ಅಮೃತ ಸಿಂಚನ – ‌32: ಶಿವ ಮೆಚ್ತಾನೇಂದ್ರಪ್ಪಾ ?

kannada t-shirts

ಅಮೃತ ಸಿಂಚನ – ‌32: ಶಿವ ಮೆಚ್ತಾತಾನಾ?

ಮೈಸೂರು,ಮಾರ್ಚ್,22,2021(www.justkannada.in):  ಹಿಂದೆ ಮೈಸೂರಿನ ಚಾಮರಾಜೇಂದ್ರ ಟೆಕ್ನಿಕಲ್ ಇನ್ಸ್ಟಿಟ್ಯೂಟ್ ನ ಚಿತ್ರ ಕಲಾ ವಿಭಾಗದಲ್ಲಿ ಎಫ್ ಎಂ ಸೂಫಿ ಎಂಬ ಕಲಾವಿದರು ಮುಖ್ಯ ಶಿಕ್ಷಕರಾಗಿದ್ದರು. ಮುಸ್ಲಿಮರಲ್ಲಿ ಸಂತರನ್ನು ಸೂಫಿ ಎನ್ನುವುದು ವಾಡಿಕೆ. ನಿಜಕ್ಕೂ ಈ ಕಲಾವಿದರು ಗೌರವಾನ್ವಿತರಾಗಿದ್ದರಲ್ಲದೆ ಸಂತರ ಹಾಗೇ ಇದ್ದರು. ಪ್ರಾಣಿ-ಪಕ್ಷಿಗಳ ಚಿತ್ರಣದಲ್ಲಿ ಇವರದ್ದು ಎತ್ತಿದ ಕೈ.jk

ಒಮ್ಮೆ ಸೂಫಿಯವರು ಶಿಷ್ಯರುಗಳನ್ನೆಲ್ಲ ಕರೆದುಕೊಂಡು ದಸರಾ ವಸ್ತು ಪ್ರದರ್ಶನದ ಕಲಾ ವಿಭಾಗಕ್ಕೆ ಹೋದರು. ಅಲ್ಲಿ ಒಂದೊಂದು ಚಿತ್ರವನ್ನೂ ಶಿಷ್ಯರಿಗೆ ತೋರಿಸಿ ಅವುಗಳನ್ನು ವಿಮರ್ಶಾತ್ಮಕವಾಗಿ ವಿವರಿಸುತ್ತಿದ್ದರು. ಒಂದೊಂದು ಕೃತಿಯಲ್ಲಿನ ಚಿತ್ರ ಸಂಯೋಜನೆ, ವರ್ಣ ವಿನ್ಯಾಸ, ಕಲಾವಿದ ಬಳಸಿರುವ ತಂತ್ರ- ಇತ್ಯಾದಿಗಳನ್ನು ಶಿಷ್ಯರಿಗೆ ಮನಮುಟ್ಟುವಂತೆ ವಿವರಿಸುತ್ತಿದ್ದರು.

ಹತ್ತು ಅಂಗುಲ ಎತ್ತರ ಹದಿನಾಲ್ಕು ಅಂಗುಲ ಅಗಲದ ಜಲವರ್ಣ ಚಿತ್ರವೊಂದು ಅವರ ಗಮನ ಸೆಳೆಯಿತು. ಅದರ ಬಗ್ಗೆ ಒಂದಿಷ್ಟು ವಿವರಿಸಿದ ನಂತರ ಅವರು,

“ಈ ಚಿತ್ರದ ಆರ್ಟಿಸ್ಟ್ ಈ ಚಿತ್ರಕ್ಕೆ ಎಷ್ಟು ಬೆಲೆ ಮಡಿಗ್ಯವ್ನೆ ನೋಡಪ್ಪ”- ಅಂತ ಶಿಷ್ಯನೊಬ್ಬನಿಗೆ ಸೂಚಿಸಿದರು.

ಶಿಷ್ಯ ಚಿತ್ರದ ಕೆಳಗಿರುವ ಚೀಟಿಯನ್ನು ಗಮನಿಸಿ,

“ಎರಡು ಸಾವಿರ ರೂಪಾಯಿ ಸಾರ್” ಅಂದ.

“ಏನೂ, ಎಲ್ಡು ಸವ್ರ ರೂಪಾಯೀನಾ?” ಅಂತ ಅಚ್ಚರಿಯಿಂದ ಉದ್ಗರಿಸಿದರು ಸೂಫಿ.

“ಹೌದು ಸಾರ್”- ಅಂದ ಶಿಷ್ಯ.

“ಏನನ್ಯಾಯಾನಯ್ಯಾ ಇದೂ? ನಾಲ್ಕಾಣೆ ಕಾಜ್ಗ, ಎಲ್ಡಾಣೆ ಬಣ್ಣ. ಇನ್ನು ಇದನ್ನು ಮಾಡಾಕೆ ಅಮ್ಮಮ್ಮಾ ಅಂದ್ರೆ ಎಲ್ಡು ದಿವಸ ಸಾಕಪ್ಪ. ಎಲ್ಡು ದಿವಸದ ಕೆಲಸಕ್ಕೆ ಇವನಿಗೆ ಕೂಲಿ ಎಷ್ಟಿರಬೇಕು? ಒಂದು ನೂರು ರೂಪಾಯಿ ಸಾಲದ? ಇಷ್ಟಕ್ಕೆ ಎಲ್ಡು ಸವ್ರ ಮಡಿಗ್ಯವನಲ್ಲಾ, ಶಿವ ಮೆಚ್ತಾನೇಂದ್ರಪ್ಪಾ? ಬಡಬಗ್ಗರು ಆಸೆಪಟ್ಟರೆ ಕೊಂಡುಕೊಂಡು ಮನೇಲಿ ಇಂಥ ಚಿತ್ರ ನೇತಾಕಿಕೊಳ್ಳೋಕೆ ಆಯ್ತದೇನ್ರಪ್ಪಾ?”- ಅಂತ ಮರುಕ ಪಟ್ಟುಕೊಂಡರು. ತಮ್ಮಂತಹ ಕಲಾವಿದರ ಚಿತ್ರಗಳು ಬಡಬಗ್ಗರ ಕೈಗೆಟುಕುವ ಬೆಲೆಯಲ್ಲಿ ಇರಬೇಕು ಎನ್ನುವ ಹಂಬಲ ಅವರದು.

ಸೂಫಿ ಯವರ ಹೃದಯಾಂತರಾಳದಿಂದ ಬಂದ ಈ ಮಾತುಗಳಿಗೆ ಶಿಷ್ಯರೆಲ್ಲಾ ಮೂಕವಾಗಿದ್ದು ಸಹಮತ ಸೂಚಿಸಿದರು.

Amrita sinchana - 32- Shiva Mechtatana ..?
ಕೃಪೆ-internet

ಹೆಚ್ಚಿನ ಹಣಕ್ಕೆ ಆಸೆ ಪಡದೆ, ಅತಿ ಅಗ್ಗದ ಬೆಲೆಗೇ ಜೀವಿತದ ಕೊನೆಯವರೆಗೂ ಚಿತ್ರ ರಚಿಸಿ ಕೊಡುತ್ತಿದ್ದ ಸಂತ ಇವರು.

ಒಮ್ಮೆಗೇ ಲಾಭಗಳಿಸಿ ಶ್ರೀಮಂತಿಕೆಯನ್ನು ಪಡೆದು ಬಿಡಬೇಕೆಂಬ ದುರಾಸೆಯಿಂದ ತಮ್ಮ ಪದಾರ್ಥಗಳಿಗೆ ಯದ್ವಾ-ತದ್ವಾ ಬೆಲೆಯಿರಿಸಿ ಮಾರುವ ದುರಾಸೆಯ ಜನರೆಲ್ಲಿ, ಅತಿ ಕನಿಷ್ಠ ಬೆಲೆ ಯಿರಿಸಿ, ತಮ್ಮ ಚಿತ್ರಗಳು ಜನಸಾಮಾನ್ಯರನ್ನು ತಲುಪುವಂತೆ ನೋಡಿಕೊಂಡ ವಿಶಾಲ ಮನಸ್ಸಿನ ಸೂಫಿಯವರೆಲ್ಲಿ?

– ಜಿ. ವಿ. ಗಣೇಶಯ್ಯ.

key words: Amrita sinchana – 32- Shiva Mechtatana ..?

website developers in mysore