ಕೌಲಾಲಂಪುರ, ನವೆಂಬರ್ 13 (www.justkannada.in): ಹಾಲಿ ಚಾಂಪಿಯನ್ ಭಾರತ ಕಿರಿಯರ ತಂಡ 19 ವಯೋಮಿತಿಯ ಏಷ್ಯಾಕಪ್ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಕ್ರಿಕೆಟ್ ಲೋಕದಲ್ಲಿ ಈಗಷ್ಟೇ ಅಂಬೆಗಾಲಿಡುತ್ತಿರುವ ನೇಪಾಳ ತಂಡದ ವಿರುದ್ಧ ಆಘಾತಕಾರಿ ಸೋಲು ಅನುಭವಿಸಿದೆ.

ನೇಪಾಳ ತಂಡ ನಾಯಕ ದೀಪೇಂದ್ರ ಸಿಂಗ್ (88 ರನ್, 101ಎಸೆತ, 6ಬೌಂಡರಿ, 2ಸಿಕ್ಸರ್ ಮತ್ತು 39ಕ್ಕೆ 4) ಆಲ್ರೌಂಡರ್ ನಿರ್ವಹಣೆ ನೆರವಿನಿಂದ 19 ರನ್​ಗಳಿಂದ ಕನ್ನಡಿಗ ರಾಹುಲ್ ದ್ರಾವಿಡ್ ಮಾರ್ಗದರ್ಶನದ ಭಾರತವನ್ನು ಮಣಿಸಿ ಇತಿಹಾಸ ನಿರ್ವಿುಸಿತು. ಇದು ನೇಪಾಳ ತಂಡಕ್ಕೆ ಭಾರತದ ವಿರುದ್ಧ ಸಿಕ್ಕ ಚೊಚ್ಚಲ ಜಯವಾಗಿದೆ.

ಬಯೂಮಸ್ ಓವಲ್ ಮೈದಾನದಲ್ಲಿ ಎ ಗುಂಪಿನ ಪಂದ್ಯದಲ್ಲಿ ಟಾಸ್ ಗೆದ್ದು ನೇಪಾಳ ತಂಡವನ್ನು ಬ್ಯಾಟಿಂಗ್​ಗೆ ಇಳಿಸಿದ ಭಾರತ ಸಂಘಟಿತ ದಾಳಿಯೊಂದಿಗೆ ಸಾಧಾರಣ ಮೊತ್ತಕ್ಕೆ ನಿಯಂತ್ರಿಸಿತು. ನೇಪಾಳ 8ವಿಕೆಟ್​ಗೆ 185ರನ್ ದಾಖಲಿಸಿತು.

ಈ ಸವಾಲು ಬೆನ್ನಟ್ಟಿದ ಭಾರತ ನಿರೀಕ್ಷಿಸಲಾಗದಷ್ಟು ಕಳಪೆಯಾಟವಾಡಿ 48.1 ಓವರ್​ಗಳಲ್ಲಿ 166 ರನ್​ಗೆ ಆಲೌಟಾಯಿತು. ಮೊದಲ ಪಂದ್ಯದಲ್ಲಿ ಗೆದ್ದ ಆತ್ಮವಿಶ್ವಾಸದೊಂದಿಗೆ ಕಣಕ್ಕಿಳಿದ ಭಾರತ ಪರ ಹಿಂದಿನ ಪಂದ್ಯದಲ್ಲಿ ಶತಕ ಸಿಡಿಸಿದ್ದ ನಾಯಕ ಹಿಮಾಂಶು ರಾಣಾ(46) ಹೊರತುಪಡಿಸಿ ಉಳಿದೆಲ್ಲರೂ ವೈಫಲ್ಯ ಕಂಡರು.