ಉತ್ತರ ಕನ್ನಡದಲ್ಲಿ ಭಾರಿ ಮಳೆ

ಬೆಂಗಳೂರು:ಜುಲೈ-12: ಮಲೆನಾಡು, ಕರಾವಳಿಯಲ್ಲಿ ಮಳೆ ಮುಂದುವರಿದಿದ್ದು, ಜಲಾಶಯಗಳಿಗೆ ನೀರು ಹರಿದುಬರುತ್ತಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಗುರುವಾರ ಸುರಿದ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿತ್ತು. ಇನ್ನೂ ಎರಡ್ಮೂರು ದಿನ ಈ ಭಾಗಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಸಂಚಾರಕ್ಕೆ ತೊಂದರೆ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ರಾಮನಗುಳಿ ಸಮೀಪ ಬೆಳಗ್ಗೆ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಗುಡ್ಡ ಕುಸಿದಿದೆ. ನಿಂತ ಲಾರಿ ಮೇಲೆ ಮಣ್ಣು ಕುಸಿದಿದ್ದು, ಚಾಲಕ ಪಾರಾಗಿದ್ದಾನೆ. ಸುಂಕಸಾಳ ಸಮೀಪ ಹೆದ್ದಾರಿಯಲ್ಲಿ ನೀರು ನಿಂತು 4 ತಾಸು ಸಂಚಾರ ಸ್ಥಗಿತವಾಗಿತ್ತು. ಕಾರವಾರ, ಅಂಕೋಲಾ ಭಾಗಕ್ಕೆ ಹಾಲು, ದಿನಪತ್ರಿಕೆ ಪೂರೈಕೆಯಾಗಲಿಲ್ಲ.

ಗಂಗಾವಳಿ ಮತ್ತು ಬೇಡ್ತಿ ನದಿ ತುಂಬಿ ಹರಿಯುತ್ತಿದೆ. ಅಂಕೋಲಾ ತಾಲೂಕಿನ ಬಿಳಿಹೊಯ್ಗಿ ಗ್ರಾಮದಲ್ಲಿ ಹಲವು ಮನೆಗಳಿಗೆ ನೀರು ನುಗ್ಗಿದೆ. ಪೊಲೀಸ್ ಸಿಬ್ಬಂದಿ ಕೂರ್ವೆ ಗ್ರಾಮಸ್ಥರನ್ನ ದೋಣಿ ಮೂಲಕ ಹಿಚ್ಕಡ ದಂಡೆಭಾಗಕ್ಕೆ ಕರೆಸಿಕೊಂಡರು. ಯಲ್ಲಾಪುರದ ಗುಳ್ಳಾಪುರ ದೇವಿಮೂಲೆ ಸಮೀಪ ಗುಡ್ಡ ಕುಸಿದು ಸಂಚಾರಕ್ಕೆ ತೊಂದರೆಯಾಗಿದೆ. ಕಟ್ಟೆಹಕ್ಲು ಶಾಲೆಯ ಕಾಂಪೌಂಡ್ ಗೋಡೆ, ಭಟ್ಕಳದಲ್ಲಿ 4 ಮನೆಗಳ ಗೋಡೆ, ಹಳಿಯಾಳದಲ್ಲಿ 1 ಮನೆ ಕುಸಿದಿದೆ. ಗೋಳಿಮಕ್ಕಿ-ಹಾರ್ಸಿಕಟ್ಟಾ ರಸ್ತೆಯ ನೇರ್ಲಮನೆ ಹತ್ತಿರ ಗುಡ್ಡ ಕುಸಿಯುತ್ತಿದ್ದು, ಸಂಚಾರಕ್ಕೆ ಅಡ್ಡಿಯಾಗಿದೆ.

ಜಲಾಶಯಕ್ಕೆ ಹರಿದ ನೀರು: ಕಾಳಿ ನದಿ ಅಚ್ಚುಕಟ್ಟು ಪ್ರದೇಶಗಳಲ್ಲಿ ಧಾರಾಕಾರ ಮಳೆಯಾದ್ದರಿಂದ ಕೊಡಸಳ್ಳಿ ಅಣೆಕಟ್ಟೆಗೆ ಗುರುವಾರ ಬೆಳಗ್ಗೆ 54 ಸಾವಿರ ಕ್ಯೂಸೆಕ್ ನೀರು ಹರಿದಿದ್ದು, 6 ಗೇಟ್​ಗಳನ್ನು ಒಮ್ಮೆಲೆ ತೆರೆದು ಸುಮಾರು 24 ಸಾವಿರ ಕ್ಯೂಸೆಕ್ ನೀರು ಹೊರಬಿಡಲಾಯಿತು. ಕದ್ರಾ ಅಣೆಕಟ್ಟೆ ಭರ್ತಿ ಹಂತದಲ್ಲಿದೆ. ಗೋವಾದಲ್ಲಿ ಧಾರಾಕಾರ ಮಳೆಯಿಂದ ಮಹದಾಯಿ ನದಿ ಉಕ್ಕಿ ಹರಿಯುತ್ತಿದೆ. ಶೃಂಗೇರಿ, ತೀರ್ಥಹಳ್ಳಿ ಭಾಗದಲ್ಲಿ ಹೆಚ್ಚು ಮಳೆ ಆಗುತ್ತಿರುವುದರಿಂದ ಗಾಜನೂರಿನ ತುಂಗಾ ಜಲಾಶಯಕ್ಕೆ 17,047 ಕ್ಯೂಸೆಕ್, ಲಿಂಗನಮಕ್ಕಿ ಜಲಾಶಯಕ್ಕೆ 28,451 ಕ್ಯೂಸೆಕ್ ನೀರು ಹರಿದು ಬರುತ್ತಿದೆ.

ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ 187.50 ಮಿಮೀ ಮಳೆ ಬಿದ್ದಿದೆ. ಹೊಸನಗರ, ತೀರ್ಥಹಳ್ಳಿ, ಸಾಗರ ತಾಲೂಕಿನಲ್ಲಿ ವರ್ಷಧಾರೆ ಮುಂದು ವರಿದಿದೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲೂ ಮಳೆ ಮುಂದುವರಿದಿದೆ.

ಇನ್ನೂ 3 ದಿನ ವರುಣನ ಆರ್ಭಟ
ಕರಾವಳಿ, ಮಲೆನಾಡು, ಉತ್ತರ ಮತ್ತು ದಕ್ಷಿಣ ಒಳನಾಡಿನಲ್ಲಿ ಇನ್ನು ಒಂದು ವಾರ ಮಳೆ ಮುಂದುವರಿಯಲಿದೆ. ಕರಾವಳಿ ಮತ್ತು ಮಲೆನಾಡಲ್ಲಿ ಇನ್ನು 3 ದಿನ ಭಾರಿ ಮಳೆ ಆಗಲಿದೆ. ಕರಾವಳಿ ಭಾಗದಲ್ಲಿ 40ರಿಂದ 50 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ರೈಲು ಸಂಚಾರಕ್ಕೆ ಅಡ್ಡಿ
ಹುಬ್ಬಳ್ಳಿ ಸಮೀಪದ ಕಾಲೆಂ-ಸಾಂವೊರ್ಡೆಮ್ ನಿಲ್ದಾಣಗಳ ಮಧ್ಯೆ ಗುರುವಾರ ಬೆಳಗ್ಗೆ ಗುಡ್ಡ ಕುಸಿದಿದ್ದು, ವಾಸ್ಕೊ ಡ ಗಾಮಾ ಮಾರ್ಗದಲ್ಲಿ ರೈಲು ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ತುರ್ತು ಕಾಮಗಾರಿ ಕೈಗೊಂಡ ರೈಲ್ವೆ ತಂಡ ಸಂಜೆ ವೇಳೆಗೆ ರೈಲು ಸಂಚಾರ ಪುನರಾರಂಭಗೊಳಿಸಿತು.
ಕೃಪೆ:ವಿಜಯವಾಣಿ

ಉತ್ತರ ಕನ್ನಡದಲ್ಲಿ ಭಾರಿ ಮಳೆ
North canara,heavy rain,Meteorological Department