ಮಡಿಕೇರಿ, ಅಕ್ಟೋಬರ್,6,2026 (www.justkannada.in): ಪವಿತ್ರ ಕಾವೇರಿ ತುಲಾ ಸಂಕ್ರಮಣ ಹಾಗೂ ತೀರ್ಥೋದ್ಭವ ಜಾತ್ರಾ ಮಹೋತ್ಸವದ ಅಂಗವಾಗಿ ಭಾಗಮಂಡಲದ ಐತಿಹಾಸಿಕ ಶ್ರೀ ಭಗಂಡೇಶ್ವರ ದೇವಾಲಯದಲ್ಲಿ ‘ಆಜ್ಞಾ ಮುಹೂರ್ತ’ ಧಾರ್ಮಿಕ ವಿಧಿವಿಧಾನಗಳು ಶ್ರದ್ಧಾ ಭಕ್ತಿಯಿಂದ ನೆರವೇರಿದವು.
ಭಗಂಡೇಶ್ವರ ದೇವರ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಂಗಳವಾದ್ಯಗಳೊಂದಿಗೆ ತೆರಳಿ ಶಾಸ್ತ್ರೋಕ್ತವಾಗಿ ಬಾಳೆಗೊನೆ ಕಡಿದು, ದೇವಾಲಯಕ್ಕೆ ತಂದು ಪ್ರದಕ್ಷಿಣೆ ಹಾಗೂ ‘ತಪ್ಪಡ್ಕ’ ಧಾರ್ಮಿಕ ವಿಧಿ ನೆರವೇರಿಸಲಾಯಿತು.
ಜಾತ್ರೆಯ ಪಾವಿತ್ರ್ಯ ಕಾಪಾಡುವ ಉದ್ದೇಶದಿಂದ ತೀರ್ಥೋದ್ಭವದ ಮರುದಿನದವರೆಗೆ ಭಾಗಮಂಡಲ ವ್ಯಾಪ್ತಿಯಲ್ಲಿ ಮದ್ಯ ಮತ್ತು ಮಾಂಸ ಸೇವನೆಯನ್ನು ನಿಷೇಧಿಸಲಾಗಿದೆ.
ಅಕ್ಟೋಬರ್ 15ರಂದು ಅಕ್ಷಯ ಪಾತ್ರೆಗೆ ಅಕ್ಕಿ ಹಾಕುವ ಹಾಗೂ ಕಾಣಿಕೆ ಡಬ್ಬಿಗಳನ್ನು ಇರಿಸುವ ವಿಧಿಗಳು ನಡೆಯಲಿದ್ದು, ಅಕ್ಟೋಬರ್ 17ರಂದು ರಾತ್ರಿ 7.50ಕ್ಕೆ ಮೇಷ ಲಗ್ನದಲ್ಲಿ ಪವಿತ್ರ ಕಾವೇರಿ ತೀರ್ಥೋದ್ಭವ ನೆರವೇರಲಿದೆ. ಕಾರ್ಯಕ್ರಮದಲ್ಲಿ ದೇವಾಲಯದ ತಕ್ಕ ಮುಖ್ಯಸ್ಥರು, ಆಡಳಿತಾಧಿಕಾರಿ ಹಾಗೂ ಸ್ಥಳೀಯ ಗಣ್ಯರು ಉಪಸ್ಥಿತರಿದ್ದರು.










