ನನ್ನನ್ನು ಸೇರಿಸಿ 83 ತಾಲೂಕುಗಳ ಜನರಿಗೆ ‘ಮೇಕೆದಾಟು’ ಮಕ್ಮಲ್ ಟೋಪಿ ಹಾಕಲು ಹೊರಟಿದ್ದಾರೆ- ಡಿಕೆಶಿ ವಿರುದ್ಧ ಹೆಚ್.ಡಿಕೆ ವಾಗ್ದಾಳಿ.

ಬೆಂಗಳೂರು,ಡಿಸೆಂಬರ್,29,2021(www.justkannada.in): ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಜನವರಿ 9ರಿಂದ ಕಾಂಗ್ರೆಸ್ ಪಾದಯಾತ್ರೆ  ನಡೆಸುತ್ತಿದ್ದು ಈ ಪಾದಯಾತ್ರೆ ಕುರಿತು ಇದೀಗ ಮತ್ತೆ ಮಾಜಿ ಸಿಎಂ ಹೆಚ್.ಟಿ ಕುಮಾರಸ್ವಾಮಿ ಟೀಕಿಸಿದ್ದಾರೆ.

ಈ ಕುರಿತು ಸರಣಿ ಟ್ವಿಟ್ ಮಾಡಿರುವ ಹೆಚ್.ಡಿ ಕುಮಾರಸ್ವಾಮಿ, ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ನಾವು ಕೈಗೊಂಡಿರುವ ಹೋರಾಟ ಪಕ್ಷಾತೀತ. ಇದನ್ನು ಟೀಕೆ ಮಾಡುತ್ತಿರುವ ಹೆಚ್.ಡಿ.ಕುಮಾರಸ್ವಾಮಿ ಅವರೂ ಪಾದಯಾತ್ರೆಯಲ್ಲಿ ಭಾಗವಹಿಸಬಹುದು ಎಂದಿದ್ದಾರೆ ಕೆಪಿಸಿಸಿ ಅಧ್ಯಕ್ಷರು. ಅವರು ನನ್ನನ್ನೂ ಸೇರಿಸಿ 83 ತಾಲೂಕುಗಳ ಜನರಿಗೆ ಮೇಕೆದಾಟು ಮಕ್ಮಲ್ ಟೋಪಿ ಹಾಕಲು ಹೊರಟಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ನೀರಾವರಿ ವಿಷಯದಲ್ಲಿ ರಾಜ್ಯಕ್ಕೆ ಶ್ರೀ ಹೆಚ್.ಡಿ.ದೇವೇಗೌಡರು ಕೊಟ್ಟ ಕಾಣಿಕೆ ಅಗಣಿತ. ತಮ್ಮ ಜೀವಿತಾವಧಿಯನ್ನೇ ಈ ನೆಲಕ್ಕೆ ನೀರರಿಸಲು ಮುಡಿಪಿಟ್ಟ ಭಗೀರಥರು ಅವರು. ಮೇಕೆದಾಟು ಯೋಜನೆಯ ಮೂಲ ರೂವಾರಿಯೇ ಅವರು. ಅವರನ್ನೇ ಮರೆತ ಕಾಂಗ್ರೆಸ್ ನಾಯಕರು ಸತ್ಯಕ್ಕೆ ಸಮಾಧಿ ಕಟ್ಟುತ್ತಿದ್ದಾರೆ.

ಅವರಿಗೆ ಸತ್ಯ ಹೇಳಲು ನಾಲಿಗೆ ಹೊರಳುತ್ತದೆ. ಆದರೆ ಸತ್ಯಕ್ಕೆ ನಾಲಿಗೆ ಪ್ರಮೇಯವೇ ಇಲ್ಲ. ಸತ್ಯ ಸತ್ಯವೇ. ದೇವೇಗೌಡರು ಅಂತಹ ಸತ್ಯದ ಸಾಕ್ಷಿ. ನೀರಾವರಿಗಾಗಿ ಅವರು ಅವಿರತವಾಗಿ ಶ್ರಮಿಸಿ ನಡೆದಾಡಿದ ನೆಲದ ಮಣ್ಣಿನಮಕ್ಕಳ ನಂಬಿಕೆಯನ್ನೇ ಬುಲ್ಡೋಜ್ ಮಾಡುವಂಥ ರಾಜಕಾರಣ ʼಕೈʼ ಪಕ್ಷ ಮಾಡುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ಹೆಚ್,ಡಿಕೆ ಗುಡುಗಿದ್ದಾರೆ.

ಬೆಂಗಳೂರಿಗೆ ಕಾವೇರಿ ನೀರು ಕೊಟ್ಟವರು ದೇವೇಗೌಡರು. ಜೀವಜಲ ತಂದು ಬವಣೆ ನೀಗಿಸಿದವರು ಅವರೇ. ಈ ಭಗೀರಥನನ್ನೇ ಮರೆತ ಕಾಂಗ್ರೆಸ್ ಕೃತಘ್ನ ರಾಜಕಾರಣಕ್ಕೆ ಏನು ಹೇಳುವುದು? ಕಾಂಗ್ರೆಸ್​ನ 5 ವರ್ಷದ ಸರಕಾರವೇ ಇತ್ತು. ಸಿದ್ದಹಸ್ತರೇ ಸಿಎಂ ಆಗಿದ್ದರು. ಆಗ ಕೇಂದ್ರದ ಮುಂದೆ ಪ್ರತಾಪ ತೋರಬಹುದಿತ್ತು. ಬರೀ ಮಾತಿನ ಉತ್ತರ ಪೌರುಷ. ಆಗ ಗಾಂಧೀಜಿ ಪ್ರತಿಮೆ ಮುಂದೆ ಉಪವಾಸ ಕೂತ ಮಣ್ಣಿನಮಗನ ಖದರಿಗೆ ಕೇಂದ್ರವೇ ನಡುಗಿತ್ತು. ದಿಲ್ಲಿಯಿಂದ ಮಂತ್ರಿಗಳು ಓಡಿಬಂದರು. ಅದೆಲ್ಲವನ್ನೂ ಕಾಂಗ್ರೆಸ್ ಮರೆತಿದೆಯಾ? ಎಂದು ಟ್ವೀಟ್​ ಮೂಲಕ ಹೆಚ್​ಡಿಕೆ ಪ್ರಶ್ನಿಸಿದ್ದಾರೆ.

ಇಲ್ಲಿ 30 ವರ್ಷ ಆಳಿದವರು ಕಾವೇರಿ-ಕೃಷ್ಣಾ ವಿಚಾರದಲ್ಲಿ ಕೊಟ್ಟ ಕೊಡುಗೆ ಏನು? ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ ಎಂದು ಸ್ಲೋಗನ್ ಹೇಳಿಕೊಂಡು ಹೋಗಿ ಉತ್ತರ ಕರ್ನಾಟಕಕ್ಕೆ ಟೋಪಿ ಹಾಕಿದ್ದಾಗಿದೆ. ಮೇಕೆದಾಟು ವಿಚಾರದಲ್ಲಿಯೂ ಅದೇ ಆಗಲಿದೆ ಎಂದು ಹೆಚ್​.ಡಿ. ಕುಮಾರಸ್ವಾಮಿ  ಲೇವಡಿ ಮಾಡಿದ್ದಾರೆ.

ದೇವೇಗೌಡರು ಕೃಷ್ಣೆ, ಕಾವೇರಿ ಕೊಳ್ಳದಲ್ಲಿ ಮಾಡಿದ ಸಾಧನೆಗಳನ್ನು ತಿಳಿಯಲು ಇತಿಹಾಸದ ಪುಟಗಳನ್ನು ತೆರೆದು ನೋಡಬೇಕು. ಈಗ ಬೇಕಿರುವುದು ತಾಂತ್ರಿಕವಾಗಿ ಮೇಕೆದಾಟು ಯೋಜನೆಯನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಬೇಕು. ಕೇಂದ್ರದ ಮೇಲೆ ಒತ್ತಡ ತಂದು ಯೋಜನೆಗೆ ಒಪ್ಪಿಗೆ ಪಡೆಯಲು ಹೋರಾಟ ನಡೆಸಬೇಕು. ಅದು ಬಿಟ್ಟು ಹೊಸ ಸ್ಲೋಗನ್ ಅಗತ್ಯ ಇಲ್ಲ ಎಂದು ಹೆಚ್​ಡಿಕೆ ಹೇಳಿದ್ದಾರೆ.

ಪಾಪ ತೊಳೆಯುವ ತಾಯಿ ಲೋಕಪಾವನಿ ಈಗ ವೋಟಿನ ದಾಳವಾಗುತ್ತಿರುವುದು ನಾಡಿನ ದುರ್ದೈವ. ನೀರಿನ ಮುಂದೆ ಕಪಟ ನಾಟಕ ಮಾಡುವ ಸಿದ್ದಹಸ್ತ, ಡಿಸೈನ್ ಶೂರರಿಗೆ ಮುಂದೆ ಕಾದಿದೆ ಶಾಸ್ತಿ. ಭೂತಾಯಿ ಒಡಲಿನ ಮಣ್ಣು ಬಗೆದ, ಕಲ್ಲುಬಂಡೆಗಳನ್ನೇ ನುಂಗಿದ ರಕ್ಕಸ ರಾಜಕಾರಣದ ಕಾಕದೃಷ್ಟಿ ಈಗ ತಾಯಿ ಕಾವೇರಿ ಮೇಲೂ ಬಿದ್ದಿದೆ ಎಂದು ಹೆಚ್​.ಡಿ. ಕುಮಾರಸ್ವಾಮಿ ಕಿಡಿಕಾರಿದ್ದಾರೆ.

Key words: mekedatu-plan-mukmal topi- former CM- HD kumaraswamy-kpcc president-DK shivakumar

ENGLISH SUMMARY…

Mekedatu project: Former CM H.D. Kumaraswamy on Congress padayatra
Bengaluru, December 29, 2021 (www.justkannada.in): The Congress party has announced a padayatra on January 9, 2022, demanding the State Government to implement the Mekedatu project. In the meantime, former Chief Minister H.D. Kumaraswamy has criticized it.
In his tweet, the former CM has stated, “The KPCC President has mentioned that anybody irrespective of political parties can participate in the padayatra, including me. It means including me, he is all set to cheat the people of 83 taluks.”
Keywords: Former Chief Minister H.D. Kumaraswamy/ KPCC President/ D.K. Shivakumar/ padayatra/ Mekedatu project