ಅಮೃತ ಸಿಂಚನ – 34: ಹೆಚ್ಚು ಗಳಿಸಿ ಕೂಡಿಡಬೇಡಿ..

ಅಮೃತ ಸಿಂಚನ – 34: ಹೆಚ್ಚು ಗಳಿಸಿ ಕೂಡಿಡಬೇಡಿ…

ಮೈಸೂರು,ಏಪ್ರಿಲ್,5,2021(www.justkannada.in):  ವಾಸಕ್ಕೆಂದು ನೀವು ದೊಡ್ಡದಾದ ಬಂಗಲೆಯೊಂದನ್ನು ಕಟ್ಟಿಸುತ್ತೀರಿ. ಒಳಾಂಗಣವನ್ನೆಲ್ಲ ಉತ್ತಮವಾಗಿ ಅಲಂಕರಿಸುತ್ತೀರಿ. ಸುತ್ತಲೂ ಅಂದವಾದ ಹೂದೋಟವನ್ನು ನಿರ್ಮಿಸುತ್ತೀರಿ. ತಿಂಗಳಿಗೆ ಲಕ್ಷಾಂತರ ವರಮಾನ ತರುವ ನೌಕರಿ ಬೇರೆ ನಿಮಗಿದೆ. ಜೊತೆಗೆ ಒಳ್ಳೆಯ ಬೆಳೆ ಬರುವ ಹತ್ತಾರು ಎಕರೆ ಜಮೀನು ಸಹ ಇದೆ.Illegally,Sand,carrying,Truck,Seized,arrest,driver

ಇಷ್ಟೆಲ್ಲಾ ಇದೆ, ಆದರೆ ನಿಮಗೆ ಸಾಯುವ ಕಾಲ ಸನ್ನಿಹಿತವಾಗುತ್ತದೆ. ಪ್ರೀತಿಯಿಂದ ಆಸೆಪಟ್ಟು ಮಾಡಿಟ್ಟ “ಇಷ್ಟೆಲ್ಲ”ವನ್ನೂ ಬಿಟ್ಟುಹೋಗಲು ನಿಮಗೆ ಇಷ್ಟವಿಲ್ಲ. ಈ ಎಲ್ಲ ಸಂಪಾದನೆಯ ಹಿಂದೆ ಹಲವು ನ್ಯಾಯಬಾಹಿರ ಕರ್ಮಗಳ ಕಥೆ ಇದೆ. ಆದ್ದರಿಂದ, ಸತ್ತ ನಂತರ ಏನಾಗಿ ಹುಟ್ಟುತ್ತೇನೋ ಎಂಬ ಭಯ ನಿಮ್ಮನ್ನು ಕಾಡುತ್ತದೆ!

ನಿಮ್ಮದು ಸಾಯುವ ವಯಸ್ಸೂ ಅಲ್ಲ. ಐವತ್ತು ದಾಟಿದೆ ಅಷ್ಟೇ. ಒಂದು ಎಂಭತ್ತು ಅಥವಾ ತೊಂಭತ್ತುವರ್ಷ ಬದುಕುವುದು ಸಾಧ್ಯವಾದರೆ ಮಾಡಿದ ಆಸ್ತಿಯಲ್ಲಿ ಒಂದಿಷ್ಟನ್ನಾದರೂ ಅನುಭವಿಸಬಹುದೆಂಬುದು ನಿಮ್ಮ ಲೆಕ್ಕಾಚಾರ. ಹಾಗಾಗಿ ಹೆಸರಾಂತ ನರಸಿಂಗ್‌ ಹೋಂಗೆ ಹೋಗಿ ಸೇರಿಕೊಳ್ಳುತ್ತೀರಿ. ದೊಡ್ಡ ದೊಡ್ಡ ವೈದ್ಯರ ನೆರವು ಪಡೆಯುತ್ತೀರಿ. ಆದರೂ ಮಲಗಿದಲ್ಲಿಯೇ ಎಲ್ಲವೂ ಆಗುವಂತಹ ಪರಿಸ್ಥಿತಿ ನಿಮಗೆ ಬರುತ್ತದೆ. ಮಾತು ನಿಂತು ಹೋಗುತ್ತದೆ. ಕೊಳವೆಗಳ ಮೂಲಕ ಆಹಾರ ಸೇವನೆ ನಿಮ್ಮ ಕರ್ಮ ಆಗುತ್ತದೆ. ಹಾಗಾಗಿ ರುಚಿ, ವಾಸನೆ, ಈ ಯಾವುದರ ಅನುಭವವೂ ನಿಮಗಿಲ್ಲ. ಆದರೂ ಸಾಯುವ ಮನಸ್ಸು ನಿಮಗಿಲ್ಲ. ಪ್ರೀತಿಯಿಂದ ಸಂಪಾದಿಸಿದ್ದನ್ನು ಇಷ್ಟು ಬೇಗ ಬಿಟ್ಟು ಹೋಗುವುದೆಂದರೆ ಒಪ್ಪುವಂತಹ ವಿಚಾರವೇ?

ಅದಕ್ಕೇ ಹೇಳಿದ್ದು, ಹೆಚ್ಚು ಗಳಿಸಲು ಹೋಗಬೇಡಿ ಅಂತ. ನಿಮ್ಮ ಸರಳ ಜೀವನಕ್ಕೆ ಎಷ್ಟು ಬೇಕೋ ಅಷ್ಟು- ಅಂದರೆ, ಪುಟ್ಟದಾದ ಒಂದು ಮನೆ. ಜೀವನ ನಿರ್ವಹಣೆಗೆ ಸಾಕಾಗುವಷ್ಟು ಸಂಪಾದನೆ ಅಷ್ಟಿದ್ದರೆ ಸಾಕು.amrita-sinchana-34-dont-earn-too-much

ಅಕಸ್ಮಾತ್ ನಿಮಗೆ ಹೆಚ್ಚಿನ ಅನುಕೂಲವಿದ್ದಲ್ಲಿ, ಯೋಗ್ಯರಾದ ಇಲ್ಲದವರಿಗೆ ಸಹಾಯ ಮಾಡಿ. ಆರ್ತರನ್ನು ಸಂತಯಿಸಿ. ವಿದ್ಯಾದಾನಕ್ಕೆ, ಆರೋಗ್ಯದಾನಕ್ಕೆ ದೇಣಿಗೆ ಕೊಡಿ. ಸಾಯುವಾಗ ನಿಮ್ಮ ಹತ್ತಿರ ಹೆಚ್ಚೇನೂ ಉಳಿದಿರುವುದಿಲ್ಲವಾದ ಕಾರಣ ಇರುವ ಚೂರುಪಾರು ಬಿಟ್ಟು ಹೋಗಲು ಅಂತಹ ದುಃಖವೇನೂ ಆಗುವುದಿಲ್ಲ. ಜೊತೆಗೆ ದಾನ-ಧರ್ಮ ಮಾಡಿದ್ದುದರಿಂದ ಪುಣ್ಯ ಸಂಚಯವಾಗಿರುತ್ತದೆಯ ಲ್ಲವೇ? ಅದರಿಂದಾಗಿ ಮರಣಾನಂತರದ ಬದುಕು ನೆಮ್ಮದಿಯದಾಗಿರುತ್ತದೆಂಬ ಭರವಸೆಯು ನಿಮಗಿರುತ್ತದೆ. ಹಾಗಾಗಿ ನೀವು ನಿಶ್ಚಿಂತೆಯಿಂದ ನೆಮ್ಮದಿಯಿಂದ ಮರಣದ ಹಾದಿ ಕಾಯಬಹುದು.

ಅಂದಹಾಗೆ ಮಕ್ಕಳಿಗಾಗಿ ಸಂಪಾದಿಸುತ್ತೇವೆ ಅಂತ ನೀವಂದುಕೊಂಡರೆ ಇನ್ನೊಂದು ಪ್ರಶ್ನೆ ಎದುರಾಗುತ್ತದೆ. ನಿಮ್ಮ ದುಡಿಮೆಯ ಹಣವನ್ನೇ ಖರ್ಚು ಮಾಡಿ ಜೀವನ ಸಾಗಿಸುವುದಾದರೆ ಮಕ್ಕಳಿಗೇನು ಕೆಲಸ? ಅವರು ಸೋಮಾರಿಗಳಾಗೇ ಇರಬೇಕೇ? ಇಲ್ಲ, ಅವರ ಅನ್ನವನ್ನು ಅವರೇ ದುಡಿದುಕೊಳ್ಳಬೇಕು ಎಂಬುದು ನಿಮ್ಮ ಅಭಿಪ್ರಾಯವಾಗಿದ್ದ ಪಕ್ಷದಲ್ಲಿ ನೀವು ಗಳಿಸಿ ಕೂಡಿಡುವುದಕ್ಕೆ ಅರ್ಥವಿಲ್ಲ!

ಈಗ ನನ್ನದೇ ಉದಾಹರಣೆಯನ್ನು ತೆಗೆದುಕೊಳ್ಳುವುದಾದರೆ, ನನ್ನ ತಂದೆ ನನಗಾಗಿ ಏನನ್ನೂ ಸಂಪಾದಿಸಿಡಲಿಲ್ಲ, ಏಕೆಂದರೆ ಅವರು ಮೊದಲೇ ತೀರಿಕೊಂಡಿದ್ದರು. ಆದರೂ ನಾನು ಈಗ ಉತ್ತಮ ಸ್ಥಿತಿಯಲ್ಲೇ ಇದ್ದೇನೆ. ಅಂದರೆ ನನಗೆ ಬೇಕಾದ್ದನ್ನು ನಾನೇ ಸಂಪಾದಿಸಿ ಕೊಂಡಿದ್ದೇನೆ. ಇದರ ತಾತ್ಪರ್ಯ ಇಷ್ಟೇ: ನಾವು ಸಂಪಾದಿಸಿ ಇಡದಿದ್ದರೆ ನಮ್ಮ ಮಕ್ಕಳು ಉಪವಾಸ ಬೀಳುವುದಿಲ್ಲ. ಅವರ ಯೋಗಕ್ಷೇಮವನ್ನು ಅವರೇ ನೋಡಿಕೊಳ್ಳುತ್ತಾರೆ.

ಜಿ. ವಿ. ಗಣೇಶಯ್ಯ.