ರಂಜ-ಸುರಗಿ-4 : ಕೊರೋನಾ ದಿನಗಳ ಪ್ರಾರ್ಥನೆ…

kannada t-shirts

ಮೈಸೂರು,ಫೆಬ್ರವರಿ,4,2021(www.justkannada.in): ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ, ಹಿಮಾಲಯದ ಧರ್ಮಶಾಲಾದವಳಾದ ಶಿಖಾ ಶಿವಮೊಗ್ಗದ ಆಸುಪಾಸಿನ ಪ್ರವಾಸೀ ತಾಣಗಳನ್ನೆಲ್ಲಾ ನೋಡಬೇಕೆಂದೇ ಶಿವಮೊಗ್ಗೆಗೆ ಬಂದಿದ್ದಳು. ಅವಳು ನನ್ನ ತಂಗಿಯ ಗೆಳತಿ. ಅವಳೊಂದಿಗೆ ಜೋಗ, ಇಕ್ಕೇರಿ, ಕೆಳದಿ, ನಾಡಕಲಸಿ, ಶೃಂಗೇರಿ ಎಂದು ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲಾ ಸುತ್ತಿದೆವು. ಶಿವಮೊಗ್ಗದ ಸೇಕ್ರೆಡ್ ಹಾರ್ಟ್ ಚರ್ಚ್ ಒಂದು ಪ್ರೇಕ್ಷಣೀಯ ಸ್ಥಳವೆಂಬ ಬಗ್ಗೆ ಅಂತರ್ಜಾಲದಲ್ಲಿ ಓದಿದ್ದ ಅವಳು ಅಲ್ಲಿಗೆ ಹೋಗಬೇಕೆಂದಳು.  ಇದಕ್ಕೊಂದು ಕಾರಣವೂ ಇದೆ, ಅದೇನೆಂದರೆ ಅವಳು ವಿದ್ಯಾಭ್ಯಾಸ ಮಾಡಿದ್ದು ಧರ್ಮಶಾಲಾದ  ಸಿದ್ ಪುರದ ಸೇಕ್ರೆಡ್ ಹಾರ್ಟ್ ಸೀನಿಯರ್ ಸೆಕೆಂಡರಿ ಶಾಲೆಯಲ್ಲಿ. ಸೇಕ್ರೆಡ್ ಹಾರ್ಟ್ ಅಂದೊಡನೇ ಅವಳ ಕಿವಿ ನೆಟ್ಟಗಾಯಿತು. ನಾನು ಹಿಂದೊಮ್ಮೆ ಚರ್ಚಿಗೆ ಹೋದದ್ದು ಸಹ ಕಾನ್ವೆಂಟಿನಲ್ಲಿ ಓದಿದ ನನ್ನ ಗೆಳತಿಯ ಜೊತೆಗೆ, ಕ್ರಿಸ್ ಮಸ್ ಹಬ್ಬದ ದಿನ.  ಚರ್ಚಿನ ಝಗಮಗಿಸುವ ದೀಪಾಲಂಕಾರ, ಜಾತ್ರೆಯಂತಹ ವಾತಾವರಣ, ದೇವಸ್ಥಾನಗಳಲ್ಲಿ ನಡೆಯುವ ರಥೋತ್ಸವ, ಜಾತ್ರೆಯ ನೆನಪನ್ನು ತರಿಸುತ್ತಿತ್ತು.  ಊರಿನ ಜನರೆಲ್ಲಾ ಸೇರಿದ್ದರು.jk

ಆದರೆ ಈಗ ನಾವು ಭೇಟಿಕೊಟ್ಟಿದ್ದು ಕೊರೋನಾ ಸ್ವಲ್ಪ ಕಡಿಮೆಯಾಗುತ್ತಾ ಬಂದ ಸಮಯದಲ್ಲಿ. ಅಂದರೆ ಅಕ್ಟೋಬರ್ ಕೊನೆಯಲ್ಲಿ. ಅಲ್ಲಿನ ಸನ್ನಿವೇಶ ನಮ್ಮ ಮೇಲೆ ಕನಸು ಕಂಡಂತಹ ಪರಿಣಾವನ್ನುಂಟುಮಾಡಿತು. ಮುಖಗವಸು  ಹಾಕಿಕೊಂಡು ಹೋಗಬೇಕಾಗಿತ್ತು. ಒಳಗೆ ಬಿಡುತ್ತಾರೋ ಇಲ್ಲವೋ ಎಂಬ ಅನುಮಾನದಲ್ಲೇ ಚರ್ಚಿನ ಅವರಣದಲ್ಲಿ ಸುತ್ತಾಡಿದೆವು. ಮುಸ್ಸಂಜೆಯ ಹೊತ್ತು. ವಿಶಾಲವಾದ ಬಯಲಿನ ನಡುವೆ ಚರ್ಚ್. ನಿರಭ್ರ ಆಕಾಶ, ಹುಣ್ಣಿಮೆಯ ಚಂದ್ರ. ಅಲ್ಲಲ್ಲಿ ನಕ್ಷತ್ರಗಳು, ಚರ್ಚೂ ತೆರೆದಿತ್ತು, ಚರ್ಚಿನ ಆವರಣವೇ ನಮ್ಮನ್ನು ಸೆಳೆದಿತ್ತು.  ಚರ್ಚಿನಲ್ಲಿ ಪ್ರಾರ್ಥನೆ ಸಲ್ಲಿಸುವ ಸಮಯ. ಜನರೂ ಹೆಚ್ಚು ಇರಲಿಲ್ಲ. ನಮ್ಮನ್ನು ನೋಡಿದ ಮಹಿಳೆಯೊಬ್ಬರು ನಾವು ಒಳಹೋಗಲು ಅನುಮಾನಿಸುತ್ತಿದ್ದುದನ್ನು ನೋಡಿ, “ಒಳಹೋಗಬಹುದು ನೀವು, ಆದರೆ ಸ್ಯಾನಿಟೈಸರ್ ಕೈಗೆ ಸವರಿಕೊಂಡು ಹೋಗಿ. ಫಾದರ್ ಅವರಿಂದ ಆಶೀರ್ವಾದವನ್ನೂ ಪಡೆದು ಬನ್ನಿ, ನೀವು ಏನಾದರೂ ತಪ್ಪು ಮಾಡಿದ್ದರೆ ಅವರಲ್ಲಿ ಕ್ಷಮೆಯನ್ನೂ ಕೇಳಿ” ಎಂದರು. ನಾವು ಒಳಹೋಗಿ ಬೆಂಚಿನಲ್ಲಿ ಕುಳಿತೆವು. ಫಾದರ್ ರಾಗವಾಗಿ ಪ್ರಾರ್ಥನೆಯ ಹಾಡನ್ನು ಹಾಡುತ್ತಿದ್ದರು. ಕೊರೋನಾ ರೋಗದಿಂದ ಎಲ್ಲರೂ ಮುಕ್ತರಾಗಿ ಆರೋಗ್ಯವನ್ನು ಹೊಂದಲಿ ಎಂದು ಪ್ರಾರ್ಥಿಸಿದರು. ಕೆಲವರು ಅವರ ಬಳಿ ಹೋಗಿ ಆಶೀರ್ವಾದ ಪಡೆದರು.

ಆನಂತರ ಫಾದರ್ ಹೊರಬಂದು ಏಸುವಿನ ತಾಯಿ ಮೇರಿಮಾತೆಯ ಬಯಲು ದೇವಾಲಯದೆಡೆ ತೆರಳಿದರು. ಅವರೊಂದಿಗೆ ಅಲ್ಲಿದ್ದ ಕ್ರೈಸ್ತಬಾಂಧವರೂ ಹೊರಟಾಗ, ನಾವೂ ಅವರನ್ನು ಹಿಂಬಾಲಿಸಿದೆವು. ಅಲ್ಲಿ ನೀರು ಜುಳು ಜುಳು ಹರಿವಂತೆ ಮಾಡಿದ್ದರು. ಮೇರಿಯೂ ಸುಂದರವಾಗಿದ್ದಳು. ಅಲ್ಲಿಯೂ ಫಾದರ್ ಕೋವಿಡ್ ಪಿಡುಗಿನಿಂದಾಗಿ ಸಂಕಷ್ಟದಲ್ಲಿ ಸಿಲುಕಿರುವವರೆಲ್ಲರ ಪರವಾಗಿ   ಸರಳವಾದ ಕನ್ನಡದಲ್ಲಿ ಪ್ರಾರ್ಥನೆ ಸಲ್ಲಿಸಿದರು. “ಪರಲೋಕದಲ್ಲಿರುವ ತಂದೆಯೇ, ದೊಡ್ಡ ದೊಡ್ಡ ಪಟ್ಟಣಗಳಲ್ಲಿ ಕೆಲಸ ಮಾಡುತ್ತಿದ್ದ ಜನರು ತಮ್ಮ ಸ್ವಂತ ಊರಿನ ಮನೆಯತ್ತ ಹೊರಟಿದ್ದಾರೆ, ನಡೆದೇ ಹೋಗುತ್ತಿದ್ದಾರೆ. ಕೆಲವರು ದಾರಿಯಲ್ಲೇ ಸಾಯುತ್ತಿದ್ದಾರೆ, ಅವರನ್ನು ತಮ್ಮ ತಮ್ಮ ಮನೆಗಳಿಗೆ ಕ್ಷೇಮವಾಗಿ ತಲುಪಿಸು ದೇವರೇ,  ಶಾಲೆಯಿಲ್ಲದೇ ಆಟ-ಪಾಠಗಳಿಲ್ಲದೇ ಮನೆಯಲ್ಲೇ ಉಳಿದ ಮಕ್ಕಳಿಗೆ ಬೇಗ ಶಾಲೆ ಶುರುವಾಗಲಿ, ಅವರ ಏಳಿಗೆಯಾಗಲಿ, ಕೆಲವು ಶಿಕ್ಷಕರು ಕೋವಿಡ್ ರೋಗದಿಂದ ಸಾವಿಗೀಡಾದ ಬಗ್ಗೆ ಕೇಳಿದ್ದೇವೆ, ಅವರ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿ ಕೊಡು ತಂದೆಯೇ, ಶಾಲೆಯಿಲ್ಲದೇ ಶಿಕ್ಷಕರು ಉದ್ಯೋಗವನ್ನೂ ಕಳೆದುಕೊಳ್ಳುತ್ತಿದ್ದಾರೆ. ಸಣ್ಣ ಸಣ್ಣ ವ್ಯಾಪಾರಿಗಳು ವ್ಯಾಪಾರವಿಲ್ಲದೇ, ಕಸುಬುದಾರರು ಉದ್ಯೋಗವಿಲ್ಲದೇ  ಕಂಗಾಲಾಗಿದ್ದಾರೆ, ಈ ರೋಗ ಬೇಗ ಜಗತ್ತಿನಿಂದ ಹೊರಟುಹೋಗಿ ಎಲ್ಲರೂ ನೆಮ್ಮದಿಯಿಂದ ಜೀವಿಸುವಂತಾಗಲಿ, ಡಾಕ್ಟರುಗಳೆಲ್ಲಾ ವಿಶ್ರಾಂತಿಯಿಲ್ಲದೆ ರೋಗಿಗಳನ್ನು ನೋಡಿಕೊಳ್ಳುತ್ತಿದ್ದಾರೆ, ಅವರಿಗೆಲ್ಲಾ ವಿಶ್ರಾಂತಿ ಸಿಗುವಂತಾಗಲಿ, ಚೀನಾ ಭಾರತದ ಗಡಿಯಲ್ಲಿ ನಮ್ಮ ಸೈನಿಕರು ಹುತಾತ್ಮರಾಗಿದ್ದಾರೆ, ಈ ಗಡಿ ಸಮಸ್ಯೆ ಬೇಗ ಪರಿಹಾರವಾಗಲಿ” ಹೀಗೆ ಎಲ್ಲದರ ಬಗ್ಗೆ ಭಾವಪರವಶರಾಗಿ ಏರಿಳಿತದ ಧ್ವನಿಯಲ್ಲಿ ಪ್ರಾರ್ಥನೆ ಸಲ್ಲಿಸಿದ ಫಾದರ್ ನಮ್ಮಲ್ಲೊಂದು ಸಂಚಲನವನ್ನುಂಟು ಮಾಡಿದರು. ಅವರ ಪ್ರಾರ್ಥನೆ ನಮ್ಮ ಪ್ರಾರ್ಥನೆಯೂ ಆಗಿತ್ತು, ಸಂಜೆಯ ಪ್ರಾರ್ಥನೆಗೆ ಬಂದಿದ್ದ ಜನರು ಫಾದರ್ ಅವರಿಂದ ಆಶೀರ್ವಾದ ಪಡೆಯಲು, ಅವರೊಂದಿಗೆ ಮಾತಾಡಲು ಅವರ ಬಳಿ ಹೋದರು. ನಾವು ಅಲ್ಲಿಂದ ಹೊರಡಲು ಅನುವಾದಾಗ,  ಅಲ್ಲಿದ್ದ ಕೆಲವರು, “ಫಾದರ್ ಬಳಿ ಆಶೀರ್ವಾದ (Blessings) ತೆಗೆದುಕೊಂಡು ಹೋಗಿ” ಎಂದು ಒತ್ತಾಯಿಸಿದರು. ನಾವು ಫಾದರ್ ಬಳಿ ಹೋಗಿ ನಮಸ್ಕರಿಸಿದೆವು. ಅವರು “ನೀವು ಎಲ್ಲಿಯವರು” ಎಂದೆಲ್ಲಾ ವಿಚಾರಿಸಿದರು. ಹಿಮಾಚಲದ ಧರ್ಮಶಾಲಾದಿಂದ ಬಂದ ಶಿಖಾ ಸಲುವಾಗಿ ಬಂದೆವೆಂದು ಹೇಳಿದೆವು. ಅವರು “ನಿಮಗೆ ಒಳ್ಳೆಯದಾಗಲಿ, ಈ ಜಗತ್ತು ಕೊರೋನಾದಿಂದ ಮುಕ್ತವಾಗಲಿ,  ಮೊದಲಿನಂತೆ ಎಲ್ಲರೂ ಆರೋಗ್ಯದಿಂದಿರಿ” ಎಂದು ಆಶೀರ್ವದಿಸಿದರು. ಚರ್ಚಿನ ಆ ದೀಪಗಳ ತಂಪುಬೆಳಕಿನಲ್ಲಿ ಅವರೊಂದಿಗೆ ಮಾತಾಡಿದ್ದು ಮಾತ್ರ ಅನಿರೀಕ್ಷಿತವಾದ ಮಾತಿಗೆ ಮೀರಿದ ಅನುಭವವಾಗಿತ್ತು ನಮಗೆ.ranja-suragi-4-pray-for-the-days-of-corona

ನನಗಂತೂ ಹೀಗೆ ಚರ್ಚಿಗೆ ಹೋಗಿದ್ದು ಕನಸಿನಲ್ಲಿ ಬೇರೆಯೇ ಲೋಕಕ್ಕೆ ಹೋಗಿ ಬಂದಂತೆ ಅನಿಸಿತು. ನಿಜಕ್ಕೂ ಇದೊಂದು ಸ್ವಪ್ನವಾಸ್ತವ (surreal) ಅನುಭವ. ಸಂಜೆಯ ಆ ದೀಪಗಳು, ಅಲ್ಲೇನೋ ಮಾಂತ್ರಿಕತೆ ಇತ್ತು. ಮೇರಿ ಮಾತೆಯ ಸಮಕ್ಷಮದಲ್ಲಿ ಎಲ್ಲರಿಗೂ ಒಳ್ಳೆಯದಾಗಲಿ ಎಂಬ ಸದಾಶಯದ ಮಾತುಗಳಿಗೆ ಅಲ್ಲಿಯ ಸುಂದರ-ದಿವ್ಯ ವಾತಾವರಣವೂ ಪೂರಕವಾಗಿತ್ತು.  ಹಗಲು-ರಾತ್ರಿಯ ಹೊಸ್ತಿಲಲ್ಲಿದ್ದ ಮುಸ್ಸಂಜೆಯ, ಚರ್ಚಿನ ಪ್ರಾರ್ಥನೆಯ ಸಮಯದ ಈ ಭೇಟಿ, ಅವರೊಂದಿಗೆ ಸಂವಾದಿಸಿದ್ದು ಮಾತ್ರ ನಮ್ಮ ಭಾವಕೋಶದಲ್ಲಿ ಸದಾ ಉಳಿಯುವಂತಹ ನೆನಪು.

ಕೆ.ಪದ್ಮಾಕ್ಷಿ

website developers in mysore