ಅಮೃತ ಸಿಂಚನ – 38: ಯಾವುದು ವಿದ್ಯೆ ಅಲ್ಲ?

ಅಮೃತ ಸಿಂಚನ – 38: ಯಾವುದು ವಿದ್ಯೆ ಅಲ್ಲ?

ಮೈಸೂರು,ಮೇ,3,2021(www.justkannada.in):

ಅದೊಂದು ದಿನ ಬಡ ಹೆಂಗಸೊಬ್ಬಳು ಗುರುಗಳನ್ನು ಕಾಣಲು ಆಶ್ರಮಕ್ಕೆ ಬಂದಳು. ಅವಳು ವಿದ್ಯಾವಂತಳೇನೂ ಅಲ್ಲ. ಅವರಿವರ ಮನೆಯಲ್ಲಿ ಕೆಲಸ ಮಾಡಿಕೊಂಡು ಹೊಟ್ಟೆಗಾಗಿ ಒಂದಿಷ್ಟು ಹಣ ಸಂಪಾದಿಸುತ್ತಿದ್ದಳು. ಅವಳ ಗಂಡ ಕೂಲಿನಾಲಿ ಮಾಡುತ್ತಾ ಅಷ್ಟಿಷ್ಟು ಸಂಪಾದಿಸುತ್ತಿದ್ದ. ಹೇಗೋ ಸಣ್ಣ ಬಾಡಿಗೆ ಮನೆಯಲ್ಲಿ ಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದರು.jk

ಈ ಬಡ ದಂಪತಿಗಳಿಗೆ ಒಬ್ಬನೇ ಮಗ. ಅವನು ಚೆನ್ನಾಗಿ ಓದಿ ವಿದ್ಯಾವಂತನಾಗಿ ಯಾವುದಾದರೂ ಒಳ್ಳೆಯ ಕೆಲಸಕ್ಕೆ ಸೇರಿ ಕೈತುಂಬಾ ಹಣ ಸಂಪಾದಿಸಬೇಕೆಂಬುದು ಅವನ ತಾಯಿಯ ಆಸೆ. ಆದರೆ ಮಗ? ಆ ಮಗನ ಬಗೆಗೆ ಮಾತನಾಡಲೆಂದೇ ಆ ಹೆಂಗಸು ಗುರುಗಳ ಹತ್ತಿರಕ್ಕೆ ಬಂದಿದ್ದಳು.

“ಗುರುಗಳೇ, ನನ್ನ ಮಗ ಸರಿ ಇಲ್ಲ.” ಅಂದಳು ಆ ತಾಯಿ.

“ಹೌದೇನಮ್ಮ, ಯಾಕೆ, ಏನಾಗಿದೆ ಅವನಿಗೆ? ಏನು ಮಾಡ್ತಾನೆ ಅವನು? ಗುರುಗಳ ಪ್ರಶ್ನೆ.

“ಇಸ್ಕೂಲಿಗೆ ಹೋಗಾಕಿಲ್ವಂತೆ. ಎಂಟನೇ ಕಿಲಾಸ್ ಗಂಟ ಓದವನೆ. ಇನ್ನು ಮುಂದೆ ಓದಾಕಿಲ್ವಂತೆ. ಅವನಿಗೆ ಒಸಿ ಬುದ್ಧಿ ಹೇಳಬೇಕು ತಾವು. ಒಂದ್ಕಿತ ಕರ್ಕೊಂಡ್ ಬತ್ತೀನಿ.”

” ಹಾಗಾದ್ರೆ ಈಗೇನು ಮಾಡುತ್ತಿದ್ದಾನೆ ನಿನ್ನ ಮಗ?”

ಗುರುಗಳ ಪ್ರಶ್ನೆಗೆ ಕಣ್ಣುಗಳಲ್ಲಿ ನೀರು ತುಂಬಿಕೊಂಡ ಹೆಂಗಸು,

“ಬುದ್ಧಿ, ಅವನು ಇಸ್ಕೂಲ್ಗೆ ಹೋಗ್ದೆ ಅವರಿವರ ಜೊತೆ ಸೇರ್ಕಂಡು ಗಾರೆ ಕ್ಯಲಸಕ್ಕೆ ಹೋಯ್ತವ್ನೆ. ವಿದ್ಯ ಕಲೀದೆ ಹಿಂಗೆ ಗಾರೆ ಕ್ಯಲಸಕ್ಕೆ ಹೋದರೆ ಅವನ ಭವಿಸ್ಯ ಏನು ಅಂತ ನಂಗೆ ಬಾಳ ಯೋಚನೆ ಆಯ್ತದೆ ಬುದ್ಧಿ”- ಅಂತ ಆಕೆ ಮರುಗಿದಳು.

“ಅಳಬೇಡಮ್ಮಾ…… ಅಕ್ಷರ ವಿದ್ಯೆ ಮಾತ್ರ ವಿದ್ಯೆ ಅಂತ ನಿನಗೆ ಯಾರು ಹೇಳಿದರು? ಗಾರೆ ಕೆಲಸ ಕೂಡ ಒಂದು ವಿದ್ಯೆಯೇ. ಹಲವು ವರ್ಷಗಳ ತರಬೇತಿ ಅದಕ್ಕೂ ಬೇಕು. ಕುಶಲ ಗಾರೆ ಕೆಲಸದವರು ಇಲ್ಲದಿದ್ದರೆ ನಮ್ಮ ಮನೆಗಳು ತಯಾರಾಗ್ತಿದ್ದವೇನು? ಗಾರೆ ಕೆಲಸದವರು ಇಲ್ಲದೆ ಹೋದರೆ ಇಂಜಿನಿಯರು ಕರಣೆ ಹಿಡಿದು ಗಾರೆ ಕೆಲಸ ಮಾಡ್ತಾನಾ? ಅವನೇನಿದ್ದರೂ ಮನೆ ಹೀಗೆ ಹೀಗೆ ಇರಬೇಕು ಅಂತ ಪ್ಲಾನ್ ಮಾತ್ರ ಮಾಡ್ತಾನೆ. ಮನೆ ಸೃಷ್ಟಿಯಾಗುವುದು ಗಾರೆ ಕೆಲಸದವರಿಂದಲೇ……” ಹೆಂಗಸು ಮಾತನಾಡಲಿಲ್ಲ.Amrita sinchana  - 38: not,a phenomenon.

ನೋಡಮ್ಮಾ, ಇವತ್ತು ಒಳ್ಳೆಯ ಗಾರೆ ಕೆಲಸಗಾರರಿಗೆ ಒಳ್ಳೆಯ ಡಿಮ್ಯಾಂಡ್ ಇದೆ. ದಿನವೊಂದರ ಸಾವಿರ ರೂಪಾಯಿವರೆಗೂ ಸಂಪಾದನೆ ಇದೆ. ಚೆನ್ನಾಗಿ ಕೆಲಸ ಮಾಡುತ್ತಿದ್ದ ಗಾರೆ ಕೆಲಸದವನೊಬ್ಬ ನಿಧಾನಕ್ಕೆ ಮೇಸ್ತ್ರಿ ಆಗಬಹುದು. ನಂತರ ಆ ಮೇಸ್ತ್ರಿ ಕಂಟ್ರಾಕ್ಟರೂ ಹಾಗಿ ತಿಂಗಳಿಗೆ ಲಕ್ಷಾಂತರ ರೂಪಾಯಿ ಸಂಪಾದನೆ ಮಾಡಬಹುದು…….” -ಗುರುಗಳ ಮಾತುಗಳನ್ನು ಹೆಂಗಸು ತದೇಕ ಚಿತ್ತಳಾಗಿ ಕೇಳುತ್ತಿದ್ದಳು. ಗುರುಗಳು ಮುಂದುವರಿಸಿದರು:

“…… ಅಕ್ಷರ ವಿದ್ಯೆ ಕಲಿತು ಗ್ರಾಜುಯೇಟ್ ಆದ ಅನೇಕರು ನಿರುದ್ಯೋಗಿಗಳಾಗಿರುವ ಎಷ್ಟೋ ಉದಾಹರಣೆಗಳು ನಮ್ಮ ನಡುವೆ ಇವೆ. ಅವರಿಗೆ ಸ್ವಂತವಾಗಿ ಏನು ಮಾಡಲಿಕ್ಕೂ ಬರುವುದಿಲ್ಲ. ಕೆಲಸ ಸಿಗುವುದಿಲ್ಲ! ಪರಿಸ್ಥಿತಿ ಹೀಗಿದೆ. ಇಂಜಿನಿಯರಿಂಗ್ ಪದವೀಧರನೊಬ್ಬ ಗಾರೆ ಕೆಲಸದವನಿಗಿಂತಲೂ ಕಡಿಮೆ ಸಂಬಳ ತೆಗೆದುಕೊಳ್ಳುತ್ತಿರುವುದು ಅಪರೂಪವೇನಲ್ಲ. ನೀನು ಸ್ವಲ್ಪ ತಾಳ್ಮೆಯಿಂದ ಇರಬೇಕಮ್ಮಾ. ಈಗ ಹೇಗೂ ಅವನಿಗೆ ಒಂದಿಷ್ಟು ಓದು ಬರೆಹ ಬರುತ್ತದೆ. ಮುಂದೆ ಅವನಿಗೆ ಒಳ್ಳೆಯದಾಗುತ್ತದೆ”- ಅಂತ ಗುರುಗಳು ಭರವಸೆ ಕೊಟ್ಟರು.

“ನಿಮ್ಮ ಮಾತು ದಿಟ ಗುರುಗಳೇ, ನಮ್ಮ ಬೀದೀಲೇ ಒಬ್ಬ ಗಾರೆ ಕ್ಯಲಸ ಮಾಡ್ತಿದ್ದೋನು ಈಗ ದೊಡ್ಡ ಕಂಟ್ರಾಟ್ ದಾರ ಆಗವ್ನೆ. ದೊಡ್ಡದಾಗಿ ಸ್ವಂತ ಮನೇನೂ ಕಟ್ಕೊಂಡ್ ಅವ್ನೆ. ಮಕ್ಕಳ್ನ ವಳ್ಳೆ ಇಸ್ಕೂಲಿಗೂ ಸೇರಿಸವ್ನೆ”- ಅಂತ ಹೆಂಗಸು ಉದಾಹರಣೆಯೊಂದನ್ನು ಕೊಟ್ಟಳು.

ಮತ್ತೆ? ನಿನ್ನ ಕಣ್ಣೆದುರೇ ಗಾರೆ ಕೆಲಸದವನೊಬ್ಬ ಉದ್ಧಾರವಾದ ಕಥೆ ಇದೆಯಲ್ಲ? ಇನ್ನು ಮಗನ ಭವಿಷ್ಯದ ಬಗ್ಗೆ ಯಾಕೆ ತಲೆಕೆಡಿಸಿಕೊಳ್ತೀಯಾ? ಚೆನ್ನಾಗಿದೆ ಗಾರೆ ಕೆಲಸ ಕಲಿಯಲು ಅವನಿಗೆ ಪ್ರೋತ್ಸಾಹ ಕೊಡು…… ಆದರೆ ಒಂದು ಮಾತು ನೆನಪಿಟ್ಟುಕೋ. ಯಾವುದೇ ಕಾರಣಕ್ಕೂ ಅವನು ಬೀಡಿ-ಸಿಗರೇಟು ಹೆಂಡಗಳಂತಹ ಕೆಟ್ಟ ಚಟಕ್ಕೆ ದಾಸನಾಗದ ಹಾಗೆ ನೋಡಿಕೋ. ಯಾವ ಕೆಲಸವನ್ನೂ ವಿದ್ಯೆ ಅಲ್ಲ ಅಂತ ಮಾತ್ರ ತಿಳೀಬೇಡ.”

ಗುರುಗಳ ವಿವರಣೆಗಳಿಂದ ಆ ಹೆಂಗಸು ಚಿಂತೆಯಿಂದ ದೂರವಾದಳು. ಹಗುರವಾದ ಹೃದಯದೊಡನೆ ಮನೆಯ ದಾರಿ ಹಿಡಿದಳು.

ಹೊಟ್ಟೆಯ ಪಾಡಿಗಾಗಿ ಕಲಿಯುವ ಎಲ್ಲ ಕೆಲಸಗಳೂ ವಿದ್ಯೆಗಳೇ. ಯಾವ ಕೆಲಸವೂ ಕೀಳಲ್ಲ. ಯಾಕೆಂದರೆ, ಯಾವುದೇ ಕೆಲಸ ಮಾಡುವವರು ಇಲ್ಲದಿದ್ದರೂ ನಡೆಯುವುದಿಲ್ಲ ಅಲ್ಲವೇ?

– ಜಿ. ವಿ. ಗಣೇಶಯ್ಯ.