ಒಲಂಪಿಕ್ ಚಿನ್ನದ ಪದಕ ವಿಜೇತ ನೀರಾಜ್ ಚೋಪ್ರಾ ಗುರು ಕಾಶಿನಾಥ ನಾಯ್ಕರಿಗೆ ಸನ್ಮಾನ, 5 ಲಕ್ಷ ನಗದು ಪುರಸ್ಕಾರ.

ಬೆಂಗಳೂರು, ಡಿಸೆಂಬರ್,31,2021(www.justkannada.in):  ಟೋಕಿಯೋ ಒಲಿಂಪಿಕ್ಸ್ ನಲ್ಲಿ ಚಿನ್ನದ ವೀರ ನೀರಜ್ ಚೋಪ್ರಾ ಅವರ ಹಿಂದಿನ ಶಕ್ತಿ ನಮ್ಮ ಕನ್ನಡಿಗ ಕಾಶಿನಾಥ ನಾಯ್ಕ, ಅವರು ನಮ್ಮ ಕನ್ನಡದ ಹೆಮ್ಮೆ ಎಂದು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ.ನಾರಾಯಣಗೌಡ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ವಿಧಾನಸೌಧದ ಸಚಿವರ ಕೊಠಡಿಯಲ್ಲಿ ಕಾಶಿನಾಥ ನಾಯ್ಕ ಅವರಿಗೆ ಐದು ಲಕ್ಷದ ಚೆಕ್ ನೀಡಿ ಗೌರವಿಸಲಾಯಿತು.

ಜಾವೆಲಿನ್ ಥ್ರೋನಲ್ಲಿ ಭಾರತದ ಅಥ್ಲೀಟ್ ನೀರಜ್ ಚೋಪ್ರಾ ಬಂಗಾರದ ಸಾಧನೆ ಮಾಡಿದ್ದು, ಅವರ ಸಾಧನೆ ಹಿಂದೆ ಇರುವುದು ನಮ್ಮ ಕನ್ನಡಿಗ ಕಾಶಿನಾಥ ನಾಯ್ಕ ಅವರು. ಹಾಗಾಗಿ, ಐದು ಲಕ್ಷ ನಗದು ಪುರಸ್ಕಾರ ನೀಡುವ ಮೂಲಕ ಅವರನ್ನು ಗೌರವಿಸಲಾಗಿದೆ. ಇದು ನಮಗೆ ತುಂಬಾ ಖುಷಿ ತಂದಿದೆ. ನೀರಜ್ ಚೋಪ್ರಾ ಅವರಿಗೆ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ ಕಾರ್ಯಕ್ರಮದಲ್ಲಿ ಸನ್ಮಾನ ಮಾಡಲಿದ್ದೇವೆ.

ಕ್ರೀಡಾ ದತ್ತು ಯೋಜನೆಯಲ್ಲಿ 75 ಕ್ರೀಡಾಪಟುಗಳನ್ನು ದತ್ತು ತೆಗೆದುಕೊಳ್ಳಲಾಗಿದ್ದು, ಈ ಕ್ರೀಡಾಪಟುಗಳನ್ನು 2024 ರ ಒಲಂಪಿಕ್ಸ್‌ಗೆ  ಕಳುಹಿಸುವ ಗುರಿ ಹೊಂದಲಾಗಿದೆ.  ಜನವರಿ 4-5 ರಂದು ಆದಿಚುಂಚನಗಿರಿಯಲ್ಲಿ ರಾಜ್ಯ ಮಟ್ಟದ ಯುವ ಜನೋತ್ಸವ ಕಾರ್ಯಕ್ರಮ ನಡೆಸಲಾಗುತ್ತಿದೆ. ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪನವರು, ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದಾರೆ. ಕ್ರೀಡಾ ಇಲಾಖೆಗೆ ಹೆಚ್ಚಿನ ಶಕ್ತಿ ತುಂಬುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲಾಗುತ್ತಿದೆ ಎಂದು ಸಚಿವ ಡಾ.ನಾರಾಯಣಗೌಡ ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಯುವ ಸಬಲೀಕರಣ ಮತ್ತು ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಆಯುಕ್ತ ಗೋಪಾಲಕೃಷ್ಣ ಸೇರಿ ಹಲವರು ಉಪಸ್ಥಿತರಿದ್ದರು.

Key words: Olympic- gold medalist- Neeraj Chopra- honors -guru Kashinath Naik-minister-narayanagowda