ಇನ್ನು 100 ವರ್ಷಗಳಲ್ಲಿ ಕನ್ನಡ ಭಾಷೆ ಬಳಕೆಯಲ್ಲೇ ಇಲ್ಲವಾಗಬಹುದು..! ಬರಹಗಾರ ಬಿಳಿಮಲೆ ಆತಂಕ

ಬೆಂಗಳೂರು, ಡಿಸೆಂಬರ್ 20, 2021 (www.justkannada.in): ಭಾರತದಲ್ಲಿ ಭಾಷೆಗಳ ಬೆಳವಣಿಗೆಯಲ್ಲಿ ಆಗುತ್ತಿರುವ ಅಸಮಾನತೆಗಳಿಂದಾಗಿ ಮುಂದಿನ ೧೦೦ ವರ್ಷಗಳಲ್ಲಿ ಕನ್ನಡ ಭಾಷೆಯ ಬಳಕೆ ಮಾಯವಾಗಬಹುದು ಎಂದು ಖ್ಯಾತ ವಿದ್ವಾಂಸ ಹಾಗೂ ಬರಹಗಾರ ಪುರುಷೋತ್ತಮ ಬಿಳಿಮಲೆ ಆತಂಕ ವ್ಯಕ್ತಪಡಿಸಿದ್ದಾರೆ.

ಅವರು ಬೆಂಗಳೂರು ನಗರದಲ್ಲಿ ಭಾನುವಾರ ನಡೆದಂತಹ ಬೆಂಗಳೂರು ಸಾಹಿತ್ಯ ಉತ್ಸವದ ಮೊದಲ ದಿನದಂದು ‘ಭಾರತೀಯ ಬಹುಭಾಷೆಗಳ ಭವಿಷ್ಯ’ (The Future of Indian Multilingualism) ಎಂಬ ವಿಷಯದ ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ ಬಿಳಿಮಲೆ ಅವರು ಮುಂದಿನ 50 ವರ್ಷಗಳಲ್ಲಿ ಕನ್ನಡ ಭಾಷಾ ಬಳಕೆ ಸ್ಥಗಿತಗೊಳ್ಳಬಹುದು ಎಂಬ ಅಪಾಯದ ಕುರಿತು ತಿಳಿಸುತ್ತಾ ಯುನೆಸ್ಕೊದ ಒಂದು ವರದಿಯನ್ನು ಉಲ್ಲೇಖಿಸಿದರು.

ಈ ಹಿನ್ನೆಲೆಯಲ್ಲಿ ದೇಶದಲ್ಲಿರುವ ಈ ಸನ್ನಿವೇಶದ ಕುರಿತು ಸಮಗ್ರ ನೋಟವನ್ನು ಒದಗಿಸುವಂತಹ ರಾಷ್ಟ್ರೀಯ ಭಾಷಾ ನೀತಿಯ ಅಗತ್ಯದ ಬಗ್ಗೆ ಸೂಚಿಸಿದರು. “೧೯೭೧ ರಿಂದ ೨೦೧೧ರವರೆಗಿನ ಜನಸಂಖ್ಯೆಯ ವಿಶ್ಲೇಷಣೆಯೊಂದರ ಪ್ರಕಾರ ದೇಶದಲ್ಲಿ ಹಿಂದಿ ಮಾತನಾಡುವವರ ಸಂಖ್ಯೆ ಶೇ.೫೬ರಷ್ಟು ಹೆಚ್ಚಾಗಿದೆ. ಇದೇ ಸಮಯದಲ್ಲಿ ಕನ್ನಡ ಭಾಷೆಯನ್ನು ಮಾತನಾಡುವ ಜನಸಂಖ್ಯೆ ಕೇವಲ ಶೇ.೩.೭೫ರಷ್ಟು ಬೆಳವಣಿಗೆ ಕಂಡಿದೆ. ಅದೇ ರೀತಿ ತೆಲುಗು ಹಾಗೂ ತಮಿಳು ಭಾಷಿಕರ ಪ್ರಮಾಣ ಶೇ.೯ರಷ್ಟು ಹೆಚ್ಚಾಗಿದ್ದರೆ ತುಳು ಮಾತನಾಡುವವರ ಪ್ರಮಾಣ ಶೇ.೭ರಷ್ಟು ಹೆಚ್ಚಿದೆ. ಕನ್ನಡದ ವಿಷಯಕ್ಕೆ ಬಂದರೆ ಇದೇ ಸನ್ನಿವೇಶ ಮುಂದುವರೆದರೆ ಇನ್ನು ೧೦೦ ವರ್ಷಗಳಲ್ಲಿ ಕನ್ನಡ ಭಾಷೆಯ ಬಳಕೆಯೇ ಇಲ್ಲವಾಗಬಹುದು,” ಎಂದು ವಿವರಿಸಿದರು.

ಶಾಲೆಗಳಲ್ಲಿ ಎಂಟನೇ ತರಗತಿಯವರೆಗೆ ಪ್ರಾದೇಶಿಕ ಭಾಷೆಯಲ್ಲಿ ಕಲಿಸುವಂತೆ ಶಿಫಾರಸ್ಸು ಮಾಡಿರುವ ಪರಿಷ್ಕೃತ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ)ಯ ಕುರಿತು ಉಲ್ಲೇಖಿಸುತ್ತಾ ಅವರು, ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಬದಲಾಯಿಸುವ ಪ್ರಯತ್ನಗಳ ಬದಲಿಗೆ ಇಂತಹ ಮುಖ್ಯವಾದ ನಿಯಮಗಳನ್ನು ಅನುಷ್ಠಾನಗೊಳಿಸುವುದು ಹೆಚ್ಚು ಪರಿಣಾಮಕಾರಿ ಎಂದು ಸರ್ಕಾರದ ಗಮನ ಸೆಳೆದರು.

“ಮೊದಲು ಮೂಲಭೂತವನ್ನು ಅನುಷ್ಠಾನಗೊಳಿಸಬೇಕು. ಬಹುಮುಖ್ಯವಾಗಿ, ಸರ್ಕಾರ ಶಿಕ್ಷಣದ ಮೇಲೆ ಜಿಡಿಪಿಯ ಕನಿಷ್ಠ ಶೇ.೪ರಷ್ಟಾದರೂ ವ್ಯಯಿಸಬೇಕು ಎಂದು ಎನ್‌ಇಪಿ ಸೂಚಿಸುತ್ತದೆ. ಆದರೆ ಪ್ರಸ್ತುತ ಸರ್ಕಾರ ಶಿಕ್ಷಣ ಕ್ಷೇತ್ರದ ಮೇಲೆ ವ್ಯಯಿಸುತ್ತಿರುವ ಜಿಡಿಪಿ ಪ್ರಮಾಣ ಕೇವಲ ಶೇ.೨.೮ರಷ್ಟಿದೆ.  ಆದರೆ ಸರ್ಕಾರ ಇಂತಹ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸುತ್ತಿರುವುದಾಗಿ ಗೋಚರಿಸುವುದಿಲ್ಲ,” ಎಂದು ಅಭಿಪ್ರಾಯಿಸಿದರು.

ಈವರೆಗಿನ ಯಾವುದೇ ಸರ್ಕಾರಗಳು ನಮ್ಮ ದೇಶದಲ್ಲಿರುವ ೧೯,೨೨೬ ಭಾಷೆಗಳನ್ನು ಗುರುತಿಸಿಯೇ ಇಲ್ಲ ಎಂದು ಬಿಳಿಮಲೆ ಅವರು ವಿವರಿಸಿದರು. “ಭಾರತೀಯ ಸಂವಿಧಾನದ ೮ನೇ ಅನುಸೂಚಿಯಲ್ಲಿ ೨೨ ಭಾಷೆಗಳಿವೆ, ಆ ಪೈಕಿ ೧೮ ಭಾಷೆಗಳು ಉತ್ತರ ಭಾರತದವು. ಸೀತಾಕಾಂತ ಮಹಾಪಾತ್ರ ಸಮಿತಿಯು, ೨೦೦೮ರಲ್ಲಿಯೇ ತುಳು ಹಾಗೂ ಕೊಡವ ಭಾಷೆಗಳೂ ಒಳಗೊಂಡಂತೆ ೩೮ ಭಾಷೆಗಳನ್ನು ಇದಕ್ಕೆ ಸೇರ್ಪಡೆಗೊಳಿಸುವಂತೆ ಶಿಫಾರಸ್ಸು ಮಾಡಿತ್ತು. ಆದರೆ ಮಾನ್ಯತೆಯ ಅರ್ಹತೆಯುಳ್ಳ ಭಾಷೆಗಳ ಸಂಖ್ಯೆ ಈಗ ೯೯ಕ್ಕೆ ಏರಿಕೆಯಾಗಿದೆ. ಹೆಚ್ಚಿನ ಭಾಷೆಗಳನ್ನು ಸೇರ್ಪಡೆಗೊಳಿಸುವುದು ಎಂದರೆ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಬೇಕಾಗುತ್ತದೆ ಎಂಬ ಕಾರಣದಿಂದಾಗಿ ಕೇಂದ್ರ ಸರ್ಕಾರವು ಈ ಶಿಫಾರಸ್ಸಿನ ಪ್ರಕಾರ ಎಂಟನೇ ಅನುಸೂಚಿಯನ್ನು ತಿದ್ದುಪಡಿ ಮಾಡಲು ಹಿಂಜರಿಯುತ್ತಿದೆ,” ಎಂದು ವಿವರಿಸಿದರು.

ಕರ್ನಾಟಕದಲ್ಲಿ ತುಳು ಹಾಗೂ ಕೊಡವ ಭಾಷೆಗಳನ್ನು ಗುರುತಿಸದೇ ಇರುವುದಕ್ಕಾಗಿ ಬಿಳಿಮಲೆ ಅವರು ಕರ್ನಾಟಕ ಸರ್ಕಾರವನ್ನು ದೂಷಿಸಿದರು. “ದೇಶದ ಅನೇಕ ರಾಜ್ಯಗಳಲ್ಲಿ ಒಂದಕ್ಕಿಂತ ಹೆಚ್ಚಿನ ಸಂಖ್ಯೆಯ ಆಡಳಿತ ಭಾಷೆಗಳಿವೆ. ಆದರೆ ನಮ್ಮ ರಾಜ್ಯ ಸರ್ಕಾರ ಆ ನೀತಿಯನ್ನು ಅನುಷ್ಠಾನಗೊಳಿಸಲು ನಿರಾಕರಿಸುತ್ತಿದೆ,” ಎಂದರು.

ಮತ್ತೋರ್ವ ವಿದ್ವಾಂಸೆ ಶಕೀರಾ ಜಬಿನ್ ಬಿ, ಅವರು ಎಲ್ಲಾ ಸರ್ಕಾರಗಳೂ ಸಹ ಆಡಳಿತದಲ್ಲಿ ಹಾಗೂ ನ್ಯಾಯಾಂಗ ವ್ಯವಸ್ಥೆಗಳಲ್ಲಿ ಪ್ರಾದೇಶಿಕ ಭಾಷೆಗಳ ಬಳಕೆಯನ್ನು ಪ್ರೋತ್ಸಾಹಿಸುವಲ್ಲಿ ವಿಫಲವಾಗಿವೆ ಎಂದು ಆಪಾದಿಸಿದರು.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

Key words: Kannada language- may be -obsolete – 100 years -Writer – anxiety