ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಿಯೋಗದಿಂದ ಕೇಂದ್ರ ಸಚಿವ ಡಾ.ಜಿತೇಂದ್ರ ಸಿಂಗ್ ಭೇಟಿ: ಮನವಿ ಸಲ್ಲಿಕೆ

ನವದೆಹಲಿ, ಡಿಸೆಂಬರ್.21,2021(www.justkannada.in) : ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಅವರ ನೇತೃತ್ವದ ನಿಯೋಗವು  ನವದೆಹಲ್ಲಿ ಇಂದು ಡಿ.21 ರಂದು ಕೇಂದ್ರ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿಗಳು; ಪ್ರಧಾನಮಂತ್ರಿ ಕಾರ್ಯಾಲಯ, ಪರಮಾಣು ಇಂಧನ ಇಲಾಖೆ ಮತ್ತು ಬಾಹ್ಯಾಕಾಶ ಇಲಾಖೆ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿತು.

ರಾಷ್ಟ್ರೀಯ ನೇಮಕಾತಿ ಸಂಸ್ಥೆ (NRA): ಸರ್ಕಾರದ ವಿವಿಧ ಇಲಾಖೆಗಳ ಹಾಗೂ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಸಿಬ್ಬಂದಿ (ನಾನ್ ಗಜಿಟೆಡ್ ಹುದ್ದೆಗಳು) ನೇಮಕಾತಿಗಾಗಿ ನಡೆಯವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಾಮಾನ್ಯ ಅರ್ಹತಾ ಪರೀಕ್ಷೆ (ಸಿಇಟಿ) ನಡೆಸಲು ರಾಷ್ಟ್ರೀಯ ನೇಮಕಾತಿ ಸಂಸ್ಥೆಯನ್ನು (National Recruitment Agency) ಸ್ಥಾಪಿಸಲಾಗುವುದು ಎಂದು 2020-21ನೇ ಸಾಲಿನ ಬಜೆಟ್‌ನಲ್ಲಿ ಪ್ರಕಟಿಸಲಾಗಿದೆ. ಈ ರಾಷ್ಟ್ರೀಯ ನೇಮಕಾತಿ ಸಂಸ್ಥೆಯು ನಡೆಸುವ ಎಲ್ಲ ಪರೀಕ್ಷೆಗಳೂ ಹಿಂದಿ, ಇಂಗ್ಲಿಷ್ ಜೊತೆಗೆ ಸಂವಿಧಾನದ ಅನುಸೂಚಿ 8ರಲ್ಲಿರುವ ಎಲ್ಲಾ 22 ಭಾಷೆಗಳಲ್ಲೂ ನಡೆಸಬೇಕು ಹಾಗೂ ಆಯಾಯ ರಾಜ್ಯ ಭಾಷೆಯನ್ನು 1 ರಿಂದ 10ನೇ ತರಗತಿಯವರೆಗೆ ಒಂದು ಭಾಷೆಯಾಗಿ ವ್ಯಾಸಂಗ ಮಾಡಿರುವವರು ಮಾತ್ರ ಆಯಾಯ ರಾಜ್ಯದಲ್ಲಿ ಅರ್ಜಿ ಸಲ್ಲಿಸಲು ಅರ್ಹರು ಎಂಬ ನಿಯಮವನ್ನು ರೂಪಿಸಬೇಕು.

ಸ್ಥಳೀಯರಿಗೆ ಉದ್ಯೋಗ ಸಿಗುತ್ತಿಲ್ಲ ಅನ್ನುವ ಕೂಗು ಹಲವು ರಾಜ್ಯಗಳಲ್ಲಿ ಕೇಳಿಬರುತ್ತಿದೆ. ಆಂಧ್ರಪ್ರದೇಶ, ಮಹಾರಾಷ್ಟ್ರ, ಹರಿಯಾಣ, ಮಧ್ಯಪ್ರದೇಶ ಹಾಗೂ ಹಲವು ರಾಜ್ಯಗಳು ಸ್ಥಳೀಯರಿಗೆ ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಲು ಸೂಕ್ತ ಕಾಯ್ದೆಗಳನ್ನು ಜಾರಿಗೆ ತಂದಿವೆ. ಪ್ರಯತ್ನ ಮಾಡುತ್ತಿವೆ. (ಅವುಗಳ ಮಾಹಿತಿ ಅಡಕದಲ್ಲಿದೆ) ಇದೊಂದು ಜ್ವಲಂತ ಸಮಸ್ಯೆ. ವಿಶ್ವದ ಹಲವು ರಾಷ್ಟ್ರಗಳು ಸ್ಥಳೀಯರಿಗೆ ಉದ್ಯೋಗದಲ್ಲಿ ಮೀಸಲು ನೀತಿಯನ್ನು ರೂಪಿಸಿವೆ. ರಾಷ್ಟ್ರದ ಐಕ್ಯತೆಯ  ದೃಷ್ಟಿಯಿಂದ ಕೇಂದ್ರ ಸರ್ಕಾರವು ಒಂದು ಹಂತದವರೆಗೆ ಅದು ರಾಜ್ಯ, ಕೇಂದ್ರ ಸರ್ಕಾರದ್ದಿರಲಿ, ಖಾಸಗೀ ವಲಯವಿರಲಿ ಶೇ. 75% ರಷ್ಟು ಹುದ್ದೆಗಳು ಸ್ಥಳೀಯರಿಗೆ ಅಂದರೆ ಆಯಾ ರಾಜ್ಯದವರಿಗೇ ಮೀಸಲಿರುವಂತೆ ಇಡೀ ರಾಷ್ಟ್ರಕ್ಕೆ ಅನ್ವಯವಾಗುವ ‘ಸ್ಥಳೀಯರಿಗೆ ಉದ್ಯೋಗ ರಾಷ್ಟ್ರೀಯ ನೀತಿ’ ರೂಪಿಸಿ ಅದನ್ನು ಸಂಸತ್‌ ನಲ್ಲಿ ಮಂಡಿಸಿ ಕಾನೂನು  ಮಾಡಬೇಕು.

ರಾಷ್ಟ್ರೀಯ ಸಿಬ್ಬಂದಿ ಆಯ್ಕೆ ಆಯೋಗದ (Staff Selection Commission of India) ಪ್ರಾದೇಶಿಕ ಕಚೇರಿ ಬೆಂಗಳೂರಿನಲ್ಲಿದೆ. ಆದರೆ, ನೇಮಕಾತಿ ಪರೀಕ್ಷೆಗಳು ಹಿಂದಿ, ಇಂಗ್ಲಿಷ್‌ ಗಳಲ್ಲಿ ಮಾತ್ರ ನಡೆಯುತ್ತಿವೆ. ಇದರಿಂದ ಸ್ಥಳೀಯರಿಗೆ (ಕನ್ನಡಿಗರಿಗೆ) ಯಾವುದೇ ಉಪಯೋಗವಾಗಿಲ್ಲ (ಸ್ಥಳೀಯ ಉದ್ಯೋಗಾಕಾಂಕ್ಷಿಗಳಿಗೆ ಪ್ರಯೋಜನವಾಗುತ್ತಿಲ್ಲ). ರೈಲ್ವೆ ನೇಮಕಾತಿ ಸಮಿತಿಯು ಕೆಳ ಹಂತದ ಹುದ್ದೆಗಳಿಗೆ ಪ್ರಾದೇಶಿಕ ಭಾಷೆಯಲ್ಲಿ ಬರೆಯಲು ಅವಕಾಶ ಕಲ್ಪಿಸಿದೆ. ಅದೇ ಮಾದರಿಯನ್ನು ಸಿಬ್ಬಂದಿ ಆಯ್ಕೆ ಆಯೋಗವೂ ಸಹ ಅನುಸರಿಸಬೇಕು ಮತ್ತು ಪ್ರಾದೇಶಿಕ ಕಚೇರಿಯ ವ್ಯಾಪ್ತಿಯಲ್ಲಿರುವ ರಾಜ್ಯದವರು ಮಾತ್ರ ಪರೀಕ್ಷೆ ತೆಗೆದುಕೊಳ್ಳಲು ಅವಕಾಶ ಇರುವಂತೆ ನಿಯಮ ರಚನೆಯಾಗಬೇಕು.

IBPS ಪ್ರಸ್ತುತ ನೇಮಕಾತಿ ಪರೀಕ್ಷೆಗಳನ್ನು ಹಿಂದಿ, ಇಂಗ್ಲಿಷ್‌ ಗಳಲ್ಲಿ ಮಾತ್ರ ನಡೆಸುತ್ತಿದೆ. ಅಭ್ಯರ್ಥಿಯ ಆಯ್ಕೆ ಮಾಡಿಕೊಳ್ಳುವ ಪ್ರಾದೇಶಿಕ ಭಾಷಾ ಜ್ಞಾನವು ಅಪೇಕ್ಷಣೀಯ ಆಗಿರುವುದರಿಂದ ಹಿಂದಿ ಮತ್ತು ಇಂಗ್ಲಿಷ್ ಜ್ಞಾನ ಇಲ್ಲದವರಿಗೆ ನೇಮಕಾತಿಯಲ್ಲಿ ಅವಕಾಶ ಸಿಗುತ್ತಿಲ್ಲ. ಅದನ್ನು ಸರಿಪಡಿಸಲು 2012ರವರೆಗೆ ಇದ್ದ ‘ಅಭ್ಯರ್ಥಿಯು ಆಯ್ಕೆ ಮಾಡಿಕೊಳ್ಳುವ ರಾಜ್ಯದ ಅಧಿಕೃತ ಭಾಷೆಯಲ್ಲಿ ಪರಿಣಿತರಾಗಿರಬೇಕು, ಮೆಟ್ರಿಕ್ಯುಲೇಷನ್/ ಎಸ್ಸೆಸ್ಸೆಲ್ಸಿ/ ಹತ್ತನೇ ತರಗತಿಗಳ ಹಂತದಲ್ಲಿ ರಾಜ್ಯದ ಅಧಿಕೃತ ಭಾಷೆಯನ್ನು ಒಂದು ಭಾಷೆಯಾಗಿ ಅಂದರೆ ಕಡ್ಡಾಯವಾಗಿ ಓದಿರಲೇಬೇಕು’ ಎಂಬ ನಿಯಮವನ್ನು ಜಾರಿಗೆ ತರಬೇಕು.

ಕೇಂದ್ರ ಲೋಕಸೇವಾ ಆಯೋಗವೂ UPSC ಸೇರಿದಂತೆ, ಕೇಂದ್ರ ಸರ್ಕಾರವು ನೇಮಕಾತಿ ಸಂಬಂಧ ನಡೆಸುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಸಂವಿಧಾನದ ಪರಿಚ್ಛೇದ-8 ರಲ್ಲಿರುವ ಎಲ್ಲ 22 ಭಾಷೆಗಳಲ್ಲಿ ನಡೆಸಬೇಕು ಮತ್ತು ಅಭ್ಯರ್ಥಿ 10ನೇ ತರಗತಿಯವರೆಗೆ ಆಯಾ ರಾಜ್ಯದಲ್ಲಿ ಓದಿರಬೇಕು ಎಂಬ ನಿಬಂಧನೆಯನ್ನು ಹಾಕಬೇಕು.

ಕೇಂದ್ರ ಸರ್ಕಾರವು ಸ್ಥಳೀಯ ಜನರೊಡನೆ ವ್ಯವಹರಿಸಬೇಕಾದ ಆದಾಯ ತೆರಿಗೆ, ಕೇಂದ್ರ ಅಬಕಾರಿ, ಜಿಎಸ್‌ಟಿ ಸೇವೆ, ಆರೋಗ್ಯ ಇಲಾಖೆ, ಇಎಸ್‌ಐ, ರೈಲ್ವೆಗಳಂತಹ ಇಲಾಖೆಗಳಿಗೆ ಆಯ್ಕೆ ಮಾಡುವ ಸಿಬ್ಬಂದಿಗಳಿಗೆ ರಾಜ್ಯ ಭಾಷೆಯಲ್ಲಿ ಪರಿಣಿತಿ ಹೊಂದಿರುವುದನ್ನು ಕಡ್ಡಾಯಗೊಳಿಸಬೇಕು ಮತ್ತು ನೇಮಕಾತಿಗೆ ಮುನ್ನವೇ ಪ್ರಾದೇಶಿಕ ಭಾಷೆಯ ಪರಿಣತಿಯನ್ನು ಪರೀಕ್ಷಿಸುವ ವ್ಯವಸ್ಥೆ ಇರಬೇಕು.

ಉದ್ಯಮಗಳು ಆಡಳಿತ ಪ್ರಶಿಕ್ಷು (Management Trainee) ಆಯ್ಕೆ ಮಾಡುವಾಗ ರಾಜ್ಯದಲ್ಲಿರುವ ವೃತ್ತಿಪರ ಕಾಲೇಜುಗಳಲ್ಲಿಯೂ ಕಡ್ಡಾಯವಾಗಿ ‘ಕ್ಯಾಂಪಸ್ ಆಯ್ಕೆ’ಪ್ರಕ್ರಿಯೆ ನಡೆಸಬೇಕು.

ಅಪ್ರೆಂಟೀಸ್‌ಗಳ ಆಯ್ಕೆ ಉದ್ಯಮಗಳಿರುವ ರಾಜ್ಯಕ್ಕೆ ಮೀಸಲಾಗಿತ್ತು. ರಾಜ್ಯ ಸರ್ಕಾರದ ವೃತ್ತಿ ತರಬೇತಿ ಇಲಾಖೆಯಲ್ಲಿ ನೋಂದಣಿ ಮಾಡಿಸಿದವರಿಗೆ ಮಾತ್ರ ಅವಕಾಶವಿತ್ತು. ಈಗ ಉದ್ಯಮಗಳೇ ನೇರವಾಗಿ ನೇಮಕ ಮಾಡಿಕೊಳ್ಳುತ್ತಿವೆ. ಅದಕ್ಕೆ ಕಾರಣ ಕೇಂದ್ರ ಸರ್ಕಾರವು ಅಪ್ರೆಂಟೀಸ್ ಕಾಯ್ದೆಗೆ 2014ರ ಡಿಸೆಂಬರ್ 5 ರಂದು ತಿದ್ದುಪಡಿ ಮಾಡಿ ‘The employer may engage apprentice from other State’ ಎಂದಿರುವುದರಿಂದ ಸ್ಥಳೀಯ ಯುವಕರು ಅಪ್ರೆಂಟೀಸ್‌ಗಳ ಆಯ್ಕೆಯಿಂದಲೂ ವಂಚಿತರಾಗುತ್ತಿದ್ದಾರೆ.

National Council for Vocational Training ನಡೆಸುವ ಪರೀಕ್ಷೆಗಳು ಇಂಗ್ಲಿಷ್ / ಹಿಂದಿಯಲ್ಲಿ ನಡೆಯವುದರ ಜೊತೆಗೆ ಕೆಲವು ರಾಜ್ಯಗಳ ಭಾಷೆಯಲ್ಲೂ ಬರೆಯಲು ಅವಕಾಶವಿದೆ. ಅದನ್ನು ಪರಿಚ್ಛೇದ-8ರಲ್ಲಿರುವ ಎಲ್ಲ ಭಾಷೆಗಳಿಗೂ ವಿಸ್ತರಿಸಬೇಕು.

ಕೇಂದ್ರ ಸರ್ಕಾರ ಹೊರಡಿಸುವ ಕಾಯ್ದೆ-ಕಾನೂನುಗಳು, ಅಧಿಸೂಚನೆಗಳು ಕೇವಲ ಹಿಂದಿ ಮತ್ತು ಆಂಗ್ಲ ಭಾಷೆಯಲ್ಲಿ ಮಾತ್ರ ಬರುತ್ತಿವೆ. ಜನರ ಸಂಪೂರ್ಣ ಸಹಭಾಗಿತ್ವವಿಲ್ಲದ ಆಡಳಿತ ಯಂತ್ರ ಯಶಸ್ಸು ಕಾಣಲು ಸಾಧ್ಯವಿಲ್ಲವೆಂದು ಮಾನ್ಯ ಪ್ರಧಾನ ಮಂತ್ರಿಗಳು ಹಲವು ಬಾರಿ ಘೋಷಿಸಿದ್ದಾರೆ. “ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಅವರ ಧ್ಯೇಯವಾಕ್ಯವಾಗಿದೆ. ಇದಕ್ಕೆ ಎಲ್ಲರ ಜತೆಗೆ ಎಲ್ಲರ ಏಳಿಗೆ ಎಲ್ಲರ ಪ್ರಯತ್ನವೂ ಸೇರುತ್ತದೆ ಇದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಆಡಳಿತದಲ್ಲಿ ಜನರ ಸಹಭಾಗಿತ್ವದ ಹಿತದೃಷ್ಟಿಯಿಂದ ಸಂವಿಧಾನದ 8ನೇ ಅನುಚ್ಛೇದದಡಿ ಬರುವ 22 ಭಾಷೆಗಳಲ್ಲಿಯೂ ಕೇಂದ್ರ ಕಾಯ್ದೆ-ಕಾನೂನುಗಳು, ನೀತಿ ನಿರೂಪಣೆಗಳು ಬರುವಂತಾಗಬೇಕು. ಇದಕ್ಕೆ ಪೂರಕವಾಗಿ ಸಂವಿಧಾನದ 343-351 ರವರೆಗಿನ ವಿಧಿಗಳಿಗೆ ಸೂಕ್ತ ತಿದ್ದುಪಡಿ ತರುವ ಅಗತ್ಯವಿದೆ ಹಾಗೂ 2021ರ ಬಜೆಟ್ ಘೋಷಣೆಯಾದ “National Languages Translation Mission” ಮೂಲಕ ಇದನ್ನು ಸಾಕಾರಗೊಳಿಸಬಹುದಾಗಿದೆ.

ರಾಷ್ಟ್ರದಲ್ಲಿರುವ ಕುಶಲಕರ್ಮಿಗಳ ಕೊರತೆಯನ್ನು ನೀಗಿಸುವಲ್ಲಿ ಕೇಂದ್ರ ಸರ್ಕಾರವು ‘ನೀಮ್’ The National Employ Ability Enhancement Scheme (NEEM) ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿಯಲ್ಲಿ ದೇಶದ ಉದ್ದಿಮೆಗಳಲ್ಲಿ ಪ್ರಶಿಕ್ಷಾರ್ಥಿಗಳಿಗೆ ವೃತ್ತಿಪರ ತರಬೇತಿಗಳನ್ನು ನೀಡಲಾಗುತ್ತಿದ್ದು, ಪ್ರಾದೇಶಿಕ ಆಶಯಗಳನ್ನು ಕಡೆಗಣಿಸಿ ಪ್ರಶಿಕ್ಷಾರ್ಥಿಗಳ ನೇಮಕಾತಿಗೆ ಆದ್ಯತೆ ನೀಡಲಾಗುತ್ತಿದೆ. ಇದರಿಂದ ಸ್ಥಳೀಯ ಪ್ರತಿಭೆಗಳಿಗೆ ಅವಕಾಶಗಳು ಇಲ್ಲವಾಗುತ್ತಿವೆ. ಪ್ರಶಿಕ್ಷಾರ್ಥಿಗಳ ಪ್ರತಿಭಾ ಪೋಷಣೆಗಳಿಗೆ ಅವಕಾಶಗಳು ಇಲ್ಲವಾಗುತ್ತಿವೆ. ಪ್ರಶಿಕ್ಷಾರ್ಥಿಗಳ ಪ್ರತಿಭಾ ಪೋಷಣೆ ಸ್ಥಳೀಯ ನೇಮಕಾತಿಗೆ ಮಾರಕವಾಗದ ರೀತಿಯಲ್ಲಿ ನೀತಿ-ನಿರೂಪಣೆಗೆ ಕೇಂದ್ರ ಸರ್ಕಾರ ಮುಂದಾಗಬೇಕಿದೆ. ಎಂಬ ವಿಷಯಗಳ ಮನವಿ ಪತ್ರ ಸಲ್ಲಿಸಿದರು.

ಪ್ರೊ: ಮಲ್ಲೇಪುರಂ ಜಿ ವೆಂಕಟೇಶ್, ಸಿ.ಮಂಜುಳ, ಎಚ್.ಜಿ.ಶೋಭಾ, ಅಶ್ವಿನಿ ಶಂಕರ್ ಎನ್.ಎಸ್,ಡಾ. ಸಿ.ಎ.ಕಿಶೋರ್, ಸುರೇಶ್ ಬಡಿಗೇರ್ ಹಾಗೂ ಪ್ರಾದಿಕಾರದ ಕಾರ್ಯದರ್ಶಿ ಡಾ.ಸಂತೋಷ ಹಾನಗಲ್ ಈ ನಿಯೋಗದಲ್ಲಿದ್ದರು.

ಈ ಸಂದರ್ಭದಲ್ಲಿ ನವದೆಹಲಿಯ ಕರ್ನಾಟಕ ಭವನದ ಅಪರ ನಿವಾಸಿ ಆಯುಕ್ತರಾದ ಸಿಮಿ ಮರಿಯಂ ಜಾರ್ಜ್ ಹಾಗೂ ಉಪ ನಿವಾಸಿ ಆಯುಕ್ತ ಎಚ್.ಪ್ರಸನ್ನ ಅವರು ಉಪಸ್ಥಿತರಿದ್ದರು.

Key words: Union Minister -Dr. Jitendra Singh –meets-kannada development autharity