ನಿಮಿರು ದೌರ್ಬಲ್ಯಕ್ಕೆ ಚಿಕಿತ್ಸೆ ಇದೆಯೇ…..?

0
12476

 

ನಾನು ಮಧುಮೇಹಿ. ರಕ್ತದ ಏರೊತ್ತಡವೂ ಇದೆ. ಜೊತೆಗೆ ನಿಮಿರು ದೌರ್ಬಲ್ಯ ಆಗಾಗ ಕಾಣಿಸಿಕೊಳ್ಳುತ್ತದೆ. ಔಷಧಿಗಳನ್ನು ನಿಯಮಿತವಾಗಿ ತೆಗೆದುಕೊಳ್ಳುತ್ತೇನೆ. ದೌರ್ಬಲ್ಯಕ್ಕೆ ಏನಾದರೂ ಚಿಕಿತ್ಸೆ ಇದೆಯೇ?
ಈ ವಾರ ನಮ್ಮ ಮೇಲ್‌ನ ಇನ್‌ಬಾಕ್ಸ್‌ನಲ್ಲಿ ಇಂಥ ಹತ್ತು ಹಲವು ಪ್ರಶ್ನೆಗಳು ಬಂದಿವೆ. ಬಹುತೇಕ ಜನರು ಚಿಕಿತ್ಸೆಯ ಬಗ್ಗೆ ತಿಳಿದುಕೊಳ್ಳಲು ಉತ್ಸುಕರಾಗಿರುವುದು ಸ್ವಾಗತಾರ್ಹ ವಿಷಯವಾಗಿದೆ.

ನಿಮಿರು ದೌರ್ಬಲ್ಯಕ್ಕೆ ಮೂಲ ಕಾರಣವೆಂದರೆ ಶಿಶ್ನದ ನರಗಳು ಸಂಕುಚಿತಗೊಂಡು, ನಿಮಿರುವಿಕೆಗೆ ಅಗತ್ಯವಿರುವಷ್ಟು ರಕ್ತ ಸರಬರಾಜು ಆಗುವಲ್ಲಿ ಅಡೆತಡೆ ಉಂಟಾಗುವುದು. ಈ ಅಡೆತಡೆಯಿಂದಾಗಿ ಸಂಭೋಗಕ್ಕೆ ಅಗತ್ಯವಿರುವಷ್ಟು ಗಡಸುತನ ಪಡೆಯುವಲ್ಲಿ ವೈಫಲ್ಯ ಉಂಟಾಗುತ್ತದೆ. ಇಂಥ ಅಡೆತಡೆಗಳು ಆಗಾಗ ಅಥವಾ ನಿರಂತರವಾಗಿ ಕಾಡಬಹುದು.

ಇದಲ್ಲದೆ ನರಸಂಬಂಧಿ ಕಾಯಿಲೆಗಳಿದ್ದಲ್ಲಿಯೂ ನಿಮಿರು ದೌರ್ಬಲ್ಯದ ಸಮಸ್ಯೆಯನ್ನು ಅನುಭವಿಸಬಹುದು. ನರ ಬಿರುಸಾಗುವ ಸಮಸ್ಯೆ ಇದ್ದವರಲ್ಲಿ ದೌರ್ಬಲ್ಯ ಸಹಜವಾಗಿರುತ್ತದೆ. ದೌರ್ಬಲ್ಯ ಎದುರಿಸುವವರಲ್ಲಿ ಶೇ 70ರಷ್ಟು ಜನರು ಮಧುಮೇಹಿಗಳಾಗಿರುತ್ತಾರೆ ಎನ್ನುವುದು ಗಮನಾರ್ಹ ಅಂಶವಾಗಿದೆ.
ಹೃದಯದ ಮುಖ್ಯ ಪರಿಧಮನಿಯಿಂದ ರಕ್ತ ಪೂರೈಕೆಯಲ್ಲಿ ತೊಂದರೆಯಾದರೆ ಖಂಡಿತವಾಗಿಯೂ ಜನನಾಂಗಕ್ಕೆ ಅಗತ್ಯವಿರುವಷ್ಟು ರಕ್ತದ ಓಘ ಇರುವುದಿಲ್ಲ. ಈ ಸುರಳೀತ ರಕ್ತ ಸಂಚಾರವಿಲ್ಲದೆ ನಿಮಿರುವಿಕೆ ಅಸಾಧ್ಯವಾಗುತ್ತದೆ.

ಮಧುಮೇಹಿಗಳಲ್ಲಿಯೂ ಇದೇ ಮುಖ್ಯ ಕಾರಣವಾಗಿದೆ. ದೇಹದಲ್ಲಿರುವ ನರನಾಡಿಗಳಲ್ಲಿ ರಕ್ತ ಸಂಚಾರ ಸುಗಮವಾಗದೇ ಮಧುಮೇಹಿಗಳಲ್ಲಿ ತಡವಾಗಿಯಾದರೂ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

ನರಸಂಬಂಧಿ ಸಮಸ್ಯೆ ಅಥವಾ ಮಧುಮೇಹವನ್ನು ಹೊರತುಪಡಿಸಿದರೆ ನಿಮಿರು ದೌರ್ಬಲ್ಯಕ್ಕೆ ಇನ್ನೊಂದು ಮುಖ್ಯ ಕಾರಣವೆಂದರೆ ಧೂಮಪಾನ. ಕಾಲೆಸ್ಟ್ರಾಲ್‌ ಸಂಗ್ರಹ. ಇವೆರಡೂ ಕಾರಣಗಳಿಂದಲೂ ದೌರ್ಬಲ್ಯವನ್ನು ಎದುರಿಸಬಹುದಾಗಿದೆ. 40 ವರ್ಷ ದಾಟಿದವರಲ್ಲಿ ಪ್ರತಿ ಮೂವರು ಪುರುಷರಲ್ಲಿ ಇಬ್ಬರು ಈ ದೌರ್ಬಲ್ಯವನ್ನು ಆಗಾಗ ಅಥವಾ ಸತತವಾಗಿ ಎದುರಿಸುತ್ತಾರೆ. ಇದಲ್ಲದೆ ಔಷಧಿಗಳನ್ನು ನಿಯಮಿತವಾಗಿ ಸೇವಿಸುವವರಲ್ಲಿ ಇದು ಉಪಪರಿಣಾಮವಾಗಿಯೂ ಕಾಡಬಹುದು. ಆದರೆ ದೌರ್ಬಲ್ಯದ ಪ್ರಮಾಣ ಎಷ್ಟು ಎನ್ನುವುದರ ಮೇಲೆ ಅದು ಸಮಸ್ಯೆಯೇ ಅಥವಾ ಕೇವಲ ತಾತ್ಕಾಲಿಕ ಸಂದರ್ಭವೇ ಎನ್ನುವುದನ್ನು ಅರ್ಥ ಮಾಡಿಕೊಳ್ಳಬಹುದು.

* ಸತ್ಯಗಳು:

box

40ರ ನಂತರ ಶೇ. 40ರಷ್ಟು ಜನರಲ್ಲಿ ನಿಮಿರು ದೌರ್ಬಲ್ಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ. 65 ವರ್ಷ ದಾಟಿದ ಪುರುಷರಲ್ಲಿ ಶೇ. 70 ರಷ್ಟು ಜನರಲ್ಲಿ ಈ ದೌರ್ಬಲ್ಯ ಕಾಡುತ್ತದೆ.
40–65 ವರ್ಷಗಳ ಅವಧಿಯಲ್ಲಿ ವಯಸ್ಸು ಆದಂತೆಲ್ಲ ಶೇ. 5ರಿಂದ 25ರಷ್ಟು ದೌರ್ಬಲ್ಯ ಹೆಚ್ಚುತ್ತಲೇ ಹೋಗುತ್ತದೆ. ಮಧುಮೇಹ ಹೆಚ್ಚಾದ ಪ್ರತಿ ಇಬ್ಬರಲ್ಲಿ ಒಬ್ಬರು ದೌರ್ಬಲ್ಯದಿಂದ ಬಳಲುತ್ತಾರೆ.
ನಿಮ್ಮ ದೌರ್ಬಲ್ಯದ ಪ್ರಮಾಣ ಅರಿಯಲು, ಬಾಕ್ಸ್ ಅನ್ನು ಗಮನಿಸಿ. ಅಂಕಗಳನ್ನು ನೀಡಿ. ನಿಮ್ಮ ಪ್ರಮಾಣವನ್ನು ನೀವೇ ನಿರ್ಧರಿಸಿ.

ಶಾಕ್‌ವೇವ್‌ ಚಿಕಿತ್ಸೆ:

ನಿಮಿರು ದೌರ್ಬಲ್ಯಕ್ಕೆ ಕ್ರಾಂತಿಕಾರಿ ಚಿಕಿತ್ಸೆ ಎಂದರೆ ತರಂಗಾಘಾತ ಚಿಕಿತ್ಸೆಯಾಗಿದೆ. ವೈಜ್ಞಾನಿಕವಾಗಿ ನಿಮಿರು ದೌರ್ಬಲ್ಯಕ್ಕೆ ಪರಿಣಾಮಕಾರಿ ಚಿಕಿತ್ಸೆ ಇದು ಎಂದು ನಂಬಲಾಗಿದೆ. ಈ ಚಿಕಿತ್ಸೆಯಿಂದ ಶಿಶ್ನದ ರಕ್ತನಾಳಗಳಲ್ಲಿ ರಕ್ತ ಪರಿಚಲನೆ ಸರಾಗವಾಗುತ್ತದೆ. ಇದರಿಂದಾಗಿ ವ್ಯಕ್ತಿಗಳು ಸಮರ್ಪಕ ನಿಮಿರುವಿಕೆಯನ್ನು ಅನುಭವಿ ಸಲು ಸಾಧ್ಯವಾಗುತ್ತದೆ. ಒಂದು ಮಿಲನಕ್ಕೆ ಅಗತ್ಯವಿರುವಷ್ಟು ಗಡಸಾಗುವುದು ಈ ಚಿಕಿತ್ಸೆಯಿಂದ ಸಾಧ್ಯ.

ಸದ್ಯಕ್ಕೆ ಚಾಲ್ತಿಯಲ್ಲಿರುವ ಚಿಕಿತ್ಸೆಯಲ್ಲಿರುವ ಸಮಸ್ಯೆ ಏನು?

ಸದ್ಯಕ್ಕೆ ಲಭ್ಯ ಇರುವ ಚಿಕಿತ್ಸೆ ಎಂದರೆ ಮಾತ್ರೆಗಳ ಸೇವನೆ, ಇಂಜೆಕ್ಷನ್ ಬಳಕೆ ಅಥವಾ ವ್ಯಾಕ್ಯೂಮ್ ಡಿವೈಸ್ಗಳ ಬಳಕೆ ನಿಮಿರು ದೌರ್ಬಲ್ಯಕ್ಕೆ ತಾತ್ಕಾಲಿಕವಾಗಿ ಪರಿಹಾರ ನೀಡಬಹುದು. ಆದರೆ ಅವು ಮೂಲ ಸಮಸ್ಯೆಯ ಪರಿಹಾರಕ್ಕೆ ಯತ್ನಿಸುವುದಿಲ್ಲ. ಈ ಚಿಕಿತ್ಸೆಗಳಿಂದ ಉಂಟಾಗುವ ಉದ್ರೇಕವು ಕೇವಲ ಉದ್ರೇಕದ ಲಕ್ಷಣವಾಗಿರುತ್ತದೆ. ವಿನಾ ಉದ್ರೇಕ ಸಮಸ್ಯೆಯ ಪರಿಹಾರವಾಗಿರುವುದಿಲ್ಲ.
ಸಾಮಾನ್ಯವಾಗಿ ಶಿಶ್ನಕ್ಕೆ ರಕ್ತ ಪೂರೈಸುವ ನಾಳಗಳು ಸಂಕುಚಿತಗೊಂಡಿದ್ದರೆ ನಿಮಿರು ದೌರ್ಬಲ್ಯ ಕಾಣಿಸಿಕೊಳ್ಳುತ್ತದೆ. ಶಾಕ್ವೇವ್ ಚಿಕಿತ್ಸೆಯಲ್ಲಿ ರಕ್ತಪರಿಚಲನೆಯನ್ನು ಸರಾಗಗೊಳಿಸುವ ಕ್ರಿಯೆಯನ್ನು ಮಾಡುತ್ತದೆ. ಇದರಿಂದ ಸಹಜವಾಗಿಯೇ ಸ್ಪಂದಿಸುವ ಶಕ್ತಿ ನರಗಳಿಗೆ ಮತ್ತು ಜನನಾಂಗಕ್ಕೆ ದೊರೆಯುತ್ತದೆ. ಇದರಿಂದ ನರಸಂಬಂಧಿ ತೊಂದರೆಯಿಂದ ದೌರ್ಬಲ್ಯ ಎದುರಿಸುವ ಪುರುಷರಿಗೆ ಪರಿಣಾಮಕಾರಿ ಪರಿಹಾರ ದೊರೆಯುತ್ತದೆ.
ಇದು ನೋವು ರಹಿತ ಪ್ರಕ್ರಿಯೆಯಾಗಿದ್ದು, ಸುದೀರ್ಘಕಾಲ ಪರಿಹಾರ ಒದಗಿಸುವ ಚಿಕಿತ್ಸೆಯಾಗಿದೆ. ಬಹುತೇಕ ಪ್ರಕರಣಗಳಲ್ಲಿ ಇದು ಶಾಶ್ವತ ಪರಿಹಾರವನ್ನು ಒದಗಿಸಿರುವ ಚಿಕಿತ್ಸೆಯೂ ಆಗಿದೆ ಎನ್ನುವುದು ಗಮನಾರ್ಹ.

ಶಾಕ್ವೇವ್ ಥೆರಪಿ ಯಾರಿಗೆ ಪರಿಣಾಮಕಾರಿಯಾಗಿದೆ?

8ರಿಂದ 21 ಅಂಕಗಳನ್ನು ಪಡೆಯುವ ಪುರುಷರಲ್ಲಿ ಈ ಚಿಕಿತ್ಸೆ ಪರಿಣಾಮಕಾರಿಯಾಗಿದೆ. ಈ ಚಿಕಿತ್ಸೆಗೆ ಯಾವುದೇ ಉಪಪರಿಣಾಮಗಳಿಲ್ಲ. ಅರಿವಳಿಕೆ ಕೊಡಬೇಕಾಗಿಲ್ಲ. ನೋವು ರಹಿತ ಚಿಕಿತ್ಸೆ. ಆಸ್ಪತ್ರೆಗೆ ಸೇರಬೇಕಾಗಿಲ್ಲ.
ವೈದ್ಯರೊಂದಿಗೆ ಕೆಲವು ಭೇಟಿಗಳ ನಂತರ ಈ ಚಿಕಿತ್ಸೆಯ ಪರಿಣಾಮವನ್ನು ಅತಿ ಸ್ಪಷ್ಟವಾಗಿ ಕಾಣಬಹುದಾಗಿದೆ. ಗಮನಾರ್ಹವಾದ ಬದಲಾವಣೆ ಮತ್ತು ಸುಧಾರಣೆಗಳು ಕಾಣಿಸಿಕೊಳ್ಳುವ ಭರವಸೆಯನ್ನಂತೂ ಈ ಚಿಕಿತ್ಸೆಯಲ್ಲಿ ನೀಡಬಹುದಾಗಿದೆ.

ಶಾಕ್ವೇವ್ ಥೆರಪಿ ಕೆಲಸ ಮಾಡುವುದು ಹೇಗೆ?

ಇದನ್ನು ನಿಮಿರು ದೌರ್ಬಲ್ಯ ಸಮಸ್ಯೆಯ ಪರಿಹಾರಕ್ಕೆಂದೇ ವಿನ್ಯಾಸಗೊಳಿಸಿರುವ ವಿಶೇಷ ಚಿಕಿತ್ಸೆಯಾಗಿದೆ. ಅತಿ ಲಘು ಕಂಪನದ ಅಲೆಗಳನ್ನು ಇದು ಒಳಗೊಂಡಿರುತ್ತದೆ. ಜನನಾಂಗದ ಎರಡೂ ಬದಿಗಳಲ್ಲಿ ಅತಿ ಲಘುಕಂಪನಗಳನ್ನು ನೀಡಲಾಗುತ್ತದೆ. ಅಲ್ಟ್ರಾಸೌಂಡ್ನ ಅಲೆಗಳಷ್ಟೇ ತೀವ್ರತೆಯನ್ನು ಇವು ಹೊಂದಿರುತ್ತವೆ. ಹೊಸ ರಕ್ತನಾಳಗಳ ಹುಟ್ಟಿಗೆ ಇವು ಕಾರಣವಾಗುತ್ತವೆ. 10ರಿಂದ 15 ನಿಮಿಷಗಳ ಅವಧಿಯ ಈ ಚಿಕಿತ್ಸೆಯನ್ನು ವಾರದಲ್ಲಿ ಒಂದರಿಂದ ನಾಲ್ಕರಷ್ಟು ಸಲ ಪುನರಾವರ್ತನೆ ಮಾಡಲಾಗುತ್ತದೆ. ರೋಗಿಯ ಅಗತ್ಯಕ್ಕೆ ಅನುಸಾರವಾಗಿ ಎಷ್ಟು ಭೇಟಿಗಳು ಎಂದು ನಿರ್ಧರಿಸಲಾಗುತ್ತದೆ. ಈ ಚಿಕಿತ್ಸೆಯೊಂದಿಗೆ ಕೆಲವು ಬಗೆಯ ಮಾತ್ರೆ, ಔಷಧಿಗಳನ್ನೂ ಸೇವಿಸಬೇಕಾಗುವುದು.

 

ಕೃಪೆ: ಪ್ರಜಾವಾಣಿ