ಬೆಂಗಳೂರು:ಏ-21: ಬೆಳ್ಳಂದೂರು ಕೆರೆ ಪುನರುಜ್ಜೀವನಕ್ಕೆ ಹೆಚ್ಚಿನ ಕಾಲಾವಕಾಶ ಕೋರಲು ರಾಜ್ಯ ಸರ್ಕಾರ ಮುಂದಾಗಿದೆ.

ಒಂದು ತಿಂಗಳೊಳಗೆ ಈ ಕೆರೆ ಪುನರುಜ್ಜೀವನ ಮಾಡಬೇಕು ಎಂದು ಹಸಿರು ನ್ಯಾಯಮಂಡಳಿ ಬುಧವಾರ ಆದೇಶ ಹೊರಡಿಸಿತ್ತು. ಕೆರೆಯ ಸುತ್ತಲೂ ತಲೆ ಎತ್ತಿ, ಮಾಲಿನ್ಯಕ್ಕೆ ಕಾರಣವಾಗುತ್ತಿರುವ ಕಾರ್ಖಾನೆಗಳನ್ನು ಮುಚ್ಚುವಂತೆಯೂ ಸೂಚನೆ ನೀಡಿತ್ತು.

‘ಎರಡು ವಾರಗಳಲ್ಲಿ ಕೆರೆಯ ಸಮಗ್ರ ಸುಧಾರಣೆ ಮಾಡುವುದು ಕಷ್ಟಸಾಧ್ಯ. ಹೀಗಾಗಿ ನ್ಯಾಯಮಂಡಳಿಗೆ ಪತ್ರ ಬರೆಯಲು ರಾಜ್ಯ ಸರ್ಕಾರ ಯೋಜಿಸಿದೆ’ ಎಂದು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೆರೆಗೆ ನಿತ್ಯ 48 ಕೋಟಿ ಲೀಟರ್‌ ಸಂಸ್ಕರಿಸದ ತ್ಯಾಜ್ಯ ನೀರು ಸೇರುತ್ತಿದೆ. 15 ಕೋಟಿ ಲೀಟರ್‌ ಸಾಮರ್ಥ್ಯದ ತ್ಯಾಜ್ಯ ನೀರು ಸಂಸ್ಕರಣಾ ಘಟಕದ (ಎಸ್‌ಟಿಪಿ) ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. 23 ಕೋಟಿ ಲೀಟರ್‌ ಸಾಮರ್ಥ್ಯದ ಎಸ್‌ಟಿಪಿ ಸ್ಥಾಪಿಸಲು ಯೋಜಿಸಲಾಗಿದೆ. ಬಳಿಕವೂ 10 ಕೋಟಿ ಲೀಟರ್‌ ತ್ಯಾಜ್ಯ ನೀರು ಕೆರೆಗೆ ಸೇರುತ್ತದೆ. ಅದನ್ನು ಕೂಡಲೇ ಸ್ಥಗಿತಗೊಳಿಸಲು ಸಾಧ್ಯವಿಲ್ಲ’ ಎಂದು ಅವರು ಹೇಳಿದರು.

‘ಕೆರೆಯ ಸುತ್ತ ಬೇಲಿ ಹಾಕುವ ಕಾರ್ಯ ತಿಂಗಳ ಹಿಂದೆ ಆರಂಭವಾಗಿದ್ದು, ಶೇ 70ರಷ್ಟು ಕಾಮಗಾರಿ ಮುಗಿದಿದೆ. ಕಳೆ ತೆಗೆಯುವ ಕೆಲಸ ಎರಡು– ಮೂರು ದಿನಗಳಲ್ಲಿ ಶುರುವಾಗಲಿದೆ. ಮಳೆಯಿಂದಾಗಿ ಕೆರೆಯಲ್ಲಿ ನೊರೆ ಸಾಕಷ್ಟು ಕಡಿಮೆಯಾಗಿದೆ’ ಎಂದು ಅವರು ಮಾಹಿತಿ ನೀಡಿದರು.

ಇಂದು ಸಭೆ: ‘ಕೆರೆಗೆ ಸಂಬಂಧಪಟ್ಟ ವಿವಿಧ ಇಲಾಖೆಗಳ ಅಧಿಕಾರಿಗಳ ಜತೆಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಸುಭಾಷ್‌ಚಂದ್ರ ಖುಂಟಿಅ ಅವರು ಶುಕ್ರವಾರ ಸಭೆ ನಡೆಸಲಿದ್ದಾರೆ. ಇದಕ್ಕೆ ಪೂರ್ವಭಾವಿಯಾಗಿ ನಗರಾಭಿವೃದ್ಧಿ ಇಲಾಖೆಯ ಕೆಲವು ಅಧಿಕಾರಿಗಳ ಜತೆಗೆ ಗುರುವಾರ ಸಮಾಲೋಚನೆ ನಡೆಸಿದರು’ ಎಂದು ಮೂಲಗಳು ತಿಳಿಸಿವೆ.

ಕೆರೆಯ ಈಗಿನ ಸ್ಥಿತಿ, ಅದರ ಸುಧಾರಣೆಗೆ ಈವರೆಗೆ ತೆಗೆದುಕೊಂಡ ಕ್ರಮಗಳು, ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ವಿಸ್ತೃತ ವರದಿ ನೀಡುವಂತೆ ಅವರು ಸೂಚಿಸಿದ್ದಾರೆ. ಅವರು ಮಾರ್ಚ್‌ 19ರಂದು ಈ ಜಲಮೂಲಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

ಈ ವೇಳೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಬಿಬಿಎಂಪಿ, ಜಲಮಂಡಳಿ ಹಾಗೂ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡಿದ್ದರು. ಒಂದು ತಿಂಗಳೊಳಗೆ ನೊರೆ ಹಾರದಂತೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದ್ದರು. ಆದರೆ, ನೊರೆ ಸಮಸ್ಯೆ ಈಗಲೂ ಹಾಗೆಯೇ ಇದೆ.

ಎರಡು ವಾರದಲ್ಲಿ ಅಲ್ಪ ಪರಿಹಾರ: ಬೆಟ್ಟದಷ್ಟಾಗಿರುವ ಸಮಸ್ಯೆಯನ್ನು ಬಗೆಹರಿಸಲು ಅಲ್ಪಾವಧಿಯ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಬಿಡಿಎ ಪ್ರಸ್ತಾವ ಸಿದ್ಧಪಡಿಸಿದೆ. ಈ ಕ್ರಮಗಳನ್ನು ಕೂಡಲೇ ಕೈಗೊಳ್ಳುವಂತೆ ತಜ್ಞರ ಸಮಿತಿ ಸೂಚಿಸಿದೆ. ಬಿಡಿಎ ಕಚೇರಿಯಲ್ಲಿ ತಜ್ಞರ ಸಮಿತಿಯ ಸಭೆ ಗುರುವಾರ ನಡೆಯಿತು. ಈ ಸಮಸ್ಯೆಗೆ ಎರಡು ವಾರಗಳಲ್ಲಿ ಸಾಧ್ಯವಾದಷ್ಟು ಪರಿಹಾರ ಕಂಡು ಹಿಡಿಯುತ್ತೇವೆ ಎಂದು ಬಿಡಿಎ ಅಧಿಕಾರಿಗಳು ಭರವಸೆ ನೀಡಿದರು.

ಬಿಬಿಎಂಪಿಯ ಎಂಜಿನಿಯರ್‌ಗಳು, ಜಲಮಂಡಳಿ, ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ, ಕರ್ನಾಟಕ ಸರೋವರ ಸಂರಕ್ಷಣಾ ಪ್ರಾಧಿಕಾರದ ಅಧಿಕಾರಿಗಳು ಹಾಜರಿದ್ದರು.

ಕೆರೆಯ ಶುದ್ಧೀಕರಣದ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು ಎಂದು ಬಿಡಿಎ ಎಂಜಿನಿಯರಿಂಗ್‌ ಸದಸ್ಯ ಪಿ.ಎನ್‌. ನಾಯಕ್ ತಿಳಿಸಿದರು.

‘ಕೆರೆಯ ಸುತ್ತ ಬೇಲಿ ಹಾಕುವ ಕಾರ್ಯ ತಿಂಗಳ ಹಿಂದೆ ಆರಂಭವಾಗಿದ್ದು, ಶೇ 70ರಷ್ಟು ಕಾಮಗಾರಿ ಮುಗಿದಿದೆ. ಕಳೆ ತೆಗೆಯುವ ಕೆಲಸ ಎರಡು– ಮೂರು ದಿನಗಳಲ್ಲಿ ಶುರುವಾಗಲಿದೆ. ಮಳೆಯಿಂದಾಗಿ ಕೆರೆಯಲ್ಲಿ ನೊರೆ ಸಾಕಷ್ಟು ಕಡಿಮೆಯಾಗಿದೆ’ ಎಂದು ಅವರು ಹೇಳಿದರು.

‘ಕೆರೆ ಕಣಿವೆ ಹಾಗೂ ರಾಜಕಾಲುವೆಗಳಲ್ಲಿ ಸುರಿದಿರುವ ಕಸ ಹಾಗೂ ಕಟ್ಟಡ ತ್ಯಾಜ್ಯಗಳನ್ನು ತೆರವು ಮಾಡುವ ಕೆಲಸ ಕೂಡಲೇ ಆರಂಭಿಸುತ್ತೇವೆ’ ಎಂದು ಬಿಬಿಎಂಪಿ ಎಂಜಿನಿಯರ್‌ಗಳು ತಿಳಿಸಿದರು.

ತ್ಯಾಜ್ಯ ಸಂಸ್ಕರಣಾ ಘಟಕ ನಿರ್ಮಾಣಕ್ಕೆ ವೇಗ ನೀಡುತ್ತೇವೆ ಎಂದು ಜಲಮಂಡಳಿ ಅಧಿಕಾರಿಗಳು ಹೇಳಿದರು.

ಕೊನೆಗೂ ಅಧಿಕಾರಿಗಳು ಪುನರುಜ್ಜೀವನದ ಕೆಲಸ ಆರಂಭಿಸಿದ್ದಾರೆ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ಪ್ರಾಧ್ಯಾಪಕ ಡಾ.ಟಿ.ವಿ. ರಾಮಚಂದ್ರ ವ್ಯಂಗ್ಯವಾಗಿ ಹೇಳಿದರು. ‘ತಜ್ಞರ ಸಮಿತಿ ನೀಡಿದ್ದ ವರದಿಯನ್ನು ಓದಲು ಹಾಗೂ ಸ್ವೀಕರಿಸಲು ಅಧಿಕಾರಿಗಳು ಎಂಟು ತಿಂಗಳು ತೆಗೆದುಕೊಂಡರು’ ಎಂದು ನೆನಪಿಸಿದರು.

ಹಲಸೂರು ಕೆರೆಯ ಪುನರುಜ್ಜೀವನಕ್ಕೆ ರಕ್ಷಣಾ ಇಲಾಖೆಯ ನೆರವು ಪಡೆಯಲಾಗಿತ್ತು. ಅದೇ ರೀತಿ 900 ಎಕರೆ ವಿಸ್ತೀರ್ಣದ ಬೆಳ್ಳಂದೂರು ಕೆರೆಯ ಶುದ್ಧೀಕರಣಕ್ಕೂ ಅವರ ನೆರವು ಪಡೆಯಬೇಕು ಎಂದು ತಜ್ಞರ ಸಮಿತಿಯ ಕೆಲವು ಸದಸ್ಯರು ಸಲಹೆ ನೀಡಿದರು.
ಕೃಪೆ:ಪ್ರಜಾವಾಣಿ
state government,more time for the revival of the Bellandur lake