`ಮಲ್ಲೇಶ್ವರಂ ಬಾಲಕಿಯರ ಪದವಿ ಕಾಲೇಜಿನಲ್ಲಿ ವಿದೇಶಿ ಭಾಷೆಗಳ ಕಲಿಕೆ ಕೇಂದ್ರ- ಸಚಿವ ಅಶ್ವತ್ ನಾರಾಯಣ್

ಬೆಂಗಳೂರು,ಡಿಸೆಂಬರ್,3,2021(www.justkannada.in):  ಮಲ್ಲೇಶ್ವರಂನಲ್ಲಿರುವ ಬಾಲಕಿಯರ ಸರಕಾರಿ ಪದವಿಪೂರ್ವ ಕಾಲೇಜು ಕ್ಯಾಂಪಸ್ ಅನ್ನು ಸದ್ಯದಲ್ಲೇ ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ಮೇಲ್ದರ್ಜೆಗೇರಿಸಿ, ಇಲ್ಲಿನ ಪದವಿ ಕಾಲೇಜಿನಲ್ಲಿ ವಿದೇಶಿ ಭಾಷೆಗಳನ್ನು ಕಲಿಯುವ ಸುಸಜ್ಜಿತ ಕೇಂದ್ರವನ್ನು ಆರಂಭಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಮತ್ತು ಸ್ಥಳೀಯ ಶಾಸಕ ಡಾ.ಸಿ.ಎನ್.ಅಶ್ವತ್ ನಾರಾಯಣ್ ಹೇಳಿದ್ದಾರೆ.

ಮಲ್ಲೇಶ್ವರಂ 13ನೇ ಅಡ್ಡರಸ್ತೆಯಲ್ಲಿರುವ ಕಾಲೇಜಿನಲ್ಲಿ ಶುಕ್ರವಾರ ನಡೆದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದ ಸಚಿವ ಅಶ್ವಥ್ ನಾರಾಯಣ್, ವಿದ್ಯಾರ್ಥಿನಿಯರ ಭವಿಷ್ಯವನ್ನು ಪರಿಗಣಿಸಿ ಇಲ್ಲಿ ಬೆಂಗಳೂರು ವಿವಿ ಜತೆ ಒಡಂಬಡಿಕೆ ಮಾಡಿಕೊಳ್ಳುವ ಮೂಲಕ ಪದವಿ ಮತ್ತು ಸ್ನಾತಕೋತ್ತರ ಕೋರ್ಸುಗಳನ್ನು ಕೂಡ ಆರಂಭಿಸಲಾಗಿದೆ ಎಂದರು.

ರಾಜ್ಯದಲ್ಲಿರುವ 430 ಸರಕಾರಿ ಪದವಿ ಕಾಲೇಜುಗಳನ್ನು ಸಮಗ್ರವಾಗಿ ಸುಧಾರಿಸಲು ಸರಕಾರ ಪಣ ತೊಟ್ಟಿದೆ. ಈ ನಿಟ್ಟಿನಲ್ಲಿ ಈಗಾಗಲೇ ಈ ಶಿಕ್ಷಣ ಸಂಸ್ಥೆಗಳಲ್ಲಿ ನೂರಕ್ಕೆ ನೂರರಷ್ಟು ಡಿಜಿಟಲ್ ಕಲಿಕೆ ಮತ್ತು ಸ್ಮಾರ್ಟ್ ತರಗತಿಗಳನ್ನು ಅಸ್ತಿತ್ವಕ್ಕೆ ತರಲಾಗಿದೆ. ಈ ಮೂಲಕ ವಿದ್ಯಾರ್ಥಿಗಳನ್ನು ಬಹುಮುಖ ಪ್ರತಿಭಾವಂತರನ್ನಾಗಿ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.

ಜತೆಗೆ ಸರಕಾರವು ಇನ್ಫೋಸಿಸ್, ಮಹೀಂದ್ರ & ಮಹೀಂದ್ರ, ನಾಸ್ಕಾಂ ಮುಂತಾದ ದೈತ್ಯ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಆಯಾಯ ಕಾಲೇಜಿಗೆ ಬೇಕಾದ ಮೈಕ್ರೋಸೈಟ್ ಗಳನ್ನು ಅಭಿವೃದ್ಧಿಪಡಿಸಲಾಗಿದೆ. ವಿದ್ಯಾರ್ಥಿಗಳು ಸಾಧನೆ ಮಾಡುವ ಅವಸರದಲ್ಲಿ ಅಡ್ಡಹಾದಿ ಹಿಡಿಯಬಾರದು ಎಂದು ಅಶ್ವಥ್ ನಾರಾಯಣ್ ಸಲಹೆ ನೀಡಿದರು.

ವಿದ್ಯಾರ್ಥಿಗಳು ಬರೀ ಡಿಗ್ರಿ, ಸರ್ಟಿಫಿಕೇಟುಗಳಿಗೆ ಮಾತ್ರ ಆದ್ಯತೆ ಕೊಡಬಾರದು. ವ್ಯಕ್ತಿತ್ವ ನಿರ್ಮಾಣ ಮತ್ತು ಚಾರಿತ್ರ್ಯಕ್ಕೆ ಗಮನ ಕೊಡಬೇಕು. ಇದೊಂದೇ ಜೀವನದಲ್ಲಿ ಯಶಸ್ಸಿಗಿರುವ ದಾರಿಯಾಗಿದೆ. ಶಿಕ್ಷಣದಲ್ಲಿ ಕೂಡ ಚಾರಿತ್ರ್ಯವನ್ನು ರೂಪಿಸುವ ಗುರಿ ಇರಬೇಕು. ಈ ವಿಷಯದಲ್ಲಿ ನಾವು ಮಾದರಿಯಾಗಿರಬೇಕು ಎಂದು ಸಚಿವ ಅಶ್ವಥ್ ನಾರಾಯಣ್ ನುಡಿದರು.

ಕಳೆದ ವರ್ಷದ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿಯರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ವಿದ್ಯಾರ್ಥಿ ವೇತನಕ್ಕೆ 10 ಲಕ್ಷ ರೂ. ದಾನ

ಇದೇ ಸಂದರ್ಭದಲ್ಲಿ ರಾಮಸ್ವಾಮಿಯವರು ವಿದ್ಯಾರ್ಥಿನಿಯರ ವಿದ್ಯಾರ್ಥಿ ವೇತನಕ್ಕೆಂದು ಕಾಲೇಜಿಗೆ 10 ಲಕ್ಷ ರೂ.ಗಳನ್ನು ದಾನವಾಗಿ ನೀಡಿದರು. ಇದಕ್ಕಾಗಿ ಅವರನ್ನು ಅಭಿನಂದಿಸಿದ ಸಚಿವ ಅಶ್ವಥ್ ನಾರಾಯಣ್, `ಸರಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಗುಣಮಟ್ಟವಿಲ್ಲವೆಂದು ಯಾರೂ ಹೇಳುವಂತಿಲ್ಲ. ಸಮಾಜದಲ್ಲಿರುವ ಪ್ರತಿಭಾವಂತರೆಲ್ಲ ಸರಕಾರಿ ಕಾಲೇಜುಗಳಲ್ಲಿ ಓದಿದವರೇ ಆಗಿದ್ದಾರೆ. ರಾಮಸ್ವಾಮಿಯವರು ಕೂಡ ಪಕ್ಕದಲ್ಲಿರುವ ಕೋದಂಡರಾಮಪುರ ಸರಕಾರಿ ಹೈಸ್ಕೂಲಿನಲ್ಲೇ ಓದಿದವರು. ಬಾಲಕಿಯರ ಪದವಿಪೂರ್ವ ಕಾಲೇಜು ಕೂಡ ಮೈಸೂರು ಮಹಾರಾಜರ ಕೊಡುಗೆಯೇ ಆಗಿದೆ. ಇದರೊಂದಿಗೂ ಇವರು ನಿಕಟ ಸಂಪರ್ಕ ಹೊಂದಿರುವುದು ಅಭಿಮಾನದ ಸಂಗತಿ’ ಎಂದು ಮೆಚ್ಚುಗೆ ವ್ಯಕ್ತಡಿಸಿದರು.

ಸಮಾರಂಭದಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶ್ರೀರಾಮ್, ಪ್ರಾಂಶುಪಾಲ ರವಿ, ಉಪಪ್ರಾಂಶುಪಾಲ ರವಿಶಂಕರ್, ಸಮಾಜಸೇವಕ ವೀರಣ್ಣಗೌಡ, ಎಚ್.ವಿ.ನಂಜುಂಡಯ್ಯನವರ ಮೊಮ್ಮಗ ಮತ್ತು ತಂತ್ರಜ್ಞಾನ ಪರಿಣತ ರಾಮಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.

Key words: Foreign -Language- Learning- Center –Malleswaram- Girls Graduate College-Minister -Ashwath Narayan.