ಜೆಡಿಎಸ್ –ಬಿಜೆಪಿ ಹೊಂದಾಣಿಕೆ ಬಗ್ಗೆ ಟೀಕೆ: ಹೆಚ್ ಡಿ ದೇವೇಗೌಡರನ್ನ ಅವಕಾಶವಾದಿ ರಾಜಕಾರಣಿ ಎಂದ ಆರ್. ಧೃವನಾರಾಯಣ್.

ಮೈಸೂರು,ಡಿಸೆಂಬರ್,6,2021(www.justkannada.in): ಕಾಂಗ್ರೆಸ್ ಬಗ್ಗೆ ಜೆಡಿಎಸ್-ಬಿಜೆಪಿಯವರಿಗೆ ಭಯ ಉಂಟಾಗಿದೆ. ಪರಸ್ಪರ ಹೊಂದಾಣಿಕೆ ಅವರಿಬ್ಬರಿಗೂ ಅನಿವಾರ್ಯವಾಗಿದೆ. ಜೆಡಿಎಸ್ ಜೊತೆಗಿನ ಹೊಂದಾಣಿಕೆ ಬಿಜೆಪಿಗೂ ಅನಿವಾರ್ಯವಾಗಿದೆ. ರಾಜ್ಯವ್ಯಾಪಿಯಿರುವ ಕಾಂಗ್ರೆಸ್ ಅಲೆಯಿಂದ ಭಯಪಟ್ಟು ಅವರಿಬ್ಬರು ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧೃವನಾರಾಯಣ್ ಟೀಕಿಸಿದರು.

ಮೈಸೂರಿನಲ್ಲಿ ಇಂದು ಮಾತನಾಡಿದ ಆರ್.ದೃವನಾರಾಯಣ್, ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಕಳೆದ ಬಾರಿಯಂತೆ ಮೇಲುಗೈ ಸಾಧಿಸಲಿದೆ. ಕಳೆದ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 14 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಅದೇ ರೀತಿಯ ಫಲಿತಾಂಶ ಈ ಬಾರಿಯೂ ಮರುಕಳಿಸಲಿದೆ. ಕಾಂಗ್ರೆಸ್ ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. ಮೈಸೂರು-ಚಾಮರಾಜನಗರ ಕ್ಷೇತ್ರದಲ್ಲಿ ಭಾರೀ ಬಹುಮತದಿಂದ ಕಾಂಗ್ರೆಸ್ ಗೆಲ್ಲಲಿದೆ. ಜೆಡಿಎಸ್ ಶಾಸಕ ಜಿ.ಟಿ ದೇವೆಗೌಡ, ಎಂ ಎಲ್ ಸಿ ಸಂದೇಶ್ ನಾಗರಾಜ್ ಅವರು ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ನೀಡುವಂತೆ ಅವರ ಬೆಂಬಲಿಗರಿಗೆ ಸೂಚಿಸಿದ್ದಾರೆ. ಕೆ.ಆರ್ ನಗರ, ಹುಣಸೂರು, ಪಿರಿಯಾಪಟ್ಟಣ, ಹೆಚ್ ಡಿ ಕೋಟೆ, ಚಾಮುಂಡೇಶ್ವರಿ ಕ್ಷೇತ್ರಗಳಲ್ಲಿ ಬಿಜೆಪಿಗೆ ನೆಲೆಯೇ ಇಲ್ಲ. ಕಾಂಗ್ರೆಸ್ ಪಕ್ಷ ಎಲ್ಲಾ ವಿಧಾನ ಸಭಾ ಕ್ಷೇತ್ರಗಳಲ್ಲೂ ಮುನ್ನಡೆ ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮುಸಲ್ಮಾನರನ್ನ ಬಕ್ರ ಮಾಡಲು ಹೋಗಿ ಅವರೇ ಬಕ್ರ ಆದರು.

ಜೆಡಿಎಸ್ ಮುಳುಗುತ್ತಿರುವ ಸಂದರ್ಭದಲ್ಲಿ ಬಿಜೆಪಿ ಜೊತೆ ಹೊಂದಾಣಿಕೆ ಅನಿವಾರ್ಯವಾಗಿದೆ. ಜೆಡಿಎಸ್ ಜೊತೆಗಿನ ಹೊಂದಾಣಿಕೆ ಬಿಜೆಪಿಗೂ ಅನಿವಾರ್ಯವಾಗಿದೆ. ಹಾನಗಲ್, ಸಿಂಧಗಿ ಕ್ಷೇತ್ರಗಳ ಉಪ ಚುನಾವಣೆ ವೇಳೆ ಆರ್ ಎಸ್ ಎಸ್ ವಿರುದ್ದ ಹೆಚ್ ಡಿ ಕುಮಾರಸ್ವಾಮಿ ವ್ಯಾಪಕ ಟೀಕೆ ಮಾಡಿದ್ದರು. ಟೀಕೆ ಮಾಡುತ್ತೇನೆಂದು ಹೇಳಿಯೇ ಟೀಕೆ ಮಾಡಿದ್ದಾರೆ. ಆ ರೀತಿಯ ಒಳ ಒಪ್ಪಂದವಾಗಿತ್ತು. ಮುಸಲ್ಮಾನರ ಮತಗಳನ್ನು ಪಡೆಯಲು ಮುಸಲ್ಮಾನರನ್ನು ಬಕ್ರಾಗಳನ್ನಾಗಿ ಮಾಡಲು ಹೊರಟಿದ್ದರು. ಆದರೆ ಮುಸಲ್ಮಾನರು ಬುದ್ದಿವಂತರು. ಈ ವಿಚಾರದಲ್ಲಿ ಜೆಡಿಎಸ್ ನವರೇ ಬಕ್ರಾಗಳಾದರು. ಹಾಗಾಗಿ ಜೆಡಿಎಸ್ ಹಾನಗಲ್ ನಲ್ಲಿ ಒಂದು ಸಾವಿರ ಮತ ಪಡೆಯಲು ಸಾಧ್ಯವಾಗಲಿಲ್ಲ. ಸಿಂದಗಿಯಲ್ಲಿ 4 ಸಾವಿರ ಚಿಲ್ಲರೆ ಮತಗಳನ್ನು ಮಾತ್ರ ಪಡೆಯಿತು ಎಂದು ಲೇವಡಿ ಮಾಡಿದರು.

ಹೆಚ್ ಡಿ ದೇವೇಗೌಡರು ಅವಕಾಶವಾದಿ ರಾಜಕಾರಣಿ..

ಇನ್ನು ಹೆಚ್ ಡಿ ದೇವೇಗೌಡರ ಬಗ್ಗೆ ನನಗೆ ಅಪಾರ ಗೌರವವಿದೆ. ಆದರೆ ಅವರೊಬ್ಬ ಅವಕಾಶವಾದಿ ರಾಜಕಾರಣಿ. ಅವರ ಪಕ್ಷ ಕುಟುಂಬಕ್ಕೆ ಮಾತ್ರ ಸೀಮಿತವಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್ ಧ್ರುವನಾರಾಯಣ್ ಟೀಕಿಸಿದರು.

ಗ್ರಾಮ ಪಂಚಾಯ್ತಿಗಳು ನಡೆಯುತ್ತಿರುವುದೇ ಮೋದಿ ಸರ್ಕಾರದಿಂದ ಎಂಬ ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ತಿರುಗೇಟು ನೀಡಿದ ಮಾಜಿ ಸಂಸದ ಆರ್ ಧ್ರುವನಾರಾಯಣ್, ಅಧಿಕಾರ ವೀಕೇಂದ್ರೀಕರಣದಲ್ಲಿ ಬಿಜೆಪಿಗೆ ನಂಬಿಕೆ ಇಲ್ಲ. ಬಿಜೆಪಿ ಪಂಚಾಯತ್ ರಾಜ್ ವ್ಯವಸ್ಥೆಯ ವಿರೋಧಿ. ಕಳೆದ ಎರಡು ವರ್ಷದಿಂದ ಉದ್ಯೋಗ ಖಾತ್ರಿ ಯೋಜನೆ ಹಣ ಜನರಿಗೆ ಸಿಗುತ್ತಿಲ್ಲ. ಬಿಜೆಪಿಗರು ಬರಿ ಸುಳ್ಳು ಹೇಳುತ್ತಲೇ ಮತದಾರರ ಮನವೊಲಿಸುವ ಪ್ರಯತ್ನ ಮಾಡುತ್ತಿದ್ದಾರೆ. ಪಂಚಾಯತ್ ರಾಜ್ ವ್ಯವಸ್ಥೆಯನ್ನು ಬಲಪಡಿಸಿದ್ದೇ ಕಾಂಗ್ರೆಸ್ ಪಕ್ಷ. ಸಂಸದ ಪ್ರತಾಪ್ ಸಿಂಹ ಮೊದಲು ಇದನ್ನು ಅರ್ಥ ಮಾಡಿಕೊಳ್ಳಬೇಕು. ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯತಿ ಚುನಾವಣೆ ನಡೆಸದೇ ಸ್ಥಳೀಯ ಸಂಸ್ಥೆಗಳ ಅಧಿಕಾರವನ್ನು ಮೊಟಕು ಗೊಳಿಸಿದ್ದಾರೆ. ಈ ಬಾರಿಯ ವಿಧಾನ ಪರಿಷತ್ ಚುನಾವಣೆಗೆ ಅವರ ಮತ ಚಲಾಯಿಸುವ ಹಕ್ಕನ್ನು ಕಸಿದುಕೊಂಡಿದ್ದಾರೆ. ಇತ್ತೀಚೆಗೆ ಕೇಂದ್ರ ಸರ್ಕಾರದ ಪುರಸ್ಕೃತ ಯೋಜನೆಗಳಿಗೆ ಹಣವೇ ಬಿಡುಗಡೆ ಆಗುತ್ತಿಲ್ಲ. ಮೊದಲು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು  ಸಂಸದ ಪ್ರತಾಪ್ ಸಿಂಹಗೆ ಆರ್ ಧ್ರುವನಾರಾಯಣ್ ಟಾಂಗ್ ನೀಡಿದರು.

Key words: Criticise – JDS – BJP-alliance- opportunist -politician – HD Deve Gowda-R.Dhruvanarayan