ಅಮೃತ ಸಿಂಚನ – 72 : ನರಕವನ್ನು ವಿಸ್ತರಿಸಲಾಗುತ್ತಿದೆಯಂತೆ

ಮೈಸೂರು,ಜನವರಿ,10,2022(www.justkannada.in): ದೇವರ ಪೂಜೆಯನ್ನು ನೀವು ಮಾಡಬೇಡಿ. ಅದರಿಂದ ದೇವರಿಗೆ ಏನೂ ಆಗಬೇಕಾದ್ದಿಲ್ಲ. ಅಥವಾ ನೀವು ಪೂಜೆ ಮಾಡದಿದ್ದರೆ ದೇವರಿಗಾಗುವ ಹಾನಿ ಏನೂ ಇಲ್ಲ.

ನಿಮ್ಮ ಹಸಿವಿಗೆ ನೀವು ಊಟ ಮಾಡಬೇಕು. ಹಸಿವು ಅಂತ ಏನೇನನ್ನೋ ಹೊಟ್ಟೆಗೆ ತುಂಬಿಸಿಕೊಂಡರಾದೀತೇ? ಒಳ್ಳೆಯ ಆಹಾರವನ್ನೇ ಸೇವಿಸಬೇಕು. ಪಾಪದಿಂದ ದೂಷಿತವಾದ ಆಹಾರವನ್ನು ಎಂದಿಗೂ ಸೇವಿಸಬಾರದು. ಹಾಗೆ ಅಂತಹ ಆಹಾರವನ್ನು ಸೇವಿಸಿದರೆ ಕಾಯಿಲೆ ಬಂದು ನೀವು ಸತ್ತೇ ಹೋಗುತ್ತೀರಿ! ಆಗ ನಿಮಗೆ ಪಾಪ ಮಾಡುವ ಸದವಕಾಶ ತಪ್ಪಿಹೋಗುತ್ತದೆ!

“ಪಾಪವನ್ನು ಏಕೆ ಮಾಡಬೇಕು”- ಅಂತ ಹೇಳುತ್ತೀರಾ? ಕಲಿಯುಗದ ಧರ್ಮವೇ ಪಾಪ ಮಾಡುವುದು ಕಂಡ್ರೀ. ಪಾಪ ಮಾಡದೆ ನಿಮಗೆ ಸುಖ ಸಿಗುವುದು ಕಷ್ಟ!

“ಕಲಿಯುಗದಲ್ಲಿ ಪಾಪಿಗಳ ಸಂಖ್ಯೆ ಹೆಚ್ಚುತ್ತಾ ಹೋಗುತ್ತದೆ”- ಅಂತ ಮಹಾಭಾರತವು ಹೇಳುತ್ತದೆ. ನೀವು ಕಲಿಯುಗದ ಧರ್ಮಕ್ಕನುಸಾರವಾಗಿ ಮಾಂಸ ತಿನ್ನಿ, ಮದ್ಯ ಸೇವಿಸಿ, ಭ್ರಷ್ಟಾಚಾರ ಮಾಡಿ, ಪಾಪ ಪೂರಿತವಾದ ಅನ್ಯಾಯಗಳನ್ನು ಎಷ್ಟು ಬೇಕಾದರೂ ಮಾಡಿ. ನಿಮ್ಮ ಸಂತೋಷಕ್ಕಾಗಿ ಇತರರಿಗೆ ಮೋಸ ಮಾಡಿ. ಕೊಲೆ, ದರೋಡೆ, ಸುಲಿಗೆ, ಕಳ್ಳತನ, ವೇಶ್ಯಾ ಸಹವಾಸ -ಹೀಗೆ ಯಾವ ಪಾಪ ಕಾರ್ಯವನ್ನು ಬೇಕಾದರೂ ಧೈರ್ಯವಾಗಿ ಮಾಡಿ. ಏನೂ ತೊಂದರೆಯಾಗದು. ಏಕೆಂದರೆ ಹೆಚ್ಚು ಹೆಚ್ಚು ಪಾಪಿಗಳನ್ನು ತುಂಬಲು ಅನುಕೂಲವಾಗುವ ಹಾಗೆ ನರಕವನ್ನು ವಿಸ್ತರಿಸಲಾಗುತ್ತಿದೆಯಂತೆ! ಕಾರಣ, ಈಗಿರುವ ನರಕ ಜಾಗ ಸಾಲದೆ ತುಂಬಿತುಳುಕುತ್ತಿದೆಯಂತೆ!

ಸದ್ಯದ ಪರಿಸ್ಥಿತಿಯಲ್ಲಿ ಸ್ವರ್ಗವನ್ನು ವಿಶಾಲ ಗೊಳಿಸುವ ಅಗತ್ಯವೇ ಇಲ್ಲವಂತೆ. ಏಕೆಂದರೆ ಅಲ್ಲಿರುವ ಅಲ್ಪ ಸ್ಥಾನಗಳನ್ನು ತುಂಬುವುದೇ ಇತ್ತೀಚಿನ ದಿನಗಳಲ್ಲಿ ತ್ರಾಸದಾಯಕವಾಗಿದೆಯಂತೆ.

ಹಾಗಾಗಿ ಸ್ವರ್ಗವು ಖಾಲಿ ಹೊಡೆಯುತ್ತಿದೆಯಂತೆ!

– ಜಿ. ವಿ. ಗಣೇಶಯ್ಯ.