ಕೋವಿಡ್ ಎರಡು ಅಲೆಗಳ ನಿರ್ವಹಣೆಗೆ ಬಿಬಿಎಂಪಿ ವ್ಯಯಿಸಿದ ಒಟ್ಟು ಮೊತ್ತವೆಷ್ಟು ಗೊತ್ತೆ..?

ಬೆಂಗಳೂರು, ಡಿಸೆಂಬರ್ 13, 2021 (www.justkannada.in): ಕೋವಿಡ್ ಸಾಂಕ್ರಾಮಿಕದ ಎರಡು ಅಲೆಗಳ ನಿರ್ವಹಣೆಗೆ ಎಷ್ಟು ಖರ್ಚಾಯಿತು ಎಂದು ತಿಳಿಸುವ ಬಿಬಿಎಂಪಿಯ ಲೆಕ್ಕಪರಿಶೋಧನೆ ಕಾರ್ಯ ಮುಗಿದಿದ್ದು, ಕಳೆದ 20 ತಿಂಗಳಲ್ಲಿ ಕೋವಿಡ್‌ನ ೨ ಅಲೆಗಳ ನಿರ್ವಹಣೆಗೆ ಬಿಬಿಎಂಪಿ ಬರೋಬ್ಬರಿ ಒಟ್ಟು ರೂ.೮೨೧.೨೨ ಕೋಟಿ ವೆಚ್ಚ ಮಾಡಿದೆ ಎಂಬ ವಿಷಯ ಬಹಿರಂಗಗೊಂಡಿದೆ.

ಆದರೆ ಇನ್ನೂ ಶೇ.೧೦ರಷ್ಟು ವೆಚ್ಚಗಳ ಬಿಲ್ಲುಗಳನ್ನು ಪಾವತಿಸಬೇಕಿದೆ, ಅಂದರೆ ಈ ಮೊತ್ತ ಇನ್ನೂ ರೂ.೧೦೦-ರೂ.೧೫೦ ಕೋಟಿಗಳಷ್ಟು ಹೆಚ್ಚಾಗಬಹುದು ಎನ್ನಲಾಗಿದೆ. ಬಿಬಿಎಂಪಿಯ ಹಣಕಾಸು ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಓರ್ವ ಹಿರಿಯ ಅಧಿಕಾರಿಯೊಬ್ಬರ ಪ್ರಕಾರ, “ಹೊರಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಂಡಿದ್ದಂತಹ ಸಿಬ್ಬಂದಿಗಳಿಗೆ ನೀಡಬೇಕಾಗಿರುವ ವೇತನ ಹಾಗೂ ಕೆಲವು ಲ್ಯಾಬ್ ಟೆಸ್ಟ್ ಗಳ ಬಿಲ್ಲುಗಳ ಪಾವತಿ ಇನ್ನೂ ಬಾಕಿ ಉಳಿದಿವೆ. ಇವೆಲ್ಲ ಪೂರ್ಣಗೊಂಡ ನಂತರ ನಮಗೆ ಸ್ಪಷ್ಟವಾದ ಖರ್ಚಿನ ವಿವರಗಳು ತಿಳಿಯುತ್ತದೆ,” ಎಂದು ತಿಳಿಸಿದ್ದಾರೆ.bbmp-extended-property-tax-exemption-period-2021-22

ಮಾಧ್ಯಮಗಳಿಗೆ ದೊರೆತಿರುವ ಮಾಹಿತಿಯ ಪ್ರಕಾರ ಬಹುಪಾಲು ಖರ್ಚು ಆರ್‌ಟಿ-ಪಿಸಿಆರ್ ಪರೀಕ್ಷೆಗಳದ್ದಾಗಿದೆ. ಇದಕ್ಕೆ ಒಟ್ಟು ರೂ.೨೧೯ ಕೋಟಿ ವೆಚ್ಚವಾಗಿದೆ. ಇದಲ್ಲದೆ, ಬಿಬಿಎಂಪಿಯು ಆಂಬುಲೆನ್ಸ್ ಗಳು, ಶವಗಳನ್ನು ಸಾಗಿಸುವ ವಾಹನಗಳ ಸೇವೆಗಳನ್ನು ದೊಡ್ಡ ಪ್ರಮಾಣದಲ್ಲಿ ಪಡೆದಿದ್ದು, ಇದಕ್ಕಾಗಿ ರೂ.೧೨೫.೯ ಕೋಟಿ ವೆಚ್ಚವಾಗಿದೆ. ಆಶ್ಚರ್ಯಕರವಾಗಿ ರೂ.೩೪೬.೬೦ ಕೋಟಿ ಮೊತ್ತವನ್ನು ಮನೆಗಳನ್ನು ಸೀಲ್ ಮಾಡುವುದು ಮತ್ತು ಹೋಟೆಲ್ ಕ್ವಾರಂಟೈನ್‌ಗಳಂತಹ ಇತರೆ ವಿವಿಧ ವೆಚ್ಚಗಳಿಗಾಗಿ ಖರ್ಚು ಮಾಡಲಾಗಿದೆ.

“ನಾವು ನಮ್ಮ ಖರ್ಚುವೆಚ್ಚಗಳನ್ನು ಹಿಡಿತದಲ್ಲಿರಿಸಲು ಬಹಳ ಎಚ್ಚರಿಕೆ ವಹಿಸಿದ್ದೇವೆ. ನಮ್ಮ ಲೆಕ್ಕಪರಿಶೋಧನಾ ತಂಡ ಬಿಬಿಎಂಪಿಯ ಎಲ್ಲಾ ಖರೀದಿ ಮತ್ತು ವೆಚ್ಚಗಳ ಮೇಲೆ ಹದ್ದಿನ ಕಣ್ಣಿಟ್ಟು, ಬಹಳ ಸೂಕ್ಷ್ಮವಾಗಿ ಮೇಲ್ವಿಚಾರಣೆ ನಡೆಸಿತು. ಆದಾಗ್ಯೂ ನಾವು ಕೋವಿಡ್ ಮೊದಲ ಹಂತದಲ್ಲಿ ಕೆಲವು ವೈದ್ಯಕೀಯ ಉಪಕರಣಗಳನ್ನು ಖರೀದಿಸಲು ಹೆಚ್ಚು ಹಣವನ್ನು ವ್ಯಯಿಸಬೇಕಾಯಿತು, ಏಕೆಂದರೆ ಅವುಗಳ ಬೆಲೆಯನ್ನು ನಂತರದಲ್ಲಿ ನಿಗಧಿಪಡಿಸಲಾಯಿತು,” ಎಂದು ಓರ್ವ ಅಧಿಕಾರಿ ತಿಳಿಸಿದ್ದಾರೆ.

ಬಿಬಿಎಂಪಿಗೆ ರಾಜ್ಯ ಸರ್ಕಾರದಿಂದ ಹಣಕಾಸಿನ ಬೆಂಬಲ ದೊರೆತರೂ ಸಹ, ನಿಖರವಾದ ಅಂಕಿ-ಅಂಶಗಳನ್ನು ಇನ್ನೂ ಲೆಕ್ಕ ಹಾಕಬೇಕಿದೆ ಎನ್ನುವುದು ಅಧಿಕಾರಿಗಳ ಅಭಿಪ್ರಾಯವಾಗಿದೆ. ರಾಜ್ಯ ಸರ್ಕಾರದ ನೆರವಿನ ಜೊತೆಗೆ ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನ (ಎನ್‌ಯುಹೆಚ್‌ಎಂ) ವತಿಯಿಂದಲೂ ರೂ.೪೦ ಕೋಟಿ ಬಿಡುಗಡೆ ಆಗಿದೆಯಂತೆ.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

Key words: how much-BBMP – spent –money-covid- two-waves of management.