ಅಕ್ರಮ ಕೆಎಎಸ್ ನೇಮಕಾತಿಗೆ ಸಕ್ರಮದ ಮುದ್ರೆ

ಬೆಂಗಳೂರು:ಮೇ-28: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್​ಸಿ) 1998ರಲ್ಲಿ ನಡೆಸಿದ್ದ ಕೆಎಎಸ್ ಅಧಿಕಾರಿಗಳ ನೇಮಕಾತಿ ಅಕ್ರಮ ಎಂಬುದು ಸಾಬೀತಾಗಿದ್ದರೂ, ಹೈಕೋರ್ಟ್ ಆದೇಶದಿಂದ ವಜಾಗೊಳ್ಳಬೇಕಾದ 25 ಮಂದಿಗೆ ಹಾಗೂ ಹಿಂಬಡ್ತಿ ಪಡೆಯಬೇಕಾದ 8 ಅಧಿಕಾರಿಗಳಿಗೆ ಸೇವಾಭದ್ರತೆ ಒದಗಿಸುವುದಕ್ಕೆ ಸುಗ್ರೀವಾಜ್ಞೆ ಹೊರಡಿಸಲು ಸರ್ಕಾರ ಮುಂದಾಗಿದೆ. ಸಿಎಂ ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಹೈಕೋರ್ಟ್ ಆದೇಶದಿಂದ ಬಾಧಿತರಾಗುವ ಅಧಿಕಾರಿಗಳ ರಕ್ಷಣೆಗಾಗಿ ಸುಗ್ರೀವಾಜ್ಞೆ ಹೊರಡಿಸಿ ರಾಜ್ಯಪಾಲರಿಗೆ ಕಳಿಸಲು ತೀರ್ವನಿಸಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಸಂಪುಟ ಸಭೆ ಬಳಿಕ ಸುದ್ದಿಗಾರರಿಗೆ ತಿಳಿಸಿದರು. ನೇಮಕಾತಿಯಲ್ಲಿನ ಅಕ್ರಮಕ್ಕೆ ನೇಮಕಾತಿ ಪ್ರಾಧಿಕಾರದ ನ್ಯೂನತೆ ಕಾರಣವೇ ಹೊರತು ಯಾವುದೇ ಅಭ್ಯರ್ಥಿ ವೈಯಕ್ತಿಕವಾಗಿ ಅಕ್ರಮ ಎಸಗಿರುವುದು ಸಾಬೀತಾಗಿಲ್ಲ. ಹೀಗಾಗಿ ನೇಮಕಾತಿ ಪ್ರಾಧಿಕಾರದ ತಪ್ಪಿನ ಕಾರಣಕ್ಕಾಗಿ 20 ವರ್ಷ ಸೇವೆ ಸಲ್ಲಿಸಿದವರಿಗೆ ಅನ್ಯಾಯ ಆಗಬಾರದು ಎಂಬ ಕಾರಣಕ್ಕೆ ಸುಗ್ರೀವಾಜ್ಞೆ ಹೊರಡಿಸಲಾಗುತ್ತಿದೆ.

ಇದರಲ್ಲಿ ತಪ್ಪಿತಸ್ಥರನ್ನು ರಕ್ಷಿಸುವ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.

ಹೈಕೋರ್ಟ್ ಆದೇಶದ ಪರಿಣಾಮ ಹೊಸದಾಗಿ ಉದ್ಯೋಗ ಅವಕಾಶ ಪಡೆಯಲಿರುವ 28 ಅಭ್ಯರ್ಥಿಗಳಿಗೆ ಸದ್ಯ ಹೊಂದಿರಬಹುದಾಗಿದ್ದ ಪದೋನ್ನತಿ ಸಹಿತ ಹುದ್ದೆಯನ್ನೇ ನೀಡಲಾಗುತ್ತದೆ. ಸೂಪರ್ ನ್ಯೂಮರರಿ ಹುದ್ದೆಗಳ ಸೃಷ್ಟಿಗೆ ಕಾನೂನಿನಲ್ಲಿ ಅವಕಾಶ ಇರುವುದರಿಂದ ಹಾಲಿ 25 ಅಧಿಕಾರಿಗಳನ್ನು ಸದ್ಯದ ಶ್ರೇಣಿಯಲ್ಲೇ ಮುಂದುವರಿಸಿ 28 ಅಧಿಕಾರಿಗಳನ್ನು ಪದೋನ್ನತಿ ಸಹಿತ ಸೇರ್ಪಡೆ ಮಾಡಿಕೊಳ್ಳಲಾಗುವುದು. ಮುಂದೆ ನಿಯಮಾನುಸಾರ ಪದೋನ್ನತಿ ಅವಕಾಶ ಪಡೆಯಲಿದ್ದಾರೆ. ಇವರ ನಿವೃತ್ತಿಯ ನಂತರ ಇವರ ಸೂಪರ್ ನ್ಯೂಮರರಿ ಹುದ್ದೆಗಳೂ ರದ್ದುಗೊಳ್ಳಲಿವೆ ಎಂದು ಹೇಳಿದರು.

ಇದೇ ವೇಳೆ ಹೈಕೋರ್ಟ್ ಆದೇಶದಂತೆ ಸಮವರ್ತಿ ಹುದ್ದೆಗಳಲ್ಲಿ ಅಂತರ ಇಲಾಖಾ ಬದಲಾವಣೆ ಹೊಂದುವ ಅಧಿಕಾರಿಗಳಿಗೂ ಸದ್ಯ ಇರುವ ಹುದ್ದೆಯಲ್ಲೇ ಅಥವಾ ಅವರು ಬಯಸುವ ಸಮವರ್ತಿ ಹುದ್ದೆಗೆ ಬದಲಾವಣೆಗೂ ಅವಕಾಶ ನೀಡಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ಯಾರಿಗೆಲ್ಲ ವಿನಾಯಿತಿ?: 1998ರ ನೇಮಕಾತಿ ಪ್ರಕ್ರಿಯೆ ಕುರಿತಂತೆ ಹೈಕೋರ್ಟ್ ನೀಡಿದ ಆದೇಶದನ್ವಯ ಸರಿಸುಮಾರು 20 ವರ್ಷ ಸೇವೆ ಸಲ್ಲಿಸಿದ 25 ಅಧಿಕಾರಿಗಳು ನೌಕರಿ ಕಳೆದುಕೊಂಡರೆ, 28 ಮಂದಿ ಹೊಸದಾಗಿ ಸೇರ್ಪಡೆ ಗೊಳ್ಳಲಿದ್ದಾರೆ. ಮೂರು ಮಂದಿ ವ್ಯಕ್ತಿತ್ವ ಪರೀಕ್ಷೆಗೆ ಹಾಜರಾಗುವ ಅವಕಾಶ ಸಿಗಲಿದೆ. ಒಟ್ಟು 8 ಮಂದಿ ಹಿಂಬಡ್ತಿ ಪಡೆಯಲಿದ್ದು, 140 ಮಂದಿ ಅಧಿಕಾರಿಗಳ ಇಲಾಖೆ ಮತ್ತು ಹುದ್ದೆಯಲ್ಲಿ ಬದಲಾವಣೆ ಆಗಲಿದೆ. ಈ ಹಿನ್ನೆಲೆಯಲ್ಲಿ 20 ವರ್ಷ ಸೇವೆ ಸಲ್ಲಿಸಿದ ಅಧಿಕಾರಿಗಳಿಗೆ ತೊಂದರೆ ಆಗದಂತೆ ಒಂದು ಬಾರಿ ವಿನಾಯಿತಿ ನೀಡುವ ಸಲುವಾಗಿ ಸುಗ್ರಿವಾಜ್ಞೆ ಹೊರಡಿಸಲು ತೀರ್ವನಿಸಲಾಗಿದೆ ಎಂದು ಕೃಷ್ಣಬೈರೇಗೌಡ ತಿಳಿಸಿದರು.
ಕೃಪೆ:ವಿಜಯವಾಣಿ

ಅಕ್ರಮ ಕೆಎಎಸ್ ನೇಮಕಾತಿಗೆ ಸಕ್ರಮದ ಮುದ್ರೆ
cabinet-decides-to-promulgate-an-ordinance-to-protect-gazetted-officers