ರಂಜ-ಸುರಗಿ-7: ವಸಂತ ಲಹರಿ…

ಮೈಸೂರು,ಏಪ್ರಿಲ್,6,2021(www.justkannada.in): ಯುಗಾದಿ ಹಬ್ಬವೆಂದರೆ ನಮ್ಮ ಮನೆಯಲ್ಲಿ ಹೊಸಫಲಪುಷ್ಪಗಳು, ಧಾನ್ಯ, ಮನೆಯಲ್ಲಿರುವ ಚಿನ್ನಾಭರಣಗಳು, ಕನ್ನಡಿ ಎಲ್ಲವನ್ನೂ ದೇವರ ಮುಂದೆ ರಾತ್ರಿಯೇ ಇಟ್ಟಿರುತ್ತಿದ್ದರು. ಇದಕ್ಕೆ ಕಣಿ ಇಡುವುದು ಎಂದು ಹೇಳುತ್ತಾರೆ. ಬೆಳಿಗ್ಗೆ ಎದ್ದ ಕೂಡಲೇ ಅಮ್ಮ ದೇವರಿಗೆ-ಕಣಿ ಇಟ್ಟಿರುವಲ್ಲಿ ನಮಸ್ಕಾರ ಮಾಡು, ನಂತರ ಹಿರಿಯರಿಗೆಲ್ಲಾ ನಮಸ್ಕಾರ ಮಾಡು ಎಂದು ಹೇಳುತ್ತಿದ್ದರು. ಇದೆಲ್ಲಾ ಕೊರೋನಾ ಕಾಲದ ಯುಗಾದಿಯಲ್ಲಿ ಮತ್ತೆ ಮತ್ತೆ ನೆನಪಿಗೆ ಬರುತ್ತಿದೆ. ನಮ್ಮ ಮನೆಯಲ್ಲಿ ಸೌರಮಾನ ಯುಗಾದಿ ಆಚರಿಸುತ್ತಿದ್ದೆವು, ಚಾಂದ್ರಮಾನ ಯುಗಾದಿಯನ್ನು ಊರವರೆಲ್ಲಾ ಆಚರಿಸುತ್ತಿದ್ದುದರಿಂದ ನಾವೂ ಆಚರಿಸುತ್ತಿದ್ದೆವು. ಅವತ್ತೂ ನಮಗೆ ಹಬ್ಬ. ಹೀಗೆ ವಸಂತಕಾಲ ಬಂದಾಗ ಪ್ರತಿವರ್ಷ ನಮಗೆ ಸಡಗರ, ಸಂಭ್ರಮ.Illegally,Sand,carrying,Truck,Seized,arrest,driver

ವಸಂತಋತು ಎಂದರೆ ಪ್ರಕೃತಿಯ ಹಬ್ಬ. ಹಬ್ಬ ಆಚರಿಸುತ್ತೇವೆ ಮತ್ತು ಪ್ರಕೃತಿಯನ್ನು ನಮ್ಮ ಕಣ್ಮನಗಳಲ್ಲಿ ತುಂಬಿಕೊಂಡು ಸಂಭ್ರಮಿಸುತ್ತೇವೆ. ಈ ಸಮಯದಲ್ಲಿ ಮನಸ್ಸಿನಲ್ಲಿ ಉಲ್ಲಾಸ ತುಂಬಿಕೊಳ್ಳುತ್ತದೆ. ಆದರೆ ಈ ಸೆಕೆ, ಧಗೆಯನ್ನು ಸಹಿಸುವುದೂ ಅಷ್ಟೇ ಕಷ್ಟ. ಆದರೆ ಇದನ್ನೆಲ್ಲಾ ಮರೆಸುವಂಥಾ ಸಂಮ್ಮೋಹಕ ಶಕ್ತಿ ಈ ಪ್ರಕೃತಿಗಿದೆ. ಮರಗಿಡಗಳೆಲ್ಲಾ ಚಿಗುರಿ ನಳನಳಿಸುತ್ತಿರುತ್ತವೆ. ಹೊರಗಿನ ವಾತಾವರಣವನ್ನೊಮ್ಮೆ ಗಮನಿಸಿದರೆ ಸಾಕು ಗಿಡಮರಗಳ ಚೈತನ್ಯವೆಲ್ಲಾ ನಮ್ಮನ್ನು ಆವರಿಸುತ್ತದೆ. ಉದ್ಯೋಗದ ಸಲುವಾಗಿ ಬೆಳಗಿನ ಹೊತ್ತು ಪ್ರಯಾಣಿಸುತ್ತಿದ್ದಾಗ  ನನ್ನನ್ನು ಸೆಳೆಯುತ್ತಿದ್ದ  ದೃಶ್ಯಗಳು ನನ್ನ ನೆನಪಿನ ಬುತ್ತಿಯಲ್ಲಿ ಇನ್ನೂ ಹಸಿರಾಗಿದೆ. ಎಂತಹಾ ಬಿರುಬಿಸಿಲಿನಲ್ಲೂ ಗುಡ್ಡಬೆಟ್ಟಗಳಲ್ಲಿ ಹೂಗಳು ಜೀವಂತಿಕೆಯಿಂದ ಕಂಗೊಳಿಸುತ್ತಿರುತ್ತವೆ. ಆ ಹೂಗಿಡಗಳಿಗೆ ನೀರೇ ಇಲ್ಲದೆ, ನೀರು ಹಾಕುವವರೇ ಇಲ್ಲದೇ ಹೇಗೆ ಇವು ಜೀವ ತಳೆದಿವೆ ಎಂದು ಎಷ್ಟು ಆಶ್ಚರ್ಯಪಟ್ಟಿದ್ದೀನೋ?ಕೋಗಿಲೆಗಳ ಹಾಡು, ಹಕ್ಕಿಗಳ ಚಿಲಿಪಿಲಿ ಈ ಮರಗಿಡಗಳ ಚೆಲುವು ನಮ್ಮ ಮನಸ್ಸನ್ನು ಮುದಗೊಳಿಸುತ್ತದೆ.  ನಗರ ಪ್ರದೇಶದಲ್ಲಿ ಅಪಾರ್ಟ್ ಮೆಂಟುಗಳಲ್ಲಿ ವಾಸಿಸುವವರು ವಸಂತದ ಸವಿಯನ್ನು ಸವಿಯಲು ಉದ್ಯಾನವನಕ್ಕೇ ಹೋಗಬೇಕಾಗುತ್ತದೋ ಏನೋ? ಅಕ್ಕಪಕ್ಕದಲ್ಲಿ ಮರಗಳಿದ್ದರೆ ಅದರಲ್ಲಿನ ಜೀವಸಂಕುಲದ ಸಂಭ್ರಮವನ್ನು ನೋಡಬಹುದು.

ವರ್ಷದ ಎಲ್ಲಾ ಋತುಗಳಿಗೂ ಅದರದ್ದೇ ಆದ ಮಹತ್ವವಿದೆ. ವಸಂತ, ಗ್ರೀಷ್ಮ,ವರ್ಷ,ಶರತ್,ಹೇಮಂತ ಮತ್ತು ಶಿಶಿರ ಈ ಎಲ್ಲಾ ಋತುಗಳಲ್ಲಿ ನಿಸರ್ಗದ ನಡೆಯನ್ನು ನೋಡಿಕೊಂಡು ನಾವು ದೈನಂದಿನವನ್ನು ರೂಪಿಸಿಕೊಂಡಿದ್ದೇವೆ. ಎಲ್ಲಾ ಋತುಗಳಲ್ಲೂ ಆ ಕಾಲಮಾನಕ್ಕೆ ತಕ್ಕುದಾಗಿ ನಮ್ಮ ಚಟುವಟಿಕೆಗಳು ನಡೆಯುತ್ತವೆ ಹಾಗೆಯೇ ಹಬ್ಬಗಳನ್ನು ಆಚರಿಸುತ್ತೇವೆ. ಗತಿಸಿಹೋದ ಹಿರಿಯರನ್ನು ನೆನೆಯುತ್ತೇವೆ. ಪಾಶ್ಚಾತ್ಯ ದೇಶಗಳಲ್ಲಿ ಚಳಿಗಾಲ, ವಸಂತ,ಬೇಸಿಗೆ ಮತ್ತು ಶರತ್ಕಾಲ ಎಂದು ನಾಲ್ಕು ಋತುಗಳೆಂದು ವಿಂಗಡಿಸುತ್ತಾರೆ. ಆದರೆ ಇದು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಭಿನ್ನವಾಗಿರುತ್ತದೆ.

ಆದರೆ ಅಭಿವೃದ್ಧಿಯ ಹೆಸರಿನಲ್ಲಿ ಈಗ ಮರಗಿಡಗಳೆಲ್ಲಾ ಕಡಿಮೆಯಾಗುತ್ತಿವೆ.  ಮರಗಳನ್ನು ಕಡಿದು ರಸ್ತೆ ಅಗಲ ಮಾಡುವುದು ಬಹಳ ಮುಖ್ಯವೆನಿಸಿದೆ. ಇದಕ್ಕೆ ಪರ್ಯಾಯಮಾರ್ಗ ಏನೆಂದು ಯೋಚಿಸುತ್ತಿಲ್ಲ. ಯಾರು ಮಾಡಬೇಕು? ಜನರಿಗೆ ಇದೆಲ್ಲಾ ತಿಳಿದಿಲ್ಲವೇ? ಆದರೆ ಮನುಷ್ಯರ ಕೊಳ್ಳುಬಾಕ ಪ್ರವೃತ್ತಿ, ಕೊಳ್ಳುವ ಸಾಮರ್ಥ್ಯ ಹೆಚ್ಚಿರುವುದು, ಮಾರುಕಟ್ಟೆಯ ವ್ಯವಸ್ಥೆ ಇದಕ್ಕೆ ಪೂರಕವಾಗಿರುವುದು, ಇವೆಲ್ಲಾ ನೈಸರ್ಗಿಕ ಸಂಪತ್ತನ್ನು ಗರಿಷ್ಟಮಟ್ಟದಲ್ಲಿ ಬಳಸಿಕೊಳ್ಳುವ ನಿಟ್ಟಿನಲ್ಲೇ ಕೆಲಸಮಾಡುತ್ತಿರುತ್ತವೆ. ನಾಳೆಯ ಚಿಂತೆ ಇಲ್ಲ. ಸುಸ್ಥಿರ ಅಭಿವೃದ್ಧಿಯ ಬಗ್ಗೆ ಯೋಚಿಸಿ ಕಾರ್ಯಕ್ರಮಗಳನ್ನು ಹಾಕಿಕೊಳ್ಳುತ್ತಿಲ್ಲ. ನಮ್ಮ ಆದ್ಯತೆಗಳೇ ಬೇರೆಯಾಗಿವೆ. ಜಾಗತಿಕಮಟ್ಟದಲ್ಲಿ ಹವಾಮಾನ ಬದಲಾವಣೆಯಿಂದ ಆಗುತ್ತಿರುವ ವೈಪರೀತ್ಯಗಳು, ಜನಜೀವನದ ಮೇಲೆ ಬೀರುತ್ತಿರುವ ಪ್ರತಿಕೂಲ ಪರಿಣಾಮಗಳ ಬಗ್ಗೆ ಜಗತ್ತಿನ ನಾಯಕರೆಲ್ಲಾ ಒಟ್ಟುಸೇರಿ ಬಹಳಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಗುರಿಯನ್ನೂ ನಿಗದಿಪಡಿಸಿಕೊಂಡಿದ್ದಾರೆ. ಆದರೆ ಗುರಿಸಾಧನೆ ಮಾಡುವಲ್ಲಿ ನಾವೇ ಸೃಷ್ಟಿಸಿಕೊಂಡ ತೊಡಕುಗಳೂ ಅಷ್ಟೇ ಇವೆ. ಈ ಬಗ್ಗೆ ಎಲ್ಲಾ ಜನರಲ್ಲಿ ತಿಳಿವಳಿಕೆ ಮೂಡುವುದು ಅತ್ಯಗತ್ಯ..Ranja-Suragi-7  . Spring intoxication

ಈ ಹವಾಮಾನ ಬದಲಾವಣೆಯ ವೈಪರೀತ್ಯಗಳು, ಜಲಮೂಲಗಳನ್ನೆಲ್ಲಾ ಕಲುಷಿತಗೊಳಿಸಿರುವುದು, ನಾವು ಬದುಕುವ ರೀತಿ ಇವೆಲ್ಲದರ ಪರಿಣಾಮಗಳಿಂದಲೇ  ವಿಚಿತ್ರವಾದ ಸಾಂಕ್ರಾಮಿಕ ರೋಗಗಳು ಇಡೀ ಜಗತ್ತನ್ನೇ ವ್ಯಾಪಿಸಿರುವುದು. ಕೋವಿಡ್-19 ಸಾಂಕ್ರಾಮಿಕ ಕಳೆದ ವರ್ಷದ ಯುಗಾದಿಯನ್ನು ನಿರಾತಂಕದಿಂದ ಆಚರಿಸಲು ಬಿಟ್ಟಿಲ್ಲ.  ಈ ವರ್ಷವೂ ಸಹ ನಾವು ವಸಂತಕಾಲ-ಯುಗಾದಿಹಬ್ಬವನ್ನು ಸಂತಸದಿಂದ ಆಚರಿಸಲು ಬಿಡುತ್ತಿಲ್ಲ. ಕಳೆದ ವರ್ಷವನ್ನು ಆತಂಕದಲ್ಲೇ ಕಳೆದಿದ್ದೇವೆ. ಸದ್ಯದಲ್ಲಿ ಈ ಆತಂಕ ಕಡಿಮೆಯಾಗುವುದೆಂಬ ಭರವಸೆಯಿಲ್ಲ. ಮಕ್ಕಳಿಗೆ ಶಾಲೆಯಿಲ್ಲ, ಪರೀಕ್ಷೆಯಿಲ್ಲ. ಸದಾ ಚುರುಕಾಗಿರುವ ಮಕ್ಕಳಿಗೆ ಚಟುವಟಿಕೆಗಳಿಗೆ ಅವಕಾಶವಿಲ್ಲವಾಗಿದೆ. ಅವರು ಮೊಬೈಲಿನಲ್ಲೇ ಮುಳುಗಿ ಕಾಲಕಳೆಯುತ್ತಿದ್ದಾರೆ. ವಸಂತ ಕಾಲ, ಯುಗಾದಿಹಬ್ಬವನ್ನು ಸಂಭ್ರಮಿಸೋಣವೆಂದರೆ ಇವೆಲ್ಲಾ ಮನಸ್ಸನ್ನು ಆವರಿಸಿ ದುಗುಡ ಹೆಚ್ಚುತ್ತದೆ.

100 ವರ್ಷಗಳ ಹಿಂದೆ ಸ್ಪ್ಯಾನಿಷ್ ಪ್ಲ್ಯೂ ಎಂಬ ಸಾಂಕ್ರಾಮಿಕದಿಂದ ಜನರು ಇದಕ್ಕಿಂತಲೂ ಹೆಚ್ಚು ಜನ ಸಂಕಷ್ಟಕ್ಕೀಡಾಗಿದ್ದರು. ಪ್ಲೇಗು, ಕಾಲರಾ ಸಾಂಕ್ರಾಮಿಕಗಳೆಲ್ಲಾ ಇಡೀ ಜಗತ್ತನ್ನೇ ವ್ಯಾಪಿಸಿ ಜನರನ್ನು ಕಂಗೆಡಿಸಿತ್ತು. ಈ ಸಾಂಕ್ರಾಮಿಕ ಪಿಡುಗೂ ಸಹ ಸ್ವಲ್ಪ ಸಮಯದ ನಂತರ ಹೊರಟುಹೋಗಬಹುದೆಂದು ಆಶಿಸೋಣ. ರೋಗ ಬರದಂತೆ, ಹರಡದಂತೆ ಎಲ್ಲಾ ಮುನ್ನೆಚ್ಚರಿಕೆಯ ಕ್ರಮಗಳನ್ನು ಎಲ್ಲರೂ ಪಾಲಿಸಿ, ವಸಂತದ ಚೈತನ್ಯವನ್ನು ನಮ್ಮಲ್ಲಿ ತುಂಬಿಕೊಳ್ಳೋಣ.

ಕೆ.ಪದ್ಮಾಕ್ಷಿ