ಅಮೃತ ಸಿಂಚನ – 5: ಅಪಾತ್ರದಾನ

ಅಮೃತ ಸಿಂಚನ – 5

ಅಪಾತ್ರದಾನ

ಅದೊಂದು ದಿನ ಬೆಳಿಗ್ಗೆಯೇ ಒಬ್ಬ ಮನೆಯ ಮುಂದೆ ಬಂದು ನಿಂತ, ಕೆಟ್ಟದಾಗಿ ನಾಗಸ್ವರವನ್ನು ಬಾರಿಸುತ್ತಾ (“ನುಡಿಸುತ್ತಾ” – ಅಲ್ಲ!) ಬಾಗಿಲು ತೆರೆದು ನೋಡಿದರೆ ಜೊತೆಯಲ್ಲಿ ಸಾಲಂಕೃತವಾದ ಒಂದು ಬಸವಣ್ಣ ಕೂಡ ಇತ್ತು.Teachers,solve,problems,Government,bound,Minister,R.Ashok

ಮನೆಯೊಳಗೆ ಹೋಗಿ ಒಂದು ರೂಪಾಯಿ ತಂದು ಅವನ ಕೈಗೆ ಕೊಟ್ಟೆ. ನಾಗಸ್ವರ ಬಾರಿಸುವುದನ್ನು ನಿಲ್ಲಿಸಿ ಹಣ ತೆಗೆದುಕೊಂಡು ಜೋಳಿಗೆಯೊಳಗೆ ಹಾಕಿಕೊಂಡ.

ನಾನವನಿಗೆ ಕೇಳಿದೆ: “ನಿನಗೆ ಯಾಕೆ ನಾನು ಒಂದು ರೂಪಾಯಿ ಕೊಟ್ಟೆ ಗೊತ್ತಾ?” – ಅಂತ.

“ಇಲ್ಲ, ಗೊತ್ತಾಗಲಿಲ್ಲ. ಧರ್ಮ ಅಂತ ಕೊಟ್ಟಿರಬೇಕು ಸ್ವಾಮಿ”- ಅಂತ ಆತ ಉತ್ತರಿಸಿದ.

“ಖಂಡಿತ ಧರ್ಮ ಅಂತ ಅಲ್ಲ, ನಿನ್ನ ನಾಗಸ್ವರದ ಕರ್ಕಶ ಧ್ವನಿ ನಿಲ್ಲಿಸು ಅಂತ” – ಅಂದೆ ನಾನು. ಆತ ಸಪ್ಪೆ ಮುಖ ಮಾಡಿಕೊಂಡು ಮುಂದಕ್ಕೆ ಹೊರಟ.

ಇನ್ನೊಬ್ಬ ಆಗಾಗ ಬರುತ್ತಿದ್ದ, ಮಧ್ಯವಯಸ್ಸು ಮೀರಿದ ದಾಸಯ್ಯ. ಶಂಖ, ಜಾಗಟೆ, ಜೋಳಿಗೆ- ಇವಿಷ್ಟು ಅವನ ಆಸ್ತಿ. ಶಂಖ ಜಾಗಟೆಗಳ ಸದ್ದಿನಿಂದಲೇ ಅವನ ಜೀವನ. ಅವನು ಬಂದಾಗಲೆಲ್ಲ ನಮ್ಮ ಮನೆಯಲ್ಲಿ ಹಣವೋ ಅಕ್ಕಿಯೋ ದಕ್ಕುತ್ತಿತ್ತು.

ಒಂದು ಸಾರಿ ಮೈಸೂರಿನ ಮಾರುಕಟ್ಟೆಗೆ ಹೋಗಿ ಹಿಂದಿರುಗುತ್ತಿದ್ದಾಗ ಸರಸ್ವತಿಪುರಂ ರೈಲ್ವೆ ಗೇಟಿನ ಹತ್ತಿರ ಕುಡಿದು ತೂರಾಡಿ ಕೊಂಡು ಹೋಗುತ್ತಿರುವ ವ್ಯಕ್ತಿಯೊಬ್ಬ ಕಂಡ. ದಿಟ್ಟಿಸಿ ನೋಡಿದರೆ ನಮ್ಮ ಮನೆಗೆ ಆಗಾಗ ಭೇಟಿ ಕೊಡುತ್ತಿದ್ದ ದಾಸಯ್ಯನೇ ಅವನಾಗಿದ್ದ!

“ಎಲಾ ಇವನ. ನಾವು ದಾನವಾಗಿ ಕೊಡುವ ಅಕ್ಕಿ, ಹಣ ಅವನ ಸಂಸಾರದ ನಿರ್ವಹಣೆಗೆ ವ್ಯಯವಾಗದೆ ದುಶ್ಚಟಕ್ಕಾಗಿ ಪೋಲಾಗುತ್ತಿದೆ ಯಲ್ಲಿ!” ಅಂತ ಅತೀವ ಸಂಕಟವಾಯಿತು. ಅಲ್ಲಿಂದ ಮುಂದೆ ಅವನಿಗೆ ನಮ್ಮ ಮನೆಯಲ್ಲಿ ಮೂರು ಕಾಸೂ ಹುಟ್ಟುತ್ತಿರಲಿಲ್ಲ.

ಇನ್ನೊಂದು ಸಂದರ್ಭ. ಹಲವು ವರ್ಷಗಳ ಹಿಂದೆ ನಡೆದ ಕಥೆ ಇದು: ಮೈಸೂರಿನ ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಗೆ ಹುಡುಗನೊಬ್ಬ ಬಂದ, ಕೈಯಲ್ಲೊಂದು ಸರ್ಟಿಫಿಕೇಟ್ ಹಿಡಿದುಕೊಂಡು ಮಾತು ಬಾರದೆಂದು ಕೈಸನ್ನೆ ಮಾಡಿ ಹಣ ಯಾಚಿಸುತ್ತಿದ್ದ. ಅವನ ಕೈಯಲ್ಲಿ ಇರುವ ಸರ್ಟಿಫಿಕೇಟ್ ನಲ್ಲಿ “ಇವನು ಹುಟ್ಟು ಮೂಗ. ಇವನಿಗೆ ಸಾರ್ವಜನಿಕರು ಉದಾರವಾಗಿ ಧನಸಹಾಯ ಮಾಡಬೇಕು” ಎಂಬ ಮನವಿಯಿತ್ತು. ಹೇಳಿಕೇಳಿ ಕಿವಿ ಕೇಳಿಸದವರಿಗೆ, ಮಾತುಬಾರದವರಿಗೆ ಚಿಕಿತ್ಸೆ ನೀಡುವ ಸಂಸ್ಥೆಗೆ ತಾನು ಯಾಚನೆಗಾಗಿ ಬಂದಿದ್ದೇನೆ ಎಂಬ ಅರಿವು ಪಾಪ ಆ ಬಾಲಕನಿಗೆ ಇರಲಿಲ್ಲ.

ಸಂಸ್ಥೆಯ ಸಿಬ್ಬಂದಿ ವರ್ಗದವರಲ್ಲಿ ಯಾರೋ ಒಬ್ಬರು ಅವನನ್ನು ಹಿಡಿದು, “ನಿನಗೆ ಮಾತು ಬರುವ ಹಾಗೆ ಮಾಡುತ್ತೇವೆ” ಅಂತ ಪುಸಲಾಯಿಸಿ, ಶ್ರವಣ ಶಕ್ತಿ ಪರೀಕ್ಷಾ ಕೊಠಡಿಗೆ ಅವನನ್ನು ಕರೆದೊಯ್ದರು. ಅಲ್ಲಿ ಅವನನ್ನು ಹಲವಾರು ಯಂತ್ರಗಳ ಮುಂದೆ ಕೂರಿಸಲಾಯಿತು. ಜನ್ಮದಲ್ಲೇ ನೋಡಿರದಿದ್ದ ಈ ಆಧುನಿಕ ಯಂತ್ರಗಳನ್ನು ಕಂಡದ್ದೇ ತಡ, ಆ ಹುಡುಗನಿಗೆ ದಿಗಿಲಾಯಿತು. “ನನಗೆ ಮಾತನಾಡೋಕೆ ಬರುತ್ತೆ, ನನಗೆ ಏನೂ ಮಾಡಬೇಡಿ”- ಅಂತ ಕೂಗಿಕೊಂಡನಾತ!

ಸುಲಭದಲ್ಲಿ ಹಣ ಮಾಡುವ ಹುಡುಗನ ನಾಟಕದ ಪಾತ್ರವು ಹೀಗೆ ಕಳಚಿಬಿತ್ತು. ಈ ಸಂದರ್ಭವನ್ನು ಗಮನಿಸುವಾಗ ಶಂಕರ ಭಗವತ್ಪಾದರ “ಉದರ ನಿಮಿತ್ತಂ ಬಹುಕೃತ ವೇಷಂ” ಎಂಬ ಮೋಹಮುದ್ಗರದ ಸಾಲೊಂದು ನೆನಪಾಗುತ್ತದಲ್ಲವೇ?

ಇನ್ನು, ಶನಿ ಮಹಾತ್ಮನ ದೇವಸ್ಥಾನ ಕಟ್ಟುತ್ತೇವೆ ಹಣ ಕೊಡಿ ಹಾಗೆ-ಹೀಗೆ ಅಂತೆಲ್ಲ ಹೇಳಿಕೊಂಡು ಕೆಲವರು ಬರುವುದುಂಟು. ಜೀವಮಾನದಲ್ಲೇ ಅವರು ಯಾವ ದೇವಸ್ಥಾನವನ್ನೂ ಕಟ್ಟುವುದಿಲ್ಲ. ಸಾರ್ವಜನಿಕರಿಂದ ಸಿಗುವ ಹಣವು ಪ್ರಾಯಶಹ ಕುಡಿತಕ್ಕೋ, ಜೂಜಿಗೋ ದುರ್ಬಳಕೆಯಾಗುತ್ತದೆ. ಇಂತವರಿಗೆಲ್ಲ ಕೊಡುವ ದಾನವು ಅವರ ದುಶ್ಚಟ ವೆಂಬ ಮರಕ್ಕೆ ಗೊಬ್ಬರ, ನೀರು ಹಾಕಿದಂತೆಯೇ ಸರಿ. ಇದರಲ್ಲಿ ಪುಣ್ಯವೂ ಇಲ್ಲ ಪುರುಷಾರ್ಥವೂ ಇಲ್ಲ. ಇಂಥವರನ್ನು ನೋಡಿದಾಗ ಅಯ್ಯೋ ಪಾಪ ಅಂತ ಮುರುಕವಾಗುವ ಬದಲಿಗೆ ಅಸಾಧ್ಯ ಸಿಟ್ಟು ಬರುತ್ತದೆ.

ಮಹಾಭಾರತದಲ್ಲಿ ಭೀಷ್ಮರು ಯುಧಿಷ್ಠಿರನಿಗೆ ಹೇಳುತ್ತಾರೆ, “ಯುಧಿಷ್ಠಿರಾ, ದಾನ ಮಾಡುವುದರಲ್ಲಿ ಎರಡು ರೀತಿಯ ದೋಷಗಳು ಉಂಟಾಗುವ ಸಂಭವವಿದೆ.
ಅನರ್ಹರಿಗೆ ದಾನ ಮಾಡಿದ ದೋಷ ಒಂದು, ಅರ್ಹರಿಗೆ ದಾನ ಮಾಡದ ದೋಷ ಇನ್ನೊಂದು!” ಅಂತ.

ಮಹಾಭಾರತದ ಕಾಲದಲ್ಲೇ ದಾನದ ಬಗ್ಗೆ ಹೀಗೆ ಹೇಳಿದ್ದರೆ ಈ ಕಲಿಯುಗದ ಕಥೆ ಏನು? ನಿಮಗೆ ದಾನಮಾಡಲು ಇಂದು ಅರ್ಹರು ಎಲ್ಲಿ ಸಿಕ್ಕಿಯಾರು? ಹಾಗಾದ್ದರಿಂದ ಈ ಕಾಲದಲ್ಲಿ ನೀವು ದಾನ ಮಾಡಿದರೆ ಭೀಷ್ಮರು ಹೇಳಿದ ಎರಡೂ ಬಗೆಯ ದೋಷಗಳಿಗೆ ಗುರಿಯಾಗಬೇಕಾಗುತ್ತದೆ!

ಇನ್ನೊಂದು ವಿಚಾರವಿದೆ: “ಕೇವಲ ಒಬ್ಬ ನಿರ್ಗತಿಕನಾಗಿರುವುದೇ ಯಾಚಿಸಲು ಅವನಿಗಿರುವ ಅರ್ಹತೆ ಅಲ್ಲ!”

– ಜಿ. ವಿ. ಗಣೇಶಯ್ಯ.