ಕೊರೊನಾ ಸೋಂಕು ನಿರೋಧಕ ಲಸಿಕೆಯನ್ನು ಬಿಜೆಪಿ ತನ್ನ ಪ್ರಚಾರಕ್ಕಾಗಿ ಬಳಸಿಕೊಳ್ಳುತ್ತಿರುವುದು ಖಂಡನೀಯ-ಎಚ್.ಎ. ವೆಂಕಟೇಶ್

kannada t-shirts

ಮೈಸೂರು,ಜೂನ್,21,2021(www.justkannada.in):  ಜನರ ತೆರಿಗೆ ಹಣದಿಂದ ಲಭ್ಯವಾಗುತ್ತಿರುವ ಕೊರೊನಾ ಸೋಂಕು ನಿರೋಧಕ ಲಸಿಕೆಯನ್ನು ಬಿಜೆಪಿ ತನ್ನ ಪ್ರಚಾರಕ್ಕಾಗಿ ಬಳಸಿಕೊಳ್ಳುತ್ತಿರುವುದು ಖಂಡನೀಯ ಎಂದು  ಕೆಪಿಸಿಸಿ ವಕ್ತಾರರು ಎಚ್.ಎ. ವೆಂಕಟೇಶ್ ಕಿಡಿಕಾರಿದ್ದಾರೆ. jk

ಈ ಕುರಿತು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಲಸಿಕೆಯನ್ನು ಆರಂಭದಲ್ಲಿಯೇ ಭಾರತದ ಪ್ರಜೆಗಳಿಗೆ ನೀಡದೇ ವಿದೇಶಗಳಿಗೆ ರಫ್ತು ಮಾಡಿ ಪ್ರಚಾರ ಪಡೆಯಲು ಹೋದ ಪ್ರಧಾನಿ ನರೇಂದ್ರ ಮೋದಿ ಅವರ ತಪ್ಪು ತೀರ್ಮಾನಗಳಿಂದಾಗಿಯೇ ದೇಶದಲ್ಲಿ ಅರ್ಧ ಕೋಟಿಗೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಕೋಟ್ಯಾಂತರ ಕುಟುಂಬಗಳು ಬೀದಿ ಪಾಲಾಗಿವೆ. ಇವೆಲ್ಲದರ ನೈತಿಕ ಹೊಣೆಗಾರಿಕೆಯನ್ನು ಪ್ರಧಾನ ಮಂತ್ರಿ ಮತ್ತು ಇವರು ಪ್ರತಿನಿಧಿಸುವ ಬಿಜೆಪಿ ಹೊರಬೇಕಾಗಿದೆ. ಸೋಂಕು ಅಬ್ಬರಿಸುತ್ತಿರುವಾಗ ಜನರನ್ನು ನಡುನೀರಲ್ಲಿ ಕೈಬಿಟ್ಟು, ಪರಿಸ್ಥಿತಿ ಸುಧಾರಿಸುವಾಗ ಎಲ್ಲವೂ ಆಗಿದ್ದು ನನ್ನಿಂದ ಎಂದು ಬೆನ್ನುತಟ್ಟಿಕೊಳ್ಳುವುದು ಆಶಾಡಭೂತಿತನ.
ಇಷ್ಟಕ್ಕೂ ರಾಜ್ಯದಲ್ಲಿ ಎಲ್ಲರಿಗೂ ಲಸಿಕೆ ಅಭಿಯಾನ ಆರಂಭವಾಗಲು ಪ್ರಧಾನಿಯವರು ಕಾರಣ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಶ್ರೇಯಸ್ಸನ್ನು ಪ್ರಧಾನಿಗೆ ನೀಡಿದ್ದಾರೆ. ಆದರೆ ಮೈಸೂರು ಸೇರಿದಂತೆ ರಾಜ್ಯದ ಎಷ್ಟೋ ಕಡೆ ಜನರಿಗೆ ಸಮರ್ಪಕವಾಗಿ ಲಸಿಕೆ ಲಭ್ಯವಾಗಿಲ್ಲ. ಹೀಗಾಗಿ ಇಂತಹ ಸೀಮಿತ ಲಸಿಕೆ ಸರಬರಾಜು ಮತ್ತು ಗೊಂದಲಕ್ಕೂ ಸಹ ಮೋದಿಯವರೇ ಕಾರಣ ಎಂದೂ ಸಹ ಯಡಿಯೂರಪ್ಪನವರು ಧೈರ್‍ಯವಾಗಿ ಹೇಳಬೇಕಿದೆ.
ಲಸಿಕೆ ಅಸಮಪರ್ಕತೆ ಮಾತ್ರವಲ್ಲ, ಡೀಸಲ್ ಮತ್ತು ಪೆಟ್ರೋಲ್ ಬೆಲೆಯನ್ನು ನಿತ್ಯ ಹೆಚ್ಚಿಸಿ ಮಧ್ಯಮದವರ್ಗದವರ ಬದುಕನ್ನು ನರಕಮಾಡಿದ ಶ್ರೇಯಸ್ಸನ್ನೂ ಪ್ರಧಾನಿಯವರಿಗೆ ಮುಕ್ತವಾಗಿ ನೀಡಬೇಕಾಗಿದೆ. ಜೊತೆಗೆ ಮೌನವಾಗಿಯೇ ಅಡುಗೆ ಅನಿಲದ ಸಹಾಯಧನ ರದ್ದು ಮಾಡಿದ್ದು, ಪ್ರತಿ ತಿಂಗಳೂ ಕೋಟ್ಯಾಂತರ ನಿರುದ್ಯೋಗಿಗಳನ್ನು ಸೃಷ್ಟಿಸಿದ್ದು, ಶಿಕ್ಷಣ ಸುಧಾರಣೆ ಹೆಸರಿನಲ್ಲಿ ಶುಲ್ಕ ಹೆಚ್ಚಿಸಿ ಬಡವರನ್ನು ವಂಚಿಸಿದ್ದು, ಸಾರ್ವಜನಿಕ ಸಂಸ್ಥೆಗಳನ್ನು ಖಾಸಗಿ ಉದ್ಯಮಿ ಮಿತ್ರರಿಗೆ ಮಾರಾಟ ಮಾಡಿ ಬಂಡವಾಳ ಲೂಟಿ ಮಾಡಿದ್ದು, ಬಿಎಸ್‌ಎನ್‌ಎಲ್, ಬಿಪಿಸಿಎಲ್ ಮುಂತಾದ ದೈತ್ಯ ಕಂಪನಿಗಳ ಬುಡ ಅಲುಗಾಡಿಸಿ ನಿರುದ್ಯೋಗಿಗಳನ್ನು ವಂಚಿಸಿದ್ದು, ಹಣಕಾಸು ವ್ಯವಸ್ಥೆ ಹಳ್ಳಹಿಡಿಸಿ ಜಿಡಿಪಿ ದರ ಐತಿಹಾಸಿಕ ಕುಸಿತಕ್ಕೆ ಕಾರಣವಾಗಿದ್ದು, ಅನಿಯಂತ್ರಿತವಾಗಿ ಬೆಲೆ ಹೆಚ್ಚಳ ಹಣದುಬ್ಬರದಿಂದ ದೇಶದ ಬಹುದೊಡ್ಡ ಭಾಗ ಮತ್ತೆ ಬಡತನದ ರೇಖೆಯೊಳಗೆ ಬರುವಂತೆ ಮಾಡಿದ್ದು ಸೇರಿ ಇನ್ನೂ ಅನೇಕಾನೇಕ ಋಣಾತ್ಮಕ ಸಾಧನೆಗಳ ನೇರ ಶ್ರೇಯಸ್ಸು ಪ್ರಧಾನಿ ಮೋದಿ ಅವರದೇ ಆಗಿದೆ.
ಸ್ವಾತಂತ್ರ್ಯದ ನಂತರ ಆರ್ಥಿಕತೆ ಮತ್ತು ನಿರುದ್ಯೋಗ ಇಷ್ಟು ಕನಿಷ್ಟ ಮಟ್ಟಕ್ಕೆ ಇಳಿದಿರುವುದು ಮೋದಿಯವರ ಆಡಳಿತದಲ್ಲಿ. ಬಿಜೆಪಿಯವರು ಮೊದಲು ಈ ಪಾಪ ತೊಳೆದುಕೊಳ್ಳಲಿ. ವೈಫಲ್ಯಗಳನ್ನೇ ಹೊದ್ದು ಸುಳ್ಳುಗಳು ಮತ್ತು ಭ್ರಮೆಯ ಮೂಲಕ ಸತ್ಯ ಮರೆಮಾಚುವ ಕಸರತ್ತು ನಡೆಸುವ ಮೋದಿಯವರ ಕಾರ್‍ಯವೈಖರಿಯನ್ನು ಬಿಜೆಪಿ ನಾಯಕರು ಮೊದಲು ಸುಧಾರಿಸಲಿ ಎಂದಿದ್ದಾರೆ.

website developers in mysore