ರಂಜ-ಸುರಗಿ-11 : ಬದಲಾದ ಬದುಕು.

ಮೈಸೂರು,ಜೂನ್,27,2021(www.justkannada.in):

ಇಂಗ್ಲೆಂಡಿನ ಹೆಸರಾಂತ ಅರ್ಥಶಾಸ್ತ್ರಜ್ಞ ಜಾನ್ ಮೇನಾರ್ಡ್ ಕೇಯಿನ್ಸ್ ಹೇಳಿದ ಒಂದು ಪ್ರಸಿದ್ಧ ಮಾತು, ‘ವಸ್ತುಸ್ಥಿತಿ ಬದಲಾದಂತೆ ನಾನು ಮನಸ್ಸು ಬದಲಾಯಿಸುತ್ತೇನೆ. ( When facts change, I change my mind.) ಈ ಮಾತನ್ನು ಆತ ನೇರವಾಗಿ ಹೇಳಿರಲಿಲ್ಲವೆಂದೂ, ತನ್ನ ನಿಲುವನ್ನು ಪದೇ ಪದೇ ಬದಲಾಯಿಸಿಕೊಳ್ಳುತ್ತಿದ್ದುದರಿಂದ ಅಥವಾ ಅದೇ ಅರ್ಥ ಬರುವಂತಹ ಬೇರೆ ಮಾತುಗಳನ್ನಾಡಿದ್ದರಿಂದ ಈ ಮಾತುಗಳು ಅವನ ಹೆಸರಿಗೇ ಅಂಟಿಕೊಂಡಿವೆ ಎಂಬ ವಾದವೂ ಇದೆ. ಅದೇನೇ ಇರಲಿ, ನಾವು ನಮ್ಮ ಬದುಕಿನ ಕ್ರಮವನ್ನು ಇಂದಿನ ಪರಿಸ್ಥಿತಿಗೆ ತಕ್ಕಂತೆ ಬಹಳಷ್ಟು ಬದಲಾಯಿಸಿಕೊಂಡಿದ್ದಂತೂ ನಿಜ.jk

ಕೋವಿಡ್ ನಿಂದಾಗಿ ನಾವು ಕಲ್ಪಿಸಿರಲೂ ಇಲ್ಲ, ಅಂತಹ ಪರಿಸ್ಥಿತಿಯನ್ನು ಎದುರಿಸುತ್ತಿದ್ದೇವೆ. ಇದ್ದಕ್ಕಿದ್ದಂತೆ ನಮ್ಮ ಜೀವನಕ್ರಮ ಬದಲಾಗಿದೆ. ಮತ್ತೆ ಹಿಂದಿನ ಆ ದಿನಗಳನ್ನು ಕಾಣುತ್ತೇವೆ ಎಂಬ ಭರವಸೆ ಇಲ್ಲ. ಒಂದನೇ ಅಲೆಯಲ್ಲೇ ಕಂಗೆಟ್ಟು ಸ್ವಲ್ಪ ಸುಧಾರಿಸಿಕೊಳ್ಳುತ್ತಿದ್ದಂತೆ ಎರಡನೇ ಅಲೆ ಧುತ್ತನೇ ಬಂದು ನಮ್ಮ ಬದುಕನ್ನು ಮೂರಾಬಟ್ಟೆ ಮಾಡಿಬಿಟ್ಟಿದೆ. ಮೂರನೇ ಅಲೆಯಲ್ಲಿ ಮಕ್ಕಳಿಗೆ ಸೋಂಕು ತಗಲುತ್ತದೆ, ಅದು ಇನ್ನೂ ಭಯಾನಕ ಎಂಬ ಎಚ್ಚರಿಕೆ ಕೊಡುತ್ತಿದ್ದಾರೆ. ಎಚ್ಚರ ತಪ್ಪಲೇ ಬಾರದೆಂಬುದು ಎಲ್ಲರಿಗೂ ಚೆನ್ನಾಗಿ ಗೊತ್ತಾಗಿದೆ. ಸಾಂಕ್ರಾಮಿಕದ ಲಕ್ಷಣಗಳು ತುಸು ಕಡಿಮೆಯಾದರೂ ಸಾಕು, ಜನ ಅಗತ್ಯವಾಗಿಯೋ ಅನಗತ್ಯವಾಗಿಯೋ ಮಾರುಕಟ್ಟೆಗಳಲ್ಲಿ, ರಸ್ತೆಗಳಲ್ಲಿ ಓಡಾಡಲು ಪ್ರಾರಂಭಿಸುತ್ತಾರೆ. ಸ್ವಲ್ಪ ಎಚ್ಚರ ತಪ್ಪಿದ್ದಕ್ಕೆ ಎರಡನೆಯ ಅಲೆಯಲ್ಲಿ ಏನಾಯಿತು ಎಂಬುದನ್ನು ಕಣ್ಣಾರೆ ಕಂಡಿದ್ದೇವೆ. ಮೂರನೇ ಅಲೆ ಘೋರವಾಗಿ ನಮ್ಮನ್ನು ಬಾಧಿಸದೇ ಇರಬೇಕೆಂದರೆ ಮುನ್ನೆಚ್ಚರಿಕೆ ವಹಿಸಲೇ ಬೇಕು. ನಮ್ಮ ಜೀವನ ಕ್ರಮ ಹೇಗೆ ಬದಲಾಗಿದೆ, ಕಷ್ಟನಷ್ಟಗಳೇನು, ಎಳೆಯರ ಭವಿಷ್ಯದ ಪ್ರಶ್ನೆ ಎಲ್ಲಾ ನಮ್ಮ ಮುಂದಿದೆ.

ಈ ಕೋವಿಡ್ ಸಮಯದಲ್ಲಿ ಹುಟ್ಟಿದ ಮಕ್ಕಳ ಬಗ್ಗೆ ಯೋಚಿಸಿದರೆ, ಆ ಮಕ್ಕಳಿಗೆ ಮನೆಯವರನ್ನು ಹೊರತುಪಡಿಸಿ ಹೊರಗಿನವರ ಸಂಪರ್ಕವೇ ಸಿಗುವುದಿಲ್ಲ.  ತಮ್ಮದೇ ವಯಸ್ಸಿನ ಮಕ್ಕಳನ್ನು ನೋಡುವಂತಿಲ್ಲ. ಮಕ್ಕಳು ಸಮವಯಸ್ಕರಿಗೆ ಸ್ಪಂದಿಸುವ ರೀತಿಯೇ ಬೇರೆ ಇರುತ್ತದೆ. ಹೆಣ್ಣುಮಕ್ಕಳು ತಮ್ಮ ತವರಿನಲ್ಲಿ ನೆಮ್ಮದಿಯಿಂದ ಬಾಣಂತನ ಮಾಡಿಸಿಕೊಳ್ಳಲೂ ಸಾಧ್ಯವಾಗಿಲ್ಲ. ವಿದೇಶಗಳಲ್ಲಿರುವವರು ತಮ್ಮ ತಾಯಿ ತಂದೆಯವರನ್ನು ಕರೆಸಿಕೊಂಡು ತಮ್ಮ ಮಗುವಿನ ಆಗಮನವನ್ನು ಸಂಭ್ರಮಿಸಲೂ ಸಾದ್ಯವಾಗಿಲ್ಲ. ಇನ್ನೂ ಅತ್ಯಂತ ಆತಂಕದ ಪರಿಸ್ಥಿತಿಯೆಂದರೆ ಮಗುವಿನ ನಿರೀಕ್ಷೆಯಲ್ಲಿರುವ ತಾಯಿಗೆ ಕೋವಿಡ್ ಬಂದಿರುವಂತಹದು, ತಾಯಿ, ತಂದೆಯನ್ನು ಕಳೆದುಕೊಂಡ ಮಕ್ಕಳ ಸ್ಥಿತಿ, ಇವೆಲ್ಲಾ ನಮ್ಮ ಮನಕಲುವಂತಹುದು.

ಶಾಲೆಗೆ ಸೇರಬೇಕಾದ ಮಕ್ಕಳು ತಮ್ಮ ಬಾಲ್ಯದ ಅನುಭವ, ಸಹಪಾಠಿಗಳ ಒಡನಾಟ ಇವೆಲ್ಲದರಿಂದ ವಂಚಿತರೇ. ಈ ಕಾಲದ ಮಕ್ಕಳ ಬೆಳವಣಿಗೆಯ ಹಂತದಲ್ಲಿ ಈವರೆಗೆ ನಡೆದುಕೊಂಡುಬಂದಂತೆ ಏನೂ ನಡೆಯುತ್ತಿಲ್ಲ. ಬಡಮಕ್ಕಳು, ಗ್ರಾಮೀಣಭಾಗದ ಮಕ್ಕಳ ಶಿಕ್ಷಣವನ್ನು ಊಹಿಸಿಕೊಂಡರೆ ಬೇಸರವಾಗುತ್ತದೆ. ಆದರೆ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಸ್ವತಃ ಹೆಚ್ಚಿನ ತಿಳಿವಳಿಕೆ/ಜ್ಞಾನ ಗಳಿಸಿದ ಉದಾಹರಣೆಗಳೂ ಇವೆ.  ಇಡೀ ದಿವಸ ಮಕ್ಕಳನ್ನು ತಾಯಿತಂದೆ ಎಷ್ಟು ನೋಡಿಕೊಳ್ಳಬಲ್ಲರು? ಅವರು ತಮ್ಮ ಕೆಲಸಗಳಲ್ಲಿ ತೊಡಗಿಕೊಂಡಿರುತ್ತಾರೆ. ಮಕ್ಕಳು ಯಾರ ನಿಗಾವಿಲ್ಲದೆ ಕೆಟ್ಟ ಸಹವಾಸ, ಕೆಟ್ಟಚಟಗಳಿಗೆ ಅಂಟಿಕೊಂಡ  ಸಂಗತಿಗಳೂ ಇವೆ.

ಸಂಗೀತ ಕಛೇರಿಗಳು ನಡೆಯದೇ ಎಷ್ಟೂ ಉದಯೋನ್ಮುಖ ಕಲಾವಿದರ ಪ್ರತಿಭೆ ಬೆಳಕಿಗೆ ಬರುವಲ್ಲಿ ತಡೆಯಾಗಿದೆ. ಆನ್ ಲೈನ್ ವೇದಿಕೆಗಳಲ್ಲಿ ಸಾಕಷ್ಟು ಸಂಗೀತ ಕಾರ್ಯಕ್ರಮಗಳು ನಡೆಯುತ್ತಿವೆಯಾದರೂ ಗಾಯಕರು, ವಾದಕರು, ಪಕ್ಕವಾದ್ಯದವರ ಜೀವನನಿರ್ವಹಣೆ ಕಷ್ಟವಾಗಿದೆ. ಸ್ವಯಂಸೇವಾ ಸಂಸ್ಥೆಗಳು, ಹೆಸರಾಂತ ಕಲಾವಿದರು ಇವರಿಗೆ ಸ್ವಲ್ಪ ಮಟ್ಟಿಗೆ ಸಹಾಯ ಮಾಡುತ್ತಿದ್ದರೂ ಎಲ್ಲಿಯವರೆಗೆ ಈ ರೀತಿ ಅವಲಂಬನೆಯಲ್ಲಿರಲು ಸಾಧ್ಯ?  ಪೂರ್ಣಾವಧಿ ಸಂಗೀತಶಾಲೆಯನ್ನು ನಡೆಸುತ್ತಿರುವವರು ಕಳೆದ ವರ್ಷ ಇದ್ದಕ್ಕಿದ್ದಂತೆ  ಲಾಕ್ ಡೌನ್ ಘೋಷಿಸಿದಾಗ  ಕಟ್ಟಡದ ವಿದ್ಯುತ್ ಬಿಲ್ಲು ಕಟ್ಟಲು  ಸಾಧ್ಯವಾಗದೇ ಆಮೇಲೆ ಆನ್ ಲೈನ್ ತರಗತಿಗಳನ್ನು ಪ್ರಾರಂಭಿಸಿದರು. ಸಾಹಿತ್ಯ ಚಟುವಟಿಕೆಗಳು ಝೂಂ ಮೀಟಿಂಗ್, ಗೂಗಲ್ ಮೀಟ್  ಗಳಲ್ಲಿ ನಡೆಯುತ್ತಿದೆ.  ಇತ್ತೀಚೆಗೆ ‘ಕ್ಲಬ್ ಹೌಸ್’ ಎಂಬ ಹರಟೆಕಟ್ಟೆಯಂತಹ ವೇದಿಕೆ ಜನಪ್ರಿಯವಾಗಿದೆ. ಕೋವಿಡ್ ಸಂಕಷ್ಟದಿಂದ ನಮಗೆ ಮುಂದೆ ಬಿಡುಗಡೆ ಸಿಕ್ಕಿದರೂ, ಈ ಕಾಲದಲ್ಲಿ ನಾವು ರೂಡಿಸಿಕೊಂಡ ಈ ಹೊಸ ಜೀವನಕ್ರಮವನ್ನು ಮುಂದುವರಿಸಿಕೊಂಡು ಹೋಗುತ್ತೇವೋ ಏನೋ?

ಮದುವೆಯಾಗಿ ಹೊಸಜೀವನ ಕಟ್ಟಿಕೊಳ್ಳುವವರೂ ಆತಂಕದಿಂದಲೇ ಇರಬೇಕಾದ ಪರಿಸ್ಥಿತಿ. ಮದುವೆಯೆಂಬ ಸಮಾರಂಭಕ್ಕೆ ಯಾರನ್ನೂ ಕರೆಯುವಂತಿಲ್ಲ, ನನ್ನ ಪರಿಚಯದ ಹುಡುಗಿ ಲೀಲಾ, ಮದುವೆಯ ವಯಸ್ಸು ಮೀರಿದರೆ ಮದುವೆಯಾಗುವುದು ಕಷ್ಟ ಮತ್ತು ಈ ಕೋವಿಡ್ ಸಮಯದಲ್ಲಿ ಮದುವೆಯ ಖರ್ಚು ಕಡಿಮೆಯಾಗುತ್ತದೆ ಎಂಬುದಕ್ಕಾಗಿ ಈ ಸಮಯದಲ್ಲೇ ಮದುವೆ ಮಾಡಿಕೊಂಡಳು. ಮದುವೆಗೆ ಅತ್ಯಂತ ಕಡಿಮೆ ಜನರೆಂದರೂ ಒಂದು ನೂರು ಜನ ಸೇರಿಯೇ ಬಿಟ್ಟಿದ್ದರು. ಮಾರನೆಯ ದಿನವೇ ಅವರ ತಂದೆಗೆ ಹುಷಾರಿಲ್ಲದಂತಾಗಿ ಆಸ್ಪತ್ರೆಗೆ ಸೇರಿಸಲೂ ಯಾರ ನೆರವೂ ಸಕಾಲದಲ್ಲಿ ಸಿಗದೇ ಹುಡುಗಿಯೇ ಒದ್ದಾಡಿ ಹೇಗೋ ಆಸ್ಪ್ರತ್ರೆ ಸೇರಿಸಿದರೂ ಏನೂ ಉಪಯೋಗವಾಗಲಿಲ್ಲ…ಕಣ್ಣು ಮಿಟುಕಿಸುವುದರೊಳಗೆ ಎಲ್ಲಾ ಮುಗಿದುಹೋಯಿತು…. ತಂದೆಯನ್ನು ಉಳಿಸಿಕೊಳ್ಳಲಾಗಲೇ ಇಲ್ಲ.

ಎಲ್ಲದಕ್ಕಿಂತ ಹೆಚ್ಚಾಗಿ ತೃತೀಯಲಿಂಗಿಗಳು, ಸೆಕ್ಸ್ ವರ್ಕರ್ಸ್ ತಮ್ಮ ಜೀವನನಿರ್ವಹಣೆಗೆ ಅದೆಷ್ಟು ಕಷ್ಟ ಪಡುತ್ತಿದ್ದಾರೋ? ನಮ್ಮ ಅರಿವಿಗೆ ಬಾರದೇ ಇರುವಂತಹ, ಸಮಾಜದ ಅಂಚಿನಲ್ಲಿರುವ ಎಷ್ಟೋ ಜನ ಹೇಗೆ ಬದುಕುತ್ತಿದ್ದಾರೋ?

ನನ್ನ ಸ್ನೇಹಿತೆ ಶಶಿ ಮತ್ತು ಅವರ ಪತಿ ಐಸ್ ಕ್ರೀಂ ಪಾರ್ಲರ್ ನಡೆಸ್ತಾ ನೆಮ್ಮದಿಯಲ್ಲೇ ಜೀವನ ನಡೆಸುತ್ತಿದ್ದರು. ಲಾಕ್ ಡೌನ್ ಸಮಯದಲ್ಲಿ ಅವರು ಇದನ್ನು ನಿಲ್ಲಿಸಬೇಕಾಯಿತು. ಈ ಸಮಯದಲ್ಲಿ ಐಸ್ ಕ್ರೀಂ ಅಥವಾ ತಣ್ಣಗಿನ ಪದಾರ್ಥಗಳನ್ನು ತಿನ್ನಲು ಈ ಕೋವಿಡ್ ಕಾಲದಲ್ಲಿ ಯಾರೂ ಇಷ್ಟಪಡುವುದಿಲ್ಲ. ಮನೆಯ ಬಾಡಿಗೆ ಕೊಡಬೇಕು, ಅಂಗಡಿಯ ಬಾಡಿಗೆ ಕೊಡಬೇಕು. ಮಾಲೀಕರು ಪರಿಸ್ಥಿತಿ ಅರ್ಥ ಮಾಡಿಕೊಂಡು ಈಗ ಬಾಡಿಗೆ ಕೇಳುತ್ತಿಲ್ಲ. ಎಷ್ಟುದಿನ ಹೀಗೆ? ದಿನನಿತ್ಯದ ಹೊಟ್ಟೆಪಾಡಿನ ಗತಿಯೇನು? ಸ್ವಲ್ಪ ದಿನ ಹಾಗೂ,ಹೀಗೂ, ಹೇಗೋ ನಡೆದೀತು. ತಕ್ಷಣಕ್ಕೆ ಏನೂ ಹೊಳೆಯುತ್ತಿಲ್ಲ. ಆಗ ಪರಿಚಿತರೊಬ್ಬರು ತಾವು ನಡೆಸುತ್ತಿದ್ದ ಹೋಟೆಲ್ ಉದ್ಯಮವನ್ನು ಬಿಡುವುದಾಗಿ, ಅವರಲ್ಲಿದ್ದ ಪಾತ್ರೆ ಸಾಮಾನುಗಳನ್ನೆಲ್ಲಾ ಕೊಟ್ಟುಬಿಡುವುದಾಗಿ ಹೇಳಿದ್ದನ್ನು ಕೇಳಿಸಿಕೊಂಡ ಈ ದಂಪತಿಗೆ ಕೂಡಲೇ ಹೊಸ ದಾರಿ ಹೊಳೆಯಿತು, ತಿಂಡಿ ತಿನಸು ತಯಾರಿಸಿ ಪಾರ್ಸೆಲ್ ಕಳಿಸಲು ಅವಕಾಶವಿರುವುದರಿಂದ ಅದನ್ನಾದರೂ ಮಾಡಬಹುದಲ್ಲ  ಎಂದು ಪ್ರಾರಂಭಿಸಿಯೇ ಬಿಟ್ಟರು, ಹೇಗಿದ್ದರೂ ತಮ್ಮ ಪಾರ್ಲರಿಗೆ ಬರುತ್ತಿದ್ದ ಜನರೊಂದಿಗಿನ ಒಡನಾಟದಿಂದ ಗ್ರಾಹಕರೂ ಸಿಕ್ಕಿದರು. ಎಷ್ಟೋ ಜನ ಹೀಗೆ ತಮ್ಮ ಉದ್ಯೋಗ ಬದಲಾಯಿಸಿಕೊಂಡಿದ್ದನ್ನು ಈ ಮಹಾಮಾರಿಯ ಕಾಲದಲ್ಲಿ ನೋಡುತ್ತಿದ್ದೇವೆ.

‘ಎಲ್ಲರಿಗಾದಂತೆ ನಮಗೂ ಆಗುತ್ತದೆ ಬಿಡಿ’, ಎಂದು ಏನೇ ಮಾತಾಡಬಹುದು. ಈಗ ಬಂದಿರುವ ಈ ಕಷ್ಟ ಎಲ್ಲರಿಗೂ ಬಂದಿರುವಂತಹದು. ನಾವು ಬದುಕು ಸಹ್ಯ ಮಾಡಿಕೊಳ್ಳಲು ಬೇರೆ ಬೇರೆ ದಾರಿಗಳನ್ನು ಕಂಡುಕೊಳ್ಳುತ್ತಿದ್ದೇವೆ. ಡಿ.ವಿ.ಜಿ.ಯವರ ಮಂಕುತಿಮ್ಮನ ಕಗ್ಗದ ಈ ಸಾಲುಗಳು ಜಗತ್ತಿನಲ್ಲಿ ವೈವಿಧ್ಯವಿರುವುದರಿಂದ ಜೀವನ ಕಷ್ಟವಾಗಲಾರದು ಎಂದು ಹೇಳುತ್ತವೆ.

 ವೈವಿಧ್ಯವೊಂದು ಕೃಪೆ ನಮಗಿರುವ ಕಷ್ಟದಲಿ

ಆವರಿಸದಳಲ್ ಎಲ್ಲರನುಮೊಂದೆ ಸಮಯ

ನೋವಿಲ್ಲದರು ನೊಂದವರನು ಸಂತೈಸುತಿರೆ

ಜೀವನವು ಕಡಿದಹುದೆ?- ಮಂಕುತಿಮ್ಮ

ಕೃಪೆ

ಕೆ.ಪದ್ಮಾಕ್ಷಿ