ರಂಜ-ಸುರಗಿ-8: ಸಮಯವಿದೆಯೇ?……

ಸಮಯವಿದೆಯೇ?……

ಮೈಸೂರು,ಏಪ್ರಿಲ್ ,22,2021(www.justkannada.in):

ನಾವು ಸಾಮಾನ್ಯವಾಗಿ ಹೇಳುವ ಮಾತು, ‘ನಮಗೆ ಸಮಯವಿಲ್ಲ’ ಎಂದು. ಈ ಧಾವಂತದ ಬದುಕಿನಲ್ಲಿ ನಮಗೆ ಸಮಯವೇ ಸಾಕಾಗುವುದಿಲ್ಲ. ನಗರಪ್ರದೇಶಗಳಲ್ಲಂತೂ ವಾಸ ಮಾಡುವ ಸ್ಥಳದಿಂದ ಕೆಲಸ ಮಾಡುವ ಸ್ಥಳಕ್ಕೆ ಪ್ರಯಾಣಿಸಲು ರೈಲು/ಬಸ್ಸಿಗಾಗಿ ಕಾಯುವುದು, ಬಸ್ಸು ತಪ್ಪಿ ಹೋಗುವುದೆಂಬ ಭಯದಿಂದ ತರಾತುರಿಯಲ್ಲಿ ಬೇಗ ಹೊರಡುವುದು, ಸ್ವಂತ ವಾಹನ ಅಥವಾ ಬಾಡಿಗೆ ವಾಹನದಲ್ಲಿ ಪ್ರಯಾಣದ ಕಾಲ, ಹೀಗೆ ಸಮಯ ಕಳೆದುಹೋಗುತ್ತದೆ. ಈ ಸಮಯ ವ್ಯರ್ಥವಾಯಿತು ಎಂದು ಹೇಳೋಣವೇ? ಆದರೆ ಬೇರೆ ದಾರಿ ಇಲ್ಲವಲ್ಲ? ಬಸ್ಸಿನಲ್ಲಿ ಅಥವಾ ರೈಲಿನಲ್ಲಿ ಸೀಟು ಸಿಕ್ಕರೆ ದಿನಪತ್ರಿಕೆ ಓದಬಹುದು., ಮೊಬೈಲಿನಲ್ಲಿ ವಾಟ್ಸಾಪ್ ಮಾಡುವುದು-ನೋಡುವುದು-ಉತ್ತರಿಸುವುದು, ಫೇಸ್ ಬುಕ್ ನೋಡುವುದು-ಪ್ರತಿಕ್ರಿಯಿಸುವುದು, ಯೂಟ್ಯೂಬ್, ಪೋಡ್ ಕಾಸ್ಟ್  ಇತ್ಯಾದಿಗಳಿಂದ ನಮಗೆ ಆಸಕ್ತಿಯಿರುವ ವಿಷಯಗಳ ಬಗ್ಗೆ ತಿಳಿದುಕೊಳ್ಳುವುದೋ ಹೀಗೆ ಏನಾದರೂ ಮಾಡಬಹುದು. ಈ ಆಧುನಿಕ ತಾಂತ್ರಿಕ ಸೌಲಭ್ಯಗಳಿಂದ-ಸಾಮಾಜಿಕ ಜಾಲತಾಣಗಳಿಂದ ನಮ್ಮ ಸಮಯ ವ್ಯರ್ಥವಾಗುವುತ್ತಿರುವುದಂತೂ ಅಷ್ಟೇ ಸತ್ಯವಾದ ಸಂಗತಿ. ಖಂಡಿತವಾಗಿಯೂ ಇದರಲ್ಲಿ ನಾವು ಭಾಗವಹಿಸದಿದ್ದರೆ ನೆಮ್ಮದಿಯಾಗಿರುತ್ತೇವೆ ಎಂದು ಎಷ್ಟೋ ಸಲ ಅನ್ನಿಸಿದ್ದಿದೆ. ನಾವು ಯೋಜಿಸಿಕೊಂಡ ಕೆಲಸಗಳನ್ನು ದಕ್ಷತೆಯಿಂದ ಮಾಡಿ ಸಮಯದ ಸದುಪಯೋಗ ಮಾಡಿಕೊಳ್ಳಬಹುದು. ಸಮಯದ ಸದುಪಯೋಗ ಎಂಬುದು ಸಹ ನಾವು ಅಂದುಕೊಂಡಂತೆ,  ಸದುಪಯೋಗವೋ ಅಲ್ಲವೋ ಅನ್ನುವುದಕ್ಕೆ ಉತ್ತರಿಸುವುದೂ ಅಷ್ಟೇ ಕಷ್ಟದ ಮಾತು. ಅಂತೂ ನಮ್ಮ ಹಿರಿಯರು ಹೇಳಿಕೊಂಡು ಬಂದಂತೆ ಸಮಯ ಹಾಳು ಮಾಡಬೇಡಿ ಎಂಬ ಮಾತನ್ನು ಪಾಲಿಸುವುದು ಒಳ್ಳೆಯದು. ಹದಿನಾಲ್ಕನೇ ಶತಮಾನದ ಆಂಗ್ಲ ಕವಿ ಜೆಫ್ರಿ ಚಾಸರ್ ಹೇಳಿದ ಒಂದು ಮಾತು, ಪ್ರಸಿದ್ಧ ಗಾದೆ ಮಾತಾಗಿದೆ: ‘ಕಾಲ ಮತ್ತು ಅಲೆ ಯಾರನ್ನೂ ಕಾಯುವುದಿಲ್ಲ.’ ( Time and tide waits for none)

ಸಮಯವನ್ನು ದಕ್ಷತೆಯಿಂದ ನಿರ್ವಹಿಸುವುದು ಹೇಗೆ? ಇಂಗ್ಲಿಷಿನಲ್ಲಿ Time Management ಅಂದರೆ ನಮಗೆ ಬೇಗ ಅರ್ಥವಾಗುತ್ತದೆ. ಒಂದು ಕೆಲಸವನ್ನು ಏಕಾಗ್ರತೆಯಿಂದ ಮಾಡಿದರೆ ಅದನ್ನು ಬೇಗ ಮಾಡಿ ಮುಗಿಸಬಹುದು. ಆದರೆ ಅಷ್ಟು ಏಕಾಗ್ರತೆಯಿಂದ ನಾವು ಮಾಡುತ್ತೇವೆಯೇ? ಒಂದು ಕೆಲಸ ಮಾಡುತ್ತಿರುವಾಗಲೇ ಇನ್ನೊಂದು ಕೆಲಸದ ಆಲೋಚನೆ ಮನಸ್ಸಿಗೆ ಬರುತ್ತದೆ. ಈ ಕೆಲಸ ಬಿಟ್ಟು ಆ ಕೆಲಸ ಮಾಡತೊಡಗುತ್ತೇವೆ. ಕಛೇರಿಯಲ್ಲಿ ಕೆಲಸ ಮಾಡುವಾಗಲೂ ಆದ್ಯತೆಯ ಮೇಲೆಯೇ ಕೆಲಸ ಮಾಡಬೇಕಾಗುತ್ತದೆ. ಒಮ್ಮೊಮ್ಮೆ ಬಾಕಿ ಇರುವ ಕೆಲಸ-ಕಾರ್ಯಗಳನ್ನು ಮುಗಿಸಲೇಬೇಕೆಂದು ಪಣತೊಟ್ಟು ಕಚೇರಿಗೆ ಬಂದಿರುತ್ತೇವೆ. ಅಲ್ಲಿ ಬಂದ ಮೇಲೆ ನಮ್ಮ ಮೇಲಾಧಿಕಾರಿಗಳ ಆದೇಶದಂತೆ ಬೇರೊಂದು ಕಾರ್ಯ ನಿರ್ವಹಿಸಬೇಕಾಗುತ್ತದೆ. ಹಾಗಾದರೆ ನಾವು ಮೊದಲು ಮಾಡಹೊರಟ ಕೆಲಸವನ್ನು ಯಾವಾಗ ಮಾಡುವುದು? ಹೀಗೆ ನೆವ ಹೇಳಲಾಗುತ್ತದೆಯೇ? ಅದಕ್ಕೆ ಬೇಕಾದ ಕಾಲದ ಅವಕಾಶವನ್ನು ನಾವೇ ಮಾಡಿಕೊಳ್ಳಬೇಕು. ಅಂದರೆ ನಾವು ಮನಸ್ಸಿನಲ್ಲಿ ಅದಕ್ಕೆ ಅವಕಾಶ ಮಾಡಿಕೊಳ್ಳಬೇಕು. ಕಾಲ ಮತ್ತು ಅವಕಾಶ (Time and Space) ಈ ಎರಡೂ ಪರಿಕಲ್ಪನೆಗಳ ಬಗ್ಗೆ ತತ್ವಶಾಸ್ತ್ರಜ್ಞರು, ಭೌತವಿಜ್ಞಾನಿಗಳು ಮತ್ತು ಗಣಿತಶಾಸ್ತ್ರಜ್ಞರು ಆಳವಾಗಿ ಚಿಂತಿಸಿ ರಚಿಸಿರುವ ಸಾಹಿತ್ಯ ಅಗಾಧವಾಗಿದೆ. ಈ ಬೇರೆ ಬೇರೆ ಶಿಸ್ತುಗಳ ಚಿಂತನೆಗಳು ಪರಸ್ಪರ ಪೂರಕವಾಗಿಯೂ, ವೈರುಧ್ಯದಿಂದ ಕೂಡಿಯೂ ಇದ್ದು, ಇವೆಲ್ಲವುಗಳನ್ನು ಅರಿಯಲು ನಮ್ಮ ಅನುಭವವೇ ಆಧಾರವಾಗುತ್ತದೆ.jk

ಆದರೆ ಕೆಲವರು ಸಮಯವನ್ನು ಎಷ್ಟು ಚೆನ್ನಾಗಿ ಬಳಸಿಕೊಳ್ಳುತ್ತಾರೆ ಎಂದೆನಿಸುತ್ತದೆ. ತಮ್ಮ ವೃತ್ತಿಯನ್ನು ಚೆನ್ನಾಗಿ ನಿರ್ವಹಿಸುತ್ತಾ, ಪ್ರವಾಸಗಳನ್ನೂ ಮಾಡುತ್ತಾ, ಸಾಮಾಜಿಕ ಸಂಘಟನೆಗಳಲ್ಲೂ ಸಕ್ರಿಯರಾಗಿದ್ದುಕೊಂಡು, ಓದು, ಬರವಣಿಗೆಯನ್ನೂ ಮಾಡಿ ಅಲ್ಲಿಯೂ ಅವರದೇ ಆದ ಛಾಪು ಮೂಡಿಸಿಕೊಂಡಿರುವ ಬಗ್ಗೆ ಸಂತೃಪ್ತಿ ಹೊಂದಿರುತ್ತಾರೆ. ನಮಗಿರುವಂತೆಯೇ ಅವರಿಗೂ ದಿನಕ್ಕೆ ಇಪ್ಪತ್ತನಾಲ್ಕು ಗಂಟೆಗಳೇ ಇರುವುದು! ಹೀಗೆ ವೃತ್ತಿ-ಪ್ರವೃತ್ತಿಗಳೆರಡನ್ನೂ ನಿಭಾಯಿಸುತ್ತಿರುವ ನನ್ನ ಗೆಳತಿಯೊಬ್ಬರನ್ನು ಈ ಬಗ್ಗೆ ಕೇಳಿದಾಗ ಅವರು ಹೇಳಿದ್ದು ಹೀಗೆ, “ ಇವತ್ತು ಇಲ್ಲಿಗೆ ಬಂದ ಉದ್ದೇಶವೇನಿತ್ತೋ ಅದರ ಬಗ್ಗೆ ಮಾತ್ರ ಯೋಚಿಸಿ ಅದನ್ನು ಮಾಡ್ತೀನಿ, ನನ್ನ ವೃತ್ತಿಯ ಬಗ್ಗೆ ನಾನಿಲ್ಲಿ ಯೋಚಿಸುವುದಿಲ್ಲ. ನಾನು ನನ್ನ ವೃತ್ತಿಯನ್ನು ನಿರ್ವಹಿಸುತ್ತಿರುವಾಗ ಬೇರೆ ಏನೂ ಯೋಚಿಸುವುದಿಲ್ಲ, ಅಲ್ಲಿಯೇ ನನ್ನನ್ನು ತೊಡಗಿಸಿಕೊಂಡಿರುತ್ತೇನೆ. ಈ ರೀತಿ ಮಾಡುವುದರಿಂದ ನನ್ನಲ್ಲಿ ಆಂತರಿಕ ಶಾಂತಿಯನ್ನು ಕಂಡುಕೊಂಡಿದ್ದೇನೆ. ಈ ರೀತಿ ಏಕಾಗ್ರತೆಯಿಂದ  ಕೆಲಸ ಮಾಡುವುದಕ್ಕಾಗಿ ನಾನು ಧ್ಯಾನ ಇತ್ಯಾದಿ ಏನೂ ಮಾಡುವುದಿಲ್ಲ”

ಇವೆಲ್ಲಾ ನಮ್ಮಂತಹ ಮಧ್ಯಮವರ್ಗದವರ, ಸರ್ಕಾರಿ-ಖಾಸಗಿ ಉದ್ಯೋಗದಲ್ಲಿರುವವರ ಸಮಯದ ನಿರ್ವಹಣೆಯ ಪರಿಕಲ್ಪನೆ ಇರಬಹುದು. ಹಾಗಾದರೆ ಶ್ರಮಜೀವಿಗಳು, ಆ ದಿನದ ದುಡಿಮೆಯಲ್ಲಿಯೇ ಅನ್ನ ಕಾಣಬೇಕಾದವರ ಸಮಯದ ನಿರ್ವಹಣೆಯ ಪರಿಕಲ್ಪನೆ ಹೇಗಿರಬಹುದು? ಗ್ರಾಮೀಣ ಪ್ರದೇಶಗಳಲ್ಲಿ ಕೃಷಿಯಲ್ಲಿ ತೊಡಗಿಕೊಂಡು, ಪಶುಪಾಲನೆ ಮಾಡಿಕೊಂಡಿರುವವರಿಗೆ ಒಂದು ದಿನ ಮನೆಯಿಂದ ಹೊರಹೊರಟರೂ ಅವರಿಗೇ ಮನೆಯದೇ ಚಿಂತೆ.  ಮನೆಯಿಂದ ಬೇರೆಡೆ ಹೋಗುವುದರಿಂದ ತಮ್ಮ ಸಮಯ ಪೋಲಾಗುತ್ತಿದೆ ಎಂದು ಪೇಚಾಡಿಕೊಳ್ಳುವುದನ್ನು ನೋಡಿದ್ದೇನೆ.

ಇತ್ತೀಚೆಗೆ ಆಂಗ್ಲ ಲೇಖಕ ಆರ್ನಾಲ್ಡ್ ಬೆನ್ನೆಟ್ ಎಂಬುವವನ How to Live on 24 Hours a Day  ಎಂಬ ಚಿಕ್ಕ ಪುಸ್ತಕವನ್ನು ಓದಿದೆ. ಸಮಯವೆನ್ನುವುದು ಹಣಕ್ಕಿಂತ ಹೆಚ್ಚು ಅಮೂಲ್ಯವಾದುದು, ಕಳೆದುಹೋದ ಸಮಯ ಮತ್ತೆ ಸಿಗುವುದಿಲ್ಲ, ಅದನ್ನು ಪೋಲು ಮಾಡಿದವರು ಹೇಗೆ ಮುಂದೆ ತೊಂದರೆಗೊಳಗಾಗಬೇಕಾಗುತ್ತದೆ ಎಂಬುದರ ಬಗ್ಗೆ ಚರ್ಚಿಸಿದ್ದಾನೆ. ಸುಮ್ಮನೆ ಅಸ್ತಿತ್ವದಲ್ಲಿರುವುದಕ್ಕಿಂದ 24 ಗಂಟೆಗಳಲ್ಲಿ ಬದುಕುವುದು ಹೇಗೆ ಎಂಬ ಬಗ್ಗೆ ಸ್ವಲ್ಪ ಲಘು ಧಾಟಿಯಲ್ಲಿಯೇ ಪ್ರಾಯೋಗಿಕ ಸಲಹೆಗಳನ್ನು ಕೊಡುತ್ತಾನೆ.

ಖ್ಯಾತ ಕವಯತ್ರಿ ಸವಿತಾ ನಾಗಭೂಷಣ ಇವರ ‘ಸಮಯವಿದೆಯೇ ಪಪ್ಪಾ’  ಕವನದ  ಒಂದೆರಡು ಸಾಲುಗಳನ್ನು ನೋಡೋಣ….

ಸಮಯವಿದೆಯೇ ಪಪ್ಪಾ?

ಆಚೆ ಗುಡ್ಡದಾಚೆ ಇದೆ ನದಿ

ಆಹಾ! ಎಷ್ಟು ಚಂದ  ಅದರ ತುದಿ

ಅಬ್ಬಾ… ಎಷ್ಟು ದೊಡ್ಡ ಸುಳಿ

ಹೇಗೋ ಪಾರಾದೆ ನುಸುಳಿ

ಸರ್ರೆಂದು ಜಾರುವುದು ನುಣ್ಣನೆಯ ಹಾವು

ಎದೆಯೆತ್ತರಕೂ ಹಾರುವುದು ಪುಟಾಣಿ ಮೀನು

ಬಾ ಪಪ್ಪಾ ತೋರಿಸುವೆನು……..

 

ಕೆ.ಪದ್ಮಾಕ್ಷಿ