ಕೇಂದ್ರ ಸಚಿವ ಪಿಯೋಷ್ ಗೋಯೆಲ್ ಭೇಟಿಯಾಗಿ ರೈತರ ಸಮಸ್ಯೆ, ಎಥೆನಾಲ್ ಪಾಲಿಸಿ ಬಗ್ಗೆ ಚರ್ಚಿಸಿದ ಸಚಿವ ಶಂಕರ ಪಾಟೀಲ ಮುನೇನಕೊಪ್ಪ

ನವದೆಹಲಿ,ಜನವರಿ,5,2022(www.justkannada.in) ಜವಳಿ & ಕೈಮಗ್ಗ ಅಭಿವೃದ್ಧಿ ಹಾಗೂ ಸಕ್ಕರೆ ಸಚಿವ ಶಂಕರ ಪಾಟೀಲ ಬ ಮುನೇನಕೊಪ್ಪ ಅವರು ರಾಜ್ಯದಲ್ಲಿ ಹೊಸದಾಗಿ ಜಾರಿಗೆ ತರಲು ಉದ್ದೇಶಿಸಿರುವ ಎಥೆನಾಲ್ ಪಾಲಿಸಿ, ರಾಜ್ಯದ ಕಬ್ಬು ಬೆಳೆಗಾರ ರೈತರ ಸಮಸ್ಯೆಗಳು ಹಾಗೂ ರಾಜ್ಯದ ಜವಳಿ & ಕೈಮಗ್ಗ ಉದ್ಯಮದ ಸಮಸ್ಯೆ & ಯೋಜನೆಗಳ ಬಗ್ಗೆ ಕೇಂದ್ರದ ಜವಳಿ & ಸಕ್ಕರೆ ಸಚಿವ  ಪಿಯೋಷ್ ಗೋಯಲ್ ಅವರನ್ನು ನವದೆಹಲಿಯಲ್ಲಿ ಇಲಾಖೆಯ ಅಧಿಕಾರಿಗಳೊಂದಿಗೆ ಭೇಟಿಯಾಗಿ ಚರ್ಚಿಸಿದರು.

ಈ ವೇಳೆ ಮೈಸೂರು ಮೆಗಾ ಸಿಲ್ಕ್ ಕ್ಲಸ್ಟರ್ ಬಗ್ಗೆ ವಿಸ್ತೃತವಾಗಿ ಚರ್ಚಿಸಲಾಯಿತು. ರಾಜ್ಯದ ರೇಷ್ಮೆ ಗುಣಮಟ್ಟಕ್ಕೆ ವಿಶ್ವದಾದ್ಯಂತ ಹೆಸರು ಪಡೆದಿದೆ, ಮೈಸೂರು ರೇಷ್ಮೆ ವಲಯದ ಕೇಂದ್ರ ಸ್ಥಾನವಾಗಿದೆ. ಇಲ್ಲಿ ರೇಷ್ಮೆಗೆ ಸಂಬಂಧಿಸಿದ ಕಾರ್ಯಚಟುವಟಿಕೆಗಳನ್ನು ವಿಸ್ತರಿಸುವ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಸಹಭಾಗಿತ್ವದ ಮೆಗಾ ಸಿಲ್ಕ್ ಕ್ಲಸ್ಟರ್ ಯೋಜನೆಯ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಬದ್ದವಾಗಿದೆ. ಯೋಜನೆಯ ಮೂಲ ಸ್ವರೂಪದಂತೆಯೇ ಅನುಷ್ಠಾನಗೊಳಿಸಲಾಗುವುದು, ಹೀಗಾಗಿ ಕೇಂದ್ರ ಸರ್ಕಾರ ಈ ಮೊದಲು ಘೋಷಿಸಿದಂತೆಯೇ ಅನುದಾನ ನೀಡಬೇಕು, ಯಾವುದೇ ಕಾರಣಕ್ಕೂ ಅನುದಾನ ಕಡಿತಗೊಳಿಸಬಾರದು ಎಂದು ಸಚಿವ ಶಂಕರ ಪಾಟೀಲ ಬ ಮುನೇನಕೊಪ್ಪ ಮನವಿ ಮಾಡಿದರು.

ಮನವಿಗೆ ಸ್ಪಂದಿಸಿದ ಕೇಂದ್ರ ಸಚಿವ ಪಿಯೋಷ್ ಗೋಯಲ್ ಈ ಯೋಜನೆಯ ಮೊದಲ ಹಂತದ ಅನುದಾನವನ್ನು ಈಗಾಗಲೇ ಬಿಡುಗಡೆಗೊಳಿಸಲಾಗಿದೆ. ಪೂರ್ಣ ಪ್ರಮಾಣದಲ್ಲಿ ಅನುದಾನ ಒದಗಿಸಲಾಗುತ್ತದೆ, ಅವಶ್ಯಕತೆ ಇದ್ದಲಿ ಹೆಚ್ಚಿನ ಅನುದಾನ ನೀಡಲಾಗುವುದು ಎಂದು ಭರವಸೆ ನೀಡಿದರು.

ಕೇಂದ್ರ ಸಚಿವರ ಭೇಟಿ ಬಳಿಕ ಮಾತನಾಡಿದ ಸಚಿವ ಶಂಕರಪಾಟೀಲ್ ಮುನೇನಕೊಪ್ಪ, ಕಬ್ಬು ಬೆಳೆಯುವಲ್ಲಿ 3ನೇ ರಾಜ್ಯ ಕರ್ನಾಟಕ. ಆದರೆ ಕಬ್ಬು ಬೆಳೆಗಾರರು ಹಾಗೂ ಕಾರ್ಖಾನೆಗಳು ನಷ್ಟದಲ್ಲಿವೆ. ಅವರಿಗೆ ಲಾಭ ಮಾಡಿಕೊಡಲು ಹೊಸ ಎಥೆನಾಲ್ ನೀತಿ ಜಾರಿಗೆ ತರಲಾಗುತ್ತದೆ. ಕಬ್ಬು, ಗೋವಿನ‌ ಜೋಳ, ಭತ್ತ ಮೂರು ಬೆಳೆಗಳಿಂದ ಎಥನಾಲ್ ಉತ್ಪಾದನೆ ಮಾಡಲಾಡಲಾಗುತ್ತದೆ. ಈಗಾಗಲೇ ತಜ್ಞರ ಅಭಿಪ್ರಾಯ ಸಂಗ್ರಹ ಮಾಡಿದ್ದೇವೆ. ಹೊಸ ನೀತಿ ಪ್ರಕಾರ ಎಥನಾಲ್ ಉತ್ಪಾದನೆಯಾದರೆ ಎಲ್ಲರಿಗೂ ಲಾಭ ಆಗುತ್ತೆ ಎಂದು ಸಚಿವ ಶಂಕರ್ ಪಾಟೀಲ್ ಮುನೇನ ಕೊಪ್ಪ ಮಾಹಿತಿ ನೀಡಿದರು.

ಮಧ್ಯಪ್ರದೇಶ, ಮಹಾರಾಷ್ಟ್ರ ಹಾಗೂ ಕೇಂದ್ರದ ಎಥನಾಲ್ ಪಾಲಿಸಿ ಮಾದರಿಯಲ್ಲಿ ರಾಜ್ಯದಲ್ಲೂ ಎಥನಾಲ್ ಉತ್ಪಾದನೆ ಮಾಡಲಾಗುತ್ತದೆ. ಎಥನಾಲ್ ಉತ್ಪಾದನೆಯಿಂದ ನಷ್ಟ ತುಂಬಿಕೊಳ್ಳಬಹುದು. ಈ‌ ಹಿನ್ನೆಲೆಯಲ್ಲಿ ಕೇಂದ್ರ ಸಚಿವರ ಜೊತೆಗೆ ಭೇಟಿ ಮಾಡಿದ್ದೇನೆ. ಎಥನಾಲ್ ಗೆ ಬೇಡಿಕೆ ಕೂಡ ಹೆಚ್ಚಿದೆ. ಕೇಂದ್ರ ಸರ್ಕಾರ ಪೆಟ್ರೋಲ್ ಗೆ 30% ಎಥನಾಲ್ ಬಳಸಬೇಕು ಎಂದು‌ ಸೂಚಿಸಿದೆ.  ನಾನು ಸಚಿವನಾದ ಮೇಲೆ ಕಬ್ಬು ಬೆಳೆಗಾರರಿಗೆ ಎಲ್ಲಾ ಬಾಕಿಯನ್ನು ಚುಕ್ತ ಮಾಡಲಾಗಿದೆ ಎಂದು ಸಕ್ಕರೆ ಸಚಿವ ಶಂಕರಗೌಡ ಪಾಟೀಲ್ ಮುನೇನಕೊಪ್ಪ ತಿಳಿಸಿದರು.

Key words: Union Minister -Piyosh Goel- meets- Minister -Shankar Patil