ಅಮೃತ ಸಿಂಚನ – 18 : ದೇವರು ಬುದ್ದಿ ಒಂದನ್ನು ಬಿಟ್ಟು ಉಳಿದುದು ಕೊಟ್ಟರೆ?

ಅಮೃತ ಸಿಂಚನ – 18

ದೇವರು ಬುದ್ದಿ ಒಂದನ್ನು ಬಿಟ್ಟು ಉಳಿದುದು ಕೊಟ್ಟರೆ?

ಮೈಸೂರು,ಜನವರಿ,12,2021(www.justkannada.in): ಅವನೊಬ್ಬ ದಲಿತ ಮನುಷ್ಯ. ಮೂರು ಮಕ್ಕಳ ತಂದೆ. ಚಿಕ್ಕ ಹುಡುಗನಾಗಿದ್ದಾಗಿನಿಂದಲೂ ಸರ್ಕಾರಿ ಸಂಸ್ಥೆಯೊಂದರ ಉಪಾಹಾರ ಮಂದಿರದಲ್ಲಿ ಶುಚಿಗೊಳಿಸುವ ಕಾಯಕ ಮಾಡುತ್ತಿದ್ದ. ಅವನ ಹೆಸರನ್ನು ಮಾರುತಿ ಅಂತ ಇಟ್ಟುಕೊಳ್ಳೋಣ. ಇವನು ವಿದ್ಯಾವಂತನೂ ಅಲ್ಲ.jk-logo-justkannada-mysore

ಕೆಲವೊಮ್ಮೆ ಈ ಮಾರುತಿ “ನಮಸ್ಕಾರ ಸಾರ್”- ಅಂತ ಸರಿಯಾಗಿ ಮಾತನಾಡುತ್ತಿರುವವನು ಕೆಲವೊಮ್ಮೆ ಇದ್ದಕ್ಕಿದ್ದಂತೆ ತೂರಾಡಿಕೊಂಡು ಬಾಯಿಗೆ ಬಂದದ್ದು ಮಾತನಾಡತೊಡಗುತ್ತಾನೆ. ಇದರರ್ಥ, ಮತ್ತೇರಿಸುವ ತೀರ್ಥ ಅವನ ಮಸ್ತಕ ಕ್ಕೇರಿದೆ ಅಂತಲೇ. ಕೈಗೆ ಹತ್ತು ರುಪಾಯಿ ಸಿಕ್ಕಿದರೆ ಸಾಕು ಹೊರಗಡೆ ಹೋಗಿ ಕಂಠಪೂರ್ತಿ ಕುಡಿದು ಬರುತ್ತಾನೆ. ಯಾರು ಎಷ್ಟು ವಿಧದಲ್ಲಿ ಹೇಳಿದರೂ ಈ ದುರಭ್ಯಾಸ ಅವನಿಂದ ದೂರವಾಗಲೊಲ್ಲದು.

ನಾನೇ ಆಗಾಗ ಹೇಳುತ್ತಿರುತ್ತೇನೆ, “ಏನೋ ಮಾರುತೀ, ಯಾಕಯ್ಯಾ ಕುಡೀತೀ? ಅದೇ ದುಡ್ಡಿನಲ್ಲಿ ಹಣ್ಣು-ಹಂಪಲು ಕೊಂಡುಕೊಂಡು ತಿನ್ನು. ನಿನ್ನ ಮಕ್ಕಳಿಗೂ ಕೊಡು, ಆರೋಗ್ಯಕ್ಕೂ ಒಳ್ಳೆಯದು” -ಅಂತ.

“ನಾನೀಗ ಕುಡಿಯೋದು ಬಿಟ್ಟಿದ್ದೀನಿ ಸಾರ್”- ಅನ್ನೋದು ಅವನ ಮಾಮೂಲಿ ಉತ್ತರ. ಇನ್ಯಾವಾಗಲೋ ನೋಡಿದರೆ ಪುನಹ ತೂರಾಡುತ್ತಿರುತ್ತಾನೆ! ಜೊತೆಗೆ ಗುಟ್ಕಾ ಅಗಿಯುವ ಅಭ್ಯಾಸ, ಸಿಕ್ಕಿದಾಗ ಬಿಡಿ ಎಳೆಯುವ ಚಟ ಸಹ ಇವನಿಗೆ ಗಂಟುಬಿದ್ದಿವೆ.amrita-sinchana-18-what-god-gave-brain

ಕೆಲವೊಮ್ಮೆ ಯಾರ ಹತ್ತಿರವಾದರೂ ಗೋಗರೆಯುತ್ತಿರುತ್ತಾನೆ, “ಇಪ್ಪತ್ತು ರೂಪಾಯಿ ಕೊಡಿ ಸಾರ್, ಸಂಬಳದ ದಿನ ಕೊಡ್ತೀನಿ, ಅಕ್ಕಿಗೆ ದುಡ್ಡಿಲ್ಲ”- ಅಂತ.

ಇವನಿಗೆ ಸಾಲ ಕೊಟ್ಟರೆ ಅದು ಹಿಂದಕ್ಕೆ ಬರುವಂತಹುದಲ್ಲ ಎನ್ನುವ ವಿಚಾರ ಎಲ್ಲರಿಗೂ ಗೊತ್ತು. ಸಾಲವು ದಾನವಾಗಿ ಪರಿವರ್ತನೆಗೊಂಡು ಬಿಟ್ಟಿರುತ್ತದೆ! ಆಯಿತು.

20 ರೂಪಾಯಿಗಳನ್ನು ಮಾರುತಿಗೆ ದಾನವಾಗಿ ಕೊಟ್ಟೆನೆಂದುಕೊಳ್ಳೋಣ. ಆಗೇನಾಗುತ್ತದೆ? ಆ ಹಣ ನೇರವಾಗಿ ಸಾರಾಯಿ ಅಂಗಡಿಯನ್ನು ಸೇರುತ್ತದೆ. ಆಗ ಸಾರಾಯಿ ಕುಡಿಯಲು ವ್ಯಕ್ತಿಯೊಬ್ಬನಿಗೆ ಸಹಾಯ ಮಾಡಿದ ಪಾಪದಲ್ಲಿ ನಾವು ಭಾಗಿಗಳಾದ ಹಾಗಾಗುತ್ತದೆ. ಏಕೆಂದರೆ ಅಪಾತ್ರದಾನ ಪಾಪವೆಂದು ಮಹಾಭಾರತವು ಹೇಳುತ್ತದೆ. ಜೊತೆಗೆ ಈ ಹಣವನ್ನು ಸತ್ಪಾತ್ರನೊಬ್ಬ ನಿಗೆ ಕೊಡದೆ ಇರುವ ಪಾಪ ಬೇರೆ ನಮ್ಮನ್ನಾವರಿಸುತ್ತದೆಂದೂ ಮಹಾಭಾರತವು ಎಚ್ಚರಿಸುತ್ತದೆ!

ಇದಾಯಿತಲ್ಲ, ಈಗ ಇನ್ನೂ ಒಂದು ಪಾಪಕ್ಕೆ -ಅಲ್ಲ ಶಾಪಕ್ಕೆ ನಾವು ಗುರಿಯಾಗಬೇಕಾಗುತ್ತದೆ. ಅದಾವುದು ಗೊತ್ತೇ? ಈ ಮಾರುತಿಯ ಹೆಂಡತಿ ಮಕ್ಕಳು- “ಕೇಳಿದ ಹಾಗೆಲ್ಲ ದುಡ್ಡುಕೊಟ್ಟು ಇವನು ಕುಡಿದು ಹಾಳಾಗುವ ಹಾಗೆ ಯಾರು ಮಾಡ್ತಿದ್ದಾರೋ ಅವರ ಮನೆ ಹಾಳಾಗಿಹೋಗಲಿ!”- ಎಂಬಂತಹ ಭಯಂಕರ ಶಾಪ!

ಮಾರುತಿಗೆ ನಾನು ವಿವಿಧ ರೀತಿಯಲ್ಲಿ ಹೇಳಿ ಸೋತಿದ್ದೇನೆ. “ಮಾರುತೀ, ಕುಡಿಯುವುದರಿಂದ ನಿನಗೆ ಕ್ಷಣಿಕ ಮಜಾ ಸಿಗಬಹುದು. ಆದರೆ, ನಿನ್ನ ಹೆಂಡತಿ ಮಕ್ಕಳಿಗೆ ಅದರಿಂದ ತೊಂದರೆ ಆಗುತ್ತದಲ್ವಾ? ನಿನ್ನನ್ನು ನೋಡಿ ನಿನ್ನ ಮಕ್ಕಳೂ ನಿನ್ನ ಚಟವನ್ನು ಕಲಿಯದೆ ಬಿಡುತ್ತಾರಾ? ನೋಡು, ಕುಡಿಯುವುದಾದರೆ ನನ್ನ ಹತ್ತಿರ ಹಣ ಇಲ್ಲವಾ? ಎಷ್ಟು ಬೇಕಾದರೂ ಕುಡಿಯುವಷ್ಟು ಹಣ ನನ್ನಲ್ಲಿದೆ. ಆದರೆ ನಾನು ಕುಡಿಯುವುದಿಲ್ಲ. ಏಕೆಂದರೆ ಹಣದ ಜೊತೆಗೆ ನನ್ನ ಹತ್ತಿರ ಬುದ್ಧಿಯೂ ಇದೆ. ಕುಡಿತ ಕೆಟ್ಟದ್ದು ಅಂತ ಬುದ್ಧಿಯು ನನ್ನ ಮನಸ್ಸಿಗೆ ಹೇಳಿಕೊಟ್ಟಿದೆ. ನಿನ್ನ ಹತ್ತಿರ ಹಣವೂ ಇಲ್ಲ, ಬುದ್ಧಿಯೂ ಇಲ್ಲ. ಅದಕ್ಕೆ ಸಾಲ ಮಾಡಿಯಾದರೂ ಕುಡಿಯುತ್ತೀ!”- ಅಂತೆಲ್ಲ ಬುದ್ಧಿ ಹೇಳಿದರೂ ಅವನನ್ನು ತಿದ್ದಲು ನನ್ನಿಂದ ಸಾಧ್ಯವಾಗಲೇ ಇಲ್ಲ. ಹಾಗಾಗಿ, ಆರೇನು ಮಾಡುವರು ಆರಿಂದಲೇನಹುದು ಪೂರ್ವಜನ್ಮದ ವಿಧಿಯು ಇದು (ಮಾರುತಿಯ) ಬೆನ್ನ ಬಿಡದು- ಅಂತ ಸುಮ್ಮನಾಗಬೇಕಾಯಿತು!

“ಕೇಳದವರಿಗೆ ಬುದ್ಧಿ ಹೇಳುವುದು ವ್ಯರ್ಥ”

ಆದರೆ, ಬೇಸರ ಸಂಗತಿ ಎಂದರೆ,- “ಈ ಮಾರುತಿಯ ಮೇಲ್ಪಂಕ್ತಿಯನ್ನು ಅವನ ಮಕ್ಕಳೂ ಅನುಸರಿಸತೊಡಗಿದರೆ, ಅವನನ್ನೇ ಆದರ್ಶ ಮಾಡಿಕೊಂಡರೆ, ಅವರೆಲ್ಲರೂ ಮರಿ ಮಾರುತಿಗಳಾಗಿ ಬಿಡುತ್ತಾರಲ್ಲಾ, ಅವರು ಉನ್ನತಿಗೇರುವ ಸಾಧ್ಯತೆಯೇ ಇಲ್ಲ ವಾಗುತ್ತದಲ್ಲಾ”- ಎಂಬುದು.

– ಜಿ. ವಿ. ಗಣೇಶಯ್ಯ.