ದ್ವಿಚಕ್ರ ವಾಹನಗಳ ಪೆಟ್ರೋಲ್ ಟ್ಯಾಂಕ್ ಒಳಗೆ ಮಳೆನೀರು: ಪರದಾಡಿದ ವಾಹನ ಚಾಲಕರು

ನವೆಂಬರ್ 22, 2021 (www.justkannada.in): ಕಳೆದ ಸುಮಾರು ೧೫-೨೦ ದಿನಗಳಿಂದ ಸುರಿಯುತ್ತಿರುವ ನಿರಂತರವಾದ ಮಳೆಯಿಂದಾಗಿ ಜನರು ಸಾಕಷ್ಟು ರೀತಿಯ ತೊಂದರೆಗಳನ್ನು ಅನುಭವಿಸುವಂತಾಗಿದೆ. ಈಗೊಂದು ವಿಚಿತ್ರ ಸಮಸ್ಯೆಯೂ ಎದುರಾಗಿದೆ. ಅದೇನೆಂದರೆ ದ್ವಿಚಕ್ರ ವಾಹನಗಳ ಚಾಲಕರು ಎದುರಿಸುತ್ತಿರುವಂತಹ ಸಮಸ್ಯೆ. ಮಳೆ ನೀರು ದ್ವಿಚಕ್ರವಾಹನಗಳ ಪೆಟ್ರೋಲ್ ಟ್ಯಾಂಕ್‌ನೊಳಗೆ ನುಸುಳಿ ವಾಹನ ಚಾಲನೆ ಆಗದಿರುವಂತೆ ಸಮಸ್ಯೆ ಒಡ್ಡುತ್ತಿದೆ. ಕೆಲವು ವಾಹನಗಳ ಎಂಜಿನ್‌ಗಳು ಹಾಗೂ ಸೈಲೆನ್ಸರ್‌ ಗಳ ಒಳಗೂ ಸಹ ಮಳೆ ನೀರು ನುಸುಳಿ ಸಮಸ್ಯೆ ಸೃಷ್ಟಿಸುತ್ತಿದ್ದು, ಇದರಿಂದಾಗಿ ದ್ವಿಚಕ್ರವಾಹನಗಳನ್ನು ಗ್ಯಾರೇಜ್‌ಗಳು, ಮೆಕ್ಯಾನಿಕ್‌ ಗಳ ಬಳಿಗೆ ತೆಗೆದುಕೊಂಡು ಹೋಗುವವರ ಸಂಖ್ಯೆ ಹೆಚ್ಚಾಗಿದೆ.

ಬೆಂಗಳೂರು ನಗರದ ಅನೇಕ ಮೆಕ್ಯಾನಿಕ್‌ ಗಳು ಹಾಗೂ ದ್ವಿಚಕ್ರವಾಹನಗಳನ್ನು ದುರಸ್ತಿಪಡಿಸುವ ಅಂಗಡಿಗಳವರು, ತಮ್ಮ ಬೈಕ್‌ ಗಳು ಹಾಗೂ ಸ್ಕೂಟರ್‌ಗಳನ್ನು ಪೆಟ್ರೋಲ್ ಟ್ಯಾಂಕ್‌ ಗಳ ಒಳಗೆ ಮಳೆನೀರು ನುಸುಳಿರುವ ಕಾರಣದಿಂದಾಗಿ ರಿಪೇರಿಗೆ ತರುತ್ತಿರುವವರ ಸಂಖ್ಯೆ ಹೆಚ್ಚಾಗಿರುವುದಾಗಿ ತಿಳಿಸಿದ್ದಾರೆ.

ನಗರದ ಅನೇಕ ಪ್ರದೇಶಗಳಲ್ಲಿ ವಾಹನಗಳನ್ನು ನಿಲ್ಲಿಸುವ ಸ್ಥಳಾವಕಾಶದ ತೀವ್ರ ಕೊರತೆ ಇರುವುದು ಎಲ್ಲರಿಗೂ ತಿಳಿದ ವಿಷಯವೇ. ಹಾಗಾಗಿ ಬಹುತೇಕರು ತಮ್ಮ ದ್ವಿಚಕ್ರವಾಹನಗಳನ್ನು ಮನೆ, ಕಚೇರಿ, ಮಳಿಗೆಗಳ ಹೊರಗೆ ನಿಲ್ಲಿಸುವುದು ವಾಡಿಕೆ ಹಾಗೂ ಸಾಮಾನ್ಯ. ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ದ್ವಿಚಕ್ರವಾಹನಗಳನ್ನು ಮೊಣಕಾಲಿನವರೆಗೂ ಮಳೆ ನೀರಿನಿಂದ ತುಂಬಿರುವ ರಸ್ತೆಗಳಲ್ಲೇ ಚಲಾಯಿಸಿಕೊಂಡು ಹೋಗುವುದೂ ಸಹ ಅನಿವಾರ್ಯವಾಗಿದೆ. ಹಾಗಾಗಿ ವಾಹನಗಳನ್ನು ರಿಪೇರಿಗೆಂದು ಮೆಕ್ಯಾನಿಕ್‌ಗಳ ಬಳಿಗೆ ತೆಗೆದುಕೊಂಡು ಹೋಗಬೇಕಾಗುತ್ತಿದೆ.

ಸತೀಶ್ ಎಸ್. ಎಂಬ ಹೆಸರಿನ ಮೆಕ್ಯಾನಿಕ್, ಮಳೆನೀರು ದ್ವಿಚಕ್ರ ವಾಹನದೊಳಗೆ ಹೇಗೆ ನುಸುಳುತ್ತದೆ ಎಂದು ವಿವರಿಸಿದ್ದಾರೆ. “ಮಳೆನೀರು ದ್ವಿಚಕ್ರ ವಾಹನದ ಆ್ಯಕ್ಸಿಲರೇಟರ್‌ನಿಂದ ಜಾರಿ, ಪೆಟ್ರೋಲ್ ಟ್ಯಾಂಕ್ ಮತ್ತು ಅಲ್ಲಿಂದ ಕಾರ್ಬೊರೇಟರ್‌ಗೆ ನುಸುಳುತ್ತದಂತೆ. ಹಾಗಾಗಿ ಇಂಧನದೊಂದಿಗೆ ಮಳೆನೀರು ಮಿಶ್ರವಾಗುವ ಸಾಧ್ಯತೆ ಇದೆ. ಇದರಿಂದ ವಾಹನಗಳು ಸ್ಟಾರ್ಟ್ ಆಗುವುದಿಲ್ಲ,” ಎನ್ನುತ್ತಾರೆ. ನವೀನ್ ಎಂಬ ಹೆಸರಿನ ಮತ್ತೋರ್ವ ಮೆಕ್ಯಾನಿಕ್ ವಿವರಿಸುವಂತೆ ಸಮಸ್ಯೆ ಅಲ್ಲಿಗೇ ನಿಲ್ಲುವುದಿಲ್ಲವಂತೆ. “ಮಳೆ ನೀರು ನಿಮ್ಮ ಬೈಕ್‌ ನ ಯಾವುದಾದರೂ ಒಂದು ಭಾಗಕ್ಕೆ ನುಸುಳಿದರೆ ವಾಹನದ ಬಿಡಿಭಾಗಗಳು ಹಾಳಾಗಿ, ವಾಹನದ ಚಾಲನಾ ಸ್ಥಿತಿಯೇ ಹಾಳಾಗುತ್ತದೆ,” ಎನ್ನುತ್ತಾರೆ.

ಈ ಹಿನ್ನೆಲೆಯಲ್ಲಿ ವಾಹನಗಳ ಮಾಲೀಕರು ಸಾಧ್ಯವಾದಷ್ಟು ತಮ್ಮ ವಾಹನಗಳನ್ನು ಹೊರಗೆ ನಿಲ್ಲಿಸುವಾಗ ಒಂದು ಹೊದಿಕೆ ಹೊದಿಸುವುದು ಉತ್ತಮ ಎನ್ನುತ್ತಾರೆ. ಅದೇ ರೀತಿ ಸಾಧ್ಯವಾದಷ್ಟೂ ರಸ್ತೆಗಳಲ್ಲಿ ನೀರು ಹೆಚ್ಚು ತುಂಬಿರುವಾಗ ದ್ವಿಚಕ್ರವಾಹನಗಳನ್ನು ಚಲಾಯಿಸಿಕೊಂಡು ಹೋಗುವುದನ್ನೂ ತಪ್ಪಿಸಬೇಕಂತೆ. “ಹೊರಗೆ ಮಳೆಯಾಗುತ್ತಿದ್ದಾಗ ಹೊರಗೆ ಹೋಗದಿರುವುದು ಉತ್ತಮ, ಹಾಗೂ ನಿಮ್ಮ ವಾಹನವನ್ನು ಸಾಧ್ಯವಾದಷ್ಟೂ ಒಳಗೆ ನಿಲ್ಲಿಸುವುದು ಉತ್ತಮ. ಜೊತೆಗೆ ದ್ವಿಚಕ್ರವಾಹನವಾಗಿದ್ದರೆ ಸೈಡ್ ಸ್ಟ್ಯಾಂಡ್ ಹಾಕಿ ನಿಲ್ಲಸಬೇಡಿ, ಇದರಿಂದ ಹೆಚ್ಚಿನ ಪ್ರಮಾಣದ ಮಳೆನೀರು ವಾಹನದ ಒಳಗೆ ನುಸುಳುವ ಸಾಧ್ಯತೆ ಇರುತ್ತದೆ,” ಎನ್ನುತ್ತಾರೆ ಸತೀಶ್.

ಸುದ್ದಿ ಮೂಲ: ಬೆಂಗಳೂರ್ ಮಿರರ್

Key words: Rain-water -inside – petrol tank – two-wheelers