ಪತ್ರಕರ್ತರು ರಚನಾತ್ಮಕ ಟೀಕಾಕಾರರಾಗಿ ಕಾರ್ಯ ನಿರ್ವಹಿಸುವಂತೆ ವಾರ್ತಾ ಇಲಾಖೆಯ ಆಯುಕ್ತ ಜಗದೀಶ್ ಕರೆ.

ಬೆಂಗಳೂರು,ಜನವರಿ,16,2021(www.justkannada.in): ಪತ್ರಕರ್ತರು ರಚನಾತ್ಮಕ ಟೀಕಾಕಾರರಾಗಿ, ಬದ್ದತೆಯಿಂದ ಕೆಲಸ‌ಮಾಡುವ ಮೂಲಕ ವೃತ್ತಿ ಘನತೆಯನ್ನು ಕಾಪಾಡುವಂತೆ ವಾರ್ತಾ ಇಲಾಖೆಯ ಆಯುಕ್ತರಾದ ಜಗದೀಶ್ ಕರೆ ನೀಡಿದ್ದಾರೆ.

ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದಲ್ಲಿ ರಾಷ್ಟ್ರೀಯ ಮಾಧ್ಯಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಾರ್ತಾ ಇಲಾಖೆಯ ಆಯುಕ್ತ ಜಗದೀಶ್, ತಮ್ಮ ಯಾವುದೋ ಉದ್ದೇಶಕ್ಕಾಗಿ ಸುದ್ದಿ ಮಾಡುವುದು ತರವಲ್ಲ. ಸುದ್ದಿ ಮೌಲ್ಯಯುತವಾದ, ಜನಪರವಾದ ಕಾಳಜಿ ಹೊಂದಿರಬೇಕು ಎಂದು ಕಿವಿಮಾತು ಹೇಳಿದರು.

ಧಾವಂತದಲ್ಲಿ ನಾವೆ ಮುಂದು, ನಾವೆ ಮೊದಲು ಎನ್ನುವ ಬದಲು ಸರಿಯಾದ, ಸಮಗ್ರವಾದ ಸುದ್ದಿಗಳನ್ನು ಮಾಡಿ, ಎಲ್ಲ ಲೋಪ ದೋಷಗಳ ಮೇಲೆ ಬೆಳಕು ಚೆಲ್ಲಬೇಕು ಎಂದು ಜಗದೀಶ್  ಸಲಹೆ ನೀಡಿದರು.

ಮುಖ್ಯಮಂತ್ರಿ ಮಾಧ್ಯಮ ಸಂಯೋಜಕ ಗುರುಲಿಂಗಸ್ವಾಮಿ ಅವರು ಸನ್ಮಾನ ಸ್ವೀಕಾರ ಮಾಡಿ ಮಾತನಾಡಿ, ತಾವು ಪತ್ರಕರ್ತನಾಗಿ ಕೆಲಸ‌ ಮಾಡಿಕೊಂಡು ಈ ಹುದ್ದೆ ತನಕವೂ ಬಂದಿದ್ದೇನೆ. ಸರ್ಕಾರ ಮತ್ತು ಪತ್ರಕರ್ತರ ಕೊಂಡಿಯಾಗಿ ಕೆಲಸ ಮಾಡಲು ನಿಮ್ಮ ಸಹಕಾರ ಮುಖ್ಯ ಎಂದರು.

ರಾಜ್ಯ ಪತ್ರಕರ್ತರ ಸಮ್ಮೇಳನದ ಲಾಂಛನವನ್ನು ಮಾಧ್ಯಮ ಅಕಾಡೆಮಿಯ ಅಧ್ಯಕ್ಷರಾದ ಸದಾಶಿವ ಶೆಣೈ ಅವರು ಅನಾವರಣ ಮಾಡಿ ಮಾತನಾಡಿ, ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಸಂದರ್ಭದಲ್ಲಿ ನಾವು ನಮ್ಮ ವೃತ್ತಿ ಬಗ್ಗೆ ಅವಲೋಕನ ಮಾಡಿಕೊಳ್ಳಬೇಕು ಎಂದರು.

ಪತ್ರಕರ್ತ ಟಿ.ಗುರುರಾಜ್ ಪ್ರಾಸ್ತಾವಿಕವಾಗಿ ಮಾತನಾಡಿ, ನಿಷ್ಠುರವಾಗಿ ಪತ್ರಕರ್ತ ನಡೆದುಕೊಳ್ಳದೆ ಹೋದರೆ ಮುಂದಿನ ದಿನಮಾನಗಳಲ್ಲಿ ಇನ್ನೂ ಕ್ಲಿಷ್ಟಕರ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಅಧ್ಯಕ್ಷತೆ ವಹಿಸಿದ್ದ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಮಾತನಾಡಿ, ಪ್ರೆಸ್ ಕೌನ್ಸಿಲ್ ಸ್ಥಾಪನೆಯಾದ ದಿನವನ್ನು ರಾಷ್ಟ್ರೀಯ ಪತ್ರಿಕಾ ದಿನಾಚರಣೆಯಾಗಿ ಆಚರಣೆ ಮಾಡಲಾಗುತ್ತಿದೆ ಎಂದರು. 1932 ರಿಂದ ಸಂಘ ನಡೆದು ಬಂದ ಹಾದಿಯನ್ನು ಮೆಲುಕು ಹಾಕಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ್, ಕಾರ್ಯದರ್ಶಿ ಬಂಗ್ಲೆ ಮಲ್ಲಿಕಾರ್ಜುನ, ಖಜಾಂಚಿ ಡಾ.ಉಮೇಶ್ವರ, ಬೆಂಗಳೂರು ನಗರ ಘಟಕ ಅಧ್ಯಕ್ಷ ಸೋಮಶೇಖರ್ ಗಾಂಧಿ, ಕಾರ್ಯದರ್ಶಿ ದೇವರಾಜ್‌ ಮತ್ತಿತರರು ಹಾಜರಿದ್ದರು.

Key words: News Department- Commissioner -Jagdish -calls – journalists – constructive critics