ಅಮೃತ ಸಿಂಚನ – 1: ವೃದ್ಧಾಪ್ಯ ಒಂದು ವರ ! ಮಾನವನ ಜೀವಿತದ ಗುರಿ ಏನು..?

ಅಮೃತ ಸಿಂಚನ – 1

ವೃದ್ಧಾಪ್ಯ ಒಂದು ವರ !

ಮಾನವನ ಜೀವಿತದ ಗುರಿ ಏನು?

ಆತ ಬಾಲ್ಯದಲ್ಲಿ ಆಟ-ಪಾಠಗಳಲ್ಲಿ ಮಗ್ನ. ಯೌವನದಲ್ಲಿ ಕಾಮಾಸಕ್ತ. ನಡು ವಯಸ್ಸಿನಲ್ಲಿ ಸಂಸಾರ ಸಾಗರದಲ್ಲಿ ಈಜಾಡುತ್ತಿರುತ್ತಾನೆ. ಹಾಗಾದರೆ ಮುಪ್ಪಿನಲ್ಲಿ ಆತ ಏನಾಗಬೇಕು? ಯಾವುದರಲ್ಲಿ ಆಸಕ್ತನಾಗಬೇಕು?

ಈ ವಿಚಾರಗಳನ್ನು ಗಮನಿಸಿ:

ವೃದ್ಧಾಪ್ಯದಲ್ಲಿ ಮಾನವನ ಕಾಮಾಸಕ್ತಿ ಕ್ಷೀಣಿಸುತ್ತದೆ. ದೃಷ್ಟಿ ಮಂದವಾಗುತ್ತದೆ. ಶ್ರವಣ ಶಕ್ತಿಯೂ, ಘ್ರಾಣ ಶಕ್ತಿಯೂ ಉಡುಗಿ ಹೋಗಿರುತ್ತವೆ. ಜೀರ್ಣ ಶಕ್ತಿ ಕುಂದಿ ರುವುದರ ಜೊತೆಗೆ ನಾಲಗೆಯಲ್ಲಿನ ರಸ ಗ್ರಂಥಿಗಳು ಶಕ್ತಿ ಕಳೆದುಕೊಂಡಿರುತ್ತವೆ. ಈ ಸ್ಥಿತಿಯಲ್ಲಿ ಆತ ಏನು ಮಾಡಲಿಕ್ಕೆ ಸಾಧ್ಯ?

ದೇವರು ಯಾವ ವ್ಯವಸ್ಥೆಯನ್ನೂ ಬುದ್ಧಿ ಇಲ್ಲದೆ ಮಾಡಿಲ್ಲ. ಅದನ್ನು ಅರಿಯುವ ಬುದ್ಧಿ ನಮಗೆ ಬೇಕಷ್ಟೇ.

ವೃದ್ಧಾಪ್ಯದಲ್ಲಿ ಕಾಮಾಸಕ್ತಿ ಇಲ್ಲದಂತೆ ಮಾಡಿರುವುದು ದೇವರು ಮಾನವನಿಗೆ ಕೊಟ್ಟ ಒಂದು ವರ. ಅವನನ್ನು ಆಧ್ಯಾತ್ಮದಲ್ಲಿ ಆಸಕ್ತನಾಗುವಂತೆ ಮಾಡಲು ಮಾಡಿರುವ ಒಂದು ಯುಕ್ತಿ ಇದಾಗಿದೆ.

“ಕೆಟ್ಟದ್ದನ್ನು ನೋಡದೆ ಇರಲಿ, ಕೆಟ್ಟದ್ದನ್ನು ಕೇಳದೆ ಇರಲಿ” ಅಂತ ದೃಷ್ಟಿ ಶ್ರವಣ ನಷ್ಟದ ವರಗಳನ್ನು ದೇವರು ಮಾನವನಿಗೆ ಕರುಣಿಸಿರುತ್ತಾನೆ.

Amrita Cinnamon - 1: A Groom of Old Age! What is the goal of human life ..?
ಕೃಪೆ: internet

ರಸ ಗ್ರಂಥಿಗಳು ವೃದ್ಧಾಪ್ಯದಲ್ಲಿ ದುರ್ಬಲಗೊಂಡಿರುವ ಕಾರಣ ನಾಲಗೆಯ ಚಪಲವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಸಹಕಾರಿಯಾಗುತ್ತದೆ. ಒಟ್ಟಿನಲ್ಲಿ ಈ ಎಲ್ಲದರಿಂದಾ ಗಿ ಪಂಚೇಂದ್ರಿಯಗಳ ಮೇಲೆ ನಿಯಂತ್ರಣ ಸಾಧಿಸುವುದು ವೃದ್ಧಾಪ್ಯದಲ್ಲಿ ಸುಲಭ. ಹೀಗಾದಾಗ ಮನುಷ್ಯನಿಗೆ ಇಹದಲ್ಲಿ ಅನಾಸಕ್ತಿಯುಂಟಾಗಿ ಪರದ ಕಡೆ ಗಮನ ಹರಿಸಲು ಸಾಧ್ಯವಾಗುತ್ತದೆ. ಈ ಸಂದರ್ಭದಲ್ಲಿ ಅಶಾಶ್ವತ ತೆಯ ಅರಿವು ಅವನಿಗುಂಟಾಗುತ್ತದೆ.

ಈ ಗುಟ್ಟನ್ನು ಅರಿಯದ ಮೂಢರು ಕೊನೆಯವರೆಗೂ ಆಧ್ಯಾತ್ಮದ ಕಡೆ ಗಮನ ಹರಿಸದೆ ಇಹದ ಜಂಜಾಟವನ್ನೇ ತಲೆಯಲ್ಲಿ ತುಂಬಿಕೊಂಡು ಪ್ರಾಣ ಬಿಡುತ್ತಾರೆ.

ನನಗೆ ತಿಳಿದ ಪುಣ್ಯಾತ್ಮರೊಬ್ಬರ ಮನೆಗೆ ಒಮ್ಮೆ ಹೋಗಿದ್ದೆ. ಆತ ವೃದ್ಧ. ನಡೆಯಲಾರರು. ಕಿವಿ ಮಾತ್ರ ಕೇಳಿಸುತ್ತದೆ. ದೃಷ್ಟಿ ಮಂದ. ಮಲಗಿದಲ್ಲೇ ಎಲ್ಲವೂ ಆಗಬೇಕು. ನಾನು ಅವರ ಮನೆಗೆ ಹೋದಾಗ ನಿದ್ರಿಸುತ್ತಿದ್ದರಾತ. ತಲೆಯ ಹತ್ತಿರ ಒಂದು ಟ್ರಾನ್ಸಿಸ್ಟರ್ ರೇಡಿಯೋ ಇತ್ತು.

ಮನೆಯವರು ಹೇಳಿದರು: “ಇಷ್ಟು ಹೊತ್ತೂ ಕ್ರಿಕೆಟ್ ಕಾಮೆಂಟರಿ ಕೇಳುತ್ತಿದ್ದರು. ಹಾಗೇ ನಿದ್ದೆ ಮಾಡಿದ್ದಾರೆ.”

ನನಗೆ ಆಶ್ಚರ್ಯವಾಯಿತು, ಆಚಾರ್ಯ ಶಂಕರರು ವೃದ್ಧಾಪ್ಯದಲ್ಲಿ ವ್ಯಾಕರಣ ಸೂತ್ರಗಳನ್ನು ಉರು ಹೊಡೆಯುತ್ತಿದ್ದವನನ್ನು ನೋಡಿ “ನಹಿ ನಹಿ ರಕ್ಷತಿ ಢುಕೃಞ್ಗಕರಣೆ, ಭಜಗೋವಿಂದಂ!” ಎಂದಿದ್ದರು.

“ಸಾಯುವ ಕಾಲದಲ್ಲಿ ವ್ಯಾಕರಣವು ನಿನ್ನ ರಕ್ಷಣೆಗೆ ಬರುವುದಿಲ್ಲ, ಎಲೈ ಮೂಢಾ, ಗೋವಿಂದನನ್ನು ಭಜಿಸು” ಅಂತ ಬುದ್ಧಿ ಹೇಳಿದ್ದರು.

ನಾನು ಮೇಲೆ ಹೇಳಿದ ವೃದ್ದ ವ್ಯಕ್ತಿಗೆ ಇದು ಗೊತ್ತಿಲ್ಲವೇ? ಹೇಳಿಕೇಳಿ ಆತ ಬ್ರಾಹ್ಮಣ. ವಿದ್ಯಾವಂತ ಬೇರೆ. ಯಾವ ಕಾಲಕ್ಕೆ ಯಾವುದು ಬೇಕು ಎನ್ನುವ ಪರಿಜ್ಞಾನ ಇಲ್ಲ ಎಂದರೆ ಇದಕ್ಕೆ ಏನೆನ್ನಬೇಕು? ಸಾಯುವ ಕಾಲದಲ್ಲಿ ಕ್ರಿಕೆಟ್ ಆಟಗಾರರ ಹೆಸರುಗಳು ಸಹಾಯಕ್ಕೆ ಬರುತ್ತವೆಯೇ? ದೈವ ಸಂಬಂಧವಾದ ಸಂಗೀತವನ್ನೋ, ಮಂತ್ರ ಪಠಣವನ್ನೋ, ಭಗವನ್ನಾಮ ಸಂಕೀರ್ತನೆ ಯನ್ನೋ ಕೇ ಳುವುದು ಬಿಟ್ಟು ಇದೆಂಥಾ ಕರ್ಮ!

ಆಧ್ಯಾತ್ಮಸಾಧನೆಗೆ ವೃದ್ಧಾಪ್ಯವು ಒಂದು ವರ!