ಮಂಡ್ಯ ಜಿಲ್ಲೆಯಲ್ಲಿ ಹೆಚ್ಚಿದ ಚಿರತೆಗಳ ಹಾವಳಿ: ಶೀಘ್ರ ಕಡಿವಾಣ ಹಾಕಲು ಸಿಎಂಗೆ ಮನವಿ ಮಾಡಿದ ಎಂಎಲ್ ಸಿ ದಿನೇಶ್‌ ಗೂಳಿಗೌಡ

ಮಂಡ್ಯ,ನವೆಂಬರ್,8,2022(www.justkannada.in): ಮಂಡ್ಯ ಜಿಲ್ಲೆಯಲ್ಲಿ ಚಿರತೆ ಹಾವಳಿ ಹೆಚ್ಚಿದ್ದು, ಇದನ್ನು ತುರ್ತಾಗಿ ತಡೆಗಟ್ಟಬೇಕಿದೆ. ಅಲ್ಲದೆ, ಇದು ಗ್ರಾಮೀಣ ಭಾಗ ಸೇರಿದಂತೆ ಜನರ ಜೀವದ ಪ್ರಶ್ನೆಯಾಗಿದೆ. ಹೀಗಾಗಿ ವಿಶ್ವವಿಖ್ಯಾತ ಕೆಆರ್‌ಎಸ್‌ ಸೇರಿದಂತೆ ಎಲ್ಲ ಕಡೆ ಆಯಕಟ್ಟಿನ ಪ್ರದೇಶಗಳಲ್ಲಿ ಹೆಚ್ಚಿನ ಬೋನುಗಳನ್ನು ಇಟ್ಟು ಸೆರೆಹಿಡಿಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಜತೆಗೆ ಸಾರ್ವಜನಿಕರಿಗೆ ಅಗತ್ಯ ಜಾಗೃತಿ ಮತ್ತು ಅರಿವು ಮೂಡಿಸಬೇಕು ಎಂದು ಸ್ಥಳೀಯ ಸಂಸ್ಥೆಗಳ ಮಂಡ್ಯ ಕ್ಷೇತ್ರದ ಶಾಸಕ ದಿನೇಶ್‌ ಗೂಳಿಗೌಡ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದು ಕೋರಿದ್ದಾರೆ.

ಅರಣ್ಯ ಇಲಾಖೆಯು ಪ್ರಸ್ತುತ ಮುಖ್ಯಮಂತ್ರಿಯವರ ಬಳಿಯೇ ಇರುವುದರಿಂದ ತುರ್ತಾಗಿ ಕ್ರಮ ಕೈಗೊಂಡು ಸಾರ್ವಜನಿಕರ ಜೀವ ರಕ್ಷಣೆಗೆ ಮುಂದಾಗಬೇಕಿದೆ. ಜತೆಗೆ ಚಿರತೆಗಳು ಕಾಣಿಸಿಕೊಂಡಾಗ ಯಾವ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರಿಗೆ ಸೂಕ್ತ ಅರಿವು ಮೂಡಿಸುವ ಕೆಲಸವೂ ಆಗಬೇಕು ಎಂದು ಪತ್ರದ ಮೂಲಕ ಶಾಸಕ ದಿನೇಶ್‌ ಗೂಳಿಗೌಡ ಕೋರಿದ್ದಾರೆ.

ಪತ್ರದ ಸಾರಾಂಶ ಹೀಗಿದೆ:

ಮಂಡ್ಯ ಜಿಲ್ಲೆಯ ಎಲ್ಲ ತಾಲೂಕುಗಳ ವ್ಯಾಪ್ತಿಯಲ್ಲಿ ಕಳೆದ ಕೆಲವು ತಿಂಗಳುಗಳಿಂದ ಚಿರತೆಗಳು ಕಾಣಿಸಿಕೊಳ್ಳುತ್ತಿದ್ದು,  ಕೆಲವು ಗ್ರಾಮೀಣ ಪ್ರದೇಶಗಳ ಗ್ರಾಮಗಳಿಗೂ ಪ್ರವೇಶಿಸಿ ಜನ ಜಾನುವಾರುಗಳಿಗೆ ಉಪಟಳ ನೀಡುತ್ತಿವೆ‌. ನಿಯಮಿತವಾಗಿ ಚಿರತೆಗಳು ಸಾರ್ವಜನಿಕ ಪ್ರದೇಶದಲ್ಲಿ ಕಾಣಿಸಿಕೊಳ್ಳುತ್ತಿರುವುದರಿಂದ ಸಾರ್ವಜನಿಕರು, ರೈತರು ತಮ್ಮ ಜಮೀನುಗಳಿಗೆ ಹೋಗಲು ಭಯಭೀತರಾಗಿದ್ದು, ಸಾಕು ಪ್ರಾಣಿಗಳ ರಕ್ಷಣೆ ಮಾಡಲು ಸಂಕಷ್ಟ ಪಡುತ್ತಿದ್ದಾರೆ.

ಮಂಡ್ಯ ಜಿಲ್ಲೆಯ ವಿಶ್ವ ವಿಖ್ಯಾತ ಪ್ರವಾಸಿ ತಾಣ ಕೆ.ಆರ್.ಎಸ್‌ನ ಬೃಂದಾವನದ ಸಾರ್ವಜನಿಕ ಪ್ರದೇಶದಲ್ಲಿ ಹಗಲು ವೇಳೆಯಲ್ಲಿಯೇ ಚಿರತೆ ಕಾಣಿಸಿಕೊಂಡು ಪ್ರವಾಸಿಗರು ಮತ್ತು ಸ್ಥಳೀಯ ಜನರಲ್ಲಿ ಆತಂಕ ಮನೆಮಾಡಿದೆ. ಚಿರತೆ ಸಂಚರಿಸಿದ ಚಹರೆ ಬೃಂದಾವನದಲ್ಲಿನ ಸಿಸಿ ಟಿವಿಯಲ್ಲಿ ಸೇರೆಯಾಗಿದ್ದು, ಈ ಬಗ್ಗೆ ದಿನಪತ್ರಿಕೆಗಳು ಮತ್ತು ವಿದ್ಯುನ್ಮಾನ ವಾಹಿನಿಗಳಲ್ಲಿ ಪ್ರಚಾರವಾಗುತ್ತಿದೆ. ಇದರಿಂದ ಬೃಂದಾವನದಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರು, ಅಣೆಕಟ್ಟೆಯ ಭದ್ರತೆಗೆ ನಿಯೋಜಿಸಿರುವ ರಾಜ್ಯ ಕೈಗಾರಿಕಾ ಭದ್ರತಾ ಪಡೆಯ ಸಿಬ್ಬಂದಿಯು ಸಹ ಭಯಭೀತರಾಗಿದ್ದಾರೆ. ಚಿರತೆ ಕಾಣಿಸಿಕೊಂಡಾಗ ಮಾತ್ರ ಕೆ.ಆರ್.ಎಸ್. ಪ್ರವೇಶಿಸದಂತೆ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗುತ್ತದೆ. ನಂತರ ಕೆಲವು ದಿನಗಳ ಕಾಲ ಶೋಧ ಕಾರ್ಯ ನಡೆಸಿ ಚಿರತೆ ಪತ್ತೆಯಾಗಿಲ್ಲವೆಂದು ಪುನಃ ಪ್ರವಾಸಿಗರಿಗೆ ಕೆ.ಆರ್.ಎಸ್ ವೀಕ್ಷಿಸಲು ಅನುಮತಿ ನೀಡಲಾಗುತ್ತದೆ.

ಗ್ರಾಮೀಣ ಪ್ರದೇಶಗಳಲ್ಲಿ ಆಗಿಂದಾಗ್ಗೆ ಚಿರತೆ ಕಾಣಿಸಿಕೊಳ್ಳುವ ಬಗ್ಗೆ ಸಾರ್ವಜನಿಕರಲ್ಲಿ ಆತಂಕವುಂಟಾಗಿದ್ದು, ಅರಣ್ಯ ಇಲಾಖೆಯಿಂದ ಸಾರ್ವಜನಿಕರಲ್ಲಿ ಜಾಗೃತಿ ಮತ್ತು ಅರಿವು ಮೂಡಿಸುವ ಬಗ್ಗೆ ಕ್ರಮಕೈಗೊಳ್ಳಬೇಕಾಗಿರುತ್ತದೆ. ಆದರೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಸೇರಿದಾಗ ಆಕಸ್ಮಿಕವಾಗಿ ಚಿರತೆ ದಾಳಿ ಮಾಡಿದರೆ ಸಾರ್ವಜನಿಕರ ಜೀವ ಹಾನಿಯಾಗುತ್ತದೆ. ಈ ರೀತಿಯಾದಲ್ಲಿ ಇದಕ್ಕೆ ಯಾರು ಹೊಣೆ ಎಂಬ ಪ್ರಶ್ನೆಗೆ ಇದುವರೆವಿಗೂ ಉತ್ತರವಿಲ್ಲ. ಮಂಡ್ಯ ಜಿಲ್ಲೆಯಾದ್ಯಂತ ಗ್ರಾಮೀಣ ಪ್ರದೇಶಗಳಲ್ಲಿ ಆಗಿಂದಾಗ್ಗೆ ಕಾಣಿಸಿಕೊಳ್ಳುತ್ತಿರುವ ಚಿರತೆಯನ್ನು ಹಿಡಿಯಲು ಆಯಾ ಕಟ್ಟಿನ ಪ್ರದೇಶಗಳಲ್ಲಿ ಹೆಚ್ಚಿನ ಬೋನುಗಳನ್ನು ಇಡುವ ಮೂಲಕ ಚಿರತೆಯನ್ನು ಸೆರೆ ಹಿಡಿಯಲು ತುರ್ತು ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದವರಿಗೆ ಆದೇಶಿಸಬೇಕೆಂದು ಈ ಮೂಲಕ ತಮ್ಮಲ್ಲಿ ಕೋರುತ್ತೇನೆ ಎಂದು ಶಾಸಕ ದಿನೇಶ್‌ ಗೂಳಿಗೌಡ ಅವರು ಪತ್ರದ ಮೂಲಕ ಮುಖ್ಯಮಂತ್ರಿಯವರನ್ನು ಕೋರಿದ್ದಾರೆ.

Key words: Leopard –threat- increased – Mandya district.