಬೈಕ್‌ಗಳನ್ನು ಎಗರಿಸುತ್ತಿದ್ದ.

ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿ ಈತ ಬೈಕ್‌ ಮಾರಾಟ ಮಾಡಲು ಯತ್ನಿಸುತ್ತಿದ್ದಾಗ, ಈತನ ಬಳಿ ನಂಬರ್‌ ಪ್ಲೇಟ್‌ ಇಲ್ಲದ ಬೈಕ್‌ನ್ನು ಕಂಡು ಪೊಲೀಸರು ಬಂಧಿಸಿದಾಗ ಈತನ ಬಣ್ಣ ಬಯಲಾಗಿದೆ.

ಬಂಧಿತ ಆರೋಪಿಯಿಂದ 4 ರಾಯಲ್ ಎನ್‌ಫೀಲ್ಡ್‌ ಬೈಕ್‌ಗಳು, ಟಿವಿಎಸ್ ಸ್ಟಾರ್ ಸಿಟಿ, ಹಿರೊ ಹೊಂಡಾ ಸ್ಪೆಂಡ್ಲರ್, ಹೊಂಡಾ ಡಿಯೊದ ತಲಾ ಒಂದೊಂದು ಬೈಕ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಹೆಬ್ಬಾಳು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ 4 ಹಾಗೂ ಹುಣಸೂರು ಠಾಣೆಯ 3 ಬೈಕ್‌ ಕಳವು ಪ್ರಕರಣಗಳು ಪತ್ತೆಯಾಗಿವೆ.

ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಬಿ.ಟಿ.ಕವಿತಾ ಕಾರ್ಯಾಚರಣೆಗೆ ಮಾರ್ಗದರ್ಶನ ನೀಡಿದ್ದರು. ನರಸಿಂಹರಾಜ ವಿಭಾಗದ ಎಸಿಪಿ ಶಿವಶಂಕರ್ ನೇತೃತ್ವ ವಹಿಸಿದ್ದರು. ಇನ್‌ಸ್ಪೆಕ್ಟರ್ ಚಲುವೇಗೌಡ, ಪಿಎಸ್‌ಯ ಕಿರಣ್, ಸಿಬ್ಬಂದಿಯಾದ ಕಾಂತರಾಜು, ರವಿಕುಮಾರ್, ಶ್ರೀಧರ್, ಎಂ.ಆರ್.ಮಲ್ಲಿಕಾರ್ಜುನಪ್ಪ, ಜಗದೀಶ್, ಬಿ.ಎಸ್.ಮಹೇಶ್‌, ಮಲ್ಲೇಶ್, ಪ್ರತಾಪ್, ಹರೀಶ್, ಸಂತೋಷ್, ರವಿಚಂದ್ರನಾವಿ ಕಾರ್ಯಾಚರಣೆ ತಂಡದಲ್ಲಿದ್ದರು.

key words : mysore-police-arrested-youth-scooter-theft-youtube-videos-inspired-him-to-theft