ದೇಶದಲ್ಲಿ ಸಿದ್ಧಾಂತ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳ ಆಧಾರದ ಮೇಲೆ ರಾಜಕಾರಣ ಮಾಡುತ್ತಿರುವುದು ಕಾಂಗ್ರೆಸ್ ಮಾತ್ರ- ಮಾಜಿ ಸಿಎಂ ಸಿದ್ಧರಾಮಯ್ಯ.

ಬೆಂಗಳೂರು,ಜನವರಿ,21,2022(www.justkannada.in): ದೇಶದಲ್ಲಿ ಸಿದ್ಧಾಂತ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳ ಆಧಾರದ ಮೇಲೆ ರಾಜಕಾರಣ ಮಾಡುತ್ತಿರುವುದು ಕಾಂಗ್ರೆಸ್ ಮಾತ್ರ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ನುಡಿದರು.

ವಿಧಾನ ಪರಿಷತ್ ನ ಮಾಜಿ ಸದಸ್ಯ, ಜೆಡಿಎಸ್ ಮುಖಂಡ ಕಾಂತರಾಜು ಅವರು ಕಾಂಗ್ರೆಸ್ ಸೇರ್ಪಡೆಗೊಂಡ ನಂತರ ಆಯೋಜಿಸಿದ್ದ ಪತ್ರಿಕಾಗೋಷ್ಠಿ ಕಾರ್ಯಕ್ರಮದಲ್ಲಿ ಮಾತನಾಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಿಷ್ಟು….

ಕಾಂಗ್ರೆಸ್ ಪಕ್ಷದ ಸಿದ್ಧಾಂತಗಳನ್ನು ಒಪ್ಪಿ ಪಕ್ಷ ಸೇರಿದ್ದೇನೆ ಎಂದು ಕಾಂತರಾಜು ಅವರು ಹೇಳಿದ್ದಾರೆ, ಬಹಳ ಸಂತೋಷ. ಸಿದ್ಧಾಂತವಿಲ್ಲದೆ ರಾಜಕೀಯ ಪಕ್ಷ ಹೆಚ್ಚು ಕಾಲ ಉಳಿಯಲ್ಲ. ಜೆಡಿಎಸ್ ಗೆ ಯಾವುದೇ ಸಿದ್ಧಾಂತವಿಲ್ಲ. ಅದೊಂದು ಅವಕಾಶವಾದಿ ಪಕ್ಷ. ಇಂದು ದೇಶದಲ್ಲಿ ಸಿದ್ಧಾಂತ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳ ಆಧಾರದ ಮೇಲೆ ರಾಜಕಾರಣ ಮಾಡುತ್ತಿರುವುದು ಕಾಂಗ್ರೆಸ್ ಮಾತ್ರ. ಬಿಜೆಪಿ ಪಕ್ಷ ಆರ್.ಎಸ್.ಎಸ್ ನ ರಾಜಕೀಯ ಮುಖವಾಡ ಮಾತ್ರ. ಇವರಿಗೂ ಯಾವುದೇ ರಾಜಕೀಯ ಸಿದ್ಧಾಂತವಿಲ್ಲ.

ಧರ್ಮ, ದೇವರು ಮುಂತಾದ ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟು ಸಮಾಜ ಒಡೆದು, ಮತಾಂಧರನ್ನು ಸೃಷ್ಟಿಸಿ ತನ್ಮೂಲಕ ತಮ್ಮ ಗುಪ್ತ ಅಜೆಂಡವನ್ನು ಸಾಧಿಸುವುದು ಬಿಜೆಪಿ ಕೆಲಸ. ಸಾಮಾಜಿಕ ಪರಿವರ್ತನೆಯನ್ನು ಅವರು ಬಯಸಲ್ಲ. ಹಿಂದೂ ರಾಷ್ಟ್ರ ನಿರ್ಮಾಣ ಬಿಜೆಪಿಯವರ ಗುಪ್ತ ಅಜೆಂಡಾ. ಭಾರತದಂತ ಬಹು ಸಂಸ್ಕೃತಿ, ಬಹು ಧರ್ಮದ ಜನರಿರುವ ರಾಷ್ಟ್ರವನ್ನು ಒಂದೇ ಧರ್ಮಕ್ಕೆ ಸೀಮಿತಗೊಳಿಸುವುದು ಸಾಧ್ಯವಿಲ್ಲ. ಸಂವಿಧಾನ ಇದಕ್ಕೆ ಅವಕಾಶ ನೀಡುವುದಿಲ್ಲ. ಇದೇ ಕಾರಣಕ್ಕೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಸಹಿಷ್ಣುತೆ ಎಂಬ ಪದವನ್ನು ಬಳಸಿದ್ದಾರೆ. ಸ್ವಾತಂತ್ರ್ಯ, ಸಮಾನತೆ, ಭ್ರಾತ್ರುತ್ವಗಳು ಸಂವಿಧಾನದ ಆಧಾರಗಳು. ಚುನಾಯಿತ ಸರ್ಕಾರ ಈ ಸಂವಿಧಾನದ ಆಶಯಗಳಂತೆ ನಡೆದುಕೊಳ್ಳಬೇಕಾಗುತ್ತದೆ.

ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು ಎಂಬ ಕಾರಣಕ್ಕೆ ಕಾಂಗ್ರೆಸ್ ಗೆಲ್ಲಬೇಕಾದುದ್ದಲ್ಲ. ದೇಶ, ಸಂವಿಧಾನ ಉಳಿಯಬೇಕು ಎಂಬ ಕಾರಣಕ್ಕೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು. ಕೇಂದ್ರದಲ್ಲಿ ಬಿಜೆಪಿ ಆಡಳಿತಕ್ಕೆ ಬಂದು ಎಂಟು ವರ್ಷಗಳಾಗಿದೆ. ರೈತರು, ಬಡವರು, ವಿದ್ಯಾರ್ಥಿಗಳು, ಮಹಿಳೆಯರು, ಕೂಲಿ ಕಾರ್ಮಿಕರು ಹೀಗೆ ಯಾವುದಾದರೂ ಒಂದು ವರ್ಗದ ಜನರಿಗೆ ತೃಪ್ತಿ ನೀಡುವಂತ ಆಡಳಿತ ನೀಡಿದೆಯೇ? ಹೋಗಲಿ ದೇಶದ ಆರ್ಥಿಕ ಪರಿಸ್ಥಿತಿ ಸುಧಾರಣೆ ಆಗಿದೆಯೇ? ಯಾವುದೂ ಇಲ್ಲ.

ನರೇಂದ್ರ ಮೋದಿ ಅವರು ಪ್ರಧಾನಿಯಾದ ವೇಳೆ ಇದ್ದ ದೇಶದ ಒಟ್ಟು ಸಾಲ ರೂ. 53 ಲಕ್ಷ ಕೋಟಿ, ಇವತ್ತು ದೇಶದ ಸಾಲು 135 ಲಕ್ಷ ಕೋಟಿ ರೂಪಾಯಿ. ರೈತ ವಿರೋಧಿ ಕಾನೂನುಗಳ ವಿರುದ್ಧ ದೇಶದ ರೈತರು ವರ್ಷಕ್ಕೂ ಹೆಚ್ಚು ಕಾಲ ಪ್ರತಿಭಟನೆ ಮಾಡಿ, ಸುಮಾರು 702 ಜನ ರೈತರು ಸಾವನ್ನಪ್ಪಿದರು, ಕಡೆಗೆ ವಿಧಿಯಿಲ್ಲದೆ ಕೇಂದ್ರ ಸರ್ಕಾರ ಕಾನೂನುಗಳನ್ನು ವಾಪಾಸು ಪಡೆಯಿತು. ನರೇಂದ್ರ ಮೋದಿ ಅವರಿಗೆ ಮಾನ ಮರ್ಯಾದಿ ಇದ್ದಿದ್ದರೆ ರಾಜೀನಾಮೆ ಕೊಡಬೇಕಿತ್ತು. ಇದು ಬಿಜೆಪಿಗೆ ದೊಡ್ಡ ಸೋಲು, ಆದರೆ ಅದನ್ನೇ ಅವರು ತಮ್ಮ ಜಯ ಎಂದು ತಿಳಿದುಕೊಂಡಿದ್ದಾರೆ.

ರಾಜ್ಯದ ಬಿಜೆಪಿಯಂತ ಭ್ರಷ್ಟ ಸರ್ಕಾರವನ್ನು ನನ್ನ ನಲವತ್ತು ವರ್ಷಗಳ ರಾಜಕೀಯ ಜೀವನದಲ್ಲಿ ಕಂಡಿಲ್ಲ. ಯಾವುದೇ ನೇಮಕಾತಿ, ವರ್ಗಾವಣೆಗಳು ಲಂಚ ಇಲ್ಲದೆ ಆಗಲ್ಲ. ಗುತ್ತಿಗೆ ಕೆಲಸಗಳಲ್ಲಿ 40% ಕಮಿಷನ್ ಕೊಡದೆ ವರ್ಕ್ ಆರ್ಡರ್ ಸಿಗಲ್ಲ. ಇದನ್ನು ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಕೆಂಪಣ್ಣ ಅವರು ಹೇಳಿದ್ದು. ನಾನು ಹದಿಮೂರು ಬಜೆಟ್ ಮಂಡಿಸಿದ್ದೇನೆ. ನಮ್ಮ ಕಾಲದಲ್ಲಿ ಯಾವುದಾದರೂ ಕೆಲಸಕ್ಕೆ ಎನ್.ಒ.ಸಿ ಪಡೆಯಲು ಸಿದ್ದರಾಮಯ್ಯ ಅವರಿಗೆ ಒಂದು ರೂಪಾಯಿ ಲಂಚ ಕೊಟ್ಟಿದ್ದೀನಿ ಎಂದು ಒಬ್ಬ ಕಂಟ್ರಾಕ್ಟರ್ ಹೇಳಿದರೆ ನಾನು ರಾಜಕೀಯ ನಿವೃತ್ತಿ ತಗೊಳ್ತೇನೆ.

ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಮೂರು ವರ್ಷ ಆಗ್ತಿದೆ. ಯಾವುದಾದರೂ ಅಭಿವೃದ್ಧಿ ಕೆಲಸ ಮಾಡಿದೆಯ? ನೀರಾವರಿ ಯೋಜನೆ ಅನುಷ್ಠಾನ ಮಾಡಿದೆಯಾ? ಇಲ್ಲ. ಹೀಗಾಗಿಯೇ ನಾವು ಮೇಕೆದಾಟು ಯೋಜನೆ ಜಾರಿ ಮಾಡಿ ಎಂದು ಪಾದಯಾತ್ರೆ ಆರಂಭ ಮಾಡಿದ್ದು, ಇದು ನಮ್ಮ ಸರ್ಕಾರದ ಯೋಜನೆ. ಸುಪ್ರೀಂ ಕೋರ್ಟ್ ನಲ್ಲಿ ಕಾವೇರಿ ನೀರು ವಿವಾದಕ್ಕೆ ಸಂಬಂಧಿಸಿದಂತೆ ಅಂತಿಮ ನಿರ್ಣಯ ಬಂದಿದೆ. ಯೋಜನೆಗೆ ವಿರೋಧ ಮಾಡಲು ತಮಿಳುನಾಡಿಗೆ ಯಾವುದೇ ಕಾನೂನಾತ್ಮಕ ಹಕ್ಕು ಇಲ್ಲ. ಅರಣ್ಯ ಇಲಾಖೆ ಅನುಮತಿ ಪಡೆಯಲು ಇವರಿಗೆ ಬಂದಿರೋದೇನು? ಇದನ್ನು ಕೇಳಿದ್ದಕ್ಕೆ ನಮ್ಮ ಮೇಲೆ ಸುಳ್ಳು ಮೊಕದ್ದಮೆ ಹೂಡಿದ್ದಾರೆ. ನನ್ನ ಮೇಲೆ ಮೂರು, ಡಿ.ಕೆ ಶಿವಕುಮಾರ್ ಮೇಲೆ ನಾಲ್ಕು ಕೇಸ್ ಹಾಕಿದ್ದಾರೆ. ಬಿಜೆಪಿಯವರು ಕೊರೊನಾ ನಿಬಂಧನೆಗಳನ್ನು ಮೀರಿದ್ದರೂ ಅವರ ವಿರುದ್ಧ ಯಾವ ಕೇಸ್ ಹಾಕಿಲ್ಲ. ಮಕ್ಕಳಿಗೆ ಹಾಯ್ ಎಂದಿದ್ದಕ್ಕೂ ಕೇಸ್ ಹಾಕಿದ್ದಾರೆ. ಇದು ಯಾವ ಅಪರಾಧ ಎಂದು ನನಗಂತೂ ಗೊತ್ತಿಲ್ಲ.

ರಾಜ್ಯದಲ್ಲಿ ಕಾಂಗ್ರೆಸ್ ಅಲೆ ಆರಂಭವಾಗಿದೆ. ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಎಲ್ಲಾ ನಾಯಕರು ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದು ಮನವಿ ಮಾಡುತ್ತೇನೆ ಎಂದು ಸಿದ್ಧರಾಮಯ್ಯ ತಿಳಿಸಿದ್ದಾರೆ.

Key words:  Congress -politics – ideology – development -Former CM-Siddaramaiah.